For Quick Alerts
ALLOW NOTIFICATIONS  
For Daily Alerts

  2019ರ ಪ್ರಮುಖ ಸರ್ಕಾರಿ ಯೋಜನೆಗಳ ಅಂತಿಮ ಗಡುವು (Deadlines) ಪಟ್ಟಿ ಇಲ್ಲಿದೆ..

  |

  ಹೊಸ ವರ್ಷ 2019 ಆಗಮಿಸಲು ಇನ್ನೇನು ಕೆಲ ದಿನಗಳು ಮಾತ್ರ ಬಾಕಿ ಇವೆ. ಪ್ರಮುಖ ಹಣಕಾಸು ವ್ಯವಹಾರ ಹಾಗೂ ಅದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು 2019 ರಲ್ಲಿನ ಪ್ರಮುಖ ದಿನಾಂಕಗಳ ಬಗ್ಗೆ ಈ ಸಂದರ್ಭದಲ್ಲಿ ತಿಳಿದುಕೊಳ್ಳುವುದು ಅಗತ್ಯವಾಗಿದೆ. ಯಾವ ಪ್ರಕ್ರಿಯೆಗೆ ಯಾವತ್ತು ಡೆಡ್‌ಲೈನ್ ಇದೆ ಎಂಬುದರ ಬಗ್ಗೆ ನಿಖರವಾಗಿ ತಿಳಿದುಕೊಂಡು ಆಯಾ ಕೆಲಸಗಳನ್ನು ಮುಗಿಸಲು ನಿಮಗಾಗಿ ಈ ಅಂಕಣದಲ್ಲಿ ಮಾಹಿತಿ ನೀಡಲಾಗಿದೆ.

  1. ಪ್ಯಾನ್ - ಆಧಾರ ಜೋಡಣೆ

  ಇತ್ತೀಚಿನ ಸುಪ್ರೀಂ ಕೋರ್ಟ್ ಆದೇಶದ ನಂತರ ಪ್ಯಾನ್ ಸಂಖ್ಯೆಗೆ ಆಧಾರ ಕಾರ್ಡ್ ಸಂಖ್ಯೆಯನ್ನು ಲಿಂಕ್ ಮಾಡುವುದು ಈಗ ಕಡ್ಡಾಯವಾಗಿದೆ. ಕೇಂದ್ರದ ನೇರ ತೆರಿಗೆಗಳ ಪ್ರಾಧಿಕಾರದ (ಸಿಬಿಡಿಟಿ) ಸೆಕ್ಷನ್ 119ರ ಪ್ರಕಾರ ಜೂನ್ 30, 2018 ರಂದು ಹೊರಡಿಸಿದ ಆದೇಶದ ಪ್ರಕಾರ ಪ್ಯಾನ್ ಹಾಗೂ ಆಧಾರ ಲಿಂಕ್ ಮಾಡುವ ದಿನಾಂಕವನ್ನು ವಿಸ್ತರಿಸಲಾಗಿತ್ತು. ಈಗ ಇದನ್ನು 2019ರ ಮಾರ್ಚ್, 31 ಕ್ಕೆ ವಿಸ್ತರಣೆ ಮಾಡಲಾಗಿದೆ. ಅಂದರೆ ಮುಂದಿನ ವರ್ಷದ ಮಾರ್ಚ 31 ರೊಳಗೆ ನಿಮ್ಮ ಪ್ಯಾನ್ ಸಂಖ್ಯೆಗೆ ಆಧಾರ ಲಿಂಕ್ ಮಾಡಲು ಮರೆಯಬೇಡಿ.

