For Quick Alerts
ALLOW NOTIFICATIONS  
For Daily Alerts

  ನಿಮ್ಮ ಸ್ಯಾಲರಿ ಹೆಚ್ಚಿಸಿಕೊಳ್ಳಬೇಕೆ? ಈ 10 ಸ್ಮಾರ್ಟ್ ವಿಧಾನ ಅನುಸರಿಸಿ..

  |

  ಇತ್ತೀಚಿನ ದಿನಗಳಲ್ಲಿ ಹಲವಾರು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಕೇವಲ ಎಷ್ಟು ಬೇಕೋ ಅಷ್ಟೆ ಸಂಬಳ ನೀಡಿ ಅವರು ಕೆಲಸದಲ್ಲಿ ಮುಂದುವರಿದರೆ ಸಾಕು ಎನ್ನುವ ಧೋರಣೆಯನ್ನು ಅನುಸರಿಸುತ್ತಿರುವುದು ಕಂಡು ಬರುತ್ತಿದೆ. ಕೊಡುವ ಸಂಬಳದಿಂದ ಉದ್ಯೋಗಿಗಳು ಖುಷಿಯಾಗಿದ್ದಾರಾ ಅಥವಾ ಇಲ್ಲವಾ ಎಂಬ ಬಗ್ಗೆ ಕಂಪನಿಗಳು ಅಷ್ಟೊಂದು ತಲೆ ಕೆಡಿಸಿಕೊಳ್ಳುತ್ತಿಲ್ಲ. ಕೆಳ ಹಂತದ ಹಾಗೂ ಮಧ್ಯಮ ಹಂತದ ಉದ್ಯೋಗಿಗಳ ವಿಷಯದಲ್ಲಿ ಈ ಮಾತು ಹೆಚ್ಚು ಅನ್ವಯಿಸುತ್ತದೆ. ಆದರೂ ಉನ್ನತ ಮಟ್ಟದ ಉದ್ಯೋಗಿಗಳಿಗೆ ಮಾತ್ರ ಕಂಪನಿಗಳು ಅತ್ಯಂತ ದೊಡ್ಡ ಮೊತ್ತದ ಸಂಬಳ ಹಾಗೂ ಇನ್ನಿತರ ಎಲ್ಲ ಸೌಲಭ್ಯಗಳನ್ನು ನೀಡುತ್ತಿವೆ. ಟೇಕ್ ಹೋಂ ಸ್ಯಾಲರಿ (Take Home Salary) ಹೆಚ್ಚಿಸಿಕೊಳ್ಳುವುದು ಹೇಗೆ?

   

  ಇಂಥ ಸಂದರ್ಭದಲ್ಲಿ ಉದ್ಯೋಗಿಗಳು ವಾರ್ಷಿಕ ಶೇ. 5 ಅಥವಾ ಶೇ. 10 ಕ್ಕಿಂತ ಹೆಚ್ಚು ಸಂಬಳ ಹೆಚ್ಚಿಸಿಕೊಳ್ಳಲು ಬಯಸಿದಲ್ಲಿ ಅದಕ್ಕೆ ತಾವಾಗಿಯೇ ಕೆಲ ವಿಶೇಷ ಪ್ರಯತ್ನಗಳನ್ನು ಮಾಡುವುದು ಅನಿವಾರ್ಯ. ಹಾಗಾದರೆ ಸಂಬಳ ಬಡ್ತಿ ಪಡೆಯಲು ಕಂಪನಿಗಳ ಉದ್ಯೋಗಿಗಳು ಏನು ಮಾಡಬಹುದು? ಯಾವೆಲ್ಲ ವಿಧಾನಗಳನ್ನು ಅನುಸರಿಸಬಹುದು ಎಂಬ ಬಗ್ಗೆ ಈ ಲೇಖನದಲ್ಲಿ ಮಹತ್ವದ ಟಿಪ್ಸ್ ನೀಡಲಾಗಿದೆ. ನೀವೂ ತಿಳಿದುಕೊಂಡು ಟ್ರೈ ಮಾಡಿ...

