ಪಾನ್ ಮಸಾಲದಿಂದ ಪಾಕಿಸ್ತಾನ ತನಕ: 400 ಕೋಟಿ ಜಿಎಸ್ ಟಿ ವಂಚನೆ ಸ್ಟೋರಿ
400 ಕೋಟಿ ರುಪಾಯಿ ಜಿಎಸ್ ಟಿ ವಂಚನೆ ಹಗರಣದ ಮಾಸ್ಟರ್ ಮೈಂಡ್ ಎಂದು ಆರೋಪಿಸಿರುವ ಕಿಶೋರ್ ವಾಧ್ವಾನಿ ಎಂಬಾತನನ್ನು ಸೋಮವಾರ ತಡ ರಾತ್ರಿ ಮುಂಬೈನ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಬಂಧಿಸಲಾಗಿದೆ. ಅಲ್ಲಿಂದ ಇಂದೋರ್ ಗೆ ಕರೆತರಲಾಗಿದೆ. ಆತನನ್ನು ಮಂಗಳವಾರ ಇಂದೋರ್ ಕೋರ್ಟ್ ಎದುರು ಹಾಜರು ಪಡಿಸುವ ನಿರೀಕ್ಷೆ ಇದೆ.
ಜಿಎಸ್ ಟಿ ಗುಪ್ತಚರ ವಿಭಾಗ ಹಾಗೂ ಕಂದಾಯ ಗುಪ್ತಚರ ವಿಭಾಗದಿಂದ ಕಳೆದ ಹದಿನೈದು ದಿನಗಳಿಂದ ಬಹು ಹಂತದಲ್ಲಿ ಕಾರ್ಯಾಚರಣೆ ನಡೆಯುತ್ತಿತ್ತು. ಮೂವರನ್ನು ಈ ಸಂಬಂಧವಾಗಿ ಬಂಧಿಸಿದ್ದು, ಭಾನುವಾರದ ತನಕ (ಜೂನ್ 14, 2020) 400 ಕೋಟಿ ರುಪಾಯಿ ವಂಚನೆ ಎಸಗಿರುವುದು ಬೆಳಕಿಗೆ ಬಂದಿದೆ.
ಜಿಎಸ್ಟಿ ವಂಚಕರಿಗೆ ಶಾಕಿಂಗ್ ನ್ಯೂಸ್!
ಈ ಕಾರ್ಯಾಚರಣೆ ವೇಳೆಯಲ್ಲಿ ತನಿಖಾ ತಂಡವು ಹದಿನೈದು ಮಷೀನ್ ಗಳು ಹಾಗೂ ಏಳು ಟ್ರಕ್ ವಶಪಡಿಸಿಕೊಂಡಿವೆ. ಸೋಮವಾರ ತಡರಾತ್ರಿ ನಂತರವೂ ಇಂದೋರ್ ನಲ್ಲಿ ಶೋಧ ಮುಂದುವರಿದಿತ್ತು.

ಕಾನೂನು ಬಾಹಿರವಾಗಿ ಪಾನ್ ಮಸಾಲ ಮಾರಾಟ
ಇದಕ್ಕೆ ಆಪರೇಷನ್ ಕರ್ಕ ಎಂದು ಹೆಸರಿಡಲಾಗಿತ್ತು. ಅದಕ್ಕೆ ಕಾರಣ ಏನೆಂದರೆ, ಬಾಯಿ ಕಾನ್ಸರ್ ಗೆ ಕಾರಣ ಆಗುವ ತಂಬಾಕು ಹಾಗೂ ಗುಟ್ಕಾ ಸೇವನೆಗೆ ಸಂಬಂಧಿಸಿದ ಹಗರಣ ಇದಾಗಿತ್ತು. ಮೂರು ಪ್ರತ್ಯೇಕ ಗುಂಪುಗಳು ಇದರಲ್ಲಿ ಭಾಗಿಯಾಗಿದ್ದವು. ಕಾನೂನುಬಾಹಿರವಾಗಿ ಪಾನ್ ಮಸಾಲ/ತಂಬಾಕು ಉತ್ಪಾದನೆ ಮತ್ತು ಅಘೋಷಿತ ಪೂರೈಕೆ, ಮಾರಾಟದಲ್ಲಿ ತೊಡಗಿದ್ದವು. ಜಿಎಸ್ ಟಿ ಪಾವತಿ ಮಾಡದೆ ದಂಧೆಯಲ್ಲಿ ತೊಡಗಿದ್ದವು ಎಂದು ತನಿಖಾ ಸಂಸ್ಥೆಗಳು ಮಾಹಿತಿ ನೀಡಿವೆ. ಈ ಕಾರ್ಯಾಚರಣೆಯ ಮೊದಲ ಹಂತವು ಮೇ 30ನೇ ತಾರೀಕು ಆರಂಭವಾಗಿದೆ. ಅದರಡಿಯಲ್ಲಿ ಸಂಜಯ್ ನನ್ನು ಜೂನ್ 3ನೇ ತಾರೀಕು ಬಂಧಿಸಲಾಗಿದೆ. ಎರಡನೇ ಹಂತದಲ್ಲಿ ನಗರದ ಹದಿನಾರು ಸ್ಥಳಗಳಲ್ಲಿ ಜೂನ್ 9ರಿಂದ 12ರ ಮಧ್ಯೆ ಶೋಧ ನಡೆಸಲಾಗಿದೆ. 225 ಕೋಟಿ ರುಪಾಯಿಯಷ್ಟು ತೆರಿಗೆ ಕಟ್ಟದಿರುವುದು ಎರಡನೇ ಹಂತದ ಕಾರ್ಯಾಚರಣೆಯ ಕೊನೆಗೆ ಕೇಂದ್ರ ಜಿಎಸ್ ಟಿ ಗುಪ್ತಚರ ವಿಭಾಗದ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಪಾಕಿಸ್ತಾನದ ಪಾಸ್ ಪೋರ್ಟ್, ನಂಟು
