ದೇಶದಲ್ಲಿ ನಗದು ಕೊರತೆ ಹಾಗೂ ಎಟಿಎಂ ಗಳು ಖಾಲಿಯಾಗಲು ಮುಖ್ಯ ಕಾರಣಗಳೇನು ಗೊತ್ತೆ?

Written By: Siddu
Subscribe to GoodReturns Kannada

ದೇಶದ ಅನೇಕ ರಾಜ್ಯಗಳಲ್ಲಿನ ಎಟಿಎಂಗಳಲ್ಲಿ ನಗದು ಕೊರತೆ ಕಂಡು ಬಂದಿದ್ದು, ಜನ ಪರದಾಡುವಂತಾಗಿದೆ. ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ, ಬಿಹಾರ, ಜಾರ್ಖಂಡ್, ಮಧ್ಯ ಪ್ರದೇಶ, ರಾಜಸ್ಥಾನ ಹಾಗೂ ಉತ್ತರ ಪ್ರದೇಶ ರಾಜ್ಯಗಳಲ್ಲಿ ನಗದು ಕೊರತೆ ಹೆಚ್ಚಾಗಿ ಕಂಡು ಬರುತ್ತಿದೆ.

ಹಣ ಪಡೆಯಲು ಸಾರ್ವಜನಿಕರು ಒಂದು ಎಟಿಎಂನಿಂದ ಮತ್ತೊಂದು ಎಟಿಎಂಗೆ ಎಡತಾಕುತ್ತಿರುವ ಬಗ್ಗೆ ಹಲವಾರು ವರದಿಗಳು ಬರುತ್ತಿವೆ. ಆದರೆ ಎಟಿಎಂ ಹಾಗೂ ಬ್ಯಾಂಕುಗಳ ಕೌಂಟರ್‌ಗಳಲ್ಲಿ ನಗದು ಕೊರತೆಯ ಸಮಸ್ಯೆ ಪರಿಹರಿಸಲು ಮಾತ್ರ ಭಾರತೀಯ ರಿಸರ್ವ ಬ್ಯಾಂಕ್ (ಆರ್‌ಬಿಐ) ಹಾಗೂ ಕೇಂದ್ರ ಸರಕಾರ ಎರಡೂ ವಿಫಲವಾಗಿದ್ದು, ಸಮಸ್ಯೆ ಮತ್ತಷ್ಟು ಗಂಭೀರ ಸ್ವರೂಪ ತಾಳುವಂತಾಗಿದೆ.

ಈ ನಗದು ಕೊರತೆಗೆ ಹಲವಾರು ಕಾರಣಗಳನ್ನು ನೀಡಲಾಗುತ್ತಿದೆ. ಸಮಸ್ಯೆಗೆ ಕೆಲ ಮಾನವ ನಿರ್ಮಿತ ಕಾರಣಗಳನ್ನು ಹುಡುಕುತ್ತ ಹೊರಟರೆ ಈ ಕೆಳಗಿನ ಪ್ರಮುಖ ಅಂಶಗಳನ್ನು ಉಲ್ಲೇಖಿಸಬಹುದು:

1. ನಗದು ಬೇಡಿಕೆಯಲ್ಲಿ ಹಠಾತ್ ಹಾಗೂ ಅಸಹಜ ಹೆಚ್ಚಳ

ದೇಶದ ಹಲವೆಡೆ ನಗದು ಕೊರತೆಯ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆಯೇ ಎಚ್ಚೆತ್ತ ಕೇಂದ್ರದ ನರೇಂದ್ರ ಮೋದಿ ಸರಕಾರ ಸಮಸ್ಯೆ ಪರಿಹಾರಕ್ಕೆ ಮುಂದಾಯಿತು. ಈ ಸಂದರ್ಭದಲ್ಲಿ ಹಣಕಾಸು ಸಚಿವ ಅರುಣ ಜೇಟ್ಲಿ ಟ್ವೀಟ್ ಮೂಲಕ ಸರಕಾರದ ಪ್ರಯತ್ನಗಳ ಬಗ್ಗೆ ವಿವರಣೆ ನೀಡಿದರು. ನಗದು ಬೇಡಿಕೆಯಲ್ಲಿ ಹಠಾತ್ ಹಾಗೂ ಅಸಹಜ ಹೆಚ್ಚಳದಿಂದ ಸಮಸ್ಯೆ ಉಂಟಾಗಿದೆ ಎಂದು ಜೇಟ್ಲಿ ಟ್ವೀಟ್ ಮಾಡಿದರು.

