For Quick Alerts
ALLOW NOTIFICATIONS  
For Daily Alerts

ಇದನ್ನೊಮ್ಮೆ ಓದಿ: ಮ್ಯೂಚುವಲ್ ಫಂಡ್ ಅರ್ಥ ಮಾಡ್ಕೊಳ್ಳೋದು ಸುಲಭ

By ವಿ ಮಾಲಾ
|

ಕಷ್ಟಪಟ್ಟು ದುಡಿದ ದುಡ್ಡು ಉಳಿಸಬೇಕು, ಉಳಿಸಿದ ದುಡ್ಡನ್ನು ಕಷ್ಟಕಾಲಕ್ಕೆ ಕಾಪಾಡಿಕೊಳ್ಳಬೇಕು, ಯೋಗ್ಯರೀತಿಯಲ್ಲಿ ಹೂಡಿಕೆಮಾಡಿ ಬೆಳೆಸಬೇಕು. ಹೀಗೆ ಬೆಳೆಸುವ ಸಾಧ್ಯತೆಯಲ್ಲಿ ಮ್ಯೂಚುವಲ್ ಫಂಡ್‌ಗೆ ಪ್ರಮುಖ ಸ್ಥಾನ. ಷೇರು ಮಾರುಕಟ್ಟೆ, ಮ್ಯೂಚುವಲ್ಫಂಡ್ ಆಂದ್ರೆ ಮೂಗು ಮುರಿಯುವವರೇ ಹೆಚ್ಚು. ಆದರೆ ನಿಜಕ್ಕೂ ಮ್ಯೂಚುವಲ್ ಫಂಡ್ ಅರ್ಥ ಮಾಡಿಕೊಳ್ಳೋದು ಅಷ್ಟುಕಷ್ಟವಲ್ಲ. ನನ್ನ ಮಾತಿನ ಮೇಲೆ ನಂಬಿಕೆ ಬಾರದಿದ್ದರೆ ಪೂರ್ತಿ ಲೇಖನ ಓದಿ ನೋಡಿ.

 

ಹೂಡಿಕೆಯ ಅವಧಿ ಹೆಚ್ಚಾದಷ್ಟೂ ಉತ್ತಮ ಪ್ರತಿಫಲ ಕೊಡುವ ಬೊಂಬಾಟ್‌ ಹೂಡಿಕೆ ಸಾಧನ ಮ್ಯೂಚುವಲ್ ಫಂಡ್ ಎಂದುಬಹುತೇಕ ಫೈನಾನ್ಷಿಯಲ್ ಪ್ಲಾನರ್‌ಗಳು ನಂಬುತ್ತಾರೆ, ಶಿಫಾರಸು ಮಾಡುತ್ತಾರೆ. ತಿಂಗಳಿಗೆ 500 ರುಪಾಯಿ ಉಳಿತಾಯ ಮಾಡೋಕೆಸಾಧ್ಯ ಇರೋರೂ ಮ್ಯೂಚುವಲ್ ಫಂಡ್‌ಗಳಲ್ಲಿ ಎಸ್‌ಐಪಿ ಮಾಡಬಹುದು. ಒಂದೇ ಸಲ ದೊಡ್ಡ ಮೊತ್ತ ಕೈಗೆ ಬಂದಾಗ ಡೆಟ್ಫಂಡ್‌ಗಳಲ್ಲಿ ಹಾಕಿಟ್ಟು, ತಿಂಗಳಿಷ್ಟು ಅಂತ ಈಕ್ವಿಟಿಗೆ ಎಸ್‌ಟಿಪಿ ಮಾಡಬಹುದು. ದುಡ್ಡು ಬೇಕು ಅಂದಾಗ ಒಮ್ಮೆ ಯೂನಿಟ್‌ಗಳನ್ನುಸರಂಡರ್ ಮಾಡಬಹುದು ಅಥವಾ ಅಗತ್ಯಕ್ಕೆ ತಕ್ಕಂತೆ ಎಸ್‌ ಡಬ್ಲ್ಯುಪಿ ಮೂಲಕ ಪ್ರತಿ ತಿಂಗಳಿಗೆ ಇಷ್ಟು ಅಂತ ದುಡ್ಡು ತೆಗೆದು ಅಲ್ಲೂಲಾಭ ಮಾಡಿಕೊಳ್ಳಬಹುದು.

ಮ್ಯೂಚುವಲ್ ಫಂಡ್ ಎಂದರೇನು? ಅದರ ಪ್ರಕಾರಗಳ್ಯಾವವು?

