2020ನೇ ಇಸವಿಯಲ್ಲಿ ಕೊರೊನಾ ಬಿಕ್ಕಟ್ಟು ಕಲಿಸಿದ 5 ಪಾಠಗಳು
ಶತಮಾನದಲ್ಲಿ ಒಮ್ಮೆ ಮಾತ್ರ ಬರಬಹುದು ಎಂದುಕೊಳ್ಳಬಹುದಾದ ಆರೋಗ್ಯ ಬಿಕ್ಕಟ್ಟು ಎದುರಾದ ವರ್ಷ 2020ನೇ ಇಸವಿ. ಇಡೀ ವಿಶ್ವ ಆ ಸಮಸ್ಯೆಯನ್ನು ಎದುರಿಸಿದೆ. ಕೋವಿಡ್- 19ನಿಂದಾಗಿ ಮನುಷ್ಯರ ಮೂಲ ನಡವಳಿಕೆಗಳಾದ ಸಹ ಭೋಜನ, ಹಸ್ತ ಲಾಘವ ಸೇರಿದಂತೆ ವಿವಿಧ ವಿಚಾರಗಳಲ್ಲಿ ಬದಲಾವಣೆ ಆಗಿಹೋಗಿದೆ.
ಕಡಿಮೆ ಶ್ರಮದಲ್ಲಿ ಹೆಚ್ಚು ಶ್ರೀಮಂತರಾಗಲು 5 ಮಾರ್ಗಗಳು
ತುಂಬ ಇಷ್ಟಪಟ್ಟವರಿಂದಲೇ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ಎದುರಿಸುವಂತಾಗಿದೆ. ಇವೆಲ್ಲ ಒಂದು ಕಡೆಯಾದರೆ, ಹಣಕಾಸು ವಿಚಾರದಲ್ಲಿ ಏನೇನು ಬದಲಾವಣೆ ಆಗಿದೆ ಹಾಗೂ ತೆಗೆದುಕೊಳ್ಳಬೇಕಾದ ಮುಂಜಾಗ್ರತೆಗಳೇನು ಅಂತಲೂ ಪರ್ಸನಲ್ ಫೈನಾನ್ಸ್ ಗೆ ಸಂಬಂಧಿಸಿದ 5 ಪಾಠಗಳು ಅತಿ ಮುಖ್ಯವಾಗಿದ್ದು, ಅವುಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.

ವಿವಿಧ ಇನ್ಷೂರೆನ್ಸ್ ಗಳು ಬೇಕು
ಕೋವಿಡ್ 19ರ ಜತೆಗೆ ಸೈಕ್ಲೋನ್, ಪ್ರವಾಹದಂಥದ್ದನ್ನು ಭಾರತ ಅಷ್ಟೇ ಅಲ್ಲ, ವಿಶ್ವದಾದ್ಯಂತ ಎದುರಿಸಲಾಗಿದೆ. ಆದ್ದರಿಂದ 2020ನೇ ಇಸವಿ ಕಲಿಸಿದ ಪಾಠಗಳೇನು ಅಂದರೆ:
* ಅಗತ್ಯ ಪ್ರಮಾಣದ ಆರೋಗ್ಯ ವಿಮೆ ಇರಬೇಕು. ಏಕೆಂದರೆ, ದೊಡ್ಡ ಸಂಖ್ಯೆಯಲ್ಲಿ ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಉದ್ಯೋಗದಾತರು ಅಥವಾ ಕಂಪೆನಿಯಿಂದ ಒದಗಿಸುವ ಆರೋಗ್ಯ ವಿಮೆ ನೆಚ್ಚಿಕೊಂಡು ಇರಲು ಸಾಧ್ಯವಿಲ್ಲ. ಕೆಲಸ ಕಳೆದುಕೊಂಡಲ್ಲಿ ಆರೋಗ್ಯ ವಿಮೆ ಇಲ್ಲದಂತಾಗುತ್ತದೆ.
* ಇಡೀ ಕುಟುಂಬಕ್ಕೆ ಆರೋಗ್ಯ ವಿಮೆ ಕವರ್ ಇದೆಯಾ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ.
* ಇನ್ನು ವಾಹನಗಳಿಗೆ ಥರ್ಡ್ ಪಾರ್ಟಿ ಇನ್ಷೂರೆನ್ಸ್ ಇದ್ದರಷ್ಟೇ ಸಾಲದು. ಪ್ರವಾಹ ಮತ್ತು ಸೈಕ್ಲೋನ್ ಗಳಿಂದ ಆಗಬಹುದಾದ ಹಾನಿಗೂ ಇನ್ಷೂರೆನ್ಸ್ ಮಾಡಿಸಬೇಕು ಎಂಬ ಅಗತ್ಯ ಕಂಡುಬಂದಿದೆ.
* ಮನೆ, ವ್ಯಾಪಾರ- ವ್ಯವಹಾರದ ಸ್ಥಳಗಳಲ್ಲಿ ಪ್ರಾಕೃತಿಕ ವಿಕೋಪ ಅಥವಾ ಬೆಂಕಿ ಅವಘಡಗಳು ಸಂಭವಿಸಿದಲ್ಲಿ ಅದಕ್ಕೂ ವಿಮೆ ಮಾಡಿಸುವ ಅಗತ್ಯ ಇದೆ.