ಇದರ ಬೆನ್ನಲ್ಲೇ ಹಣಕಾಸು ಖಾತೆ ರಾಜ್ಯ ಸಚಿವ ಶಿವ ಪ್ರತಾಪ ಶುಕ್ಲಾ ಸಹ ಟ್ವೀಟ್ ಮೂಲಕ ನೆಪಗಳನ್ನು ಮುಂದಿಟ್ಟರು. ಹಣ ಹಂಚಿಕೆಯಲ್ಲಿ ಅಸಮಾನತೆ ಉಂಟಾಗಿದೆ. ಕೆಲ ರಾಜ್ಯಗಳು ಹೆಚ್ಚು ನಗದು ಹೊಂದಿದ್ದು, ಇನ್ನು ಕೆಲ ರಾಜ್ಯಗಳಲ್ಲಿ ಕೊರತೆ ಉಂಟಾಗಿದೆ ಎಂದು ಅವರು ಹೇಳಿದರು.
ಇದಕ್ಕೆ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಸಹ ಟ್ವೀಟ್ ಮೂಲಕ ಎದಿರೇಟು ನೀಡಿದರು.

2. ಪಿತೂರಿಯ ಆರೋಪ

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಮತ್ತೊಂದು ಹೆಜ್ಜೆ ಮುಂದೆ ಹೋಗಿ ನಗದು ಕೊರತೆಯ ಹಿಂದೆ ಪಿತೂರಿ ನಡೆದಿದೆ ಎಂದು ಆರೋಪಿಸಿದರು. ರೈತರ ಸಮಾವೇಶವೊಂದರಲ್ಲಿ ಮಾತನಾಡಿದ ಅವರು, ಎರಡು ಸಾವಿರ ರೂಪಾಯಿ ನೋಟುಗಳು ಕಾಣೆಯಾಗಿರುವುದರ ಹಿಂದೆ ಪಿತೂರಿ ನಡೆದಿರುವ ಬಗ್ಗೆ ಸಂಶಯ ಬರುತ್ತಿದೆ. ಡಿಮಾನೆಟೈಸೇಶನ್‌ಗೂ ಮೊದಲಿದ್ದ ಎರಡರಷ್ಟು ೨ ಸಾವಿರ ರೂಪಾಯಿ ನೋಟುಗಳು ಚಲಾವಣೆಯಲ್ಲಿದ್ದವು. ಆದರೂ ಈಗ ನೋಟುಗಳ ಕಾಣೆಯಾಗಿರುವುದರ ಹಿಂದೆ ಯಾವುದೋ ಸಂಚು ನಡೆದಿದೆ ಎಂದು ಹೇಳಿದರು.

ಕೃತಕ ನಗದು ಕೊರತೆ ಸೃಷ್ಟಿಗೆ ಕೆಲವರು 2 ಸಾವಿರ ರೂಪಾಯಿ ನೋಟುಗಳನ್ನು ಭಾರಿ ಪ್ರಮಾಣದಲ್ಲಿ ಸಂಗ್ರಹಿಸಿ ಇಟ್ಟುಕೊಂಡಿದ್ದಾರೆಂದು ಚೌಹಾನ್ ತಮ್ಮ ವಾದ ಮುಂದಿಟ್ಟರು.

ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ ಮಧ್ಯ ಪ್ರದೇಶದ ಹಣಕಾಸು ಸಚಿವ ಜಯಂತ ಮಲೈಯಾ, ನೋಟುಗಳ ಸಂಗ್ರಹಣೆ ವಾದವನ್ನು ತಳ್ಳಿ ಹಾಕುವಂತಿಲ್ಲ. ಈ ನೋಟುಗಳನ್ನು ಸುಲಭವಾಗಿ ಸಾಗಿಸಬಹುದಾದ ಕಾರಣ ಸಂಗ್ರಹಿಸಿರಬಹುದು ಎಂದು ಸಂಚಿನ ಅರೋಪವನ್ನು ಬೆಂಬಲಿಸಿದರು.

ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ಮುಖಂಡ ಅಜಯ ಸಿಂಗ್, ಚೌಹಾನ್ ಪಿತೂರಿಯ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಈ ಪಿತೂರಿಯನ್ನು ಬಯಲಿಗೆಳೆದು, ಸಮಸ್ಯೆ ನಿವಾರಣೆಗೆ ಇವರು ಮುಂದಾಗಲಿ. ಜನರಿಗೆ ಸುಳ್ಳು ಹೇಳುವುದನ್ನು ಬಿಟ್ಟು, ಮುಖ್ಯಮಂತ್ರಿಗಳು ಈ ಸಂಚಿನ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಪ್ರಧಾನಿಯನ್ನು ಕೇಳಲಿ ಎಂದು ಹೇಳಿದರು.

3. ನಾಸಿಕ್ ಮುದ್ರಣಾಲಯದಲ್ಲಿ ನೋಟು ಮುದ್ರಣ ಶೇ.44ರಷ್ಟು ಇಳಿಕೆ

ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾದ ವರದಿಯೊಂದರ ಪ್ರಕಾರ, ನಾಸಿಕ್‌ನಲ್ಲಿರುವ ಕರೆನ್ಸಿ ನೋಟ್ ಮುದ್ರಣಾಲಯದಲ್ಲಿ 500, 200, 100 ಹಾಗೂ 20 ರೂಪಾಯಿ ನೋಟುಗಳ ಮುದ್ರಣ ಶೇ.44 ರಷ್ಟು ಕಡಿಮೆ ಮಾಡಲಾಗಿದೆ ಎಂದು ಹೇಳಲಾಗಿತ್ತು. 

2017ರ ನವೆಂಬರ್‌ನಿಂದ 500 ರೂಪಾಯಿ ನೋಟ್ ಮುದ್ರಣ ಸ್ಥಗಿತಗೊಂಡಿದ್ದು, ಇದೇ ವರ್ಷದ ಏಪ್ರಿಲ್ 1ರಿಂದ 200, 100 ಹಾಗೂ 20 ರೂಪಾಯಿ ನೋಟ್ ಮುದ್ರಣವನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. 2017-18 ರ ಸಾಲಿಗೆ ನಾಸಿಕ್ ನೋಟು ಮುದ್ರಣಾಲಯಕ್ಕೆ ಆರ್‌ಬಿಐ ನೀಡಿದ್ದ 1800 ಮಿಲಿಯನ್ ನೋಟ್‌ಗಳ ಮುದ್ರಣ ಗುರಿಯನ್ನು ತಲುಪಿದ್ದರಿಂದ ಮುದ್ರಣ ನಿಲ್ಲಿಸಲಾಯಿತು. ಅದೇ ರೀತಿ ಹೊಸ ವಿನ್ಯಾಸದ ಕಾರಣ ಏಪ್ರಿಲ್ 1 ರಿಂದ 20 ಹಾಗೂ 100 ರೂಪಾಯಿ ನೋಟ್‌ಗಳ ಮುದ್ರಣ ಸ್ಥಗಿತಗೊಳಿಸಲಾಯಿತು. ಬಹುಶಃ ಈಗಿನ ನಗದು ಕೊರತೆಗೆ ಇವೆಲ್ಲ ಅಂಶಗಳು ಕಾರಣವಾಗಿರಬಹುದಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