'ಅಮ್ಮಾ ತಾಯಿ, ಒಳ್ಳೇ ಇಂಗ್ಲಿಷ್ ಅಕ್ಷರಮಾಲೆ ಥರ ಎಸ್‌ಐಪಿ, ಎಸ್‌ಟಿಪಿ, ಡೆಟ್, ಈಕ್ವಿಟಿ, ಎಸ್‌ಡಬ್ಲ್ಯುಪಿ, ಯೂನಿಟ್‌ ಅಂತೆಲ್ಲಾಹೇಳ್ತಿದ್ದೀ. ಸಮಾಧಾನವಾಗಿ ಅದೇನು ಅಂತ ವಿವರಿಸು. ನಾವು ಅರ್ಥ ಮಾಡಿಕೊಂಡು ಮುಂದೆ ಏನು ಮಾಡಬೇಕೋ ಅಂತಯೋಚನೆ ಮಾಡ್ತೀವಿ' ಅಂದ್ರಾ? ಸರಿ ಮತ್ತೆ ಹಾಗೆ ಮಾಡ್ತೀನಿ. ನಿಧಾನವಾಗಿ ಒಂದೊಂದೇ ಕಾನ್ಸೆಪ್ಟ್‌ ವಿವರಿಸ್ತೀನಿ.

ಆದ್ರೆ ಒಂದು ಮಾತು. ನಾನು ಅಥವಾ ಈ ಲೇಖನ ಪ್ರಕಟಿಸುತ್ತಿರುವ ಸಂಸ್ಥೆ ಯಾವುದೇ ಒಂದು ಮ್ಯೂಚುವಲ್ ‌ ಫಂಡ್‌ ಹೌಸ್‌ನಪ್ರತಿನಿಧಿಗಳಲ್ಲ. ಈ ಲೇಖನಕ್ಕಾಗಿ ಯಾರಿಂದಲೂ ನಾವು ಕಮಿಷನ್ ಪಡೆದಿಲ್ಲ. ಈ ಲೇಖನ ಸರಣಿ ಓದುವ ನೀವೂ ಅಷ್ಟೇ. ಪೂರ್ವಾಪರ ಯೋಚನೆ ಮಾಡಿಯೇ ನಿಮ್ಮ ಹೂಡಿಕೆ ನಿರ್ಧಾರಗಳನ್ನು ತಗೊಳಿ. ಮ್ಯೂಚುವಲ್ ಫಂಡ್ ಅಂದ್ರೆ ಈಕ್ವಿಟಿ ಒಂದೇ ಅಲ್ಲ. ಆದರೆ ಮ್ಯೂಚುವಲ್ ಫಂಡ್‌ಗಳಲ್ಲಿ ಈಕ್ವಿಟಿ ಅನ್ನೋದು ದೊಡ್ಡ ಕ್ಯಾಟಗರಿ. ಅದರಲ್ಲಿ ಹೂಡುವ ಹಣಕ್ಕೆ ರಿಸ್ಕ್ ಇರುತ್ತೆ. ಅಷ್ಟೇ ಅಲ್ಲ, ಯಾವುದೇ ವಿಧದ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದ್ರೂ ಅದರ ಅಸಲಿಗೆ ಯಾರೂ ಖಾತ್ರಿ ಕೊಡಲ್ಲ. ಈ ಮಾತಿಗೆಒಪ್ಪಿಯೇ ಮುಂದಿನ ಸಾಲು ಓದಿ. ಯಾಕಂದ್ರೆ ಓದೋದು ಅಂದ್ರೆ ಕೂಡ ನಿಮ್ಮ ಟೈಂ ಇನ್‌ವೆಸ್ಟ್ ಮಾಡಿದಂತೆಯೇ ತಾನೆ?

ಏನಿದು ಮ್ಯೂಚುವಲ್ ಫಂಡ್?

ಏನಿದು ಮ್ಯೂಚುವಲ್ ಫಂಡ್?

‘ಮ್ಯೂಚುವಲ್ ಅಂಡರ್‌ಸ್ಟಾಂಡಿಂಗ್' ಎನ್ನುವ ಪದಗುಚ್ಛದ ಬಳಕೆ ನಿಮಗೆ ಗೊತ್ತೇ ಇರುತ್ತೆ. ಇದನ್ನು ಕನ್ನಡಕ್ಕೆ ಅನುವಾದಿಸಿದರೆ‘ಪರಸ್ಪರ ಅರ್ಥೈಸಿಕೊಳ್ಳುವುದು' ಎಂದಾಗುತ್ತದೆ. ‘ಪರಸ್ಪರ' ಎನ್ನುವ ಪದವೇ ಒಬ್ಬರಿಗಿಂತ ಹೆಚ್ಚು ಜನರು ಎಂಬ ಭಾವವನ್ನೂಹೊಮ್ಮಿಸುತ್ತದೆ ಅಲ್ಲವೇ? ಮ್ಯೂಚುವಲ್ ಅಂಡರ್‌ಸ್ಟಾಂಡಿಂಗ್ ಪದಗುಚ್ಛದಲ್ಲಿ ಅಂಡರ್‌ಸ್ಟಾಂಡಿಂಗ್ ಪದ ತೆಗೆದು ಫಂಡ್ ಪದಇಟ್ಟು ಯೋಚಿಸಿ. ಪರಸ್ಪರ ಸಮಾನ ಉದ್ದೇಶದಿಂದ ಒಂದಷ್ಟು ಜನರು ಒಂದೆಡೆ ರೂಪಿಸಿದ ನಿಧಿ ಎಂದಾಗುತ್ತದೆ.