  ಉದ್ಯೋಗದಲ್ಲಿ ಸಂಬಳ ಹೆಚ್ಚಿಸಿಕೊಳ್ಳಲು ಅನುಸರಿಸಬೇಕಾದ ಪ್ರಮುಖ ಟಿಪ್ಸ್ ಗಳನ್ನು ಇಲ್ಲಿ ನೀಡಲಾಗಿದೆ..

  1. ನಿಮ್ಮ ಸಾಮರ್ಥ್ಯವನ್ನು ಅರಿತುಕೊಳ್ಳಿ

  ನೀವು ಪ್ರಸ್ತುತ ಇರುವ ಹುದ್ದೆ ಹಾಗೂ ನಿಮ್ಮ ಶೈಕ್ಷಣಿಕ ಅರ್ಹತೆಗೆ ಸರಾಸರಿ ಮಾರುಕಟ್ಟೆಯಲ್ಲಿ ಎಷ್ಟು ಸಂಬಳ ಸಿಗುತ್ತಿದೆ ಎಂಬುದನ್ನು ಗ್ಲಾಸ್ ಡೋರ್ ಹಾಗೂ ಪೇ ಸ್ಕೇಲ್ ನಂಥ ಆನ್ಲೈನ್ ಸೈಟ್ ಗಳ ಮೂಲಕ ತಿಳಿದುಕೊಳ್ಳಬಹುದು. ಮಾನ್ಸ್ಟರ್, ನೌಕರಿ ಡಾಟ್ ಕಾಂ ಹಾಗೂ ಶೈನ್ ಮುಂತಾದ ವೆಬ್ ಸೈಟ್ ಗಳು ಸಹ ಇಂಥ ಮಾಹಿತಿಯನ್ನು ನೀಡುತ್ತವೆ. ಇನ್ನು ನಿಮ್ಮದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಬೇರೆ ಉದ್ಯೋಗಿಗಳಿಂದ ಕೇಳಿ ಸರಿಯಾದ ಮಾಹಿತಿ ಪಡೆದುಕೊಳ್ಳಬಹುದು. ಹೀಗೆ ಎಲ್ಲ ಕಡೆಯಿಂದ ಮಾಹಿತಿ ಕಲೆ ಹಾಕಿದ ನಂತರ ನೀವು ಕಡಿಮೆ ಸಂಬಳ ಪಡೆಯುತ್ತಿದ್ದೀರಿ ಎಂಬುದು ಮನವರಿಕೆಯಾದಲ್ಲಿ ಸಂಬಳ ಹೆಚ್ಚಳಕ್ಕೆ ಮಾತುಕತೆಗೆ ಮುಂದಾಗಬಹುದು. ಪ್ರತಿಯೊಂದು ಕಂಪನಿಯು ಉದ್ಯೋಗಿಗಳಿಗೆ ಈ 11 ಸೌಲಭ್ಯಗಳನ್ನು ಒದಗಿಸಬೇಕು...