4. ಎಫ್‌ಆರ್‌ಡಿಐ ಮಸೂದೆ

ಪ್ರಸ್ತುತ ಕೇಂದ್ರದ ಫೈನಾನ್ಷಿಯಲ್ ರೆಸಲ್ಯೂಶನ್ ಮತ್ತು ಡಿಪಾಸಿಟ್ ಇನ್ಸುರೆನ್ಸ್ (ಎಫ್‌ಆರ್‌ಡಿಐ) ಮಸೂದೆ ಜಾರಿಯಿಂದ ಒಂದು ವೇಳೆ ಬ್ಯಾಂಕ್ ದಿವಾಳಿಯಾದರೆ ಠೇವಣಿದಾರರಿಗೆ ಹಣ ಸಿಗುವುದಿಲ್ಲ ಎಂಬ ವದಂತಿ ಹರಡಿತು. ಇದರಿಂದ ಆತಂಕಕ್ಕೊಳಗಾದ ಹಲವಾರು ಠೇವಣಿದಾರರು ತಮ್ಮ ತಮ್ಮ ಹಣ ಮರಳಿ ಪಡೆಯಲು ಬ್ಯಾಂಕುಗಳ ಮುಂದೆ ಸಾಲುಗಟ್ಟಿ ನಿಂತರು. ಕೇಂದ್ರ ಸರಕಾರ ಈ ಬಗ್ಗೆ ಸಾಕಷ್ಟು ಸ್ಪಷ್ಟೀಕರಣ ನೀಡಿತಾದರೂ ಠೇವಣಿದಾರರು ನಂಬುವ ಸ್ಥಿತಿಯಲ್ಲಿರಲಿಲ್ಲ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಆಲ್ ಇಂಡಿಯಾ ಬಾಂಕ್ ಆಫೀಸರ್ಸ್ ಕಾನ್ಫಡೆರೇಷನ್ (ಎಐಬಿಒಸಿ), ದೇಶಾದ್ಯಂತ ಜನತೆ ಎಫ್‌ಆರ್‌ಡಿಐ ಮಸೂದೆಯಿಂದ ಆತಂಕಕ್ಕೊಳಗಾಗಿದ್ದಾರೆ. ಹೀಗಾಗಿ ಅನೇಕರು 2 ಸಾವಿರ ರೂಪಾಯಿಗಳ ಕರೆನ್ಸಿ ರೂಪದಲ್ಲಿ ಮನೆಗಳಲ್ಲಿ ಹಣ ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ. ಈ ಹಣ ಬ್ಯಾಂಕಿಗೆ ಬರುತ್ತಿಲ್ಲ ಎಂದು ಸ್ಪಷ್ಟೀಕರಣ ನೀಡಿತು.

5. ಠೇವಣಿಗಳ ಹೆಚ್ಚಳದಲ್ಲಿ ಕೊರತೆ

ಎಕನಾಮಿಕ್ ಟೈಮ್ಸ್ ಪ್ರಕಾರ 2018 ಮಾರ್ಚ್‌ಗೆ ಕೊನೆಗೊಂಡ ವರ್ಷದಲ್ಲಿ, ಬ್ಯಾಂಕ್ ಠೇವಣಿಗಳ ಪ್ರಮಾಣದಲ್ಲಿ ಕೇವಲ ಶೇ. 6.7ರಷ್ಟು ಹೆಚ್ಚಳ ಕಂಡು ಬಂದಿದೆ. ಇದು 2016-17 ರಲ್ಲಿ 15.3ರಷ್ಟಿತ್ತು. ಹಾಗೆಯೇ ಇದೇ ಅವಧಿಯಲ್ಲಿ ಬ್ಯಾಂಕುಗಳ ಸಾಲ ಕಳೆದ ಬಾರಿಯ ಶೇ. 8.2ಕ್ಕೆ ಹೋಲಿಸಿದರೆ ಈ ಬಾರಿ ಶೇ. 10.3ಕ್ಕೆ ಹೆಚ್ಚಳವಾಗಿದೆ ಎಂದು ಹೇಳಲಾಗಿದೆ. ಈ ಒಂದು ಅಂಶ ಸಹ ನಗದು ಕೊರತೆಗೆ ಕಾರಣವಾಗಿರಬಹುದಾಗಿದೆ.

6. ಅಗತ್ಯವಿರುವಷ್ಟು ನಗದು ಬಿಡುಗಡೆ ಮಾಡದ ಆರ್‌ಬಿಐ

ಬ್ಯಾಂಕಿಂಗ್ ವಲಯದ ಮೂಲಗಳ ಪ್ರಕಾರ, ಕಳೆದ ಅನೇಕ ದಿನಗಳಿಂದ ಆರ್‌ಬಿಐನಿಂದ ಬರುತ್ತಿದ್ದ ನಗದು ಪ್ರಮಾಣದಲ್ಲಿ ಇಳಿಕೆಯಾಗಿದೆ. ನಗದು ಸಂಗ್ರಹಿಸಿ ಬಟವಾಡೆ ಮಾಡುವ ಕ್ಯಾಶ್ ಚೆಸ್ಟ್‌ಗಳಲ್ಲಿಯೇ ನಗದು ಕೊರತೆ ಇದ್ದು, ಇದರಿಂದ ಸಹಜವಾಗಿಯೇ ಹಣದ ಪೂರೈಕೆ ಕಡಿಮೆಯಾಗಿದೆ. ಒಟ್ಟಾರೆಯಾಗಿ ಬೇಡಿಕೆ ಹಾಗೂ ಪೂರೈಕೆಯ ಮಧ್ಯದ ಭಾರಿ ಅಂತರದಿಂದ ನಗದು ಸಮಸ್ಯೆ ಉಂಟಾಗಿದೆ.