‘ಮ್ಯೂಚುವಲ್ ಫಂಡ್‌ ಎನ್ನುವುದು ಒಂದು ರೀತಿಯ ಹೂಡಿಕೆ ವಿಧಾನ. ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ಷೇರು, ಬಾಂಡ್ ಅಥವಾ ಇತರ ಬಗೆಯ ಹೂಡಿಕೆ ಸಾಧನಗಳಲ್ಲಿ ಹೂಡುತ್ತದೆ. ಹಣವನ್ನು ಹೇಗೆ ಹೂಡಿಕೆ ಮಾಡಬೇಕು ಎನ್ನುವುದನ್ನು ಫಂಡ್ಮ್ಯಾನೇಜರ್ (ಪೋರ್ಟ್‌ಫೋಲಿಯೊ ಮ್ಯಾನೇಜರ್) ನಿರ್ಧರಿಸುತ್ತಾರೆ. ಅದಕ್ಕಾಗಿ ಅವನಿಗೆ/ಅವಳಿಗೆ ನಿರ್ದಿಷ್ಟ ಮೊತ್ತದ ಶುಲ್ಕವನ್ನುಫಂಡ್‌ನಿಂದಲೇ ನೀಡಲಾಗುತ್ತದೆ' ಮ್ಯೂಚುವಲ್ ಫಂಡ್‌ನ ಶಾಸ್ತ್ರೀಯ ವ್ಯಾಖ್ಯಾನ ಇದು.

ಷೇರು ಮಾರುಕಟ್ಟೆಯಲ್ಲಾದರೇ ನಾವೇ ನೇರವಾಗಿ ಹಣವನ್ನು ಕಂಪೆನಿಗಳಲ್ಲಿ ತೊಡಗಿಸುತ್ತೇವೆ. ಮ್ಯೂಚುವಲ್ ಫಂಡ್‌ಗಳಲ್ಲಿ ನಮ್ಮಪರವಾಗಿ ಷೇರು ಮಾರುಕಟ್ಟೆ ವಹಿವಾಟು ಮತ್ತು ವಿವಿಧ ಕಂಪೆನಿಗಳ ಸಾಮರ್ಥ್ಯವನ್ನು ಚೆನ್ನಾಗಿ ಅಳೆಯಬಲ್ಲ ಅನುಭವಿಗಳು(ಫಂಡ್ ಮ್ಯಾನೇಜರ್) ಹಣ ಹೂಡುತ್ತಾರೆ. ಮ್ಯೂಚುವಲ್ ಫಂಡ್ ಎನ್ನುವುದು ಒಂದು ದೊಡ್ಡ ಪರಿಕಲ್ಪನೆ. ಅದನ್ನು ಸಂಕ್ಷಿಪ್ತವಾಗಿವಿವರಿಸುವ ಪ್ರಯತ್ನವನ್ನೇ ನಾನು ಈವರೆಗೆ ಮಾಡಿದೆ. ಆದರೆ ಅಕ್ಷರಗಳಲ್ಲಿ ಎಷ್ಟು ವಿವರಿಸಿದರೂ ಅದೊಂಥರಾ ಕುರುಡರು ಆನೆಮುಟ್ಟಿದಂತೆ. ಸ್ವತಃ ಹೂಡಿಕೆ ಮಾಡಿದರೆ ಒಂದೊಂದಾಗಿ, ಇನ್ನೂ ಚೆನ್ನಾಗಿ ಅರ್ಥವಾಗುತ್ತೆ.

ಮ್ಯೂಚುವಲ್ ಫಂಡ್ ಪದದ ವಿವರ ಗೊತ್ತಾಯಿತು. ಅದರ ಕಾರ್ಯವೈಖರಿ ಅರ್ಥ ಮಾಡಿಕೊಳ್ಳಲು ಇನ್ನೂ ಒಂದಿಷ್ಟುಪರಿಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳಬೇಕು.

ಎಎಂಸಿ (ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿ)
 

ಎಎಂಸಿ (ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿ)

ಮ್ಯೂಚುವಲ್‌ ಫಂಡ್ ಸೇವೆ ಒದಗಿಸುವ ಕಂಪನಿಗಳನ್ನು ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿಗಳು ಎಂದು ಕರೆಯುತ್ತಾರೆ. ಮ್ಯೂಚುವಲ್ ಫಂಡ್‌ಗಳನ್ನು ಆರಂಭಿಸಿ, ನಿರ್ವಹಿಸುವ ಇಂಥ ಕಂಪನಿಗಳು ತಾವು ಒದಗಿಸುವ ಸೇವೆಗೆ ಪ್ರತ್ಯೇಕ ಶುಲ್ಕಪಡೆಯುತ್ತವೆ. ಅಂಥ ಶುಲ್ಕವನ್ನು ‘ಎಎಂಸಿ ಫೀ' (ಎಎಂಸಿ ಶುಲ್ಕ) ಎಂದು ಕರೆಯುತ್ತಾರೆ. ಇದನ್ನು ಫಂಡ್‌ಹೌಸ್‌ಗಳು ಎಂದೂಕರೆಯುತ್ತಾರೆ.

