ಭಾರತದ ಟಾಪ್ 15 ಆನ್‌ಲೈನ್ ಶಾಪಿಂಗ್ ತಾಣಗಳು (ಕ್ಯಾಶ್ ಆನ್ ಡೆಲಿವರಿ)

By Siddu
Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಭಾರತದಲ್ಲಿ ಆನ್‌ಲೈನ್ ಶಾಪಿಂಗ್ ಇತ್ತೀಚಿನ ದಿನಗಳಲ್ಲಿ ಬಹು ಜನಪ್ರಿಯವಾಗುತ್ತಿದೆ. ದಿನೇ ದಿನೇ ಆನ್‌ಲೈನ್ ಶಾಪಿಂಗ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. ವಯಸ್ಸಿನ ನಿರ್ಬಂಧವಿಲ್ಲದೆ ಎಲ್ಲ ವರ್ಗದ ಪುರುಷ ಹಾಗೂ ಮಹಿಳಾ ಗ್ರಾಹಕರು ತಮಗೆ ಬೇಕಾದ ವಸ್ತುಗಳನ್ನು ಕೊಳ್ಳಲು ಆನ್‌ಲೈನ್ ಶಾಪಿಂಗ್ ವ್ಯವಸ್ಥೆ ಬಳಸುತ್ತಿದ್ದಾರೆ.

  ಈಗೀಗ ದಿನನಿತ್ಯದ ಜೀವನಕ್ಕೆ ಬೇಕಾಗಬಹುದಾದ ಎಲ್ಲ ರೀತಿಯ ವಸ್ತುಗಳು ಆನ್‌ಲೈನ್ ಶಾಪಿಂಗ್‌ನಲ್ಲಿ ಲಭ್ಯವಾಗುತ್ತಿವೆ. ಎಲೆಕ್ಟ್ರಾನಿಕ್ ವಸ್ತುಗಳು, ಬಟ್ಟೆ, ಮನೆ-ಆಫೀಸ್ ಪೀಠೋಪಕರಣಗಳು, ಕ್ರಾಫ್ಟ್ ವಸ್ತುಗಳು, ಪುಸ್ತಕ, ಕಿರಾಣಿ, ಚಿಕ್ಕ ಮಕ್ಕಳ ವಸ್ತುಗಳು, ಔಷಧಿ ಹೀಗೆ ಏನು ಬೇಕೋ ಎಲ್ಲವೂ ಆನ್‌ಲೈನ್ ಶಾಪಿಂಗ್ ಮೂಲಕ ಖರೀದಿಸಬಹುದಾಗಿದೆ.

  ಖರೀದಿಸುವ ಮುನ್ನ ಸಾವಿರಾರು ವಸ್ತುಗಳನ್ನು ಪರಿಶೀಲಿಸಿ ಅವುಗಳ ಬೆಲೆ ಹಾಗೂ ಗುಣಮಟ್ಟಗಳನ್ನು ತುಲನೆ ಮಾಡುವ ಅವಕಾಶ ದೊರಕುತ್ತಿರುವುದು ಆನ್‌ಲೈನ್ ಶಾಪಿಂಗ್ ಜನಪ್ರಿಯವಾಗಲು ಪ್ರಮುಖ ಕಾರಣವಾಗಿದೆ. ಕಳೆದೊಂದು ದಶಕದಲ್ಲಿ ಭಾರತದಲ್ಲಿಯೂ ಆನ್‌ಲೈನ್ ಶಾಪಿಂಗ್ ವ್ಯವಹಾರ ಬೃಹತ್ತಾಗಿ ಬೆಳೆದಿದ್ದು, ದಿನೇ ದಿನೇ ಅಭಿವೃದ್ಧಿ ಹೊಂದುತ್ತಿದೆ. ಹಾಗಾದರೆ ನಮ್ಮ ದೇಶದಲ್ಲಿ ಕ್ಯಾಶ್ ಆನ್ ಡೆಲಿವರಿ ಸೌಲಭ್ಯ ನೀಡುವ ಅತಿ ಪ್ರಮುಖ ೧೫ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್ ಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ:

   

  ಕ್ಯಾಶ್ ಆನ್ ಡೆಲಿವರಿ (Cash On Delivery-COD) ಎಂಬ ಗ್ರಾಹಕ ಸ್ನೇಹಿ ಸೌಲಭ್ಯ:

  ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ನಲ್ಲಿ ನಮಗೆ ಬೇಕಾದ ವಸ್ತುವಿನ ಖರೀದಿಗೆ ಆರ್ಡರ್ ಮಾಡಿ, ತಕ್ಷಣ ಹಣ ಪಾವತಿಸದೆ ವಸ್ತು ಮನೆ ಬಾಗಿಲಿಗೆ ಬಂದಾಗ ಹಣ ನೀಡಿ ವಸ್ತು ಪಡೆದುಕೊಳ್ಳುವ ಪ್ರಕ್ರಿಯೆಯನ್ನು ಕ್ಯಾಶ್ ಆನ್ ಡೆಲಿವರಿ ಎಂದು ಕರೆಯಲಾಗುತ್ತದೆ. ಆರ್ಡರ್ ಮಾಡಿದ ವಸ್ತು ಮನೆಗೆ ಬಂದಾಗ ಕ್ಯಾಶ್ ಮೂಲಕ ಅಥವಾ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಚೆಕ್ ಮುಖಾಂತರ ಹಣ ಪಾವತಿಸಬಹುದು. ಒಂದು ವೇಳೆ ಗ್ರಾಹಕ ಹಣ ನೀಡದಿದ್ದಲ್ಲಿ ವಸ್ತು ರಿಟೇಲರ್‌ಗೆ ವಾಪಸ್ ಹೋಗುತ್ತದೆ. ಕ್ಯಾಶ್ ಆನ್ ಡೆಲಿವರಿ ಸಿಸ್ಟಂನಲ್ಲಿ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಇರಬೇಕಾಗಿರುವುದು ಕಡ್ಡಾಯವಲ್ಲ.