ತುರ್ತು ನಿಧಿ
ಕೊರೊನಾ ಬಿಕ್ಕಟ್ಟು ಉತ್ತುಂಗದಲ್ಲಿ ಇರುವಾಗ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವುದು, ಚಿಕಿತ್ಸೆ ಪಡೆಯುವುದು ಪರಮ ದುಬಾರಿ ಆಗಿದೆ. ಕುಟುಂಬ ಸದಸ್ಯರ ಜೀವ ಉಳಿಸಿಕೊಳ್ಳುವುದೋ ಅಥವಾ ಭವಿಷ್ಯದ ಹಣಕಾಸಿನ ಅಗತ್ಯವನ್ನು ಕಾಪಾಡಿಕೊಳ್ಳುವುದೋ ಎಂಬ ಗೊಂದಲದಲ್ಲಿ ಬಹುತೇಕರಿದ್ದಾರೆ. ಆರೋಗ್ಯ ಬಿಕ್ಕಟ್ಟು ಒಂದು ಕಡೆಯಾದರೆ, ಮತ್ತೊಂದು ಕಡೆ ನಿರುದ್ಯೋಗದ ಸಮಸ್ಯೆ. ಇಂಥ ಅನಿರೀಕ್ಷಿತ ಸಂದರ್ಭದಲ್ಲೇ ಅಗತ್ಯ ಪ್ರಮಾಣದ ತುರ್ತು ನಿಧಿಯ ಪ್ರಾಮುಖ್ಯದ ಕಡೆ ಹೆಚ್ಚಿನ ಲಕ್ಷ್ಯ ವಹಿಸುವಂತೆ ಮಾಡಿದೆ. ಈ ಹಣವು ನಗದು ರೂಪದಲ್ಲಿ ಇರಬೇಕು. ಸುಲಭವಾಗಿ ಕೈಗೆ ಸಿಗುವಂತಿರಬೇಕು. ಆದ್ದರಿಂದ ಎಲ್ಲಾದರೂ ಹೂಡಿಕೆ ಮಾಡಿರುವ ಬದಲಿಗೆ ಉಳಿತಾಯ ಖಾತೆಯಲ್ಲಿ ಹಣ ಇರಿಸಿಕೊಂಡಿರುವುದು ಅತ್ಯುತ್ತಮ.

ಅನಿಶ್ಚಿತ ಭವಿಷ್ಯದ ಸಲುವಾಗಿ ಹಣ ಉಳಿತಾಯ
ಒಂದು ಬಜೆಟ್ ಹಾಕಿಕೊಂಡು, ಅಷ್ಟರೊಳಗೆ ಬದುಕುವುದನ್ನು ರೂಢಿಸಿಕೊಳ್ಳಬೇಕು. ಆ ಮೂಲಕ ಆರ್ಥಿಕವಾಗಿ ಸ್ವತಂತ್ರವಾಗಿರಬೇಕು ಎಂಬುದು ಈಗಿನ ಸ್ಥಿತಿಯಲ್ಲಿ ಕಲಿತ ಪಾಠ. ಕೆಲವರಿಗೆ ಉದ್ಯೋಗ ಹೋಗಿದೆ. ಆದರೆ ಇತರರು ಉದ್ಯೋಗ ಕಳೆದುಕೊಂಡ ವ್ಯಕ್ತಿಗಳನ್ನೇ ತಾವು ದೂರ ಮಾಡಿಕೊಂಡು ಬಿಡ್ತೀವೇನೋ ಎಂಬ ಆತಂಕದಲ್ಲಿ ಇದ್ದಾರೆ. ಕೆಲವು ಕಂಪೆನಿಗಳು ವೇತನ ಕಡಿತ ಮಾಡಿದ್ದಾರೆ, ವೇತನ ಹೆಚ್ಚಳ ಮುಂದೂಡಿದ್ದಾರೆ. ಅಷ್ಟೇ ಅಲ್ಲ, ಸಮಯಕ್ಕೆ ಸರಿಯಾಗಿ ಸಂಬಳವನ್ನೂ ನೀಡುತ್ತಿಲ್ಲ. ಕೊರೊನಾ ಬಿಕ್ಕಟ್ಟು ಕಲಿಸಿರುವ ಮತ್ತೊಂದು ಪಾಠ ಅಂದರೆ, ಮನೆ ಕೆಲಸಕ್ಕೂ ಇನ್ನೊಬ್ಬರ ಸಹಾಯ ತೆಗೆದುಕೊಳ್ಳದೆ ಬದುಕಬೇಕು ಎಂಬ ಸಂಗತಿಯನ್ನು. ಅನಗತ್ಯ ಖರ್ಚು ಮಾಡದೆ, ಬಜೆಟ್ ಹಾಕಿಕೊಂಡು ಅದರ ಪ್ರಕಾರ ಮುನ್ನಡೆಯುವುದನ್ನು ತಿಳಿಸಿಕೊಟ್ಟಿದೆ.