ಶ್ರೀಮಂತಿಕೆ ಅನ್ನೋದು ಸುಮ್ಮನೆ ಬರೋದಿಲ್ಲ, ಅದಕ್ಕಾಗಿ ಏನು ಮಾಡಬೇಕು?

ಎನ್‌ಎಫ್‌ಒ (ನ್ಯೂ ಫಂಡ್ ಆಫರ್)

ಎನ್‌ಎಫ್‌ಒ (ನ್ಯೂ ಫಂಡ್ ಆಫರ್)

ಮ್ಯೂಚುವಲ್ ಫಂಡ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಪ್ರಕ್ರಿಯೆಯ ಭಾಗವಾಗಿ ಎನ್‌ಎಫ್‌ಒಗಳನ್ನು ಘೋಷಿಸುತ್ತಾರೆ. ಕಂಪನಿ ಷೇರುಗಳಲ್ಲಿ ಐಪಿಒ (ಇನ್ಷಿಯಲ್ ಪಬ್ಲಿಕ್ ಆಫರ್) ಇದ್ದಂತೆ ಮ್ಯೂಚುವಲ್‌ ಫಂಡ್‌ಗಳಲ್ಲಿ ಎನ್‌ಎಫ್‌ಒಗಳಿರುತ್ತವೆ. ಓಪನ್ಎಂಡೆಡ್‌ ಫಂಡ್‌ಗಳಲ್ಲಿಯಾದರೆ ಎನ್‌ಎಫ್‌ಒ ಅವಧಿ ಮುಗಿದ ನಂತರವೂ ಹೂಡಿಕೆಗೆ ಅವಕಾಶವಿರುತ್ತದೆ. ಆದರೆ ಕ್ಲೊಸ್ಡ್ ಎಂಡೆಡ್ಫಂಡ್‌ಗಳಲ್ಲಿ ಹಾಗಲ್ಲ. ಅಲ್ಲಿ, ಎನ್‌ಎಫ್‌ಒ ಅವಧಿಯೇ ಹೂಡಿಕೆಯ ಅವಧಿಯೂ ಆಗಿರುತ್ತೆ.

ಎನ್‌ಎವಿ (ನೆಟ್ ಅಸೆಟ್ ವ್ಯಾಲ್ಯೂ)

ಎನ್‌ಎವಿ (ನೆಟ್ ಅಸೆಟ್ ವ್ಯಾಲ್ಯೂ)

ಮ್ಯೂಚುವಲ್ ಫಂಡ್‌ನ ಪ್ರತಿ ಯೂನಿಟ್‌ನ ಮೌಲ್ಯವನ್ನು ಎನ್‌ಎವಿ ಎನ್ನುತ್ತಾರೆ. ಎನ್‌ಎಫ್‌ಒ ಅವಧಿಯಲ್ಲಿ ಎನ್‌ಎವಿಸಾಮಾನ್ಯವಾಗಿ 10 ರುಪಾಯಿ ಇರುತ್ತದೆ. ಕ್ರಮೇಣ ಇದು ಫಂಡ್‌ನ ಕಾರ್ಯಕ್ಷಮತೆ (ಫಂಡ್ ಮ್ಯಾನೇಜರ್‌ನ ಬುದ್ಧಿವಂತಿಕೆ, ಆರ್ಥಿಕಸ್ಥಿತಿಗತಿ) ಆಧರಿಸಿ ಹೆಚ್ಚು ಅಥವಾ ಕಡಿಮೆ ಆಗಬಹುದು. ರಾಧಾ ಎನ್ನುವವರು ಎನ್‌ಎಫ್‌ಒ ಅವಧಿಯಲ್ಲಿ ಫಂಡ್‌ ಒಂದರ ಮೇಲೆ1000 ರುಪಾಯಿ ಹೂಡಿಕೆ ಮಾಡಿದರೆ ಎಂದಿಟ್ಟುಕೊಳ್ಳಿ. ಆಗ ಅವರಿಗೆ 10 ರುಪಾಯಿ ಎನ್‌ಎವಿ ಇರುವ 100 ಯೂನಿಟ್‌ಗಳುಸಿಗುತ್ತವೆ (ಅಲಾಟ್ ಆಗುತ್ತವೆ). ಫಂಡ್‌ನ ಕಾರ್ಯಕ್ಷತೆ ಆಧರಿಸಿ ಒಂದು ವರ್ಷದ ನಂತರ ಎನ್‌ಎವಿ ಮೌಲ್ಯ 11 ರುಪಾಯಿ ಆದರೆ, ರಾಧಾ ಅವರ ಹೂಡಿಕೆ ಮೊತ್ತ 1100 ರುಪಾಯಿ ಆಗುತ್ತದೆ. ಅಂದರೆ ಅವರ ಹೂಡಿಕೆಯಿಂದ 100 ರುಪಾಯಿ ಲಾಭ ಬಂದಿದೆಎಂದರ್ಥ.