ಈ ಹಗರಣದ ಮಾಸ್ಟರ್ ಮೈಂಡ್ ಗಳು ಎಂಟು ಕಂಪೆನಿಗಳನ್ನು ಮಾಡಿಕೊಂಡಿದ್ದರು. ರಿಯಲ್ ಎಸ್ಟೇಟ್, ಹೋಟೆಲ್, ಮಾಧ್ಯಮ ಹೀಗೆ. ಅದು ಕಾನೂನು ಬಾಹಿರವಾಗಿ ತಂಬಾಕು- ಗುಟ್ಕಾ ಮಾರಿದ ಹಣದಿಂದ ದೊಡ್ಡ ಉದ್ಯಮ ಸಾಮ್ರಾಜ್ಯ ಮಾಡಿಕೊಂಡಿದ್ದರು. ಇದರಲ್ಲಿ ಸಂಜಯ್ ಗೆ ಪಾಕಿಸ್ತಾನದ ವ್ಯಕ್ತಿಯೊಂದಿಗೆ ನಂಟು ಇರುವುದು ಕಂಡುಬಂದಿದೆ. ಇನ್ನೂ ಆಸಕ್ತಿಕರ ಸಂಗತಿ ಏನೆಂದರೆ, ಆತನ ಬಳಿ ಪಾಕಿಸ್ತಾನದ ಪಾಸ್ ಪೋರ್ಟ್ ಸಹ ಸಿಕ್ಕಿದೆ. ಆಪರೇಷನ್ ಕರ್ಕದ ಮೊದಲ ಹಂತದಲ್ಲಿ ಸಿಕ್ಕಿ ಬಿದ್ದವನೇ ಸಂಜಯ್. ಆ ನಂತರ ಅಧಿಕಾರಿಗಳು ಸಂಜಯ್ ಗೆ ಸೇರಿದ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದಾರೆ. ಆತನ ಸೋದರ ಸಂದೀಪ್ ತಲೆ ತಪ್ಪಿಸಿಕೊಂಡಿದ್ದಾನೆ. ಪಾಕಿಸ್ತಾನದ ವ್ಯಕ್ತಿಯೊಂದಿಗೆ ಸುದೀರ್ಘ ಅವಧಿಗೆ ಫೋನ್ ನಲ್ಲಿ ಸಂಜಯ್ ಮಾತನಾಡಿರುವುದಕ್ಕೆ ದಾಖಲೆಗಳು ಪತ್ತೆಯಾಗಿವೆ. ಶೋಧದ ವೇಳೆ ಅಘೋಷಿತ ಗೋದಾಮುಗಳು ಹಾಗೂ ವಸತಿ ಸ್ಥಳಗಳು ಪತ್ತೆಯಾಗಿವೆ.

ಲಾಕ್ ಡೌನ್ ಅವಧಿಯಲ್ಲೂ ಪೂರೈಕೆ, ಮಾರಾಟ
ಪಾನ್ ಮಸಾಲ ವ್ಯವಹಾರವನ್ನು ವಿಜಯ್ ನಾಯರ್ ಎಂಬುವವರು ನಡೆಸುತ್ತಿದ್ದರು. ಆದರೆ ಕಂಪೆನಿ ದೇಖ- ರೇಕಿಗಳನ್ನು ನೋಡುತ್ತಿದ್ದವರು ವಾಧ್ವಾನಿಯ ಸಂಬಂಧಿಕರು, ಆಪ್ತರು ಎಂಬುದು ಗೊತ್ತಾಗಿದೆ. ನಾಯರ್ ಬಂಧನದ ನಂತರ ಈ ಹಗರಣದ ಪ್ರಮುಖ ಸದಸ್ಯರ ಮಾಹಿತಿ ಸಿಕ್ಕಿದೆ. ಅಂದ ಹಾಗೆ ಈ ಆರೋಪಿಗಳು 2012ರಿಂದ ಈ ದಂಧೆ ನಡೆಸುತ್ತಿದ್ದಾರೆ. ಸದ್ಯದ ಪ್ರಾಥಮಿಕ ತನಿಖೆ ಪ್ರಕಾರ, ಜುಲೈ 2019ರಿಂದ 2020ರ ಮಾರ್ಚ್ ತನಕ ಜಿಎಸ್ ಟಿ ತಪ್ಪಿಸಿರುವ ಮೊತ್ತ 25 ಕೋಟಿ ರುಪಾಯಿ. ಆದರೆ ಒಟ್ಟಾರೆಯಾಗಿ ಸರ್ಕಾರಕ್ಕೆ ವಂಚನೆ ಮಾಡಿರುವುದು 400 ಕೋಟಿ ರುಪಾಯಿಯಷ್ಟಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ವರ್ಷದ ಏಪ್ರಿಲ್- ಮೇ ತಿಂಗಳಲ್ಲಿ ಕೊರೊನಾ ಲಾಕ್ ಡೌನ್ ಇರುವಾಗಲೂ ಕಾನೂನು ಬಾಹಿರವಾಗಿ, ತುಂಬ ದೊಡ್ಡ ಪ್ರಮಾಣದಲ್ಲಿ ಈ ಗುಂಪು ಪಾನ್ ಮಸಾಲ/ತಂಬಾಕು ಪೂರೈಕೆ ಮತ್ತು ಮಾರಾಟ ಮಾಡಿದೆ ಎಂದು ಕೂಡ ಹೇಳಲಾಗಿದೆ.