For Quick Alerts
ALLOW NOTIFICATIONS  
For Daily Alerts

ಮತ್ತೆ ಕುಸಿತ ಕಂಡ ಫೇಸ್‌ಬುಕ್ ಮೆಟಾ ಷೇರು; ಇದೇನಿದು ಜೂಜಾಟವಾ ಎಂದ ಭಾರತಿಯ ಉದ್ಯಮಿ

|

ನವದೆಹಲಿ, ಅ. 28: ಫೇಸ್‌ಬುಕ್ ಮಾಲೀಕ ಸಂಸ್ಥೆ ಮೆಟಾದ ಷೇರುಗಳು ನಿನ್ನೆ ಪ್ರಪಾತಕ್ಕೆ ಧುಮುಕಿವೆ. ಅಮೆರಿಕದ ಷೇರುಪೇಟೆಯಲ್ಲಿ ಮೆಟಾದ ಷೇರು ಮೌಲ್ಯ ಶೇ. 20ಕ್ಕೂ ಹೆಚ್ಚು ಕುಸಿತ ಕಂಡಿದೆ. ಇದರಿಂದ ಕಂಪನಿಯ ಮಾರುಕಟ್ಟೆ ಮೌಲ್ಯ 78 ಬಿಲಿಯನ್ ಡಾಲರ್‌ನಷ್ಟು ಕಡಿಮೆ ಆಗಿದೆ. ಅಂದರೆ ಷೇರು ಕುಸಿತದಿಂದ ಮೆಟಾ 6.42 ಲಕ್ಷ ಕೋಟಿ ರೂಪಾಯಿಯಷ್ಟು ನಷ್ಟ ಮಾಡಿಕೊಂಡಿದೆ.

 

ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ ಮೆಟಾ ಮಾರಾಟ ಪ್ರಮಾಣ 27.7 ಬಿಲಿಯನ್ ಡಾಲರ್‌ಗೆ ಇಳಿದಿದೆ. ಕಳೆದ ವರ್ಷದ ಇದೇ ತ್ರೈಮಾಸಿಕ ಅವಧಿಗೆ ಹೋಲಿಸಿದರೆ ಸೇಲ್ಸ್ ಮೊತ್ತ ಶೇ. 4ರಷ್ಟು ಕಡಿಮೆ ಆಗಿದೆ.

ಕೋಟಕ್ ಶಾಕ್

ಮೆಟಾ ಕಂಪನಿ ಷೇರು ಕೆಲ ತಿಂಗಳ ಹಿಂದೆ ಭಾರೀ ಮಟ್ಟದಲ್ಲಿ ಕುಸಿತ ಕಂಡಿತ್ತು. ಈಗ ಸ್ಟಾಕ್ ಮಾರ್ಕೆಟ್‌ನಲ್ಲಿ ಮೆಟಾ ಮತ್ತೊಮ್ಮೆ ಹಿನ್ನಡೆ ಕಂಡಿದೆ. ಈ ಬಗ್ಗೆ ಭಾರತದ ಉದ್ಯಮಿ ಹಾಗೂ ಕೋಟಕ್ ಮಹೀಂದ್ರ ಬ್ಯಾಂಕ್‌ನ ಸಿಇಒ ಉದಯ್ ಕೋಟಕ್ ಅಚ್ಚರಿ ಮತ್ತು ಆಘಾತ ವ್ಯಕ್ತಪಡಿಸಿದ್ದಾರೆ. ಷೇರುಪೇಟೆಯು ಬಂಡವಾಳ ಸಂಗ್ರಹಣೆಯ ತಾಣವೋ, ಜೂಜಾಟದ ಅಡ್ಡೆಯೋ ಎಂದು ಬೆರಗಾಗಿದ್ದಾರೆ.