1 ಲಕ್ಷ ರೂಪಾಯಿ 1 ಕೋಟಿ ಆಗಿದ್ದು ಹೇಗೆ? ನೀವೂ ಟ್ರೈ ಮಾಡದೇ ಬಿಡಬೇಡಿ..

ಸೇಲ್ಸ್‌ ಪ್ರೈಸ್

ಸೇಲ್ಸ್‌ ಪ್ರೈಸ್

ನೀವು ಓಪನ್ ಎಂಡೆಡ್ ಮ್ಯೂಚುವಲ್ ಫಂಡ್ ಯೋಜನೆಯಲ್ಲಿ ಹಣ ಹೂಡಿಕೆ ಮಾಡುತ್ತಿದ್ದೀರಿ ಎಂದಿಟ್ಟುಕೊಳ್ಳೋಣ. ಪ್ರತಿಯೂನಿಟ್‌ಗಳನ್ನು ಯೂನಿಟ್ ಹೋಲ್ಡರ್‌ಗಳಿಗೆ (ಹೂಡಿಕೆದಾರರಿಗೆ) ಮಾರಲು ವಿಧಿಸುವ ಶುಲ್ಕವನ್ನು ಸೇಲ್ಸ್‌ ಪ್ರೈಸ್ ಎನ್ನುತ್ತಾರೆ. ಮ್ಯೂಚುವಲ್ ಫಂಡ್‌ಗಳ ಕಾರ್ಯನಿರ್ವಹಣೆ ಮೇಲೆ ಸೆಬಿ (ಸೆಕ್ಯುರಿಟಿ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಅಫ್ ಇಂಡಿಯಾ- ಷೇರುಪೇಟೆ ನಿಯಂತ್ರಣಾ ಸಂಸ್ಥೆ), ಆರ್‌ಬಿಐ (ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ) ಸೇರಿದಂತೆ ಹಲವು ಸರ್ಕಾರಿ ಸಂಸ್ಥೆಗಳ ನಿಗಾಇರುತ್ತದೆ. ಹೀಗಾಗಿ ಎಲ್ಲ ಶುಲ್ಕಗಳನ್ನೂ ಫಂಡ್‌ ಹೌಸ್‌ಗಳು ಮೊದಲೇ ಘೋಷಿಸಬೇಕು. ಶುಲ್ಕ ಪ್ರಮಾಣದಲ್ಲಿ ಏರಿಳಿಕೆಯಾದರೂಹೂಡಿಕೆದಾರರಿಗೆ ಮಾಹಿತಿ ನೀಡಬೇಕು.

ಲೋಡ್

ಲೋಡ್

ಎನ್‌ಎವಿ ಮೊತ್ತ ಆಧರಿಸಿ ಹೂಡಿಕೆದಾರರಿಗೆ ಯೂನಿಟ್‌ಗಳನ್ನು ಅಲಾಟ್ ಮಾಡಲು ಅಥವಾ ಹೂಡಿಕೆದಾರರ ಪರವಾಗಿಯೂನಿಟ್‌ಗಳನ್ನು ಮಾರಲು ಫಂಡ್‌ಹೌಸ್‌ಗಳು ವಿಧಿಸುವ ಶುಲ್ಕವನ್ನು ಲೋಡ್ ಎನ್ನುತ್ತಾರೆ. ಯೂನಿಟ್ ಅಲಾಟ್ ಮಾಡಲುವಿಧಿಸುವ ಶುಲ್ಕಕ್ಕೆ ಎಂಟ್ರಿ ಲೋಡ್ ಎಂದೂ, ಯೂನಿಟ್ ಮಾರುವ ಶುಲ್ಕಕ್ಕೆ ಎಕ್ಸಿಟ್ ಲೋಡ್ ಎಂದೂ ಕರೆಯುತ್ತಾರೆ. ನಮ್ಮದೇಶದಲ್ಲಿ ಎಂಟ್ರಿ ಲೋಡ್ ಹೆಚ್ಚಾಗಿ ಬಳಕೆಯಾಗುತ್ತಿಲ್ಲ. ಆದರೆ ಹೂಡಿಕೆ ಮಾಡಿದ ಹಣದಲ್ಲಿ ಅಲಾಟ್ ಆದ ಯೂನಿಟ್‌ಗಳನ್ನುನಿಗದಿತ ಅವಧಿಗೆ ಮೊದಲೇ ಮಾರಿದರೆ ಎಕ್ಸಿಟ್ ಲೋಡ್ ವಿಧಿಸುತ್ತಾರೆ. ಮ್ಯೂಚುವಲ್ ಫಂಡ್‌ ದೀರ್ಘಾವಧಿ ಹೂಡಿಕೆ ಸಾಧನ. ಅದರಲ್ಲಿ ಹೆಚ್ಚು ಸಮಯ ಹಣ ತೊಡಗಿಸಿರಬೇಕು ಎನ್ನುವುದು ಇಂಥ ಲೋಡ್‌ಗಳ ಮುಖ್ಯ ಉದ್ದೇಶವಾಗಿರುತ್ತೆ.