  2. ಪ್ರಧಾನ ಮಂತ್ರಿ ಆವಾಸ್ ಯೋಜನೆ ಡೆಡ್ ಲೈನ್

  ನೀವು ಮನೆ ಕೊಳ್ಳಲು ಅಥವಾ ಕಟ್ಟಲು ಪ್ಲ್ಯಾನ್ ಮಾಡಿದ್ದಲ್ಲಿ ಹಾಗೂ ಅದಕ್ಕಾಗಿ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಸೌಲಭ್ಯಗಳನ್ನು ಪಡೆಯಲು ಬಯಸಿದ್ದಲ್ಲಿ ತ್ವರೆ ಮಾಡಿ. ನೀವು ಪ್ರಥಮ ಬಾರಿಗೆ ಮನೆ ಖರೀದಿಸುತ್ತಿದ್ದರೆ ಹಾಗೂ ಯೋಜನೆಯ ಇತರ ಎಲ್ಲ ನಿಯಮಾವಳಿಗಳನ್ನು ಪಾಲಿಸುತ್ತಿದ್ದರೆ ಆವಾಸ್ ಯೋಜನೆಯ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. ಪ್ರಸ್ತುತ ಈ ಯೋಜನೆಯಡಿ ಸಬ್ಸಿಡಿ ಪಡೆಯಲು ಮಾರ್ಚ 31, 2019 ಕೊನೆಯ ದಿನವಾಗಿದೆ.
  ಆವಾಸ್ ಯೋಜನೆಯ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಮೊತ್ತ ಅರ್ಜಿದಾರನ ಆದಾಯದ ಮೇಲೆ ನಿರ್ಧರಿಸಲ್ಪಡುತ್ತದೆ. ಅರ್ಜಿದಾರರ ಆದಾಯದ ಪ್ರಮಾಣದ ಮೇಲೆ ಫಲಾನುಭವಿಗಳ ವರ್ಗೀಕರಣ ಮಾಡಲಾಗುತ್ತದೆ. ಪ್ರಧಾನ ಮಂತ್ರಿ ಅವಾಸ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

  3. ಶೇರುಗಳ ವರ್ಗಾವಣೆ

  ನಿಮ್ಮ ಬಳಿ ಕಾಗದ ರೂಪದಲ್ಲಿ ಯಾವುದೇ ಕಂಪನಿಯ ಶೇರುಗಳಿದ್ದಲ್ಲಿ ಅವನ್ನು ಏಪ್ರಿಲ್ 1, 2019 ರೊಳಗೆ ಡಿಜಿಟಲ್ ರೂಪಕ್ಕೆ ಬದಲಾಯಿಸಿಕೊಳ್ಳಬೇಕಿದೆ. ಒಂದೊಮ್ಮೆ ಈ ಡೆಡ್ ಲೈನ್ ತಪ್ಪಿದಲ್ಲಿ ನಂತರದ ಅವಧಿಯಲ್ಲಿ ಕಾಗದದ ರೂಪದಲ್ಲಿನ ಶೇರುಗಳ ಮಾರಾಟ ಸಾಧ್ಯವಾಗದು. ಶೇರುಗಳನ್ನು ಮಾರಾಟ ಮಾಡಬೇಕಾದರೆ ಅವನ್ನು ಡಿಮ್ಯಾಟ್ ಖಾತೆಗೆ ವರ್ಗಾಯಿಸಿಕೊಳ್ಳುವುದು ಅನಿವಾರ್ಯ. ಈ ಮುಂಚೆ ಇದಕ್ಕಾಗಿ ಡಿಸೆಂಬರ್ 5, 2018 ನ್ನು ಕೊನೆಯ ದಿನವಾಗಿ ನಿಗದಿಪಡಿಸಲಾಗಿತ್ತು. ಈಗ ಮತ್ತೆ ಈ ದಿನಾಂಕವನ್ನು ವಿಸ್ತರಿಸಲಾಗಿದ್ದು, ಈ ಬಾರಿ ಡೆಡ್ ಲೈನ್ ಮಿಸ್ ಮಾಡಿಕೊಳ್ಳಬೇಡಿ.

  4. 2017-18 ರ ಆರ್ಥಿಕ ವರ್ಷದ ಐಟಿಆರ್ ಫೈಲಿಂಗ್

  ನೀವು ತೆರಿಗೆ ಪಾವತಿದಾರರಾಗಿದ್ದು ಈವರೆಗೂ ಐಟಿ ರಿಟರ್ನ್ ಫೈಲ್ ಮಾಡಿಲ್ಲದಿದ್ದರೆ ನಿಮಗೆ ಇನ್ನೂ ಕೊಂಚ ಕಾಲಾವಕಾಶವಿದೆ. ಮಾರ್ಚ 31, 2019 ರೊಳಗೆ ಐಟಿ ರಿಟರ್ನ್ ಫೈಲ್ ಮಾಡಲು ಮರೆಯಬೇಡಿ.