  ಕ್ಯಾಶ್ ಆನ್ ಡೆಲಿವರಿ ವಿಧಾನದಲ್ಲಿ ಗ್ರಾಹಕ ನಿರಾಳವಾಗಿ ವಸ್ತುಗಳನ್ನು ಆರ್ಡರ್ ಮಾಡಬಹುದು. ಹೀಗಾಗಿಯೆ ಕ್ಯಾಶ್ ಆನ್ ಡೆಲಿವರಿ ಭಾರತದಲ್ಲಿ ಜನಪ್ರಿಯವಾಗುತ್ತಿದೆ. ಪ್ರಮುಖ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ಗಳಾದ ಅಮೇಜಾನ್, ಫ್ಲಿಪ್‌ಕಾರ್ಟ್ ಮತ್ತು ಸ್ನ್ಯಾಪ್‌ಡೀಲ್ ನಂತಹ ಕಂಪನಿಗಳು ಕ್ಯಾಶ್ ಆನ್ ಡೆಲಿವರಿ ಸೌಲಭ್ಯ ಅಳವಡಿಸಿಕೊಂಡಿವೆ.

  ಭಾರತದ ಬೆಸ್ಟ್ ಕ್ಯಾಶ್ ಆನ್ ಡೆಲಿವರಿ ಶಾಪಿಂಗ್ ಸೈಟ್‌ಗಳು:

  1. ಅಮೇಜಾನ್ ಇಂಡಿಯಾ

  ಕ್ಯಾಶ್ ಆನ್ ಡೆಲಿವರಿ ಸೌಲಭ್ಯ ನೀಡುವ ಭಾರತದ ಅತ್ಯುತ್ತಮ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ಗಳಲ್ಲಿ ಅಮೇಜಾನ್ ಇಂಡಿಯಾ ಒಂದಾಗಿದೆ. ಬಹುದೊಡ್ಡ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಂದ ಹಿಡಿದು ಚಿಕ್ಕ ಪ್ರಮಾಣದ ಕಿರಾಣಿ ವಸ್ತುವಿನವರೆಗೆ ಎಲ್ಲವೂ ಶಾಪಿಂಗ್‌ಗೆ ಲಭ್ಯವಿವೆ. ಅಮೇಜಾನ್ ಮಿಲಿಯನ್‌ಗಳಷ್ಟು ವಸ್ತುಗಳು ಹಾಗೂ ಸಾವಿರಾರು ಸೆಲ್ಲರ್‌ಗಳನ್ನು ಹೊಂದಿದೆ. ದೇಶದ ಬಹುತೇಕ ಎಲ್ಲ ಭಾಗಗಳಿಗೂ ತನ್ನ ವಸ್ತುಗಳನ್ನು ತಲುಪಿಸುವ ನೆಟ್‌ವರ್ಕ್ ಹೊಂದಿದ ಏಕೈಕ ಶಾಪಿಂಗ್ ವೆಬ್‌ಸೈಟ್ ಎಂದು ಅಮೇಜಾನ್ ಹೆಸರು ಗಳಿಸಿದೆ. ಜೊತೆಗೆ ವರ್ಷಕ್ಕೆ ೪೯೯ ರೂಪಾಯಿ ಪಾವತಿಸಿ ಅಮೇಜಾನ್ ಪ್ರೈಮ್ ಮೆಂಬರಶಿಪ್ ಪಡೆದರೆ ಎಲ್ಲ ವಸ್ತುಗಳನ್ನು ಯಾವುದೇ ಶಿಪ್ಪಿಂಗ್ ಚಾರ್ಜ್ ಇಲ್ಲದೆ ಖರೀದಿಸಬಹುದು. ಇತ್ತೀಚೆಗೆ ಅಮೇಜಾನ್ ಪರಿಚಯಿಸಿದ ಅಮೇಜಾನ್ ಪೇ ವ್ಯಾಲೆಟ್ ಮೂಲಕ ಸುಲಭವಾಗಿ ಹಣ ಪಾವತಿಸಬಹುದು ಹಾಗೂ ವಸ್ತು ಮರಳಿಸಿದಾಗ ಶೀಘ್ರ ಮರುಪಾವತಿಯನ್ನು ಸಹ ಪಡೆಯಬಹುದಾಗಿದೆ.