  2. ನಿಮ್ಮ ಕಂಪನಿಯ ವಾತಾವರಣ ಹೇಗಿದೆ ತಿಳಿದುಕೊಳ್ಳಿ

  ಈಗ ನೀವು ಪಡೆಯುತ್ತಿರುವ ಸಂಬಳಕ್ಕಿಂತಲೂ ಹೆಚ್ಚು ಸಂಬಳ ಪಡೆಯುವ ಅರ್ಹತೆ ನಿಮಗೆ ಇದೆ ಎಂಬುದು ತಿಳಿದರೂ ಸದ್ಯದ ಮಾರುಕಟ್ಟೆಯ ಸ್ಥಿತಿಗತಿಗಳ ಬಗ್ಗೆ ಒಮ್ಮೆ ಗಮನಿಸಿ. ಬೇರೆ ಕಂಪನಿಗಳು ಹೊಸದಾಗಿ ನೇಮಕ ಮಾಡಿಕೊಳ್ಳುತ್ತಿವೆಯಾ ಅಥವಾ ಇರುವ ಕೆಲಸದವರನ್ನು ತೆಗೆದು ಹಾಕುತ್ತಿವೆಯಾ ಎಂಬುದರ ಮಾಹಿತಿ ಪಡೆದುಕೊಳ್ಳಿ. ಅಲ್ಲದೆ ಈಗ ನೀವು ಕೆಲಸ ಮಾಡುತ್ತಿರುವ ಕಂಪನಿಯ ಒಳಗಡೆ ಏನು ನಡೆಯುತ್ತಿದೆ ಎಂಬುದು ಸಹ ಮುಖ್ಯವಾಗುತ್ತದೆ. ಇತ್ತೀಚೆಗೆ ನಿಮ್ಮ ಕಂಪನಿ ಮಾರುಕಟ್ಟೆಯಿಂದ ಬಂಡವಾಳ ಎತ್ತಿದೆಯಾ ಅಥವಾ ಹಿಂದಿನ ತ್ರೈಮಾಸಿಕದಲ್ಲಿ ಲಾಭ ಗಳಿಸಿದೆಯಾ ಎಂಬುದನ್ನು ಸಹ ಸೂಕ್ಷ್ಮವಾಗಿ ನೋಡಿ. ಕಂಪನಿಯ ಸೂಕ್ಷ್ಮ ಹಣಕಾಸು ವ್ಯವಹಾರಗಳು ಸಹ ನಿಮ್ಮ ಸಂಬಳವನ್ನು ನಿರ್ಧರಿಸುವ ಮುಖ್ಯ ಅಂಶವಾಗಿದೆ.

  3. ಸೂಕ್ತ ಸಮಯಕ್ಕಾಗಿ ಕಾಯಿರಿ

  ಕಬ್ಬಿಣ ಬಿಸಿಯಾಗಿರುವಾಗಲೇ ಹೊಡೆದು ರೂಪ ನೀಡಬೇಕು ಎಂಬ ಗಾದೆ ಮಾತಿದೆ. ಅಂದರೆ ಕಂಪನಿಯ ಸಲುವಾಗಿ ನೀವು ಯಾವುದಾದರೂ ದೊಡ್ಡ ಕೆಲಸವನ್ನು ಪೂರ್ಣಗೊಳಿಸಿದಲ್ಲಿ ಸಂಬಳ ಹೆಚ್ಚಳಕ್ಕೆ ಬೇಡಿಕೆ ಇಡಲು ಅದೇ ಸಮಯ ಸೂಕ್ತವಾಗಿದೆ. ಕಂಪನಿಗಾಗಿ ಹೊಸ ಡೀಲ್ ಕುದುರಿಸಿದಾಗ, ದೊಡ್ಡ ಮಟ್ಟದ ಆರ್ಡರ್ ತಂದಾಗ ಅಥವಾ ಕಂಪನಿಯ ನಷ್ಟ ತಪ್ಪಿಸಲು ಹೊಸದೇನನ್ನಾದರೂ ಮಾಡಿದ್ದರೆ ಆಗ ನಿಮ್ಮ ಬೇಡಿಕೆಗಳನ್ನು ಕಂಪನಿಯ ಮುಂದೆ ಇಡಬಹುದು. ಕಂಪನಿಗಾಗಿ ಒಂದು ದೊಡ್ಡ ಯಶಸ್ಸು ಗಳಿಸಿದಾಗ ಕಂಪನಿಯ ಮಾಲಿಕರು ನಿಮ್ಮನ್ನು ನೋಡುವ ರೀತಿ ವಿಭಿನ್ನವಾಗಿರುತ್ತದೆ. ಇಂಥ ಅವಕಾಶವನ್ನು ಬಳಸಿಕೊಂಡು ಸಂಬಳ ಹೆಚ್ಚಿಸಿಕೊಳ್ಳಲು ಮಾತುಕತೆಗೆ ಮುಂದಾಗಬಹುದು.