  "2017-18 ಹಣಕಾಸು ವರ್ಷಕ್ಕೆ ಅನ್ವಯವಾಗುವಂತೆ ಐಟಿ ರಿಟರ್ನ್ ಫೈಲ್ ಮಾಡುವ ಕಾಲಾವಧಿಯನ್ನು ಸರಕಾರ ಕಡಿಮೆ ಮಾಡಿದೆ. ಈ ಮುಂಚೆ ಇದ್ದ 2 ವರ್ಷದ ಕಾಲಾವಧಿಯನ್ನು ಇಳಿಸಲಾಗಿದ್ದು, ಈಗ ತಡವಾದ ಫೈಲಿಂಗ್‌ಗಳನ್ನು ಒಂದು ವರ್ಷದೊಳಗೆ ಸಲ್ಲಿಸಬೇಕಿದೆ. ಹೀಗಾಗಿ 2017-18ರ ಹಣಕಾಸು ವರ್ಷದ (2018-19ರ ಮೌಲ್ಯಮಾಪನ) ಐಟಿಆರ್ ಅನ್ನು ಮಾರ್ಚ 31, 2019 ರೊಳಗೆ ಫೈಲ್ ಮಾಡಬೇಕಿದೆ. ಈ ದಿನಾಂಕವನ್ನು ಮೀರಿದಲ್ಲಿ ನಿಮಗೆ ಐಟಿ ರಿಟರ್ನ ಫೈಲ್ ಮಾಡಲು ಸಾಧ್ಯವಾಗದು. ನಂತರ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬಂದ ನಂತರವಷ್ಟೆ ರಿಟರ್ನ ಫೈಲ್ ಮಾಡಬಹುದಾಗಿದೆ." ಎನ್ನುತ್ತಾರೆ ಟ್ಯಾಕ್ಸ್ ಟು ವಿನ್ ಡಾಟ್ ಇನ್ ಸಂಸ್ಥೆಯ ಸಿಇಒ ಅಭಿಷೇಕ ಸೋನಿ.
  ತಡವಾದ ಐಟಿ ರಿಟರ್ನ ಫೈಲಿಂಗ್‌ಗಳಿಗೆ ದಂಡ ಪಾವತಿಸಬೇಕಾಗುತ್ತದೆ ಎಂಬುದು ಪ್ರಮುಖವಾಗಿ ನಿಮಗೆ ತಿಳಿದಿರಲಿ. ಪ್ರಸ್ತುತ ಆದಾಯ ತೆರಿಗೆ ಕಾಯ್ದೆಯ ಪ್ರಕಾರ ತಡವಾದ ಐಟಿ ರಿಟರ್ನ ಅನ್ನು ಡಿಸೆಂಬರ್ 31, 2018 ರೊಳಗೆ ಸಲ್ಲಿಸಿದರೆ 5 ಸಾವಿರ ರೂ. ಹಾಗೂ ಜನೆವರಿ 1, 2019 ರಿಂದ ಮಾರ್ಚ 31, 2019 ರ ಅವಧಿಯಲ್ಲಿ ರಿಟರ್ನ ಸಲ್ಲಿಸುವುದಾದರೆ 10 ಸಾವಿರ ರೂಪಾಯಿ ದಂಡ ಪಾವತಿಸಬೇಕಾಗುತ್ತದೆ.
  ಆದಾಗ್ಯೂ ವಾರ್ಷಿಕ ಆದಾಯ 5 ಲಕ್ಷ ರೂಪಾಯಿ ಮೀರದ ಸಣ್ಣ ತೆರಿಗೆ ಪಾವತಿದಾರರಿಗೆ ದಂಡದ ಮೊತ್ತವನ್ನು ಗರಿಷ್ಠ 1 ಸಾವಿರ ರೂಪಾಯಿಗಳಿಗೆ ಸೀಮಿತಗೊಳಿಸಲಾಗಿದ್ದು ಅಷ್ಟರ ಮಟ್ಟಿಗೆ ನೆಮ್ಮದಿಯಾಗಿದೆ.