  2. ಫ್ಲಿಪ್‌ಕಾರ್ಟ್

  ಕ್ಯಾಶ್ ಆನ್ ಡೆಲಿವರಿ ಸೌಲಭ್ಯ ನೀಡುವ ಫ್ಲಿಪ್‌ಕಾರ್ಟ್ ಭಾರತದ ಅತ್ಯಂತ ಜನಪ್ರಿಯ ಆನ್‌ಲೈನ್ ಶಾಪಿಂಗ್ ಸೈಟ್ ಆಗಿದೆ. ೮೦ ಪ್ರಕಾರಗಳಲ್ಲಿ ಸುಮಾರು ೮೦ ಮಿಲಿಯನ್ ವಸ್ತುಗಳನ್ನು ಹೊಂದಿರುವ ಫ್ಲಿಪ್‌ಕಾರ್ಟ್ ಭಾರತದ ಪ್ರಮುಖ ಆನ್‌ಲೈನ್ ರಿಟೇಲರ್ ಎನಿಸಿಕೊಂಡಿದೆ.
  ಮನೆ ಬಳಕೆ ವಸ್ತುಗಳು, ಮೊಬೈಲ್, ಬಟ್ಟೆಬರೆ, ಪುಸ್ತಕ, ಕ್ಯಾಮೆರಾ, ಲ್ಯಾಪ್‌ಟಾಪ್, ಆಭರಣಗಳು, ಆಟಿಕೆ ಸೇರಿದಂತೆ ಗ್ರಾಹಕರಿಗೆ ಅವಶ್ಯವೆನಿಸುವ ಬಹುತೇಕ ಎಲ್ಲ ವಸ್ತುಗಳೂ ಇಲ್ಲಿ ಸಿಗುತ್ತವೆ. ಉತ್ತಮ ಗುಣಮಟ್ಟದ ವಸ್ತುಗಳನ್ನು ಕಡಿಮೆ ಬೆಲೆಗೆ ನೀಡುವುದು ಫ್ಲಿಪ್‌ಕಾರ್ಟ್‌ನ ವಿಶೇಷವಾಗಿದೆ. ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಕ್ಯಾಶ್ ಆನ್ ಡೆಲಿವರಿ ಮೂಲಕ ವಸ್ತು ಖರೀದಿಸಬಹುದು. ಅಲ್ಲದೆ ವಸ್ತು ಬೇಡವಾದರೆ ನಿರ್ವಹಣೆ ಶುಲ್ಕ ವಿಧಿಸದೆ ವಸ್ತುಗಳನ್ನು ವಾಪಸ್ ಪಡೆದುಕೊಳ್ಳಲಾಗುತ್ತದೆ. ಕ್ಯಾಶ್ ಆನ್ ಡೆಲಿವರಿ ಸೌಲಭ್ಯ ಊರು, ವಿಳಾಸದ ಆಧಾರದಲ್ಲಿ ಸಿಗುತ್ತದೆ ಎಂಬುದು ಗಮನದಲ್ಲಿರಲಿ.

  3. ಸ್ನ್ಯಾಪ್‌ಡೀಲ್

  ಸ್ನ್ಯಾಪ್‌ಡೀಲ್ ಭಾರತದ ಅತಿ ವಿಶಿಷ್ಟ ಹಾಗೂ ಕ್ಯಾಶ್ ಆನ್ ಡೆಲಿವರಿ ಸೌಕರ್ಯ ಇರುವ ಆನ್‌ಲೈನ್ ಶಾಪಿಂಗ್ ಪೋರ್ಟಲ್ ಆಗಿದೆ. ೮೦೦ಕ್ಕೂ ಹೆಚ್ಚು ವಿಭಾಗಗಳಲ್ಲಿ ೩೫ ಮಿಲಿಯನ್‌ಗೂ ಅಧಿಕ ವಸ್ತುಗಳು ಇದರಲ್ಲಿ ಲಭ್ಯವಿವೆ. ೩ ಲಕ್ಷಕ್ಕಿಂತಲೂ ಹೆಚ್ಚು ರಿಟೇಲರ್‌ಗಳನ್ನು ಹೊಂದಿರುವ ಸ್ನ್ಯಾಪ್‌ಡೀಲ್ ದೇಶದ ೬೦೦೦ಕ್ಕೂ ಮಿಕ್ಕಿ ನಗರ ಹಾಗೂ ಪಟ್ಟಣಗಳಿಗೆ ತನ್ನ ವಸ್ತುಗಳನ್ನು ತಲುಪಿಸುವ ಜಾಲ ಹೊಂದಿದೆ.
  ಏರ್ ಕಂಡೀಷನರ್‌ಗಳು, ಎಚ್‌ಡಿ ಟಿವಿ, ಲ್ಯಾಪ್‌ಟಾಪ್, ಫೋನ್‌ಗಳು, ಬಟ್ಟೆ, ಪುಸ್ತಕ ಹೀಗೆ ಸ್ನ್ಯಾಪ್‌ಡೀಲ್‌ನಲ್ಲಿ ಏನು ಬೇಕಾದರೂ ಕೊಳ್ಳಬಹುದು. ಬಹುತೇಕ ನಗರಗಳಿಗೆ ಕ್ಯಾಶ್ ಆನ್ ಡೆಲಿವರಿ ಲಭ್ಯವಿದ್ದು, ವೆಬ್‌ಸೈಟ್‌ನಲ್ಲಿ ಪಿನ್ ಕೋಡ್ ಹಾಕಿ ಪರಿಶೀಲಿಸಬಹುದು.