ಅನಗತ್ಯ ಸಾಲ ಮಾಡಬಾರದು
ಯಾವುದೇ ಅನಗತ್ಯ ಸಾಲಗಳನ್ನು ಮಾಡಬಾರದು. ಅದರಲ್ಲೂ ಕ್ರೆಡಿಟ್ ಕಾರ್ಡ್ ಬಿಲ್ ಅಥವಾ ಪರ್ಸನಲ್ ಲೋನ್ ಗಳಂಥ ಆರ್ಥಿಕ ಹೊರೆ ಮೈಮೇಲೆ ಎಳೆದುಕೊಂಡಿದ್ದಲ್ಲಿ ಕೊರೊನಾದಿಂದ ಎದುರಾಗಿರುವ ಆರ್ಥಿಕ ಹಿಂಜರಿತದಿಂದ ಇನ್ನಷ್ಟು ಸಮಸ್ಯೆ ಎದುರಾಗಿರುತ್ತದೆ. ಒಂದು ವೇಳೆ ಕೆಲಸವನ್ನು ಕಳೆದುಕೊಂಡಲ್ಲಿ ಸಾಲದ ಮೇಲಿನ ಬಡ್ಡಿ ಬೆಳೆಯುತ್ತಾ ಹೋಗುತ್ತದೆ. ಮತ್ತೊಂದು ಕೆಲಸ ಸಿಗುವ ತನಕ ಸಾಲಗಳನ್ನು ತೀರಿಸಿ, ಮನೆಗೆ ಅಗತ್ಯ ಇರುವ ದಿನಸಿ- ಖರ್ಚುಗಳನ್ನು ನಿಭಾಯಿಸುವುದಕ್ಕೆ ಹಣ ಹೊಂದಿಸುವ ಅಗತ್ಯವನ್ನು ತಿಳಿಸಿಕೊಟ್ಟಿದೆ 2020.

ವಿವಿಧ ಆಸ್ತಿಗಳಲ್ಲಿ ಹೂಡಿಕೆ
ಹಣವನ್ನು ಒಂದೇ ಕಡೆಗೆ ಹೂಡಿಕೆ ಮಾಡಬಾರದು ಎಂಬುದು ಅನಾದಿ ಕಾಲದ ಹಣಕಾಸಿನ ನಿರ್ವಹಣೆ ಪಾಠ. ಷೇರು ಮಾರ್ಕೆಟ್, ರಿಯಲ್ ಎಸ್ಟೇಟ್, ಚಿನ್ನ ಅಥವಾ ಇನ್ಯಾವುದೇ ಹೂಡಿಕೆಯಾದರೂ ಒಂದರಲ್ಲೇ ಹೂಡಿಕೆ ಮಾಡುವುದು ಅಪಾಯಕಾರಿ ಎಂಬುದು ಕೊರೊನಾ ಕಲಿಸಿರುವ ಮತ್ತೊಂದು ಪಾಠ. ನೆಲ ಕಚ್ಚಿದ್ದ ಷೇರು ಪೇಟೆ ನೋಡನೋಡುತ್ತಲೇ ಗಗನಕ್ಕೆ ಚಿಮ್ಮಿತು. ಆಕಾಶದಲ್ಲಿದ್ದ ಚಿನ್ನ ಬೆಲೆಯು ಏಕಾಏಕಿ ಇಳಿಯಿತು. ರಿಯಲ್ ಎಸ್ಟೇಟ್ ನಲ್ಲಿ ಚಲನೆಯೇ ಇಲ್ಲದಂತಾಯಿತು. ಆದ್ದರಿಂದ ಉಳಿತಾಯದ ಹಣವನ್ನು ಒಂದೇ ಕಡೆ ಹೂಡಬಾರದು ಎಂಬುದು ಇದರಿಂದ ಮತ್ತೊಮ್ಮೆ ತಿಳಿದಂತಾಗಿದೆ.