  5. ತೆರಿಗೆ ಉಳಿತಾಯ ಹೂಡಿಕೆ ಹಾಗೂ ಕ್ಲೇಮ್‌ಗಳು

  2018-19ರ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ನೀವು ಪಡೆಯುವ ಸಂಬಳ ಹಾಗೂ ಇನ್ನಿತರ ಭತ್ಯೆಗಳ ಮೇಲೆ ತೆರಿಗೆ ಉಳಿತಾಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಹಾಗೂ ಅವನ್ನು ಕ್ಲೇಮ್ ಮಾಡಲು ಮಾರ್ಚ 31, 2019 ಕೊನೆಯ ದಿನವಾಗಿದೆ. ರಜೆ ಪ್ರವಾಸ ಭತ್ಯೆ (ಎಲ್‌ಟಿಎ) ಹಾಗೂ ಇನ್ನೂ ಕೆಲ ಭತ್ಯೆಗಳ ಮೇಲಿನ ತೆರಿಗೆ ವಿನಾಯಿತಿಯನ್ನು ನಿಮ್ಮ ಉದ್ಯೋಗದಾತ ಕಂಪನಿಯ ಮೂಲಕವೇ ಕ್ಲೇಮ್ ಮಾಡಬೇಕಾಗುತ್ತದೆ ಎಂಬ ವಿಷಯ ಗೊತ್ತಿರಲಿ. ಇಂಥ ತೆರಿಗೆ ವಿನಾಯಿತಿಗಳನ್ನು ನಿಗದಿತ ದಿನಾಂಕದೊಳಗೆ ಕ್ಲೇಮ್ ಮಾಡದಿದ್ದಲ್ಲಿ, ಹಣಕಾಸು ವರ್ಷದ ಕೊನೆಯಲ್ಲಿ ಅವು ನಿಮ್ಮ ಸಂಬಳದಲ್ಲಿ ಜಮೆಯಾಗಿ ಅವಕ್ಕೆ ತೆರಿಗೆ ಪಾವತಿಸುವ ಸಂದರ್ಭ ಎದುರಾಗಬಹುದು. ಹೀಗಾಗದಂತೆ ಮುಂಚೆಯೇ ಎಚ್ಚರಿಕೆ ವಹಿಸುವುದು ಸೂಕ್ತ.
  ಸಾಮಾನ್ಯವಾಗಿ ಪ್ರಯಾಣ, ಸಂಪರ್ಕ ಹೀಗೆ ಕೆಲ ಖರ್ಚುಗಳನ್ನು ಉದ್ಯೋಗದಾತ ಸಂಸ್ಥೆಗಳು ಮರುಪಾವತಿಸುತ್ತವೆ. ಒಂದೊಮ್ಮೆ ಹಣಕಾಸು ವರ್ಷದ ಕೊನೆಯ ದಿನಾಂಕದೊಳಗೆ ಇವನ್ನು ಲೆಕ್ಕ ಮಾಡಿ ಕ್ಲೇಮ್ ಮಾಡದಿದ್ದಲ್ಲಿ ಅವು ನಿಮ್ಮ ಮೂಲ ಸಂಬಳದ ಲೆಕ್ಕಕ್ಕೆ ಸೇರಿ ಅವೆಲ್ಲಕ್ಕೂ ತೆರಿಗೆ ಕಟ್ಟಬೇಕಾಗಬಹುದು. ಹೀಗಾಗಿ ಇಂಥ ಖರ್ಚುಗಳ ಬಗ್ಗೆ ಸೂಕ್ತ ಬಿಲ್ ಹಾಗೂ ದಾಖಲೆಗಳನ್ನು ನೀಡಿ ಕಾಲಾವಧಿಯೊಳಗೆ ಕ್ಲೇಮ್ ಮಾಡಿಟ್ಟುಕೊಳ್ಳಬೇಕು.

  ಅಲ್ಲದೆ ಮನೆ ಬಾಡಿಗೆ ರಸೀದಿ ಹಾಗೂ ಇನ್ನಿತರ ತೆರಿಗೆ ವಿನಾಯಿತಿ ಹೂಡಿಕೆಗಳ ಬಗ್ಗೆ ಸಾಕಷ್ಟು ಮುಂಚೆಯೇ ನಿಮ್ಮ ಸಂಸ್ಥೆಗೆ ದಾಖಲೆಗಳನ್ನು ಸಲ್ಲಿಸಿ ಸಂಬಳದಿಂದ ದೊಡ್ಡ ಮೊತ್ತದ ಟಿಡಿಎಸ್ ಕಡಿತವಾಗುವುದರಿಂದ ಪಾರಾಗಬಹುದು.