"ಫೇಸ್‌ಬುಕ್ ಮೆಟಾ ನಿನ್ನೆ ಮತ್ತೊಮ್ಮೆ ಶೇ. 25ರಷ್ಟು ಕುಸಿತ ಕಂಡಿದೆ. ಅಮೇಜಾನ್ ಕೂಡ ಇಂದು ಇದೇ ಹಾದಿ ಹಿಡಿಯಬಹುದು. ಷೇರು ಮಾರುಕಟ್ಟೆಯು ನ್ಯಾಯ ಬೆಲೆ ಪಡೆಯುವ ಮತ್ತು ಆರ್ಥಿಕತೆಗೆ ಬಂಡವಾಳ ನೀಡುವ ವೇದಿಕೆಯೋ ಅಥವಾ ಕ್ಯಾಸಿನೋ ರೂಲೆಟ್‌ನ ಅಡ್ಡೆಯೋ?" ಎಂದು ಉದಯ್ ಕೋಟಕ್ ಅಚ್ಚರಿ ವ್ಯಕ್ತಪಡಿಸುತ್ತಾ ಟ್ವೀಟ್ ಮಾಡಿದ್ದಾರೆ.

ತಮ್ಮ ಟ್ವೀಟ್‌ನಲ್ಲಿ ಫೆಬ್ರವರಿ 4ರಂದು ಮಾಡಿದ್ದ ಮತ್ತೊಂದು ಟ್ವೀಟನ್ನು ಉಲ್ಲೇಖಿಸಿದ್ದಾರೆ.

"ಫೇಸ್ಬುಕ್ ಮೆಟಾ ಮಾರುಕಟ್ಟೆ ಮೌಲ್ಯ 240 ಬಿಲಿಯನ್ ಡಾಲರ್ (18 ಲಕ್ಷ ಕೋಟಿ ರೂಪಾಯಿ) ಒಂದೇ ದಿನದಲ್ಲಿ ಇಳಿದುಹೋಗಿದೆ. ಭಾರತದ ಅತಿದೊಡ್ಡ ಕಂಪನಿಯ ಒಟ್ಟು ಮೌಲ್ಯಕ್ಕಿಂತಲೂ ಹೆಚ್ಚು ಮೊತ್ತ ಅದು. ನಮ್ಮ ಕಾಲದ ಸೂಕ್ಷ್ಮತೆ ಮತ್ತು ದೌರ್ಬಲ್ಯತೆಗೆ ಕೈಗನ್ನಡಿ ಹಿಡಿದಿದೆ. ಅಸಹಜ ಜಗತ್ತಿಗೆ ಸ್ವಾಗತ" ಎಂದು ಫೆಬ್ರುವರಿ 4ರಂದು ಉದಯ್ ಕೋಟಕ್ ಟ್ವೀಟ್ ಮಾಡಿದ್ದರು.

ಫೇಸ್‌ಬುಕ್‌ನ ವೀಕ್ಷಕರು ಕಡಿಮೆಯಾಗಿದ್ದಾರೆ ಎಂಬ ಮಾಹಿತಿಯನ್ನು ಫೆಬ್ರವರಿಯಲ್ಲಿ ಮೆಟಾ ಬಹಿರಂಗಗೊಳಿಸಿತ್ತು. ಅದರ ಪರಿಣಾಮವಾಗಿ ಒಂದೇ ದಿನದಲ್ಲಿ ಮೆಟಾ ಷೇರುಗಳು ಪ್ರಪಾತಕ್ಕೆ ಕುಸಿದುಹೋಗಿದ್ದವು.

 

ಫೇಸ್‌ಬುಕ್ ಬೀಳುತ್ತಿರುವುದು ಯಾಕೆ?
 

ಫೇಸ್‌ಬುಕ್ ಬೀಳುತ್ತಿರುವುದು ಯಾಕೆ?