ವರದಿಗಳ ಪ್ರಕಾರ ಪ್ರತಿ ತಿಂಗಳು 40 ರಿಂದ 45 ಸಾವಿರ ಕೋಟಿ ರೂ. ನಗದು ಬೇಡಿಕೆ ಇದ್ದು, ಕೇವಲ 20 ಸಾವಿರ ಕೋಟಿ ರೂಪಾಯಿ ಪೂರೈಕೆಯಾಗುತ್ತಿದೆ ಎನ್ನಲಾಗಿದೆ. ಇದೂ ಸಹ ನಗದು ಕೊರತೆಗೆ ಪ್ರಮುಖ ಕಾರಣವಾಗಿದೆ.
ಅಗತ್ಯವಾಗಿರುವ ನಗದಿನ ಕೇವಲ ಹತ್ತನೇ ಒಂದು ಭಾಗದಷ್ಟು ಮಾತ್ರ ಹಣ ಪೂರೈಕೆಯಾಗುತ್ತಿದೆ. ಹೀಗಾಗಿ ಎಟಿಎಂಗಳಿಗೆ ಹಣ ತುಂಬಿಸಲು ಸಾಧ್ಯವಾಗುತ್ತಿಲ್ಲ ಎಂದು ಕೆಲ ಬ್ಯಾಂಕ್ ಅಧಿಕಾರಿಗಳು ಅಳಲು ತೋಡಿಕೊಂಡಿದ್ದಾರೆ.

7. ಸುಗ್ಗಿ ಹಾಗೂ ಮದುವೆ ಸೀಸನ್

ಸಾಮಾನ್ಯವಾಗಿ ದೇಶದಲ್ಲಿ ಬೆಳೆ ಸುಗ್ಗಿಯ ಅವಧಿಯಾದ ಮಾರ್ಚ್, ಏಪ್ರಿಲ್‌ನಲ್ಲಿ ಹಣದ ಬೇಡಿಕೆ ಹೆಚ್ಚಾಗಿರುತ್ತದೆ. ಇನ್ನು ಅಕ್ಟೋಬರ್‌ನಲ್ಲಿ ಹಬ್ಬದ ಸಂದರ್ಭದಲ್ಲಿ ಸಹ ಹಣಕ್ಕೆ ಹೆಚ್ಚಿನ ಬೇಡಿಕೆ ಉಂಟಾಗುತ್ತದೆ. ಆದರೆ ಕಳೆದ ಮೂರು ತಿಂಗಳ ಅವಧಿಯಲ್ಲಿ ಕರೆನ್ಸಿಗೆ ಅಸಹಜವಾದ ಬೇಡಿಕೆ ಕಂಡು ಬಂದಿದೆ.
ಅಲ್ಲದೆ ದಕ್ಷಿಣ ಭಾರತದಲ್ಲಿ ಇದು ಮದುವೆ ಮುಹೂರ್ತಗಳ ಸೀಸನ್ ಸಹ ಆಗಿದೆ. ಈ ಸಂದರ್ಭದಲ್ಲಿ ಹಣದ ಚಲಾವಣೆ ಹೆಚ್ಚಾಗುವುದರಿಂದ ಬೇಡಿಕೆ ಸಹ ಹೆಚ್ಚಳವಾಗುತ್ತದೆ. ಹಣ ಕೊರತೆಗೆ ಈ ಕಾರಣಗಳನ್ನು ಸಹ ನೀಡಲಾಗುತ್ತಿದೆ.

8. ಎಟಿಎಂಗಳ ಉನ್ನತೀಕರಣ


ಕೆಲ ರಾಜ್ಯಗಳಲ್ಲಿ 200 ರೂಪಾಯಿ ನೋಟು ಸಿಗುವಂತೆ ಮಾಡಲು ಎಟಿಎಂಗಳನ್ನು ಉನ್ನತೀಕರಿಸಲಾಗುತ್ತಿದೆ. ಇದೂ ಸಹ ಸಮಸ್ಯೆಗೆ ತನ್ನ ಪಾಲು ನೀಡಿದೆ. 200 ರೂಪಾಯಿ ನೋಟು ಬಂದಾಗ ಆದಷ್ಟು ಬೇಗ ಇವು ಎಟಿಎಂಗಳಲ್ಲಿ ಸಿಗುವಂತೆ ಮಾಡಲಾಗುವುದು ಎಂದು ಹೇಳಲಾಗಿತ್ತು. ಆದರೆ ಇದಕ್ಕಾಗಿ ಎಟಿಎಂಗಳನ್ನು ಉನ್ನತೀಕರಿಸುವ ಕಾರ್ಯ ಮಾತ್ರ ಮಂದಗತಿಯಲ್ಲಿ ಸಾಗಿದೆ.