  6. 2017-18ನೇ ಸಾಲಿನ ಐಟಿಆರ್ ಪರಿಷ್ಕರಣೆ

  ಹಣಕಾಸು ವರ್ಷ 2017-18 (2018-19ರ ಮೌಲ್ಯಮಾಪನ) ದಲ್ಲಿನ ಐಟಿಆರ್ ಫೈಲಿಂಗ್‌ನಲ್ಲಿ ಯಾವುದಾದರೂ ತಪ್ಪುಗಳಾಗಿದ್ದರೆ ಪರಿಷ್ಕೃತ ಐಟಿಆರ್ ಸಲ್ಲಿಸುವ ಮೂಲಕ ಈ ತಪ್ಪುಗಳನ್ನು ಸರಿಪಡಿಸಬಹುದು. ಈಗಿನ ಆದಾಯ ತೆರಿಗೆ ಕಾಯ್ದೆಯ ಪ್ರಕಾರ ಮಾರ್ಚ 31, 2019ರೊಳಗೆ ಇಂಥ ಪರಿಷ್ಕೃತ ಐಟಿಆರ್ ಸಲ್ಲಿಸಬೇಕಿದೆ.

  ಒಂದೊಮ್ಮೆ ನೀವು ಈಗಾಗಲೇ ತಡವಾಗಿ ಐಟಿ ರಿಟರ್ನ ಫೈಲ್ ಮಾಡುತ್ತಿದ್ದಲ್ಲಿ, ಮಾರ್ಚ 31, 2019ರೊಳಗೆ ರಿಟರ್ನ ಫೈಲ್ ಮಾಡಿದರೆ ಅದರಲ್ಲಾಗಬಹುದಾದ ಯಾವುದೇ ತಪ್ಪುಗಳನ್ನು ಸರಿಪಡಿಸಲು ಪರಿಷ್ಕೃತ ರಿಟರ್ನ ಸಲ್ಲಿಸಲು ನಿಮಗೆ ಅವಕಾಶವೇ ಇರಲಾರದು. ಹೀಗಾಗಿ ತಡವಾಗಿ ರಿಟರ್ನ ಫೈಲ್ ಮಾಡುವವರು ಅದರಲ್ಲಿ ಯಾವುದೇ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸಲೇಬೇಕು.

   

  7. 2018-19ನೇ ಸಾಲಿನ ಐಟಿ ರಿಟರ್ನ ಫೈಲಿಂಗ್ ಕೊನೆಯ ದಿನಾಂಕ

  ಮಾರ್ಚ 31 ರಂದು 2018-19ರ ಹಣಕಾಸು ವರ್ಷ ಕೊನೆಗೊಳ್ಳುತ್ತದೆ. ಇದರ ನಂತರ ಜುಲೈ 31 ರೊಳಗೆ ರಿಟರ್ನ ಫೈಲ್ ಮಾಡುವ ಮೂಲಕ ದಂಡ ಪಾವತಿಸುವುದರಿಂದ ತಪ್ಪಿಸಿಕೊಳ್ಳಬಹುದು. ಸಾಮಾನ್ಯವಾಗಿ ರಿಟರ್ನ ಫೈಲ್ ಮಾಡಲು ಜುಲೈ 31 ಕೊನೆಯ ದಿನವಾಗಿದ್ದರೂ ಸರಕಾರ ಕೆಲವೊಮ್ಮೆ ಈ ದಿನಾಂಕವನ್ನು ವಿಸ್ತರಿಸುತ್ತದೆ.

