ಕೊರೊನಾ ಸೋಂಕು ತಡೆಗಟ್ಟಲು ದೇಶಾದ್ಯಂತ ಹೇರಿದ್ದ ಲಾಕ್‌ಡೌನ್ ಎಫೆಕ್ಟ್ ಎಲ್ಲಾ ಉದ್ಯಮಗಳಿಗೂ ನಷ್ಟವನ್ನುಂಟು ಮಾಡಿರುವುದರ ಜೊತೆಗೆ ದೇವಾಲಯಗಳಿಗೂ ಅದರ ಬಿಸಿ ತಟ್ಟಿದೆ. ಲಾಕ್‌ಡೌನ್‌ನಿಂದಾಗಿ, ಶಿರಡಿಯಲ್ಲಿರುವ ಸಾಯಿಬಾಬಾ ಮಂದಿರ ಟ್ರಸ್ಟ್‌ಗೆ ಪ್ರತಿದಿನ 1.5 ಕೋಟಿ ರುಪಾಯಿಗಿಂತಲೂ ಹೆಚ್ಚಿನ ನಷ್ಟವಾಗಿದೆ.
ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಶಿರಡಿ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡುತ್ತಿದ್ದ ಭಕ್ತರು ನಗದು, ಚಿನ್ನ, ಬೆಳ್ಳಿ ಮೂಲಕ ಕೋಟ್ಯಾಂತರ ರುಪಾಯಿ ದೇಣಿಗೆಯನ್ನು ನೀಡುತ್ತಿದ್ದರು.
ವಾರ್ಷಿಕವಾಗಿ ಹರಿದು ಬರುತ್ತದೆ 600 ಕೋಟಿ ರುಪಾಯಿ ದೇಣಿಗೆ
ಶಿರಡಿ ಸಾಯಿಬಾಬಾ ದೇವಾಲಯಕ್ಕೆ ಭಕ್ತರ ಮೂಲಕ ವಾರ್ಷಿಕವಾಗಿ 600 ಕೋಟಿ ರುಪಾಯಿ ಕೊಡುಗೆ ಹರಿದುಬರುತ್ತದೆ. ಅದು ಪ್ರತಿದಿನ 1.64 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನದ್ದಾಗಿದೆ. ಆದರೆ ಲಾಕ್‌ಡೌನ್‌ದಿಂದಾಗಿ ಪ್ರತಿದಿನವೂ ನಷ್ಟವು ಸುಮಾರು 1 ಕೋಟಿ ಮತ್ತು 58 ಲಕ್ಷ ರುಪಾಯಿ ಎನ್ನಲಾಗಿದೆ.
ಲಾಕ್‌ಡೌನ್ ನಡುವೆಯು 2.53 ಕೋಟಿ ರುಪಾಯಿ ಕೊಡುಗೆ
ದೇವಾಲಯ ಮುಚ್ಚಿದಾಗಿನಿಂದ, ಮಾರ್ಚ್ 17 ರಿಂದ ಮೇ 3 ರವರೆಗೆ, ದೇವಾಲಯದ ಟ್ರಸ್ಟ್ 2.53 ಕೋಟಿ ರುಪಾಯಿ ದೇಣಿಗೆಯನ್ನು ಪಡೆದಿದೆ ಎಂದು ತಿಳಿದುಬಂದಿದೆ. ಇದರ ಜೊತೆಗೆ ಪ್ರತಿದಿನ ಕೆಲವು ಸಾವಿರ ರುಪಾಯಿಗಳಂತೆ ಆನ್‌ಲೈನ್ ಮೂಲಕವೂ ದೇಣಿಗೆ ಪಡೆದುಕೊಂಡಿದ್ದು, ಪ್ರತಿದಿನ ಸುಮಾರು 6 ಲಕ್ಷ ರುಪಾಯಿ ಆಗಿದೆ.
ಲಾಕ್‌ಡೌನ್ ಮುಂದುವರಿದರೆ 150 ಕೋಟಿಗೂ ಹೆಚ್ಚು ನಷ್ಟ
ಒಂದು ವೇಳೆ ಜೂನ್‌ವರೆಗೆ ಲಾಕ್ ಡೌನ್ ಮುಂದುವರಿದರೆ, ದೇವಾಲಯದ ಟ್ರಸ್ಟ್ 150 ಕೋಟಿಗೂ ಹೆಚ್ಚು ನಷ್ಟವನ್ನು ಅನುಭವಿಸುತ್ತದೆ. ಇದರಿಂದಾಗಿ ಸಾಯಿಬಾಬಾ ದೇವಾಲಯ ಟ್ರಸ್ಟ್ ಕೈಗೊಂಡ ಸಾಮಾಜಿಕ ಕಾರ್ಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎನ್ನಲಾಗಿದೆ. ಕೊರೊನಾದಿಂದಾಗಿ ವಿಶ್ವಪ್ರಸಿದ್ಧ ಸಾಯಿಬಾಬಾ ದೇವಸ್ಥಾನವನ್ನು ಮಾರ್ಚ್ 17 ರಿಂದ ಮುಚ್ಚಲಾಗಿದೆ ಮತ್ತು ಇದರ ಪರಿಣಾಮವಾಗಿ ಆನ್‌ಲೈನ್ ದರ್ಶನ ಮೂಲಕ ಪ್ರತಿದಿನ 8-9 ಭಕ್ತರು ಮಾತ್ರ ದೇವಾಲಯಕ್ಕೆ ಭೇಟಿ ನೀಡುತ್ತಾರೆ
ವಾರ್ಷಿಕವಾಗಿ 400 ಕೋಟಿಯಷ್ಟು ಚಿನ್ನ, ಬೆಳ್ಳಿ ದೇಣಿಗೆ
ಶಿರಡಿಯ ಸಾಯಿಬಾಬಾ ಇನ್ಸ್ಟಿಟ್ಯೂಟ್ ಪ್ರತಿವರ್ಷ ಸುಮಾರು 600 ಕೋಟಿ ರುಪಾಯಿ ದೇಣಿಗೆ ಪಡೆಯುವ ಮೊತ್ತದಲ್ಲಿ, ಬಾಬಾ ಅವರಿಗೆ ನೀಡುವ ನಗದು, ಚಿನ್ನ, ಬೆಳ್ಳಿ ಮತ್ತು ಇತರ ವಸ್ತುಗಳ ರೂಪದಲ್ಲಿ 400 ಕೋಟಿ ರುಪಾಯಿ ಇರುತ್ತದೆ. ಆದರೆ, ಈಗ ಶಿರಡಿಯ ಸಾಯಿಬಾಬಾ ಇನ್ಸ್ಟಿಟ್ಯೂಟ್ ಮಾಡಿದ ಅನೇಕ ಸಾಮಾಜಿಕ ಕಾರ್ಯಗಳು ಹಣದ ಕೊರತೆಯಿಂದಾಗಿ ತೀವ್ರ ಹೊಡೆತವನ್ನು ಅನುಭವಿಸುತ್ತಿವೆ.


Click it and Unblock the Notifications