  4. ಎಲ್ಲ ಮಾಹಿತಿಗಳನ್ನು ಬೆರಳ ತುದಿಯಲ್ಲಿ ಇಟ್ಟುಕೊಳ್ಳಿ

  ಕೆಲಸದಲ್ಲಿ ಸಂಬಳ ಹೆಚ್ಚಳ ಕುರಿತು ಮಾತುಕತೆಗೆ ಮುಂದಾಗುವ ಮುನ್ನ ಸೂಕ್ತ ತಯಾರಿ ಅವಶ್ಯ. ಯಾವ ಕಾರಣಗಳಿಗಾಗಿ ನಿಮಗೆ ಕಂಪನಿ ಸಂಬಳ ಹೆಚ್ಚಿಸಬೇಕು ಎಂಬ ಬಗ್ಗೆ ನಿಮಗೆ ನೀವೆ ಪ್ರಶ್ನೆ ಕೇಳಿಕೊಂಡು ಅದಕ್ಕೆ ಉತ್ತರ ಪಡೆದುಕೊಳ್ಳಿ. ನಿಮ್ಮ ಉತ್ತರಗಳನ್ನು ಬರೆದಿಟ್ಟುಕೊಂಡು ಒಂದೆರಡು ಬಾರಿ ಅವುಗಳ ಬಗ್ಗೆ ನಿಮ್ಮಷ್ಟಕ್ಕೆ ನೀವೆ ರಿಹರ್ಸಲ್ ಮಾಡಿಕೊಂಡು ಎಲ್ಲ ಸಂದರ್ಭಗಳನ್ನು ಎದುರಿಸಲು ಸಿದ್ಧರಾಗಿ. ಕಂಪನಿಗಾಗಿ ನೀವು ಮಾಡಿದ ಸಾಧನೆಗಳು, ನಿಮ್ಮ ಜವಾಬ್ದಾರಿಯ ವಿಸ್ತರಣೆಯಾಗಿದ್ದರೆ ಅದರ ಬಗ್ಗೆ, ಜವಾಬ್ದಾರಿಗಳನ್ನು ಹೊರತು ಪಡಿಸಿ ಇನ್ನೇನಾದರೂ ವಿಶೇಷವಾದದ್ದನ್ನು ಸಾಧಿಸಿದ್ದರೆ ಅದರ ಮಾಹಿತಿ, ನೀವು ಮುನ್ನಡೆಸುತ್ತಿರುವ ಕಂಪನಿ ಪ್ರಾಜೆಕ್ಟ್‌ಗಳು ಹಾಗೂ ನೀವು ಇನ್ನೂ ಏನಾದರೂ ಹೆಚ್ಚಿನ ಜವಾಬ್ದಾರಿಯನ್ನು ನಿಭಾಯಿಸಲು ಆಸಕ್ತಿ ಹೊಂದಿದ್ದರೆ ಆ ಎಲ್ಲ ವಿಷಯಗಳನ್ನು ನೋಟ್ ಮಾಡಿ ಸಂದರ್ಭ ಬಂದರೆ ಎಲ್ಲವನ್ನೂ ಹೇಳಲು ರೆಡಿಯಾಗಿ. ಅಲ್ಲದೆ ನೀವು ಮಾಡಿಕೊಂಡ ನೋಟ್ಸ್ ಒಂದು ಪ್ರಿಂಟ ಔಟ್ ತೆಗೆದಿಟ್ಟುಕೊಂಡರೂ ಆದೀತು. ಅವಶ್ಯಕತೆ ಕಂಡಲ್ಲಿ ಬಾಸ್‌ಗೆ ಇದರ ಒಂದು ಪ್ರತಿಯನ್ನು ನೀಡಬಹುದು.