  8. ಸಾಲಗಳಿಗೆ ಆರ್‌ಬಿಐ ಬಾಹ್ಯ ಮಾನದಂಡಗಳು

  ಏಪ್ರಿಲ್ 1, 2019ಕ್ಕೆ ಜಾರಿಗೆ ಬರುವಂತೆ ದೇಶದ ಬ್ಯಾಂಕುಗಳು ತಮ್ಮ ಸಾಲದ ಬಡ್ಡಿ ದರಗಳನ್ನು ಬಾಹ್ಯ ಮಾನದಂಡಗಳ ಮೇಲೆ ಆಕರಿಸಬೇಕೆಂದು ರಿಸರ್ವ ಬ್ಯಾಂಕ್ ಆದೇಶ ನೀಡಿದೆ. ವೈಯಕ್ತಿಕ ಸಾಲ, ಗೃಹ ಸಾಲ, ಕಾರ್ ಲೋನ್ ಹೀಗೆ ವಿವಿಧ ರೀತಿಯ ಸಾಲದ ಖಾತೆಗಳಿಗೆ ಈ ನಿಯಮ ಅನ್ವಯಿಸಲಿದೆ. ಈಗ ಬ್ಯಾಂಕುಗಳು ಪ್ರೈಮ್ ಲೆಂಡಿಂಗ್ ರೇಟ್, ಬೆಂಚಮಾರ್ಕ್ ಲೆಂಡಿಂಗ್ ರೇಟ್ (ಬಿಪಿಎಲ್‌ಆರ್), ಮೂಲ ದರ ಮತ್ತು ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ ಆಧಾರದಲ್ಲಿ ಆಂತರಿಕವಾಗಿ ಬಡ್ಡಿದರಗಳನ್ನು ನಿರ್ಧರಿಸುತ್ತಿದ್ದವು. ಇನ್ನು ಈ ನಿಯಮಾವಳಿಗಳು ಬದಲಾಗಲಿವೆ.

  ಹೊಸ ವೈಯಕ್ತಿಕ ಅಥವಾ ರಿಟೇಲ್ ಸಾಲಗಳ ಬಡ್ಡಿ (ಗೃಹ, ವಾಹನ ಇತ್ಯಾದಿ) ಮತ್ತು ಸಣ್ಣ ಹಾಗೂ ಅತಿ ಸಣ್ಣ ಉದ್ದಿಮೆಗಳಿಗೆ ನೀಡಲಾಗುವ ಸಾಲದ ಫ್ಲೋಟಿಂಗ್ ಬಡ್ಡಿದರಗಳು ಏಪ್ರಿಲ್ 1, 2019 ರಿಂದ ನಾಲ್ಕು ಪ್ರಮುಖ ಬಾಹ್ಯ ಮಾನದಂಡಗಳ ಮೇಲೆ ನಿರ್ಧರಿಸಲ್ಪಡಲಿವೆ. ಆದಾಗ್ಯೂ ಈ ಕುರಿತು ಆರ್‌ಬಿಐನಿಂದ ಇನ್ನಷ್ಟು ಸ್ಪಷ್ಟವಾದ ಪ್ರಕಟಣೆಗಾಗಿ ಕಾಯಲಾಗುತ್ತಿದೆ.

   

  9. ವ್ಯಕ್ತಿಗತವಲ್ಲದ ಸಂಸ್ಥೆಗಳಿಗೆ ಪ್ಯಾನ್ ಕಡ್ಡಾಯ

  ಹಣಕಾಸು ವರ್ಷ 2018-19ಕ್ಕೆ ಅನ್ವಯವಾಗುವಂತೆ, ನಿರ್ದಿಷ್ಟ ಹಣಕಾಸು ವರ್ಷದಲ್ಲಿ 2.5 ಲಕ್ಷ ರೂ. ಗಳಿಗೂ ಹೆಚ್ಚು ವ್ಯವಹಾರ ನಡೆಸಿರುವ ಪ್ಯಾನ್ ಸಂಖ್ಯೆ ಪಡೆಯದ ವ್ಯಕ್ತಿಗತವಲ್ಲದ ಸಂಸ್ಥೆಗಳು ಸಹ ಅದರ ಮುಂದಿನ ವರ್ಷದ ಮೇ 31 ರೊಳಗೆ ಪ್ಯಾನ್ ಸಂಖ್ಯೆ ಪಡೆಯುವುದು ಕಡ್ಡಾಯವಾಗಿದೆ.

  English summary

  Financial deadlines in 2019 you need to know about

  Here are some of the important financial deadlines you need to know about in 2019. Not meeting some of these could lead to substantial financial hardships.
  Story first published: Monday, December 17, 2018, 13:06 [IST]
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more