ಎಯುಎಂ (ಅಸೆಟ್ ಅಂಡರ್ ಮ್ಯಾನೇಜ್‌ಮೆಂಟ್)

ಎಯುಎಂ (ಅಸೆಟ್ ಅಂಡರ್ ಮ್ಯಾನೇಜ್‌ಮೆಂಟ್)

ಒಂದು ನಿರ್ದಿಷ್ಟ ಫಂಡ್‌ ಹೂಡಿಕೆದಾರರಿಂದ ಸಂಗ್ರಹಿಸಿರುವ ಒಟ್ಟು ಹೂಡಿಕೆಯ ಮೊತ್ತವನ್ನು ಎಯುಎಂ ಎನ್ನುತ್ತಾರೆ. ಇದುಮ್ಯೂಚುವಲ್‌ ಫಂಡ್‌ನ ಕಾರ್ಯಕ್ಷಮತೆಯ ಮೇಲೆ ಮತ್ತು ಅದು ವಿಧಿಸುವ ಶುಲ್ಕದ ಪ್ರಮಾಣದ ಮೇಲೆ ಪರಿಣಾಮ ಬೀರುತ್ತದೆ. ಹೂಡಿಕೆದಾರರು ದೀರ್ಘಾವಧಿ ಹೂಡಿಕೆಗಾಗಿ ಫಂಡ್ ಆಯ್ಕೆ ಮಾಡಿಕೊಳ್ಳುವಾಗ ಎಯುಎಂ ಪ್ರಮಾಣವನ್ನೂ ಒಂದುಮಾನದಂಡವಾಗಿ ಪರಿಗಣಿಸುತ್ತಾರೆ.

ಪೋರ್ಟ್‌ಫೊಲಿಯೊ

ಪೋರ್ಟ್‌ಫೊಲಿಯೊ

ಒಂದು ನಿರ್ದಿಷ್ಟ ಫಂಡ್‌ನಲ್ಲಿರುವ ನಿಧಿ ಹೇಗೆ ಹಂಚಿಕೆಯಾಗಿದೆ ಎಂಬುದನ್ನು ವಿವರಿಸುವ ಪಾರಿಭಾಷಿಕ ಪದ. ಫಂಡ್‌ಗಳನ್ನುಮಾರುಕಟ್ಟೆಗೆ ತರುವಾಗಲೇ ಫಂಡ್‌ ಹೌಸ್‌ಗಳು ಪೋರ್ಟ್‌ಫೋಲಿಯೊ ಯೋಜನೆಯನ್ನೂ ವಿವರಿಸುತ್ತವೆ. ಅದರಲ್ಲಿಬದಲಾವಣೆಯಾದರೆ ಹೂಡಿಕೆದಾರರ ಗಮನಕ್ಕೆ ತರಬೇಕಾಗುತ್ತದೆ. ಸರಳವಾಗಿ ಹೇಳುವುದಾದರೆ ಈಕ್ವಿಟಿ ಫಂಡ್‌ನಲ್ಲಿ ಹೂಡಿಕೆ ಶೇ90ರಷ್ಟು ಮೊತ್ತ ಷೇರುಪೇಟೆಯಲ್ಲಿ, ಶೇ 8ರಷ್ಟು ಸಾಲಪತ್ರಗಳಲ್ಲಿ ಮತ್ತು ಶೇ 2ರಷ್ಟು ಮೊತ್ತ ನಗದು ರೂಪದಲ್ಲಿ ಇರಬಹುದು. ಇದೇರೀತಿ ಡೆಟ್ ಫಂಡ್‌ಗಳಲ್ಲಿ ಶೇ 90ರಷ್ಟು ದೀರ್ಘಾವಧಿ ಸಾಲಪತ್ರಗಳಲ್ಲಿ, ಶೇ 10ರಷ್ಟು ಅಲ್ಪಾವಧಿ ಸಾಲಪತ್ರಗಳಲ್ಲಿ, ಶೇ 5ರಷ್ಟುಠೇವಣಿಗಳಲ್ಲಿ ಶೇ 5ರಷ್ಟು ನಗದು ರೂಪದಲ್ಲಿ ಇರಬಹುದು. ಈ ಹಂಚಿಕೆಯ ವಿವರವನ್ನು ಪೋರ್ಟ್‌ಫೊಲಿಯೊ ಎನ್ನಲಾಗುತ್ತದೆ.

