ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್) ವಿಥ್‌ಡ್ರಾ ಮಾಡಿದಾಗ ತೆರಿಗೆ ಕಡಿತ ಆಗುತ್ತದೆಯಾ? ಇದು ಎಷ್ಟರ ಮಟ್ಟಿಗೆ ನಿಜ? ನಿಯಮಾವಳಿಗಳು ಏನು ಹೇಳುತ್ತವೆ? ಆ ಬಗ್ಗೆ ಇನ್ನೊಂದಷ್ಟು ಮಾಹಿತಿ ಗೊತ್ತಿದ್ದರೆ ಚೆನ್ನಾಗಿತ್ತು. - ಹೀಗೆ ನಿಮ್ಮನ್ನೂ ಸೇರಿದಂತೆ ಸಾಕಷ್ಟು ಮಂದಿ ಅಂದುಕೊಂಡಿರಬಹುದು. ಅದನ್ನು ತಿಳಿಸುವ ಸಲುವಾಗಿಯೇ ಈ ಲೇಖನವನ್ನು ಸಿದ್ಧಪಡಿಸಲಾಗಿದೆ. ಅಂದ ಹಾಗೆ, ಒಬ್ಬ ಉದ್ಯೋಗಿ 58 ವರ್ಷ ವಯಸ್ಸನ್ನು ತಲುಪಿದಾಗ ಇಪಿಎಫ್ ಖಾತೆ ಪಕ್ವ (ಮೆಚ್ಯೂರ್) ಆಗುತ್ತದೆ. ಇನ್ನು ಒಬ್ಬ ಉದ್ಯೋಗಿ ಸತತವಾಗಿ 60 ದಿನಗಳ ಕಾಲ ನಿರುದ್ಯೋಗಿ ಆದಲ್ಲಿ ಆ ಸನ್ನಿವೇಶದಲ್ಲಿ ಪೂರ್ತಿಯಾಗಿ ಇಪಿಎಫ್ ಖಾತೆಯ ಮೊತ್ತವನ್ನು ಪಾವತಿಸಲಾಗುತ್ತದೆ ಮತ್ತು ಅದು ತೆರಿಗೆಯಿಂದ ಮುಕ್ತವಾಗಿರುತ್ತದೆ.
ಆದರೆ ಉದ್ಯೋಗಿಯು ಉದ್ಯೋಗದಲ್ಲಿ ಇರುವಂತೆಯೇ ಹಾಗೂ ಇಪಿಎಫ್ ಮೆಚ್ಯೂರ್ ಆಗುವ ಮುಂಚೆಯೇ ಮೊತ್ತವನ್ನು ಹಿಂಪಡೆದರೆ ಆಗ ಟ್ಯಾಕ್ಸ್ ಡಿಡಕ್ಟೆಡ್ ಅಟ್ ಸೋರ್ಸ್ (ಟಿಡಿಎಸ್) ಅನ್ವಯಿಸುತ್ತದೆ. ಉದ್ಯೋಗಿಯು ತಿಳಿದುಕೊಳ್ಳಬೇಕಾದ ಟಿಡಿಎಸ್ ಜವಾಬ್ದಾರಿ ಬಗ್ಗೆ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯು (EPFO) ಟ್ವೀಟ್ ಮೂಲಕ ತಿಳಿಸಿದೆ.
