ದಿನೇ ದಿನೇ ಅಮೆರಿಕಾ-ಚೀನಾ ನಡುವಿನ ವಾಣಿಜ್ಯ ಸಮರ ಹೆಚ್ಚಾಗುತ್ತಿದ್ದು, ಅಮೆರಿಕದ ಷೇರು ವಿನಿಮಯ ಕೇಂದ್ರಗಳಲ್ಲಿ ಚೀನಾ ಮೂಲದ ಕಂಪನಿಗಳಿಗೆ ವಹಿವಾಟು ನಿರ್ಬಂಧ ವಿಧಿಸುವ ವಿಧೇಯಕವನ್ನು ಅಲ್ಲಿನ ಸೆನೆಟ್ ಅವಿರೋಧವಾಗಿ ಅಂಗೀಕರಿಸಿದೆ. ಇದರೊಂದಿಗೆ ಅಮೆರಿಕ-ಚೀನಾ ವಾಣಿಜ್ಯ ಸಂಘರ್ಷ ಮತ್ತಷ್ಟು ತಾರಕಕ್ಕೇರಿದೆ.
ಈ ಹೊಸ ವಿಧೇಯಕಕ್ಕೆ ಎಲ್ಲಾ ವಿದೇಶಿ ಕಂಪನಿಗಳು ಅನ್ವಯವಾದರೂ, ಚೀನಿ ಕಂಪನಿಗಳನ್ನೇ ಅಮೆರಿಕಾ ಗುರಿಯಾಗಿಸಿದೆ. ಇದರಿಂದಾಗಿ ಚೀನಾ ಮೂಲದ ಕಂಪನಿ ಅಲಿಬಾಬಾ ಗ್ರೂಪ್, ಬೈಡು ಇತ್ಯಾದಿ ಬೃಹತ್ ಕಂಪನಿಗಳು ಅಮೆರಿಕಾ ಷೇರುಪೇಟೆಯಲ್ಲಿ ವ್ಯವಹಾರ ನಡೆಸಲು ಮಾರ್ಗ ಸಂಪೂರ್ಣ ಬಂದ್ ಆಗುವ ಸಾಧ್ಯತೆ ಹೆಚ್ಚಿದೆ.

ರಿಪಬ್ಲಿಕನ್ ಪಕ್ಷದ ಸೆನೆಟರ್ ಜಾನ್ ಕೆನಡಿ ಮತ್ತು ಡೆಮಾಕ್ರಾಟ್ ಸೆನೆಟರ್ ಕ್ರಿಸ್ ವಾನ್ ಹೆಲೆನ್ ಈ ವಿಧೇಯಕವನ್ನು ಮಂಡಿಸಿದರು. ಇದರ ಬೆನ್ನಲ್ಲೇ ಅಮೆರಿಕದ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಚೀನಾ ಮೂಲದ ಕಂಪನಿಗಳ ಷೇರು ದರಗಳು ಗುರುವಾರ ಕುಸಿಯಿತು.
ವಿಧೇಯಕದ ಪ್ರಕಾರ, ಅಮೆರಿಕದ ಷೇರು ವಿನಿಮಯ ಕೇಂದ್ರಗಳಲ್ಲಿ ವ್ಯವಹರಿಸುವ ವಿದೇಶಿ ಕಂಪನಿಗಳು ಆಡಿಟ್ ಮತ್ತು ಇತರ ಲೆಕ್ಕಪತ್ರ ಪರಿಶೋಧನೆಗಳಿಗೆ ಅಮೆರಿಕದ ದರ್ಜೆಯನ್ನು ಅನುಸರಿಸಬೇಕಾಗುತ್ತದೆ. ಕಂಪನಿಗಳು ವಿದೇಶಿ ಸರಕಾರದ ನಿಯಂತ್ರಣದಲ್ಲಿ ಇದೆಯೇ ಎಂಬುದನ್ನು ದೃಢಪಡಿಸಬೇಕಾಗುತ್ತದೆ.
ಹೀಗೆ ಅಮೆರಿಕಾ ಷೇರುಪೇಟೆಯಿಂದ ಚೀನಾ ಕಂಪನಿಗಳು ಹೊರಬಿದ್ದರೂ, ಷೇರುದಾರರಿಗೆ ಅಂಥಾ ಕಂಪನಿಗಳ ಮೇಲಿರುವ ಹಕ್ಕುಗಳು ನಷ್ಟವಾಗುವುದಿಲ್ಲ. ಆದರೆ ಷೇರುಗಳ ಮೌಲ್ಯ ಕುಸಿತದ ನಷ್ಟ ಎದುರಿಸಬೇಕಾಗುತ್ತದೆ.


Click it and Unblock the Notifications