  4. ಪೇಟಿಎಂ

  ಆರಂಭದಲ್ಲಿ ಆನ್‌ಲೈನ್ ಮೊಬೈಲ್ ಚಾರ್ಜಿಂಗ್ ಹಾಗೂ ಬಿಲ್ ಪಾವತಿ ಪೋರ್ಟಲ್ ಆಗಿ ಪೇಟಿಎಂ ಆರಂಭವಾಯಿತು. ಇದು ಪ್ರಸ್ತುತ ಅತಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಆನ್‌ಲೈನ್ ಶಾಪಿಂಗ್ ತಾಣವಾಗಿದೆ. ೨೫೦ ಮಿಲಿಯನ್ ನೋಂದಾಯಿತ ಬಳಕೆದಾರರನ್ನು ಹೊಂದಿರುವ ಪೇಟಿಎಂ ತನ್ನ ಆನ್‌ಲೈನ್ ಶಾಪಿಂಗ್ ತಾಣಕ್ಕೆ ಪೇಟಿಎಂ ಮಾಲ್ ಎಂದು ಹೆಸರು ಇಟ್ಟಿದೆ.
  ಇಲ್ಲಿ ಕ್ಯಾಶ್ ಆನ್ ಡೆಲಿವರಿ ಇದ್ದರೂ ಇದು ಎಲ್ಲ ವಸ್ತುಗಳಿಗೂ ಅನ್ವಯಿಸುವುದಿಲ್ಲ. ಪಿನ್ ಕೋಡ್ ಬಳಸಿ ಯಾವ ಮರ್ಚಂಟ್ ಕ್ಯಾಶ್ ಆನ್ ಡೆಲಿವರಿ ನೀಡುತ್ತಿದ್ದಾರೆ ಎಂಬುದನ್ನು ಪರಿಶೀಲಿಸಬಹುದು. ಉತ್ತಮವಾಗಿ ವಸ್ತುಗಳನ್ನು ಪ್ಯಾಕ್ ಮಾಡುವ ಪೇಟಿಎಂ, ಅತಿ ಶೀಘ್ರವಾಗಿ ವಸ್ತುಗಳನ್ನು ತಲುಪಿಸುತ್ತದೆ. ಎಲೆಕ್ಟ್ರಾನಿಕ್ಸ್, ಸ್ಪೋರ್ಟ್ಸ, ಆರೋಗ್ಯ, ಗೃಹೋಪಯೋಗಿ, ಕಿಚನ್, ಬಟ್ಟೆ, ಸೌಂದರ್ಯ ಸಾಧನಗಳು ಹೀಗೆ ವಿಶಾಲವಾದ ಶ್ರೇಣಿಯಲ್ಲಿ ವಸ್ತುಗಳು ಲಭ್ಯವಿವೆ.

  5. ಶಾಪ್‌ಕ್ಲೂಸ್

  ಅನೇಕ ತರಹದ ವಿಶಾಲವಾದ ಶ್ರೇಣಿಯಲ್ಲಿ ವಸ್ತುಗಳು ಲಭ್ಯವಿರುವ ಮತ್ತೊಂದು ಪ್ರಮುಖ ಆನ್‌ಲೈನ್ ಶಾಪಿಂಗ್ ಸೈಟ್ ಆಗಿರುವ ಶಾಪ್‌ಕ್ಲೂಸ್ ತನ್ನಲ್ಲಿರುವ ಕಡಿಮೆ ಬೆಲೆಯ ವಸ್ತುಗಳಿಂದ ಹೆಸರುವಾಸಿಯಾಗಿದೆ. ಗ್ರಾಹಕರ ಸಂತೃಪ್ತಿಯೇ ತನ್ನ ಉದ್ದೇಶ ಎಂದು ಹೇಳಿಕೊಳ್ಳುವ ಶಾಪ್‌ಕ್ಲೂಸ್ ಯಾವಾಗಲೂ ನೈಜ ಬ್ರ್ಯಾಂಡ್‌ನ ವಸ್ತುಗಳನ್ನು ಮಾತ್ರ ಮಾರಾಟ ಮಾಡುತ್ತದೆ.
  ಸರಿಯಾದ ಸಮಯಕ್ಕೆ ವಸ್ತುಗಳನ್ನು ತಲುಪಿಸುವ ಶಾಪ್‌ಕ್ಲೂಸ್ ವಸ್ತುಗಳನ್ನು ನೀಟಾಗಿ ಪ್ಯಾಕ್ ಮಾಡುತ್ತದೆ. ಸಾವಿರಾರು ರೀತಿಯ ವಸ್ತುಗಳಿಗೆ ಹೋಲ್‌ಸೇಲ್ ಶಾಪಿಂಗ್ ಸೈಟ್ ಆಗಿಯೂ ಶಾಪ್‌ಕ್ಲೂಸ್ ಅವಕಾಶ ಕಲ್ಪಿಸುತ್ತದೆ. ಅನೇಕ ವಸ್ತುಗಳನ್ನು ಶಿಪ್ಪಿಂಗ್ ಚಾರ್ಜ್ ಇಲ್ಲದೆ ಕಳುಹಿಸುವ ಇದರಲ್ಲಿ ಕ್ಯಾಶ್ ಆನ್ ಡೆಲಿವರಿ ಲಭ್ಯವಿದೆ.