ಇಪಿಎಫ್ ಮೇಲಿನ ಟಿಡಿಎಸ್
ಮೊದಲಿಗೆ ಏನಿದು ಟ್ಯಾಕ್ಸ್ ಡಿಡಕ್ಟಡ್ ಅಟ್ ಸೋರ್ಸ್ ಅಂದರೆ ಎಂಬುದನ್ನು ತಿಳಿದುಕೊಳ್ಳಿ. ವೈಯಕ್ತಿಕ ಒಬ್ಬರ ಆದಾಯ ಸೃಷ್ಟಿ ಆಗುವಾಗಲೇ ಸಂಗ್ರಹಿಸುವಂಥ ತೆರಿಗೆಗೆ ಟಿಡಿಎಸ್ ಅಥವಾ ಟ್ಯಾಕ್ಸ್ ಡಿಡಕ್ಟಡ್ ಅಟ್ ಸೋರ್ಸ್ ಎನ್ನಲಾಗುತ್ತದೆ. ತೆರಿಗೆ ಕಟ್ಟುವುದರಿಂದ ತಪ್ಪಿಸಿಕೊಳ್ಳದಿರಲಿ ಎಂಬ ಕಾರಣಕ್ಕೆ ಈ ರೀತಿಯ ತೆರಿಗೆ ಸಂಗ್ರಹ (ಭಾಗಶಃ ಅಥವಾ ಪೂರ್ಣವಾಗಿ) ಪದ್ಧತಿಯನ್ನು ಸರ್ಕಾರದಿಂದ ತರಲಾಗಿದೆ. ಆದಾಯ ಸೃಷ್ಟಿ ಆದಾಗಲೇ ವಸೂಲಿ ಮಾಡಲಾಗುತ್ತದೆ, ನಂತರದ ದಿನಾಂಕದ ತನಕ ಕಾಯುವುದಿಲ್ಲ. ವೇತನ, ಬಡ್ಡಿ, ಕಮಿಷನ್, ಲಾಭಾಂಶ (ಡಿವಿಡೆಂಡ್) ಹೀಗೆ ವಿವಿಧ ಆದಾಯಗಳ ಮೇಲೆ ಟಿಡಿಎಸ್ ವಿಧಿಸಲಾಗುತ್ತದೆ.
ಇಪಿಎಫ್ ಮೇಲೆ ಯಾವಾಗ ಟಿಡಿಎಸ್ ಕಡಿತ ಮಾಡುವುದಿಲ್ಲ?
ಇಪಿಎಫ್‌ಒ ವೆಬ್‌ಸೈಟ್‌ನಲ್ಲಿ ಇರುವ ಪ್ರಕಾರವಾಗಿ ಇಪಿಎಫ್‌ನಲ್ಲಿ ಟಿಡಿಎಸ್ ಕಡಿತಗೊಳಿಸದೇ ಇರುವ ಸನ್ನಿವೇಶಗಳು ಈ ಕೆಳಕಂಡಂತೆ ಇವೆ:
- ಪಿಎಫ್ ಹಣವನ್ನು ಒಂದು ಖಾತೆಯಿಂದ ಇನ್ನೊಂದು ಖಾತೆಗೆ ವರ್ಗಾವಣೆ ಮಾಡಿರಬೇಕು.
- ಸದಸ್ಯರ ಅನಾರೋಗ್ಯದ ಕಾರಣದಿಂದಾಗಿ ಸೇವೆಯನ್ನು ಕೊನೆಗೊಳಿಸಿರಬೇಕು, ವ್ಯಾಪಾರ ಮಾಡುವುದನ್ನು ನಿಲ್ಲಿಸಲು ಉದ್ಯೋಗದಾತರು ನಿರ್ಧಾರ ಮಾಡಿರಬೇಕು, ಯೋಜನೆಯ ಕೊನೆ ಆಗಿರಬೇಕು ಅಥವಾ ಸದಸ್ಯರ ನಿಯಂತ್ರಣಕ್ಕೆ ಮೀರಿದ ಯಾವುದೇ ಕಾರಣ ಇರಬೇಕು.
- ಐದು ವರ್ಷಗಳ ಅವಧಿಯ ನಂತರ ಉದ್ಯೋಗಿ ಪಿಎಫ್ ಅನ್ನು ಹಿಂತೆಗೆದುಕೊಂಡಿರಬೇಕು.
- ಪಿಎಫ್ ಪಾವತಿಯು 50,000 ರೂಪಾಯಿಗಿಂತ ಕಡಿಮೆ ಇರಬೇಕು, ಆದರೆ ಸದಸ್ಯರು 5 ವರ್ಷಗಳಿಗಿಂತ ಕಡಿಮೆ ಸೇವಾವಧಿ ಹೊಂದಿರಬೇಕು.
