For Quick Alerts
ALLOW NOTIFICATIONS  
For Daily Alerts

ಬಜೆಟ್ ಗಳಲ್ಲಿ ಎಷ್ಟು ಥರ, ಈ ಬಾರಿ ಕೇಂದ್ರ ಬಜೆಟ್ ಹೇಗಿರುತ್ತದೆ ಗೊತ್ತಾ?

By ಅನಿಲ್ ಆಚಾರ್
|

ನಮ್ಮ ಮನೆಗಳಲ್ಲಿ ತಿಂಗಳ ಬಜೆಟ್, ಮದುವೆಗೆ ಬಜೆಟ್, ಯಾವುದಾದರೂ ಕಾರ್ಯಕ್ರಮಗಳಿಗೆ ಬಜೆಟ್ ಮಾಡಿಕೊಳ್ತೀವಲ್ಲಾ, ಅದೇ ರೀತಿ ಕೇಂದ್ರ ಸರ್ಕಾರ ಸಹ ಪ್ರತಿ ವರ್ಷ ಬಜೆಟ್ ಮಾಡುತ್ತದೆ. ಫೆಬ್ರವರಿ ತಿಂಗಳ 1ನೇ ತಾರೀಕು ಬಜೆಟ್ ಮಂಡನೆ ಆಗುತ್ತದೆ. ಏನಿದು ಬಜೆಟ್ ಅಂದರೆ, ಕೇಂದ್ರ ಸರ್ಕಾರಕ್ಕೆ ಬರಬಹುದಾದ ಆದಾಯ ಹಾಗೂ ಆಗುವ ವೆಚ್ಚದ ಒಂದು ಅಂದಾಜು ಪಟ್ಟಿ.

ಒಂದು ವೇಳೆ ಖರ್ಚಿಗೆ ಸಾಕಾಗುವಷ್ಟು ಆದಾಯ ಇಲ್ಲ ಎಂದಾದಲ್ಲಿ ಅದಕ್ಕಾಗಿ ಎಷ್ಟು ಸಾಲ ಮಾಡಬೇಕಾಗುತ್ತದೆ ಎಂಬುದನ್ನು ಸಹ ಅಂದಾಜು ಮಾಡಲಾಗುತ್ತದೆ. ನಿಮಗೆ ಗೊತ್ತಿರಲಿ, ಇವೆಲ್ಲವೂ ಅಂದಾಜು ಮಾತ್ರ. ಇಂಥಿಂಥ ಮೂಲಗಳಿಂದ ಸರ್ಕಾರಕ್ಕೆ ಇಷ್ಟು ಆದಾಯ ಬರಬಹುದು ಮತ್ತು ಅದನ್ನು ಇಂಥಿಂಥವುಗಳಿಗೆ ವೆಚ್ಚ ಮಾಡಬೇಕು ಎಂಬುದನ್ನು ಮುಂಚೆಯೇ ಲೆಕ್ಕಾಚಾರ ಮಾಡಿಟ್ಟುಕೊಳ್ಳಲಾಗುತ್ತದೆ.

ಬಜೆಟ್ 2021: ಆದಾಯ ತೆರಿಗೆ ಇಳಿಕೆ ಅನುಮಾನ; ವಿನಾಯಿತಿಗಳ ಕಡೆಗೆ ಗಮನಬಜೆಟ್ 2021: ಆದಾಯ ತೆರಿಗೆ ಇಳಿಕೆ ಅನುಮಾನ; ವಿನಾಯಿತಿಗಳ ಕಡೆಗೆ ಗಮನ

ಈಗ ಬಜೆಟ್ ಅಂದರೆ ಏನು ಅಂತ ಅರ್ಥ ಆಯಿತು. ಅದರಲ್ಲಿ ಮೂರು ಬಗೆಯ ಬಜೆಟ್ ಇದೆ. ಆದಾಯ ಹೆಚ್ಚಿರುವುದು, ವೆಚ್ಚವೇ ಹೆಚ್ಚಿರುವುದು ಹಾಗೂ ಆದಾಯ ಮತ್ತು ವೆಚ್ಚ ಎರಡೂ ಸಮವಾಗಿರುವುದು. ಹೀಗೆ ಮೂರು ಬಗೆಯ ಬಜೆಟ್. ಅದನ್ನೇ ಈ ಲೇಖನದಲ್ಲಿ ನಿಮಗೆ ವಿವರಿಸಲಾಗುತ್ತದೆ.