  6. ಹೋಮ್‌ಶಾಪ್ 18

  ವಿಸ್ತಾರವಾದ ಶ್ರೇಣಿಯಲ್ಲಿ ವಸ್ತುಗಳನ್ನು ಹೊಂದಿರುವ ಹೋಮ್‌ಶಾಪ್ 18 ಉತ್ತಮ ಗುಣಮಟ್ಟದ ವಸ್ತುಗಳಿಂದ ಹೆಸರುವಾಸಿಯಾಗಿದೆ. ವೆಬ್‌ಸೈಟ್ ಹಾಗೂ ಆಪ್ ಬಳಸಿ ಆನ್‌ಲೈನ್ ಖರೀದಿಗೆ ಆರ್ಡರ್ ಮಾಡಬಹುದು. ೦೧೨೦ ೪೪೪೪೯೧೮ ಗೆ ಕರೆ ಮಾಡುವ ಮೂಲಕವೂ ವಸ್ತುಗಳನ್ನು ಆರ್ಡರ್ ಮಾಡುವ ಅವಕಾಶವಿದೆ.

  ಒಂದೇ ಸ್ಥಳದಲ್ಲಿ ಎಲೆಕ್ಟ್ರಾನಿಕ್ಸ್, ಬಟ್ಟೆ, ಆಭರಣ, ಶೂಸ್, ಕಿಚನ್ ಐಟಂ ಹೀಗೆ ತರಹೇವಾರಿ ವಸ್ತುಗಳನ್ನು ಪರಿಶೀಲಿಸಿ ಆರ್ಡರ್ ಮಾಡಬಹುದಾದ ತಾಣ ಹೋಮ್‌ಶಾಪ್ ೧೮ ಆಗಿದೆ. ಬಹುತೇಕ ಎಲ್ಲ ವಸ್ತುಗಳ ಮೇಲೆ ಕ್ಯಾಶ್ ಆನ್ ಡೆಲಿವರಿ ಸೌಲಭ್ಯ ನೀಡುತ್ತದೆ. ಬಹುತೇಕ ಎಲ್ಲ ವಸ್ತುಗಳ ಕುರಿತು ವಿಡಿಯೋ ವಿವರಣೆ ಇರುವುದು ಈ ಸೈಟ್‌ನ ಅತಿ ಪ್ರಮುಖ ವೈಶಿಷ್ಟ್ಯವಾಗಿದೆ.

  7. ಇನ್ಫಿಬೀಮ್

  ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಹಾಗೂ ಬೇಗನೆ ಜನಪ್ರಿಯತೆ ಗಳಿಸುತ್ತಿರುವ ಆನ್‌ಲೈನ್ ಶಾಪಿಂಗ್ ಸ್ಟೋರ್ ಆಗಿ ಇನ್ಫಿಬೀಮ್ ಮುನ್ನುಗ್ಗುತ್ತಿದೆ. ಸುಮಾರು 40 ವಿಭಾಗಗಳಲ್ಲಿ ವಿವಿಧ ಶ್ರೇಣಿಯ ಮಿಲಿಯನ್‌ಗಟ್ಟಲೆ ವಸ್ತುಗಳು ಇಲ್ಲಿ ಲಭ್ಯವಿವೆ.
  ವಸ್ತುವಿನ ದರ, ಬ್ರ್ಯಾಂಡ್, ಬಣ್ಣ ಮುಂತಾದ ಗುಣ ವಿಶಿಷ್ಟಗಳ ಕುರಿತು ಫಿಲ್ಟರ್‌ಗಳನ್ನು ಬಳಸಿ ಹುಡುಕಾಟ ನಡೆಸುವುದು ಇನ್ಫಿಬೀಮ್‌ನಲ್ಲಿ ಸುಲಭವಾಗಿದೆ. ಹೈ ರೆಸಲ್ಯೂಷನ್ ಚಿತ್ರಗಳನ್ನು ಅಳವಡಿಸಲಾಗಿದ್ದು, ವಸ್ತುವಿನ ಬಗ್ಗೆ ಖಚಿತವಾಗಿ ಮಾಹಿತಿ ಸಿಗುವಂತೆ ಮಾಡಲಾಗಿದೆ. ಆರ್ಡರ್ ಮಾಡಿದ ದಿನವೇ ಡೆಲಿವರಿ ಪಡೆಯುವ ಸೌಲಭ್ಯ ಸಹ ಇದ್ದು, ಕ್ಯಾಶ್ ಡೆಲಿವರಿ ಸಹ ಸಿಗುತ್ತದೆ.