ಎಕ್ಸ್‌ಪೆನ್ಸ್‌ ರೇಶ್ಯೋ

ಎಕ್ಸ್‌ಪೆನ್ಸ್‌ ರೇಶ್ಯೋ

ಒಂದು ನಿರ್ದಿಷ್ಟ ಫಂಡ್ ನಿರ್ವಹಿಸಲು ಎಯುಎಂಗೆ ಎಷ್ಟು ಖರ್ಚು ಬಂದಿದೆ ಎಂಬುದನ್ನು ಲೆಕ್ಕ ಹಾಕಿ ಎಕ್ಸ್‌ಪೆನ್ಸ್ ರೇಶ್ಯೋ ಪ್ರಕಟಿಸುತ್ತಾರೆ. ಒಂದು ಫಂಡ್‌ನ ಪ್ರತಿ ಯೂನಿಟ್ ನಿರ್ವಹಣೆಗೆ ಎಷ್ಟು ಖರ್ಚಾಗಿದೆ ಎಂಬುದನ್ನು ಇದು ತಿಳಿಸುತ್ತದೆ. ಪ್ರತಿದಿನಎನ್‌ಎವಿ ಘೋಷಿಸುವ ಮೊದಲು ಫಂಡ್‌ ಹೌಸ್‌ ವೆಚ್ಚಗಳನ್ನು ಕಡಿತಗೊಳಿಸುತ್ತದೆ. ಸಾಮಾನ್ಯವಾಗಿ ಪ್ರತಿ ಆರು ತಿಂಗಳಿಗೊಮ್ಮೆಫಂಡ್‌ಹೌಸ್‌ಗಳು ತಮ್ಮ ವೆಬ್‌ಸೈಟ್‌ಗಳಲ್ಲಿಯೂ ಎಕ್ಸ್‌ಪೆನ್ಸ್‌ ರೇಶ್ಯೋ ಪ್ರಕಟಿಸುತ್ತವೆ.

ರಿಡಂಪ್ಷನ್ / ರಿಪರ್ಚೇಸ್

ರಿಡಂಪ್ಷನ್ / ರಿಪರ್ಚೇಸ್

ಮಾರುಕಟ್ಟೆಯಲ್ಲಿ ವಹಿವಾಟಾಗುತ್ತಿರುವ ತನ್ನದೇ ಫಂಡ್‌ನ ಯೂನಿಟ್‌ಗಳನ್ನು ಫಂಡ್‌ ಹೌಸ್‌ ತಾನೇ ಖರೀದಿಸುವುದನ್ನುರಿಡಂಪನ್ಷನ್ ಎನ್ನುತ್ತಾರೆ. ತೀರಾ ಸರಳವಾಗಿ ಹೇಳುವುದಾದರೆ ಹೂಡಿಕೆದಾರರು ತಾವು ಖರೀದಿಸಿದ ಯೂನಿಟ್‌ಗಳನ್ನುಫಂಡ್‌ಹೌಸ್‌ಗೆ ಮಾರಿ, ನಗದು ಪಡೆಯುವ ಪ್ರಕ್ರಿಯೆ ಇದು.

ಸ್ವಿಚ್‌

ಸ್ವಿಚ್‌

ಒಂದೇ ಫಂಡ್‌ ಹೌಸ್ ಹಲವು ರೀತಿಯ ಮ್ಯೂಚುವಲ್ ಫಂಡ್‌ಗಳನ್ನು ಮಾರುಕಟ್ಟೆಗೆ ತಂದಿರುತ್ತೆ. ಅದರಲ್ಲಿರುವ ಒಂದುಫಂಡ್‌ನಿಂದ ಮತ್ತೊಂದು ಫಂಡ್‌ಗೆ ಹೂಡಿಕೆದಾರರು ಸಂಚಿತ ನಿಧಿಯನ್ನು ವರ್ಗಾಯಿಸಲು ಅವಕಾಶ ಇರುತ್ತದೆ. ಈ ಪ್ರಕ್ರಿಯೆಯನ್ನುಸ್ವಿಚ್ ಎನ್ನುತ್ತಾರೆ.

ಎಸ್‌ಐಪಿ (ಸಿಸ್ಟಮ್ಯಾಟಿಕ್ ಇನ್‌ವೆಸ್ಟ್‌ಮೆಂಟ್ ಪ್ಲಾನ್)

ಎಸ್‌ಐಪಿ (ಸಿಸ್ಟಮ್ಯಾಟಿಕ್ ಇನ್‌ವೆಸ್ಟ್‌ಮೆಂಟ್ ಪ್ಲಾನ್)

ಪ್ರತಿ ತಿಂಗಳು ಅಥವಾ ನಿಗದಿತ ಅಂತರದಲ್ಲಿ ಇಂತಿಷ್ಟು ಎಂದು ಫಂಡ್‌ಗೆ ಹಣ ಹೂಡುವ ಪ್ರಕ್ರಿಯೆ. ನಮ್ಮ ದೇಶದಲ್ಲಿ ಪ್ರತಿ ತಿಂಗಳಹೂಡಿಕೆ ಜನಪ್ರಿಯ. ಪ್ರತಿ ತಿಂಗಳು ಐದು ಸಾವಿರ ರೂಪಾಯಿ ಹೂಢಿಕೆ ಮಾಡುವ ಮೂಲಕ ವರ್ಷಕ್ಕೆ 60 ಸಾವಿರ ಹೂಡುವ ಪ್ರಕ್ರಿಯೆಇದು. ಮುಂದಿನ ದಿನಗಳಲ್ಲಿ ಇದರ ಬಗ್ಗೆ ನಾವು ಹೆಚ್ಚು ಮಾತನಾಡುತ್ತೇವೆ.