  5. ಆತ್ಮವಿಶ್ವಾಸದಿಂದ ಮಾತನಾಡಿ

  ಸಂಬಳ ಹೆಚ್ಚಳದ ಬಗ್ಗೆ ತೀರಾ ದೈನ್ಯತೆಯಿಂದ ಬೇಡಿಕೊಳ್ಳುವುದಾಗಲಿ ಅಥವಾ ನಕಾರಾತ್ಮಕ ಭಾವನೆಯಿಂದ ಮಾತನಾಡುವುದಾಗಲಿ ಬೇಡ. ನಿಮಗೆ ಸಂಬಳ ನೀಡುವ ಮೂಲಕ ಕಂಪನಿ ನಿಮಗೆ ಯಾವುದೇ ಉಪಕಾರ ಮಾಡುತ್ತಿಲ್ಲ. ನಿಮ್ಮ ಪ್ರತಿಭೆಯನ್ನು ಬಳಸಿ ಕಂಪನಿಯ ಏಳಿಗೆಗೆ ನಿಮ್ಮ ಕೆಲಸವನ್ನು ಮಾಡುತ್ತಿರುವಿರಿ ಎಂಬುದು ಗಮನದಲ್ಲಿರಲಿ. ನನಗೆ ಸಂಬಳ ಹೆಚ್ಚಾಗಬೇಕೆಂದು ನಿಮಗೆ ಅನಿಸುವುದಿಲ್ಲವಾ? ಎಂದು ಕೇಳುವ ಬದಲು ನನಗೆ ಇನ್ನೂ ಹೆಚ್ಚಿನ ಸಂಬಳ ಪಡೆಯುವ ಅರ್ಹತೆ ಇದೆ. ಅದಕ್ಕೆ ಸೂಕ್ತ ಕಾರಣಗಳೂ ಇವೆ ಎಂದು ಆತ್ಮವಿಶ್ವಾಸದಿಂದ ಹೇಳಿ.

   

  6. ಪ್ರಾಕ್ಟೀಸ್, ಪ್ರಾಕ್ಟೀಸ್ ಹಾಗೂ ಪ್ರಾಕ್ಟೀಸ್

  ನೀವು ಹೇಳಬೇಕೆಂದುಕೊಂಡಿರುವುದನ್ನು ಬರೆದುಕೊಂಡು ಅದನ್ನು ಅನೇಕ ಬಾರಿ ಜೋರಾಗಿ ಓದಿ ಹೇಳಿ. ನಿಮ್ಮ ಗೆಳೆಯರು ಹಾಗೂ ಆತ್ಮೀಯರ ಸಹಾಯ ಪಡೆದು ಬರೆದುಕೊಂಡಿದ್ದನ್ನು ಅವರ ಎದುರಿಗೆ ಪ್ರಾಕ್ಟೀಸ್ ಮಾಡಿ. ಆದರೆ ಬಾಸ್ ಮುಂದೆ ಮಾತನಾಡುವಾಗ ಭಾಷಣದಂತೆ ಒಂದೇ ಸಮನೆ ಮಾತನಾಡುವುದು ಬೇಕಿಲ್ಲ. ನಿಮ್ಮ ತಯಾರಿ ಕೇವಲ ಒಂದು ಅಡಿಪಾಯ ಮಾತ್ರ. ಸಮಯ ಸಂದರ್ಭಕ್ಕೆ ತಕ್ಕಂತೆ ಸರಿಯಾಗಿ ವಿಷಯಗಳನ್ನು ಪ್ರಸ್ತಾಪ ಮಾಡಬೇಕಾಗುತ್ತದೆ.