  8. ಇಬೇ

  ಇ ಬೇ ಇದೊಂದು ಬಹುರಾಷ್ಟ್ರೀಯ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್ ಆಗಿದ್ದು, ವಿಶ್ವದ ಹಲವಾರು ರಾಷ್ಟ್ರಗಳಲ್ಲಿ ತನ್ನ ವ್ಯಾಪಾರ, ವಹಿವಾಟು ಹೊಂದಿದೆ. ಹಳೆಯ, ಬೆಲೆಬಾಳುವ ವಸ್ತುಗಳು, ಸಾಂಪ್ರದಾಯಿಕ ವಸ್ತುಗಳು ಅಥವಾ ಹೊಸ ವಸ್ತುಗಳೇ ಆಗಿರಲಿ ಇಬೇ ನಲ್ಲಿ ಎಲ್ಲವೂ ಲಭ್ಯ. ವಿಶಿಷ್ಟ ವಸ್ತುಗಳ ಖರೀದಿಗೆ ಇದು ಹೇಳಿ ಮಾಡಿಸಿದ ತಾಣವಾಗಿದೆ.
  160 ಮಿಲಿಯನ್‌ಗೂ ಅಧಿಕ ಬಳಕೆದಾರರನ್ನು ಹೊಂದಿರುವ ಇಬೇ 1 ಬಿಲಿಯನ್‌ಗೂ ಅಧಿಕ ವಸ್ತುಗಳ ಲಿಸ್ಟಿಂಗ್ ಹೊಂದಿದೆ. ಡೆಲಿವರಿಯ ಊರು, ವಿಳಾಸದ ಆಧಾರದ ಮೇಲೆ ಫ್ರೀ ಶಿಪ್ಪಿಂಗ್ ಹಾಗೂ ಕ್ಯಾಶ್ ಆನ್ ಡೆಲಿವರಿ ನಿರ್ಧಾರವಾಗುತ್ತದೆ.

  9. ರಿಡಿಫ್ ಶಾಪಿಂಗ್

  ಭಾರತದ ಅತಿ ದೊಡ್ಡ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ಗಳಲ್ಲಿ ಒಂದಾಗಿರುವ ರಿಡಿಫ್ ಶಾಪಿಂಗ್, ದೇಶದಲ್ಲಿ ಆನ್‌ಲೈನ್ ಶಾಪಿಂಗ್‌ನ ಹೊಸ ಅಲೆಯನ್ನೇ ಮೂಡಿಸಿದೆ. ಇದರಲ್ಲಿ ಸುಮಾರು ೧೨ ಲಕ್ಷಕ್ಕಿಂತಲೂ ಹೆಚ್ಚು ವಸ್ತುಗಳ ಲಿಸ್ಟಿಂಗ್ ಇದ್ದು, ಆಧುನಿಕ ಹಾಗೂ ಈಗತಾನೇ ಬಿಡುಗಡೆಯಾದ ವಸ್ತುಗಳನ್ನು ಖರೀದಿಸಬಯಸುವಿರಾದರೆ ರಿಡಿಫ್‌ಗೆ ಭೇಟಿ ನೀಡಬಹುದು.
  ರಾಷ್ಟೀಯ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಬ್ರ್ಯಾಂಡ್‌ಗಳು ಲಭ್ಯವಿದ್ದು ಕಾರ್ಡ್ ಮೂಲಕ ತಕ್ಷಣ ಹಣ ಪಾವತಿಸಬಹುದು ಅಥವಾ ಕ್ಯಾಶ್ ಆನ್ ಡೆಲಿವರಿ ಆಯ್ದುಕೊಳ್ಳಬಹುದು.

  10. ನಾಪ್‌ತೋಲ್

  2008ರಲ್ಲಿ ಆರಂಭವಾದ ನಾಪ್‌ತೋಲ್ ಸಹ ಭಾರತದ ಒಂದು ಪ್ರಮುಖ ಆನ್‌ಲೈನ್ ಶಾಪಿಂಗ್ ತಾಣವಾಗಿದೆ. ಇದರಲ್ಲಿ ನಿಮಗಿಷ್ಟವಾದ ವಸ್ತುಗಳು ಕಡಿಮೆ ದರದಲ್ಲಿ ಸಿಗುತ್ತವೆ. ಇದು ಅತ್ಯಂತ ಗ್ರಾಹಕ ಸ್ನೇಹಿ ವ್ಯವಸ್ಥೆಯಾಗಿದ್ದು, ಸಾಕಷ್ಟು ಜನಪ್ರಿಯತೆ ಗಳಿಸಿದೆ. ಶೂಸ್, ಮೊಬೈಲ್, ಮನೆ ಅಲಂಕಾರ, ಸೌಂದರ್ಯ, ಬಟ್ಟೆಗಳು ಹೀಗೆ ವಿವಿಧ ಶ್ರೇಣಿಯ ವಸ್ತುಗಳನ್ನು ಒಂದು ಫೋನ್ ಕಾಲ್ ಮೂಲಕ ಆರ್ಡರ್ ಮಾಡಬಹುದು ಹಾಗೂ ಕ್ಯಾಶ್ ಆನ್ ಡೆಲಿವರಿ ಸಹ ಪಡೆಯಬಹುದು.
  ಈ ವೆಬ್‌ಸೈಟ್ ಫ್ಯಾಷನ್ ವಸ್ತುಗಳ ಬೆಸ್ಟ್ ಕ್ಯಾಶ್ ಆನ್ ಡೆಲಿವರಿ ಸೈಟ್ ಆಗಿದೆ.