ಎಸ್‌ಟಿಪಿ (ಸಿಸ್ಟಮ್ಯಾಟಿಕ್ ಟ್ರಾನ್ಸ್‌ಫರ್ ಪ್ಲಾನ್)

ಎಸ್‌ಟಿಪಿ (ಸಿಸ್ಟಮ್ಯಾಟಿಕ್ ಟ್ರಾನ್ಸ್‌ಫರ್ ಪ್ಲಾನ್)

ಒಂದು ರೀತಿಯ ಹೂಡಿಕೆಯಲ್ಲಿರುವ ಸಂಚಿತ ಮೊತ್ತವನ್ನು ಮತ್ತೊಂದು ರೀತಿಯ ಹೂಡಿಕೆಗೆ ನಿಗದಿತ ಅಂತರದಲ್ಲಿ, ನಿಗದಿತಪ್ರಮಾಣದಲ್ಲಿ ವರ್ಗಾಯಿಸುವ ಪ್ರಕ್ರಿಯೆ ಇದು. ಉದಾಹರಣೆಗೆ ಈಕ್ವಿಟಿ ಫಂಡ್‌ನಲ್ಲಿ 1.20 ಲಕ್ಷ ರುಪಾಯಿ ಹೂಡಿಕೆ ಮಾಡಿದ್ದೀರಿಎಂದಿಟ್ಟುಕೊಳ್ಳಿ. ಅದರಿಂದ ಪ್ರತಿತಿಂಗಳು 10 ಸಾವಿರ ರುಪಾಯಿ ಡೆಟ್‌ ಫಂಡ್‌ಗೆ ವರ್ಗಾಯಿಸಿಕೊಳ್ಳುತ್ತೀರಿ. ಇದು ಮ್ಯೂಚುವಲ್‌ಫಂಡ್‌ ವ್ಯವಹಾರದಲ್ಲಿ ಲಾಭ ಹೆಚ್ಚಿಸಿಕೊಳ್ಳುವ ಉಪಾಯಗಳಲ್ಲಿ ಒಂದು. ಮುಂದಿನ ದಿನಗಳಲ್ಲಿ ಈ ಬಗ್ಗೆಯೂ ಹೆಚ್ಚುಮಾತನಾಡುತ್ತೇವೆ.

ಎಸ್‌ಡಬ್ಲ್ಯುಪಿ (ಸಿಸ್ಟಮ್ಯಾಟಿಕ್ ವಿತ್‌ಡ್ರಾವಲ್ ಪ್ಲಾನ್)

ಎಸ್‌ಡಬ್ಲ್ಯುಪಿ (ಸಿಸ್ಟಮ್ಯಾಟಿಕ್ ವಿತ್‌ಡ್ರಾವಲ್ ಪ್ಲಾನ್)

ಹೂಡಿಕೆಯಾಗಿರುವ ದೊಡ್ಡ ಮೊತ್ತದಿಂದ ನಿಗದಿತ ಅಂತರದಲ್ಲಿ ನಿಗದಿತ ಮೊತ್ತವನ್ನು ಹಿಂಪಡೆಯುವ ಪ್ರಕ್ರಿಯೆ. ಉದಾಹರಣೆಗೆನೀವು ಜೀವಮಾನವಿಡೀ ಉಳಿಸಿ, vಹೂಡಿಕೆ ಮಾಡಿ, ಬೆಳೆಸಿದ ಮೊತ್ತ 24 ಲಕ್ಷ ರುಪಾಯಿ

ಆಗಿದೆ ಎಂದಿಟ್ಟುಕೊಳ್ಳೋಣ. ಆಮೊತ್ತವನ್ನು ನೀವು

ಒಮ್ಮೆಲೆ ಹಿಂದೆ ಪಡೆಯದೇ, ಪ್ರತಿ ತಿಂಗಳು 50 ಸಾವಿರ ರುಪಾಯಿಯಂತೆ 48 ತಿಂಗಳ (4 ವರ್ಷ) ಅವಧಿಯಲ್ಲಿ ಹಿಂಪಡೆಯುತ್ತೀರಿ. ಇದು ಸಹ ಮ್ಯೂಚುವಲ್ ಫಂಡ್ ನಿರ್ವಹಣೆಯ ಜಾಣ ತಂತ್ರ. ಇದರ ಬಗ್ಗೆಯೂ ಮುಂದಿನ ದಿನಗಳಲ್ಲಿ ತಿಳಿದುಕೊಳ್ಳೋಣ.

(ಮುಂದಿನ ಲೇಖನ: ಫಂಡ್ ಗಳಲ್ಲಿ ಅದೆಷ್ಟು ವೈವಿಧ್ಯ)

(ಮುಂದಿನ ಲೇಖನ: ಫಂಡ್‌ಗಳಲ್ಲಿ ಅದೆಷ್ಟು ವೈವಿಧ್ಯ)

English summary

Mutual Fund; This Investment Very Easy To Understand

What is mutual fund? This series in Kannada will help you to understand.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X