ಯುಎಸ್ ಜಿಡಿಪಿ ಡೇಟಾ ಬಳಿಕ ಚಿನ್ನದ ದರ ಏರಿಕೆ: ಖರೀದಿ ಮಾಡಬಹುದೇ?
ಸತತ ಎರಡನೇ ತ್ರೈಮಾಸಿಕದಲ್ಲಿ ಯುಎಸ್ ಒಟ್ಟು ದೇಶೀಯ ಉತ್ಪನ್ನ (GDP) ಅಂಕಿಅಂಶಗಳಲ್ಲಿನ ಕುಸಿತದ ಕಾರಣದಿಂದಾಗಿ ಚಿನ್ನದ ದರವು ಸತತ ಎರಡನೇ ವಾರ ಏರಿಕೆ ಹಾದಿಯಲ್ಲೇ ಸಾಗಿದೆ. ಹಳದಿ ಲೋಹದ ಆಗಸ್ಟ್ ಭವಿಷ್ಯದ ಒಪ್ಪಂದವು ಶುಕ್ರವಾರದಂದು 10 ಗ್ರಾಂಗೆ ರೂಪಾಯಿ 126 ರಂತೆ ರೂಪಾಯಿ 51,430 ಮಟ್ಟದಲ್ಲಿ ಕೊನೆಯಾಗಿದೆ. ಆದರೆ ಸ್ಪಾಟ್ ಗೋಲ್ಡ್ ಶೇಕಡ 0.52 ರಷ್ಟು ಹೆಚ್ಚಾಗಿ ಪ್ರತಿ ಔನ್ಸ್‌ಗೆ 1765 ಡಾಲರ್‌ಗೆ ವಹಿವಾಟು ಕೊನೆಯಾಗಿದೆ.
ಸರಕು ಮಾರುಕಟ್ಟೆ ತಜ್ಞರ ಪ್ರಕಾರ, ಯುಎಸ್ ಫೆಡ್ ಬಡ್ಡಿದರ ಏರಿಕೆಯನ್ನು ಮಾಡುವ ನಿರ್ಧಾರದಿಂದ ಹಿಂದಕ್ಕೆ ಸರಿದಿದೆ. ಈ ಬೆನ್ನಲ್ಲೇ ಯುಎಸ್ ಜಿಡಿಪಿ ಎರಡನೇ ಸತತ ತ್ರೈಮಾಸಿಕದಲ್ಲಿ ಕುಸಿತವಾಗಿದೆ. ತನ್ನ 20 ವರ್ಷಗಳ ಗರಿಷ್ಠ 109.30 ಡಾಲರ್ ಮಟ್ಟದಿಂದ ಕೆಳಕ್ಕೆ ಇಳಿದಿದೆ. ಇದಾದ ಬೆನ್ನಲ್ಲೇ ಚಿನ್ನದ ಬೆಲೆಯು ಏರಿಕೆಯಾಗಿದೆ.
2022ರ 2ನೇ ತ್ರೈಮಾಸಿಕದ ಕುಸಿತ ಬೆನ್ನಲ್ಲೂ ವರ್ಷದ ಮೊದಲಾರ್ಧದ ಚಿನ್ನದ ಬೇಡಿಕೆ ಹೆಚ್ಚಳ
ಹೂಡಿಕೆದಾರರು ಮತ್ತೊಮ್ಮೆ ಚಿನ್ನವನ್ನು 'ಸುರಕ್ಷಿತ ಸ್ವರ್ಗ' ಎಂದು ಪರಿಗಣಿಸಲು ಆರಂಭ ಮಾಡಿದ್ದಾರೆ. ಹಳದಿ ಲೋಹದ ಒಟ್ಟಾರೆ ಬೆಳವಣಿಗೆಯು ಉತ್ತಮವಾಗಿಯೇ ಉಳಿಯುವ ನಿರೀಕ್ಷೆ ಇದೆ. ಅಲ್ಪಾವಧಿಯಲ್ಲಿ, ಸ್ಪಾಟ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು 1800 ಡಾಲರ್ ಮಟ್ಟಕ್ಕೆ ಏರಿಕೆಯಾಗಬಹುದು. ಆದರೆ ಎಂಸಿಎಕ್ಸ್‌ನಲ್ಲಿ ರೂಪಾಯಿ 52,300 ಮಟ್ಟಕ್ಕೆ ಏರುವ ನಿರೀಕ್ಷೆ ಇದೆ ಎಂಬುವುದು ತಜ್ಞರ ಅಭಿಪ್ರಾಯವಾಗಿದೆ. ಈ ನಡುವೆ ನಾವು ಚಿನ್ನವನ್ನು ಖರೀದಿ ಮಾಡಬಹುದೇ?, ಚಿನ್ನದ ಮೇಲೆ ಹೂಡಿಕೆಯನ್ನು ಮಾಡಬಹುದೇ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