  11. ಜಾಬೋಂಗ್

  ಜಾಬೋಂಗ್ ಅತಿ ಜನಪ್ರಿಯ ಫ್ಯಾಷನ್ ವಸ್ತುಗಳ ಆನ್‌ಲೈನ್ ಶಾಪಿಂಗ್ ಪೋರ್ಟಲ್ ಆಗಿದೆ. ಶೂಸ್, ಬಟ್ಟೆ, ಆಭರಣ ಹೀಗೆ ಎಲ್ಲ ವಸ್ತುಗಳು ಇಲ್ಲಿ ಸಿಗುತ್ತವೆ. ಒಳ್ಳೆಯ ಕಸ್ಟಮರ್ ಕೇರ್ ಸರ್ವಿಸ್ ಹೊಂದಿರುವ ಜಾಬೋಂಗ್, ಖರೀದಿಗೆ ಉತ್ತಮ ತಾಣವಾಗಿದೆ. ದೇಶದ ಎಲ್ಲ ಭಾಗಗಳಿಗೂ ತನ್ನ ವಸ್ತುಗಳನ್ನು ತಲುಪಿಸುವ ಜಾಬೋಂಗ್ ಕ್ಯಾಶ್ ಆನ್ ಡೆಲಿವರಿ ನೀಡುತ್ತದೆ. ಜೊತೆಗೆ ವಸ್ತು ಬೇಡವೆಂದಾದರೆ ಯಾವುದೇ ಕಿರಿಕಿರಿ ಇಲ್ಲದೆ ವಸ್ತುವನ್ನು ವಾಪಸ್ ತೆಗೆದುಕೊಳ್ಳುತ್ತದೆ.

  12. ಮಿಂತ್ರಾ

  ಮಿಂತ್ರಾ ದೇಶದ ಅತಿ ಪ್ರಮುಖ ಆನ್‌ಲೈನ್ ಸ್ಟೋರ್‌ಗಳಲ್ಲೊಂದಾಗಿದೆ. ಇದು ಫ್ಯಾಷನ್ ವಸ್ತುಗಳಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಹೊಸ ಟ್ರೆಂಡ್‌ನ ಮಹಿಳೆ, ಪುರುಷರು ಹಾಗೂ ಚಿಕ್ಕಮಕ್ಕಳ ವಸ್ತುಗಳು ಇಲ್ಲಿ ಲಭ್ಯ. ಸನ್‌ಗ್ಲಾಸ್, ಶೂಸ್, ಆಭರಣ, ಸೌಂದರ್ಯವರ್ಧಕ ವಸ್ತುಗಳು, ಪರ್ಫ್ಯೂಮ್ ಮುಂತಾದ ವಸ್ತುಗಳಿಗೆ ಮಿಂಟ್ರಾ ಹೆಸರುವಾಸಿಯಾಗಿದೆ. ೪೯ ರೂಪಾಯಿ ಮೇಲ್ಪಟ್ಟ ಎಲ್ಲ ಆರ್ಡರ್‌ಗಳನ್ನು ಯಾವುದೇ ಶಿಪ್ಪಿಂಗ್ ಚಾರ್ಜ್ ಇಲ್ಲದೆ ಡೆಲಿವರಿ ಮಾಡುವುದು ಮಿಂಟ್ರಾ ವಿಶೇಷ. ಕಾರ್ಡ್ ಮೂಲಕ ಅಥವಾ ಕ್ಯಾಶ್ ಆನ್ ಡೆಲಿವರಿ ಮುಖಾಂತರ ಪಾವತಿಸಬಹುದು. ಬಹುತೇಕ ಎಲ್ಲ ವಸ್ತುಗಳಿಗೂ ೩೦ ದಿನಗಳವರೆಗೆ ಮರಳಿಸುವ ಸೌಲಭ್ಯವನ್ನು ಮಿಂಟ್ರಾ ನೀಡುತ್ತದೆ.

  13. ಯೆಪ್ ಮಿ

  ಪುರುಷ ಹಾಗೂ ಮಹಿಳೆಯರ ಸಿದ್ಧ ಉಡುಪುಗಳ ಮಾರಾಟದಲ್ಲಿ ಯೆಪ್ ಮಿ ಹೆಸರು ಮಾಡಿದೆ. ಅತಿ ಶೀಘ್ರದಲ್ಲಿ ವಸ್ತುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಯೆಪ್ ಮಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ತನ್ನದೇ ಆದ ಫ್ಯಾಷನ್ ಬ್ರ್ಯಾಂಡ್‌ಗಳನ್ನು ಹೊಂದುವ ಮೂಲಕ ಯೆಪ್ ಮಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಸ್ತುಗಳನ್ನು ನೀಡುತ್ತದೆ. ಫ್ಯಾಷನ್ ಶೋ ನಡೆಸಿದ ಮೊದಲ ಆನ್‌ಲೈನ್ ಸ್ಟೋರ್ ಎಂಬ ಹೆಗ್ಗಳಿಕೆಗೆ ಯೆಪ್ ಮಿ ಪಾತ್ರವಾಗಿದೆ. ವಿವಿಧ ಶ್ರೇಣಿಯ ವಸ್ತುಗಳ ಕಾಂಬೋ ಆಫರ್ ಯೆಪ್ ಮಿ ನಲ್ಲಿ ಲಭ್ಯವಿದ್ದು, ಗುಣಮಟ್ಟದ ಹಾಗೂ ಕೈಗೆಟುಕುವ ದರದಲ್ಲಿ ವಸ್ತುಗಳು ಸಿಗುತ್ತವೆ.