- 5 ವರ್ಷಕ್ಕಿಂತ ಕಡಿಮೆ ಸೇವೆಯನ್ನು ಹೊಂದಿರುವ ಉದ್ಯೋಗಿ ರೂ.50,000 ಕ್ಕಿಂತ ಹೆಚ್ಚಿನ ಅಥವಾ ಸಮಾನವಾದ ಮೊತ್ತವನ್ನು ಹಿಂಪಡೆದಿರಬೇಕು. ಆದರೆ ಅವರ PAN ಜೊತೆಗೆ ಫಾರ್ಮ್ 15G/15H ಅನ್ನು ಸಲ್ಲಿಸಿರಬೇಕು.
ಟಿಡಿಎಸ್ ಅನ್ನು ಯಾವಾಗ ಕಡಿತಗೊಳಿಸಲಾಗುತ್ತದೆ?
ಇಪಿಎಫ್‌ಒ ವೆಬ್‌ಸೈಟ್‌ನ ಪ್ರಕಾರ, ಇಪಿಎಫ್‌ನಲ್ಲಿ ಟಿಡಿಎಸ್ ಕಡಿತಗೊಳಿಸಲು ಈ ಕೆಳಕಂಡ ಕಾರಣಗಳು ಇವೆ:
ಉದ್ಯೋಗಿಯು 5 ವರ್ಷಗಳಿಗಿಂತ ಕಡಿಮೆ ಸೇವೆಯೊಂದಿಗೆ ರೂ. 50,000 ಕ್ಕಿಂತ ಹೆಚ್ಚು ಅಥವಾ ಸಮಾನವಾದ ಹಣವನ್ನು ಹಿಂಪಡೆದಿರಬೇಕು.
ಅ) ಫಾರ್ಮ್-15G/15H ಅನ್ನು ಸಲ್ಲಿಸದಿದ್ದರೂ PAN ಸಲ್ಲಿಸಿದರೆ ಟಿಡಿಎಸ್ ಅನ್ನು ಶೇ 10ರ ದರದಲ್ಲಿ ಕಡಿತಗೊಳಿಸಲಾಗುತ್ತದೆ.
ಆ) ಉದ್ಯೋಗಿಯು PAN ಸಲ್ಲಿಸಲು ವಿಫಲವಾದರೆ, ಟಿಡಿಎಸ್ ಅನ್ನು ಗರಿಷ್ಠ ಕನಿಷ್ಠ ದರದಲ್ಲಿ (ಶೇ 34.608) ಕಡಿತಗೊಳಿಸಲಾಗುತ್ತದೆ.
ಇಪಿಎಫ್ ಪ್ರಕಾರ ಗಮನಿಸಬೇಕಾದ ಸಂಗತಿಗಳು:
1. ಪಾವತಿ ಸಮಯದಲ್ಲಿ ಟಿಡಿಎಸ್ ಅನ್ನು ಕಡಿತಗೊಳಿಸಲಾಗುತ್ತದೆ.
2. 1961ರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 192Aಗೆ ಅನುಗುಣವಾಗಿ ಟಿಡಿಎಸ್ ಕಡಿತಗೊಳಿಸಲಾಗುತ್ತದೆ.3. ಫಾರ್ಮ್ 15H ಹಿರಿಯ ವ್ಯಕ್ತಿಗಳಿಗೆ (60 ವರ್ಷ ಮತ್ತು ಮೇಲ್ಪಟ್ಟವರಿಗೆ), ಫಾರ್ಮ್ 15G ಯಾವುದೇ ತೆರಿಗೆ ವ್ಯಾಪ್ತಿಯ ಆದಾಯ ಇಲ್ಲದವರಿಗೆ. ಸ್ವಯಂ ಘೋಷಣೆಗಳು, ಫಾರ್ಮ್‌ಗಳು 15G ಮತ್ತು 15H, ನಕಲಿನಲ್ಲಿ ಸ್ವೀಕರಿಸಬಹುದು.4. ಫಾರ್ಮ್ ಸಂಖ್ಯೆ 15G/15H ಮತ್ತು ಫಾರ್ಮ್ ಸಂಖ್ಯೆ 19 ಅನ್ನು ಸಲ್ಲಿಸುವಾಗ ಸದಸ್ಯರು ತಮ್ಮ PAN ಅನ್ನು ಕಡ್ಡಾಯವಾಗಿ ಸೇರಿಸಬೇಕು.

Click it and Unblock the Notifications