ಸಮತೋಲಿತ ಬಜೆಟ್

ಸಮತೋಲಿತ ಬಜೆಟ್

ಎಷ್ಟು ಆದಾಯ ಬರುತ್ತದೋ ಅಲ್ಲಿಗೆ ಸಮನಾಗಿ ಖರ್ಚು ಮಾಡಿಬಿಟ್ಟರೆ ಮುಗಿಯಿತು. ಉಳಿತಾಯವೂ ಅಲ್ಲ, ತೀರಾ ಸಾಲವೂ ಇಲ್ಲ. ಈ ರೀತಿಯಲ್ಲಿ ಬಜೆಟ್ ಸಿದ್ಧಪಡಿಸುವುದನ್ನು ಸಮತೋಲಿತ ಬಜೆಟ್ ಎನ್ನಲಾಗುತ್ತದೆ. ಹಣಕಾಸು ವರ್ಷದಲ್ಲಿ ಸರ್ಕಾರಕ್ಕೆ ಬರುವ ಆದಾಯವು ಅಂದಾಜು ವೆಚ್ಚಕ್ಕೆ ಸಮನಾಗಿಯೇ ಇರುವಂಥ ಸನ್ನಿವೇಶ ಅದು. ಹಾಸಿಗೆ ಇದ್ದಷ್ಟು ಕಾಲು ಚಾಚು ಅಂತ ಹಿರಿಯರು ಹೇಳಿದ್ದಾರಲ್ಲ, ಹಾಗೆ. ಆದರೆ ಈ ಧೋರಣೆಯು ಬಿಕ್ಕಟ್ಟಿನ ಸಂದರ್ಭಗಳಿಗೆ ಸೂಕ್ತವಾಗುವುದಿಲ್ಲ. ಅದರಲ್ಲೂ ಈಗ ಕೊರೊನಾದಿಂದ ತತ್ತರಿಸಿ, FY21Q1ರಲ್ಲಿ 20%ಗೂ ಹೆಚ್ಚು ಆರ್ಥಿಕ ಕುಗ್ಗಿದೆ. ಆದರೆ ಇಂಥ ಸಮತೋಲಿತ ಬಜೆಟ್ ನಿಂದ ಆರ್ಥಿಕ ಶಿಸ್ತು ಕಂಡುಬರುತ್ತದೆ. ಅನುಷ್ಠಾನ ಸರಿಯಾಗಿ ಆದಲ್ಲಿ ಆರ್ಥಿಕ ಸ್ಥಿರತೆ ಬರುತ್ತದೆ. ಜತೆಗೆ ಸರ್ಕಾರವು ಯಾವುದೇ ಅನಗತ್ಯ ಖರ್ಚುಗಳನ್ನು ಮಾಡುವುದಕ್ಕೆ ಅವಕಾಶ ಇರುವುದಿಲ್ಲ.

ಆದರೆ, ಆರ್ಥಿಕ ಕುಸಿತದ ಸಂದರ್ಭಕ್ಕೆ ಇದು ಸೂಕ್ತ ಅಲ್ಲ. ನಿರುದ್ಯೋಗ ಸಮಸ್ಯೆ ಇದರಿಂದ ಬಗೆಹರಿಯಲ್ಲ. ಕೊರೊನಾ ಬಿಕ್ಕಟ್ಟಿನ ನಂತರ ದೇಶದ ಮುಂದೆ ಇರುವ ಸವಾಲಿನ ಸನ್ನಿವೇಶಕ್ಕಂತೂ ಇದು ಸೂಕ್ತ ಅಲ್ಲವೇ ಅಲ್ಲ. ಕೆಲವು ಅಭಿವೃದ್ಧಿ ಕಡಿಮೆ ಇರುವ ಮತ್ತು ಅಭಿವೃದ್ಧಿಶೀಲ ಆರ್ಥಿಕತೆಯಲ್ಲೂ ಸಮತೋಲಿತ ಬಜೆಟ್ ಬೆಳವಣಿಗೆಗೆ ಪೂರಕವಲ್ಲ. ಇನ್ನು ಸಾರ್ವಜನಿಕರ ಕಲ್ಯಾಣ ಯೋಜನೆಗಳಿಗೆ ಹಣ ಖರ್ಚು ಮಾಡುವುದು ಸಹ ಸರ್ಕಾರಗಳಿಗೆ ತಡೆಯಾಗುತ್ತದೆ.

ಮಿಗತೆ ಬಜೆಟ್ (ಸರ್ ಪ್ಲಸ್ ಬಜೆಟ್)

ಮಿಗತೆ ಬಜೆಟ್ (ಸರ್ ಪ್ಲಸ್ ಬಜೆಟ್)