  7. ಒಂದು ನಿರ್ದಿಷ್ಟ ಅಂಕಿಯ ಸಂಬಳಕ್ಕೆ ಬೇಡಿಕೆ ಇಡಿ

  ಸಾಮಾನ್ಯವಾಗಿ ನೀವು ಸಂಬಳ ಹೆಚ್ಚಳ ಕೇಳಿದಾಗ ಎಷ್ಟು ಹೆಚ್ಚಿಸಬೇಕು ಎಂದು ನಿಮ್ಮ ಬಾಸ್ ಕೇಳಬಹುದು. ಆದರೆ ಹುಷಾರ್.. ಇದೊಂದು ತಂತ್ರಗಾರಿಕೆಯ ಭಾಗವಾಗಿರಬಹುದು. ಕಂಪನಿ ನಿಮ್ಮ ಸಂಬಳವನ್ನು ಎಷ್ಟು ಹೆಚ್ಚಿಸಲು ಸಾಧ್ಯ ಅಥವಾ ಹೆಚ್ಚಿಸಲು ಬಯಸುತ್ತದೆ ಎಂಬುದು ಬಾಸ್‌ಗೆ ಚೆನ್ನಾಗಿ ಗೊತ್ತು. ಆದರೆ ನೀವು ಅಥವಾ ಬಾಸ್ ಹೇಳುವ ಮೊದಲ ಅಂಕಿಯೇ ಚೌಕಾಸಿಯ ಮೊದಲ ಮೆಟ್ಟಿಲಾಗುತ್ತದೆ ಎಂಬುದು ಗೊತ್ತಿರಲಿ.

   

  8. ಮುಂದಿನ ನಡೆಯನ್ನು ಮೊದಲೇ ನಿರ್ಧರಿಸಿಟ್ಟುಕೊಳ್ಳಿ

  ಒಂದೇ ಒಂದು ರೂಪಾಯಿ ಸಂಬಳ ಹೆಚ್ಚಿಸಲು ಸಾಧ್ಯವೇ ಇಲ್ಲ ಎಂದು ನಿಮ್ಮ ಬಾಸ್ ಹೇಳಿದಲ್ಲಿ ನೀವು ಮುಂದೆ ಏನು ಮಾಡುವಿರಿ? ಇದಕ್ಕೆ ಮರುಮಾತಾಡದೆ ಆಯ್ತು ಬಿಡಿ ಎಂದು ಹೇಳಿ ಎದ್ದು ಬಂದಲ್ಲಿ ನೀವು ಸುಖಾಸುಮ್ಮನೆ ನಾಟಕ ಮಾಡುತ್ತಿದ್ದಿರಿ ಎಂದು ಬಾಸ್ ತಿಳಿದುಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ನಿಮ್ಮನ್ನು ಕಾಲಕಸವಾಗಿ ಕಡೆಗಣಿಸಿ ಯಾವುದೇ ವಿಷಯದಲ್ಲಿಯೂ ಗಂಭೀರವಾಗಿ ಪರಿಗಣಿಸದಿರುವ ಸಾಧ್ಯತೆಗಳಿವೆ. ಹೀಗಾಗಿ 'ನೋ' ಎಂಬುದನ್ನು ಒಪ್ಪಿಕೊಂಡು ಮುಂದುವರೆಯಬೇಕಾ ಅಥವಾ ಕೆಲಸ ತೊರೆದು ಬೇರೆ ಕೆಲಸ ಹುಡುಕಬೇಕಾ ಎಂಬುದನ್ನು ನಿರ್ಧರಿಸಿಟ್ಟುಕೊಳ್ಳಿ. ಆದರೆ ಕೆಲಸದಲ್ಲಿ ಮುಂದುವರೆಯುವುದೇ ಆದಲ್ಲಿ ಬಾಸ್‌ನೊಂದಿಗೆ ನಿಮ್ಮ ಮುಂದಿನ ಮೀಟಿಂಗ್ ಯಾವಾಗ ಎಂಬುದನ್ನು ಸಹ ಮಾತನಾಡಿ.