   

  14. ಕೂವ್ಸ್

  ಕೂವ್ಸ್ ಇದು ಫ್ಯಾಷನ್ ವಸ್ತುಗಳ ಕೇಂದ್ರೀಕೃತ ಆನ್‌ಲೈನ್ ಶಾಪಿಂಗ್ ತಾಣವಾಗಿದೆ. ನೀವು ಫ್ಯಾಷನ್ ಪ್ರಿಯರಾಗಿದ್ದರೆ ಕೂವ್ಸ್‌ನಲ್ಲಿ ಲಭ್ಯವಿರುವ ಹಲವಾರು ಆಧುನಿಕ ಮಾದರಿಯ ಬ್ರ್ಯಾಂಡ್‌ಗಳು ನಿಮ್ಮ ಮನಸೆಳೆಯುತ್ತವೆ. ಪ್ರತಿ ವಾರ ೧೫೦ ಕ್ಕೂ ಹೆಚ್ಚು ಹೊಸ ಮಾದರಿಯ ವಸ್ತುಗಳನ್ನು ತನ್ನ ತಾಣದ ಮೂಲಕ ಕೂವ್ಸ್ ಬಿಡುಗಡೆ ಮಾಡುತ್ತದೆ. ಈ ವೆಬ್‌ಸೈಟ್‌ನಲ್ಲಿ ವಸ್ತುಗಳ ಚಿತ್ರಗಳನ್ನು ೩೬೦ ಡಿಗ್ರಿ ಕೋನದಲ್ಲಿ ತಿರುಗಿಸಿ ನೋಡಬಹುದು.
  ಪಾರ್ಟಿ, ವೀಕೆಂಡ್, ಕೆಲಸ, ಕಾಲೇಜ್, ಜಿಮ್ ಹೀಗೆ ಯಾವುದೇ ಸಂದರ್ಭಕ್ಕಾದರೂ ಸರಿ ಹೊಂದುವ ಮಹಿಳೆ ಹಾಗೂ ಪುರುಷರ ಉಡುಪುಗಳ ವಿಶಾಲವಾದ ಶ್ರೇಣಿ ಇಲ್ಲಿದೆ. ಫ್ರೀ ಶಿಪ್ಪಿಂಗ್, ಕ್ಯಾಶ್ ಆನ್ ಡೆಲಿವರಿ ಸೌಲಭ್ಯವಿದ್ದು, ೧೫ ದಿನಗಳ ವಸ್ತು ಮರಳಿಸುವ ಅಥವಾ ಬದಲಾಯಿಸುವ ಪಾಲಿಸಿಯನ್ನು ಕೂವ್ಸ್ ಹೊಂದಿದೆ.

  15. ಶಾಪರ್ಸ್ ಸ್ಟಾಪ್

  ಎಲ್ಲಕ್ಕಿಂತ ಭಿನ್ನವಾದ ಆನ್‌ಲೈನ್ ಶಾಪಿಂಗ್ ಅನುಭವವನ್ನು ಶಾಪರ್ಸ್ ಸ್ಟಾಪ್ ತನ್ನ ಗ್ರಾಹಕರಿಗೆ ನೀಡುತ್ತದೆ. ಮಹಿಳೆ, ಪುರುಷರು ಹಾಗೂ ಮಕ್ಕಳಿಗೆ ಬೇಕಾಗುವ ಎಲ್ಲ ವಸ್ತುಗಳು ಇಲ್ಲಿ ಲಭ್ಯವಿದ್ದು, ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳ ಶ್ರೇಣಿಯ ವಸ್ತುಗಳು ಎಲ್ಲರ ಮನಸೆಳೆಯುತ್ತವೆ.
  ಇದು ಪಕ್ಕಾ ಅಸಲಿ ವಸ್ತುಗಳನ್ನು ಮಾರಾಟ ಮಾಡುವ ತಾಣವಾಗಿದ್ದು, ನಾವು ಮಾರುವ ವಸ್ತುಗಳಿಗೆ ನಾವೇ ಜವಾಬ್ದಾರರಾಗಿದ್ದೇವೆ ಎಂಬ ನೀತಿಯನ್ನು ಶಾಪರ್ಸ್ ಸ್ಟಾಪ್ ಪರಿಪಾಲಿಸುತ್ತದೆ. 14 ದಿನಗಳ ರಿಟರ್ನ್, ಎಕ್ಸ್‌ಚೇಂಜ್ ಪಾಲಿಸಿ ಲಭ್ಯವಿದ್ದು, ಅನೇಕ ಸ್ಥಳಗಳಿಗೆ ಕ್ಯಾಶ್ ಆನ್ ಡೆಲಿವರಿ ಸಹ ಸಿಗುತ್ತದೆ.

  Read more about: online money finance news business
  English summary

  Top 15 Best Online Shopping Sites in India (Cash On Delivery)

  Another advantage is that we can choose an item from thousands of available options. Here I will share best online shopping sites in India cash on delivery (COD).
  Company Search
  Enter the first few characters of the company's name or the NSE symbol or BSE code and click 'Go'

  Find IFSC

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more