ಹಣಕಾಸು ವರ್ಷದಲ್ಲಿ ಸರ್ಕಾರವು ಅಂದಾಜು ಮಾಡಿದ ಆದಾಯ ಪ್ರಮಾಣವು ಖರ್ಚಿಗಿಂತ ಹೆಚ್ಚಿದ್ದಲ್ಲಿ ಅದನ್ನು 'ಮಿಗತೆ ಬಜೆಟ್' ಎನ್ನಲಾಗುತ್ತದೆ. ಇದು ಯಾವಾಗೆಂದರೆ, ಸರ್ಕಾರವು ಜನ ಕಲ್ಯಾಣ ಯೋಜನೆಗಳಿಗೆ ಖರ್ಚು ಮಾಡುವುದಕ್ಕೆ ಹೋಲಿಸಿದಲ್ಲಿ ಹೆಚ್ಚಿನ ಆದಾಯವು ತೆರಿಗೆ ರೂಪದಲ್ಲಿ ಬರಬೇಕು. ಬೇಡಿಕೆ ಕಾರಣಕ್ಕೆ ಹಣದುಬ್ಬರ ತುಂಬ ಜಾಸ್ತಿ ಆಗಿರುವಾಗ ಅದನ್ನು ಕಡಿಮೆ ಮಾಡುವ ಉದ್ದೇಶಕ್ಕೆ ಮಿಗತೆ ಬಜೆಟ್ ಮಂಡಿಸಬಹುದು.

ಕೊರತೆ ಬಜೆಟ್ (ಡೆಫಿಸಿಟ್ ಬಜೆಟ್)

ಕೊರತೆ ಬಜೆಟ್ (ಡೆಫಿಸಿಟ್ ಬಜೆಟ್)

ಸರ್ಕಾರವು ತನ್ನ ಆದಾಯಕ್ಕಿಂತ ಹೆಚ್ಚಿನ ಖರ್ಚನ್ನು ಮಾಡುವಂಥ ಬಜೆಟ್ ಇದು. ಬೆಳವಣಿಗೆಗೆ ಉತ್ತೇಜನ ನೀಡುವ ಕಾರಣಕ್ಕೆ ಹೀಗೆ ಮಾಡಲಾಗುತ್ತದೆ. ಕೊರೊನಾ ಬಿಕ್ಕಟ್ಟು, ಆರ್ಥಿಕ ಸಮಸ್ಯೆಗಳ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸಿತಾರಾಮನ್ ಅವರು ಮಂಡಿಸುತ್ತಿರುವ ಬಜೆಟ್ ಇದೇ ಆಗಿರುವ ಸಾಧ್ಯತೆ ಇದೆ. ಇಂಥ ಬಜೆಟ್ ನಿಂದ ಆರ್ಥಿಕತೆಗೆ ಚೈತನ್ಯ ಸಿಗುತ್ತದೆ. ಸಾರ್ವಜನಿಕರ ಮೂಲಕ ಸಾಲ ಸಂಗ್ರಹಿಸಿ (ಸರ್ಕಾರಿ ಬಾಂಡ್ ಗಳ ವಿತರಣೆ ಮಾಡುತ್ತದೆ) ಅಥವಾ ತನ್ನ ಬಳಿ ಇರುವ ಹೆಚ್ಚುವರಿ ಮೀಸಲು ನಿಧಿಯ ಮೂಲಕ ಖರ್ಚನ್ನು ಸರ್ಕಾರ ಭರಿಸುತ್ತದೆ.

ಕೊರತೆ ಬಜೆಟ್ ನಿಂದ ಉದ್ಯೋಗ ಸೃಷ್ಟಿ ಆಗುತ್ತದೆ. ಆದರೆ ಮುಖ್ಯವಾಗಿ ಸರ್ಕಾರದ ಪಾಲಿನ ಸಾಲ ಹೆಚ್ಚಾಗುತ್ತದೆ. ಏನೇ ಆಗಲಿ, ಈಗಿನ ಸ್ಥಿತಿಯಲ್ಲಿ ಬುದ್ಧಿವಂತಿಕೆ ನಿರ್ಧಾರ ಮುಖ್ಯವಾಗುತ್ತದೆ. ಆರ್ಥಿಕ ಬೆಳವಣಿಗೆ ಕಾಣಬೇಕು ಎಂಬ ಕಾರಣಕ್ಕೆ ಕೊರತೆ ಬಜೆಟ್ ಮಂಡಿಸಲಾಗುತ್ತದೆ. ಇದು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಸೂಕ್ತವಾಗುತ್ತದೆ. ಸಮತೋಲಿತ ಬಜೆಟ್ ಮಂಡಿಸುವುದು ವಾಸ್ತವಕ್ಕೆ ಹತ್ತಿರ ಇಲ್ಲ. ಇನ್ನು ಹಣದುಬ್ಬರ ಹೆಚ್ಚಾಗಿರುವಾಗ ಬೇಡಿಕೆ ಕಡಿಮೆ ಆಗಲಿ ಎಂಬ ಉದ್ದೇಶದಿಂದ ಮಿಗತೆ ಬಜೆಟ್ ಮಂಡಿಸಲಾಗುತ್ತದೆ.

English summary

Union Budget 2021: What Are The Types Of Budget, Which One Will Choose By Nirmala Sitharaman?

There is 3 types of budget. Balanced, deficit and surplus. This year which one will be the choice of finance minister Nirmala Sitharaman.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X