  9. ಭರವಸೆಗಳನ್ನು ಲಿಖಿತ ರೂಪದಲ್ಲಿ ಪಡೆದುಕೊಳ್ಳಿ

  ಮೀಟಿಂಗ್‌ನಲ್ಲಿ ಹೇಳಲಾಗುವ ಬಾಯಿ ಮಾತಿನ ಭರವಸೆಗಳು ಯಾವುದೇ ಉಪಯೋಗಕ್ಕೆ ಬಾರವು. ಸಂಬಳ ಹೆಚ್ಚಳಕ್ಕೆ ಒಪ್ಪಿಗೆ ಸಿಕ್ಕಿದ್ದೇ ಆದಲ್ಲಿ ಅದರ ಬಗ್ಗೆ ಲಿಖಿತವಾಗಿ ದಾಖಲೆ ಪಡೆದುಕೊಳ್ಳಿ. ಕಂಪನಿಯಿಂದ ಅಧಿಕೃತ ಪತ್ರ ಸಿಗುವವರೆಗೂ ಕನಿಷ್ಠ ಒಂದು ಇಮೇಲ್ ಮೂಲಕವಾದರೂ ಲಿಖಿತ ದಾಖಲೆ ಪಡೆಯಲು ಯತ್ನಿಸಿ.

  10. ಕೃತಜ್ಞತೆ ಹೇಳಲು ಮರೆಯಬೇಡಿ

  ಒಂದೊಮ್ಮೆ ನಿಮ್ಮ ಬಾಸ್ ನಿಮ್ಮ ಸ್ಯಾಲರಿ ಹೆಚ್ಚಿಸಿದಲ್ಲಿ ಅವರಿಗೊಂದು ಮನಃಪೂರ್ವಕ ಥ್ಯಾಂಕ್ಸ್ ಹೇಳಲು ಮರೆಯಬೇಡಿ. ಹಾಗೆಯೇ ಹೆಚ್ಚಿಸಿದ ಸಂಬಳಕ್ಕೆ ತಕ್ಕಂತೆ ಕಂಪನಿಗಾಗಿ ಇನ್ನೂ ಹೆಚ್ಚು ಶ್ರಮಿಸುವ ಬಗ್ಗೆ ಬಾಸ್‌ಗೆ ಭರವಸೆ ಮೂಡಿಸಿ.

   

  ಕೊನೆ ಮಾತು

  ಉದ್ಯೋಗದಲ್ಲಿ ಸ್ಯಾಲರಿ ಹೆಚ್ಚಿಸಿಕೊಳ್ಳುವುದು ನೀವಂದುಕೊಂಡಷ್ಟು ಕಷ್ಟದ ವಿಷಯವೇನಲ್ಲ. ನಿಮ್ಮ ಅರ್ಹತೆಯ ಬಗ್ಗೆ ನಿಮಗೆ ಭರವಸೆ ಇದ್ದಲ್ಲಿ ಹಾಗೂ ಇದನ್ನು ನಿಮ್ಮ ಬಾಸ್‌ಗೆ ಸರಿಯಾಗಿ ಮನವರಿಕೆ ಮಾಡಿಕೊಟ್ಟಲ್ಲಿ ಸಂಬಳ ಬಡ್ತಿ ಪಡೆಯುವ ಪ್ರಕ್ರಿಯೆ ಸುಸೂತ್ರವಾಗಿ ನೆರವೇರುತ್ತದೆ.

  Read more about: salary job money savings
  English summary

  10 smart ways to get a good pay raise at your current job

  If you want to get more than the standard 5% to 10% annual increment given to most company employees, you will need to take matters into your own hands.
  Story first published: Saturday, February 9, 2019, 10:33 [IST]
  Company Search
  Enter the first few characters of the company's name or the NSE symbol or BSE code and click 'Go'

  Find IFSC

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more