ಫೇಸ್‌ಬುಕ್, ಇನ್ಸ್‌ಟಾಗ್ರಾಂ, ವಾಟ್ಸಾಪ್‌ನಂತಹ ಪ್ರಮುಖ ಸೋಷಿಯ್ ಮೀಡಿಯಾ ಮತ್ತು ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿರುವ ಫೇಸ್‌ಬುಕ್ ಇಷ್ಟೊಂದು ಹಿನ್ನಡೆ ಸಾಧಿಸುತ್ತದೆ ಎಂದು ಕೆಲ ವರ್ಷಗಳ ಹಿಂದಿನವರೆಗೂ ಯಾರೂ ನಿರೀಕ್ಷಿಸಿರಲಿಲ್ಲ. ಕಂಪನಿ ದುರ್ಬಲಗೊಳ್ಳಲು ಹಲವು ಕಾರಣಗಳಿರಬಹುದು ಎಂದು ತಜ್ಞರು ಅಂದಾಜಿಸುತ್ತಾರೆ. ಅಂಥ ಒಂದೆರಡು ಕಾರಣಗಳನ್ನು ನೋಡುವುದಾದರೆ ಮೊದಲನೆಯದು ಫೇಸ್‌ಬುಕ್‌ಗೆ ಎದುರಾಗಿರುವ ಸ್ಪರ್ಧೆ, ಎರಡನೆಯದು ಹೂಡಿಕೆದಾರರಿಗೆ ನೀಡಿದ್ದ ಭರವಸೆ ಈಡೇರಿಸದೇ ಇದ್ದದ್ದು, ಮತ್ತು ಮೂರನೆಯದು ಆದಾಯ ಸೃಷ್ಟಿ ಕ್ಷೀಣಗೊಳ್ಳುತ್ತಿರುವುದು ಎದ್ದು ಕಾಣುತ್ತದೆ.

ಮೆಟಾವರ್ಸ್ ರಾದ್ಧಾಂತ

ಮೆಟಾವರ್ಸ್ ರಾದ್ಧಾಂತ

ಫೇಸ್‌ಬುಕ್‌ನ ಮುಂದಿನ ಅಖಾಡ ವರ್ಚುವಲ್ ರಿಯಾಲಿಟಿ ಜಗತ್ತು ಎಂದು ವರ್ಷದ ಹಿಂದೆ ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್ಬರ್ಗ್ ಹೇಳಿದ್ದರು. ಭವಿಷ್ಯದ ತಂತ್ರಜ್ಞಾನ ವ್ಯವಸ್ಥೆಯಾಗಿರುವ ಮೆಟಾವರ್ಸ್‌ಗೆ ಫೇಸ್‌ಬುಕ್ ಅನ್ನು ಅಣಿಗೊಳಿಸಲು ಸಿದ್ಧಪಡಿಸುತ್ತಿರುವುದಾಗಿ ಅವರು ಘೋಷಿಸಿದ್ದರು. ಆದರೆ, ಆ ನಿಟ್ಟಿನಲ್ಲಿ ಯಾವ ಕೆಲಸವೂ ಆಗುತ್ತಿಲ್ಲ ಎಂಬುದು ಮೆಟಾ ಷೇರುದಾರರಿಗಿರುವ ಅಸಮಾಧಾನ.

