ಒಂದು ಕೇಜಿ ಸೇಬು, ದಾಳಿಂಬೆಗಿಂತ ಬೆಂಗಳೂರಿನಲ್ಲಿ ಈರುಳ್ಳಿ ದುಬಾರಿ ಆಗಿದೆ. ಚಿಲ್ಲರೆ ಮಾರಾಟಗಾರರು ಒಂದು ಕೆ.ಜಿ. ಈರುಳ್ಳಿಯನ್ನು 200 ರುಪಾಯಿಗೆ ಮಾರುತ್ತಿದ್ದಾರೆ. ಮಾರುಕಟ್ಟೆಗೆ ಈರುಳ್ಳಿ ಪೂರೈಕೆ ಗಣನೀಯವಾಗಿ ಇಳಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
"ಬೆಂಗಳೂರಿನ ಕೆಲವು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಈರುಳ್ಳಿ ಬೆಲೆ ಕೇಜಿಗೆ 200 ರುಪಾಯಿ ಮುಟ್ಟಿದೆ. ಇನ್ನು ಸಗಟು (ಹೋಲ್ ಸೇಲ್) ಮಾರಾಟ ದರವು ಕ್ವಿಂಟಲ್ ಗೆ 5,500 ರುಪಾಯಿಯಿಂದ 14,000 ರುಪಾಯಿ ಮಧ್ಯೆ ಇದೆ" ಎಂದು ರಾಜ್ಯ ಕೃಷಿ ಮಾರುಕಟ್ಟೆ ಅಧಿಕಾರಿ ಸಿದ್ದಲಿಂಗಯ್ಯ ಅವರು ಐಎಎನ್ ಎಸ್ ಗೆ ತಿಳಿಸಿದ್ದಾರೆ.
ಹೀಗೆ ಸಿಕ್ಕಾಪಟ್ಟೆ ಬೆಲೆ ಏರುತ್ತಿರುವ ಕಾರಣಕ್ಕೆ ಮನೆಗಳಲ್ಲಿ, ಹೋಟೆಲ್ ಗಳಲ್ಲಿ ಈರುಳ್ಳಿ ಬಳಕೆ ಕಡಿಮೆ ಆಗಿದೆ, ಕೆಲವರಂತೂ ನಿಲ್ಲಿಸಿಯೇ ಬಿಟ್ಟಿದ್ದಾರೆ. ಸಿದ್ದಲಿಂಗಯ್ಯ ಅವರು ಹೇಳುವ ಪ್ರಕಾರ, ಜನವರಿ ಮಧ್ಯದ ತನಕ ಈರುಳ್ಳಿ ಪೂರೈಕೆಯಲ್ಲಿ ಕೊರತೆ ಹೀಗೇ ಇರಲಿದೆ.

ಭಾರತದಲ್ಲಿ ವಾರ್ಷಿಕ 150 ಲಕ್ಷ ಮೆಟ್ರಿಕ್ ಟನ್ ಈರುಳ್ಳಿಗೆ ಬೇಡಿಕೆ ಇದೆ. ಇನ್ನು ಕರ್ನಾಟಕದಲ್ಲಿ 20.19 ಲಕ್ಷ ಮೆಟ್ರಿಕ್ ಟನ್ ಬೆಳೆಯಲಾಗುತ್ತದೆ. ಮಳೆ- ಪ್ರವಾಹದ ಕಾರಣಕ್ಕೆ ಶೇಕಡಾ ಐವತ್ತರಷ್ಟು ಈರುಳ್ಳಿ ಇಳುವರಿ ಕಡಿಮೆ ಆಗಿದೆ. ಬಾಕಿ ದಾಸ್ತಾನು ಮಾತ್ರ ಮಾರುಕಟ್ಟೆಗೆ ಬಂದಿದೆ. ಈ ಬಾರಿ ಬಿದ್ದ ಭಾರಿ ಮಳೆ ಈರುಳ್ಳಿ ಇಳುವರಿಗೆ ಭಾರೀ ಹೊಡೆತ ಬಿದ್ದಿದೆ.
ನವೆಂಬರ್ ನಲ್ಲಿ ಕರ್ನಾಟಕದ ಮಾರುಕಟ್ಟೆಗೆ ದಿನಕ್ಕೆ 60ರಿಂದ 70 ಕ್ವಿಂಟಲ್ ಈರುಳ್ಳಿ ಮಾತ್ರ ಬಂದಿದೆ. ಅದು ಡಿಸೆಂಬರ್ ಇನ್ನೂ 50 ಪರ್ಸೆಂಟ್ ಕುಸಿದಿರುವುದು ಬಿಕ್ಕಟ್ಟಿಗೆ ಕಾರಣವಾಗಿದೆ. ಈರುಳ್ಳಿಯ ಮತ್ತಷ್ಟು ಅಭಾವ ಕಾಣಿಸಿಕೊಳ್ಳಬಾರದು ಎಂಬ ಕಾರಣಕ್ಕೆ ಎಪಿಎಂಸಿಯಲ್ಲಿ ಯಾವುದೇ ರಜಾ ದಿನ ಇಲ್ಲದೇ ಈರುಳ್ಳಿ ವ್ಯಾಪಾರಿಗಳು ವಹಿವಾಟು ನಡೆಸುವಂತೆ ಸುತ್ತೋಲೆ ಹೊರಡಿಸಲಾಗಿದೆ.
ಸಗಟು ಅಥವಾ ಚಿಲ್ಲರೆ ಮಾರಾಟಗಾರರ ಬಳಿ ಈರುಳ್ಳಿ ದಾಸ್ತಾನು ಹೆಚ್ಚಿಗೆ ಉಳಿದಿಲ್ಲ. ಇನ್ನೂ ಆಶ್ಚರ್ಯ ಏನೆಂದರೆ ಕರ್ನಾಟಕದಲ್ಲಿ ಈರುಳ್ಳಿ ದಾಸ್ತಾನು ಮಾಡುವುದಕ್ಕೆ ಸರಿಯಾದ ವ್ಯವಸ್ಥೆ ಇಲ್ಲ ಎಂದು ಸಿದ್ದಲಿಂಗಯ್ಯ ಹೇಳಿದ್ದಾರೆ. ಇನ್ನು ವ್ಯಾಪಾರಿಗಳು ಈರುಳ್ಳಿ ದಾಸ್ತಾನು ಮಾಡಿದಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ದಾಳಿ ಮಾಡಲಾಗುತ್ತಿದೆ.


Click it and Unblock the Notifications