ಬಡ್ಡಿದರ ಹೆಚ್ಚಳದ ಬಗ್ಗೆ ಯುಎಸ್ ಫೆಡ್‌ನ ಸೌಮ್ಯ ನಿಲುವು
ಚಿನ್ನದ ಬೆಲೆಯು ಮತ್ತೆ ಏರಿಕೆಯ ಬಗ್ಗೆ ಮಾತನಾಡಿದ ರೆಲಿಗೇರ್ ಬ್ರೋಕಿಂಗ್‌ನ ಸರಕು ಮತ್ತು ಕರೆನ್ಸಿ ರಿಸರ್ಚ್ ಉಪಾಧ್ಯಕ್ಷೆ ಸುಗಂಧಾ ಸಚ್‌ದೇವ, "ಒಂದು ವಾರದಲ್ಲಿ ಚಿನ್ನದ ಬೆಲೆಗಳು ಸುಮಾರು ಶೇಕಡ 2.39ರಷ್ಟು ಹೆಚ್ಚಾಗಿದೆ. ದರ ಏರಿಕೆಯ ಕುರಿತು ಯುಎಸ್ ಫೆಡ್‌ನ ಸೌಮ್ಯವಾದ ನಿಲುವಿನ ನಡುವೆ ಹಿಂದಿನ ವಾರದಂತೆ ಈ ವಾರವು ಬೆಲೆ ಅಧಿಕವಾಗುತ್ತಿದೆ. ಯುಎಸ್ ಸೆಂಟ್ರಲ್ ಬ್ಯಾಂಕ್ ಹಣದುಬ್ಬರದ ಹಿನ್ನೆಲೆ ಸತತವಾಗಿ ಎರಡನೇ ತಿಂಗಳು ದರ ಹೆಚ್ಚಳ ಮಾಡಿತ್ತು. ಆದರೂ ಫೆಡ್ ಆರ್ಥಿಕ ಚಟುವಟಿಕೆಯನ್ನು ಮೃದುಗೊಳಿಸಲಾಗುವುದು ಎಂದು ಹೇಳಿತ್ತು. ಆದ್ದರಿಂದಾಗಿ ಮತ್ತೆ ಭಾರೀ ದರ ಏರಿಕೆಯ ಆತಂಕ ಕಡಿಮೆಯಾಯಿತು. ಚಿನ್ನದ ಸುರಕ್ಷಿತ ಖರೀದಿಗೆ ಇದು ಪ್ರೇರೇಪಿತವಾಗಿದೆ. ಜೊತೆಗೆ, ಡಾಲರ್ ಸೂಚ್ಯಂಕವು ಸತತ ಎರಡನೇ ವಾರದಲ್ಲಿ ನಷ್ಟವನ್ನು ಅನುಭವಿಸಿದೆ. ಇದು ಚಿನ್ನದ ಬೆಲೆಗೆ ಬೆಂಬಲ ನೀಡಿದೆ," ಎಂದು ಹೇಳಿದ್ದಾರೆ.
ಚಿನ್ನದ ಮೇಲೆ ಹೂಡಿಕೆ ಇಂದಿಗೂ, ಎಂದಿಗೂ ಸುರಕ್ಷಿತ! ಏಕೆ? 5 ಕಾರಣಗಳು

ಯುಎಸ್ ಜಿಡಿಪಿ ಡೇಟಾ
ಯುಎಸ್ ಜಿಡಿಪಿಯು ಎರಡನೇ ತ್ರೈಮಾಸಿಕದಲ್ಲಿ ಶೇಕಡಾ 0.5 ರಷ್ಟು ಏರಿಕೆಯಾಗುವ ನಿರೀಕ್ಷೆ ಇತ್ತು. ಆದರೆ ಶೇಕಡಾ 0.9ರಷ್ಟು ಇಳಿಕೆಯಾದ ಕಾರಣದಿಂದಾಗಿ ಅಮೂಲ್ಯವಾದ ಲೋಹವು ಉತ್ತೇಜನವನ್ನು ಪಡೆದಿದೆ ಎಂದು ರೆಲಿಗೇರ್ ವಿಶ್ಲೇಷಕರು ಹೇಳಿದ್ದಾರೆ. ಇದು ಮೊದಲ ತ್ರೈಮಾಸಿಕದಲ್ಲಿ ಶೇಕಡಾ 1.6ರಷ್ಟು ಕುಸಿದಿದೆ. ಏರುತ್ತಿರುವ ಬೆಲೆಯ ಒತ್ತಡಗಳು ಮತ್ತು ಆರ್ಥಿಕ ಪರಿಸ್ಥಿತಿಗಳ ಬಿಕ್ಕಟ್ಟಿನ ನಡುವೆ ಬೆಳವಣಿಗೆ ವೇಗ ಕುಗ್ಗುತ್ತಿದೆ. ಆರ್ಥಿಕ ಹಿಂಜರಿತವನ್ನು ತಪ್ಪಿಸಲು ಫೆಡ್ ಭಾರೀ ದರ ಹೆಚ್ಚಳದ ನಿರ್ಧಾರದಿಂದ ಹಿಂದೆ ಸರಿಯಲಿದೆ ಎಂಬ ಊಹಾಪೋಹಗಳು ಕೂಡಾ ಇದೆ.