9. ಕಂಪನಿ ಹಾಗೂ ರಾಜಕೀಯ ಪಕ್ಷಗಳಿಂದ ಹಣ ಸಂಗ್ರಹ

ಕೆಲ ಬ್ಯಾಂಕ್ ಅಧಿಕಾರಿಗಳು ಹೇಳುವ ಪ್ರಕಾರ, ಬಹಳಷ್ಟು 2 ಸಾವಿರ ರೂಪಾಯಿ ನೋಟುಗಳು ಆರ್ಥಿಕ ವ್ಯವಸ್ಥೆಯಲ್ಲಿ ಮರಳಿ ಬಾರದೆ ಅವು ಕಪ್ಪು ಹಣದ ಜಾಲದಲ್ಲಿ ಉಳಿಯುತ್ತಿವೆ. ಸಾಗಾಟ ಹಾಗೂ ಸಂಗ್ರಹಣೆಗೆ ಇವು ಅತ್ಯಂತ ಅನುಕೂಲವಾಗಿವೆ.
ಇದಲ್ಲದೆ ಕರ್ನಾಟಕದ ವಿಧಾನ ಸಭಾ ಚುನಾವಣೆಗಾಗಿ ರಾಜಕೀಯ ಪಕ್ಷಗಳು ಅಪಾರ ಪ್ರಮಾಣದ ಹಣ ಸಂಗ್ರಹಿಸಿವೆ ಎಂಬ ವರದಿಗಳಿವೆ. ಏನೇ ಆದರೂ ಹಣ ಇಲ್ಲದೆ ಭಾರತದಲ್ಲಿ ಚುನಾವಣೆಗಳು ನಡೆಯುವುದೇ ಇಲ್ಲ ಎಂಬುದು ಮಾತ್ರ ಸತ್ಯ.

10. ಆರ್‌ಬಿಐನಿಂದ ರೂ. 2 ಸಾವಿರ ನೋಟು ಸ್ಥಗಿತ

2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಮುದ್ರಣ ಕುರಿತು ಸ್ಪಷ್ಟೀಕರಣ ಕೋರಿ ಆರ್‌ಟಿಐ ಕಾರ್ಯಕರ್ತರೊಬ್ಬರು ನಾಣ್ಯ ಹಾಗೂ ನೋಟು ಮುದ್ರಿಸುವ, ಕೇಂದ್ರ ಸರಕಾರದ ಅಧೀನದ ಸೆಕ್ಯುರಿಟಿ ಪ್ರಿಂಟಿಂಗ್ ಮತ್ತು ಮಿಂಟಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾಗೆ ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದರು.
2 ಸಾವಿರ ರೂಪಾಯಿ ನೋಟುಗಳನ್ನು ಪ್ರಿಂಟ್ ಮಾಡಲು ಆರ್‌ಬಿಐನಿಂದ ನಮಗೆ ಯಾವುದೇ ಬೇಡಿಕೆ ಬಂದಿಲ್ಲ ಎಂದು ಅರ್ಜಿದಾರರಿಗೆ ಉತ್ತರ ಸಿಕ್ಕಿತ್ತು.
ಈ ಮೇಲಿನ ಎಲ್ಲ ಅಂಶಗಳನ್ನು ವಿಮರ್ಶೆ ಮಾಡಿದರೆ ನಗದು ಕೊರತೆಗೆ ಹಲವಾರು ಕಾರಣಗಳಿರುವುದು ಕಂಡು ಬರುತ್ತದೆ.

English summary

Why India is facing a Cash Crisis and ATMs are running dry

There were several reasons cited by different people for this man-made crisis.
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

ಕರ್ನಾಟಕ ವಿಧಾನಸಭೆ ಚುನಾವಣೆ 2018

Get Latest News alerts from Kannada Goodreturns