ಪ್ರತಿಸ್ಪರ್ಧೆಗಳು

ಪ್ರತಿಸ್ಪರ್ಧೆಗಳು

ಫೇಸ್ಬುಕ್ ಮತ್ತು ಇನ್ಸ್‌ಟಾಗ್ರಾಮ್ ತಾಣಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಇಂದು ಟಿಕ್ ಟಾಕ್ ಬೆಳೆದುಹೋಗಿದೆ. ಗೂಗಲ್ ಸಂಸ್ಥೆ ಕೂಡ ಟಿಕ್ ಟಾಕ್ ದಾಳಿಗೆ ತಲೆಕೆಡಿಸಿಕೊಂಡಿದೆ. ವಿಶ್ವದ ಅತಿದೊಡ್ಡ ವಿಡಿಯೋ ಪ್ಲಾಟ್‌ಫಾರ್ಮ್ ಆಗಿ ಟಿಕ್ ಟಾಕ್ ಬೆಳೆಯುತ್ತಿದೆ. ಟಿಕ್ ಟಾಕ್ ರೀತಿ ಇನ್ನೂ ಅನೇಕ ವಿಡಿಯೋ ಬ್ಲಾಗಿಂಗ್ ತಾಣಗಳು ಫೇಸ್ಬುಕ್, ಯೂಟ್ಯೂಬ್‌ಗೆ ಸವಾಲು ಹಾಕಿವೆ. ಈ ಪ್ರಬಲ ಪ್ರತಿಸ್ಪರ್ಧೆಗಳು ಫೇಸ್ಬುಕ್ ಅನ್ನು ತಲ್ಲಣಗೊಳಿಸಿರುವುದು ಹೌದು.

ಆದಾಯ ಕಡಿಮೆ

ಆದಾಯ ಕಡಿಮೆ

ಆರ್ಥಿಕ ಸಂಕಷ್ಟದ ಕಾರಣಕ್ಕೆ ವಿವಿಧ ಕಂಪನಿಗಳು ಆನ್‌ಲೈನ್ ಜಾಹೀರಾತಿಗೆ ವಿನಿಯೋಗಿಸುತ್ತಿರುವ ಹಣದ ಪ್ರಮಾಣ ಕಡಿಮೆ ಆಗುತ್ತಿದೆ. ಇದರಿಂದ ಫೇಸ್ಬುಕ್‌ನ ಆದಾಯಕ್ಕೆ ಧಕ್ಕೆ ತಂದಿದೆ. ಅಲ್ಲದೇ ಆ್ಯಪಲ್ ಐಫೋನ್‌ನ ಪ್ರೈವೆಸಿ ಸೆಟಿಂಗ್ ಕೂಡ ಜಾಹೀರಾತು ನೀಡಿಕೆಗೆ ಅಡಚಣೆಯಾಗಿವೆ. ಬಳಕೆದಾರ ನಿರ್ದಿಷ್ಟ ಜಾಹೀರಾತುಗಳನ್ನು ಐಫೋನ್‌ನಲ್ಲಿ ನೀಡಲು ಸಾಧ್ಯವಾಗುತ್ತಿಲ್ಲ. ಇದು ಫೇಸ್ಬುಕ್, ಇನ್ಸ್‌ಟಾಗ್ರಾಂ ಆದಾಯ ಸೃಷ್ಟಿಗೆ ಹಿನ್ನಡೆ ತರುತ್ತಿದೆ ಎನ್ನಲಾಗುತ್ತಿದೆ.

ಮೆಟಾ ಷೇರು ಈ ವರ್ಷದಲ್ಲಿ ಶೇ. 60ಕ್ಕೂ ಹೆಚ್ಚು ಕುಸಿತ ಕಂಡಿದೆ. ಈಗ ಇನ್ನಷ್ಟು ಕುಸಿತ ಕಂಡಿರುವುದು ಫೇಸ್ಬುಕ್ ಮಾಲೀಕ ಸಂಸ್ಥೆಯನ್ನು ಹೈರಾಣಗೊಳಿಸಿದೆ. ಫೇಸ್ಬುಕ್ ಆದಾಯದಲ್ಲಿ ಹೆಚ್ಚು ಕುಸಿತ ಇಲ್ಲದಿದ್ದರೂ ಕಂಪನಿಯ ಭವಿಷ್ಯದ ಬಗ್ಗೆ ಹೂಡಿಕೆದಾರರ ವಿಶ್ವಾಸದಲ್ಲಿ ಕುಸಿತ ಆಗಿರುವ ಸಂಗತಿ ಇಲ್ಲಿ ಗಮನಾರ್ಹ.

 

English summary

Know Why Facebook Losing Crores of Money, Uday Kotak Shocking Response

Share value of Meta continue to plunge this year, that say the shares down by over 60%, making the company lose billions of money from investors.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X