ಡಾಲರ್ ಸೂಚ್ಯಂಕದಲ್ಲಿ ಇಳಿಕೆ
ಈ ಬಗ್ಗೆ ಮಾಹಿತಿ ನೀಡಿದ IIFL ಸೆಕ್ಯುರಿಟೀಸ್‌ನ ಉಪಾಧ್ಯಕ್ಷರು ಅನುಜ್ ಗುಪ್ತಾ, "ಎರಡನೇ ನೇರ ತ್ರೈಮಾಸಿಕದಲ್ಲಿ ಯುಎಸ್ ಜಿಡಪಿ ಕುಸಿತ, ಯುಎಸ್ ಫೆಡ್ ದರದಲ್ಲಿನ ಸೌಮ್ಯ ನಿಲುವು ಪ್ರಾಫಿಟ್ ಬುಕ್ಕಿಂಗ್ ಅನ್ನು ಪ್ರಚೋದಿಸಿದೆ. ವಿಶೇಷವಾಗಿ ಡಾಲರ್ ವಿಚಾರದಲ್ಲಿ ಈ ರೀತಿಯಾಗಿದೆ. ಡಾಲರ್ ಸೂಚ್ಯಂಕವು 20 ವರ್ಷಗಳ ಗರಿಷ್ಠ 109.30 ಮಟ್ಟಗಳಿಂದ ಹದಿನೈದು ದಿನಗಳಲ್ಲಿ 106 ಮಾರ್ಕ್‌ಗಿಂತ ಕೆಳಕ್ಕೆ ಕುಸಿದಿದೆ. ಅಲ್ಪಾವಧಿಯಲ್ಲಿ ಡಾಲರ್ ಸೂಚ್ಯಂಕವು 105 ಮಟ್ಟಕ್ಕಿಂತ ಕೆಳಗಿಳಿಯುವ ನಿರೀಕ್ಷೆಯಿದೆ. ಯುಎಸ್ ಆರ್ಥಿಕ ಹಿಂಜರಿತದ ಭಯ ಮತ್ತು ಯುಎಸ್ ಡಾಲರ್ ವಿರುದ್ಧ ಭಾರತೀಯ ರೂಪಾಯಿ ಬಲಗೊಳ್ಳುವ ಸಾಧ್ಯತೆಯಿಂದ ಅಲ್ಪಾವಧಿಯಲ್ಲಿ ಚಿನ್ನದ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ," ಎಂದು ತಿಳಿಸಿದ್ದಾರೆ.

ಚಿನ್ನದ ಬೆಲೆಯ ದೃಷ್ಟಿಕೋನ
ರೆಲಿಗೇರ್ ಬ್ರೋಕಿಂಗ್‌ನ ಸುಗಂಧಾ ಸಚ್‌ದೇವ ಚಿನ್ನದ ಬೆಲೆಯಲ್ಲನ ಮುಂದಿನ ದೃಷ್ಟಿಕೋನದ ಬಗ್ಗೆ ಮಾತನಾಡುತ್ತಾ, "ಚಿನ್ನವು ಪ್ರತಿ ಔನ್ಸ್‌ಗೆ 1680 ಡಾಲರ್ ಮಟ್ಟದಿಂದ ಕೆಳಕ್ಕೆ ಇಳಿಯುವಲ್ಲಿ ಯಶಸ್ವಿಯಾಗಿದೆ. ಬಲವಾದ ಖರೀದಿ ಆಸಕ್ತಿಯನ್ನು ಗಳಿಸಿದೆ. ಪ್ರತಿ ಔನ್ಸ್‌ಗೆ ಆರಂಭದಲ್ಲಿ 1785 ಡಾಲರ್ ಆಗಿತ್ತು. ನಂತರ ಪ್ರತಿ ಔನ್ಸ್‌ಗೆ 1810 ಡಾಲರ್ ಮಟ್ಟಕ್ಕೆ ಏರಿಕೆಯಾಯಿತು. ಇನ್ನೂ ಕೂಡಾ ಹೆಚ್ಚಳವಾಗುವ ನಿರೀಕ್ಷೆ ಇದೆ. ದೇಶೀಯ ಮಾರುಕಟ್ಟೆಗಳಲ್ಲಿ, ಚಿನ್ನದ ಬೆಲೆ 52,300 ರೂಪಾಯಿಯಿಂದ 52,700 ರೂಪಾಯಿವರೆಗೆ ಏರಿಕೆಯಾಗುವ ಸಾಧ್ಯತೆ ಇದೆ.