ಕೆವೈಸಿ ಅಪ್‌ಡೇಟ್ ಮಾಡಲು ಬ್ಯಾಂಕ್‌ಗೆ ಭೇಟಿ ನೀಡಬೇಕಾಗಿಲ್ಲ: ಆರ್‌ಬಿಐ
ಗ್ರಾಹಕರು ಕೆವೈಸಿ (know your customer) ಅಪ್‌ಡೇಟ್ ಮಾಡಿಕೊಳ್ಳಲು ತಮ್ಮ ಬ್ಯಾಂಕ್ ಕಚೇರಿಗೆ ಭೇಟಿ ನೀಡಬೇಕಾದ ಅವಶ್ಯಕತೆ ಇಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ತಿಳಿಸಿದೆ. ಗ್ರಾಹಕರು ಸರಿಯಾದ ಮಾಹಿತಿಯನ್ನು ಈಗಾಗಲೇ ಸಬ್‌ಮಿಟ್ ಮಾಡಿದ್ದರೆ, ವಿಳಾಸವನ್ನು ಬದಲಾವಣೆ ಮಾಡಿಲ್ಲದಿದ್ದರೆ ಬ್ಯಾಂಕ್‌ನ ಬ್ರಾಂಚ್‌ಗೆ ಭೇಟಿ ನೀಡಿ ಕೆವೈಸಿ ಅಪ್‌ಡೇಟ್ ಮಾಡಬೇಕಾಗಿಲ್ಲ ಎಂದಿದೆ.
ಇದರ ಬದಲಾಗಿ ಗ್ರಾಹಕರು ಇಮೇಲ್, ಫೋನ್, ಎಟಿಎಂ, ನೆಟ್ ಬ್ಯಾಂಕಿಂಗ್ ಅಥವಾ ಪತ್ರದ ಮೂಲಕ ಕೆವೈಸಿ ಅಪ್‌ಡೇಟ್ ಮಾಹಿತಿ ಸಲ್ಲಿಸಬಹುದು. ಗ್ರಾಹಕರಿಗೆ ಕೆವೈಸಿ ಅಪ್‌ಡೇಟ್ ಪ್ರಕ್ರಿಯೆಯು ಕಷ್ಟವಾಗಬಾರದು ಎಂಬ ನಿಟ್ಟಿನಲ್ಲಿ ಆರ್‌ಬಿಐ ಈ ಪರಿಷ್ಕರಣೆಯನ್ನು ಮಾಡಿದೆ.
ಒಂದು ವೇಳೆ ಗ್ರಾಹಕರ ವಿಳಾಸದಲ್ಲಿ ಬದಲಾವಣೆಯಾಗಿದ್ದರೆ, ಗ್ರಾಹಕರು ಬೇರೆ ಬೇರೆ ಮೂಲಗಳಿಂದ ದಾಖಲೆಯನ್ನು ಸಲ್ಲಿಸಬಹುದು. ಬ್ಯಾಂಕ್ ಅದನ್ನು ಎರಡು ತಿಂಗಳಲ್ಲಿ ವೆರಿಫೈ ಮಾಡಲಿದೆ. ಸರಿಯಾದ ದಾಖಲೆಯನ್ನು ಸಲ್ಲಿಸದಿದ್ದರೆ ಬ್ಯಾಂಕ್ ಮತ್ತೊಮ್ಮೆ ಕೆವೈಸಿ ಪ್ರಕ್ರಿಯೆ ಮಾಡಿಸಿಕೊಳ್ಳುವಂತೆ ತಿಳಿಸಿದೆ.

ಮತ್ತೆ ಕೆವೈಸಿ ಯಾವಾಗ ಮಾಡುವುದು?
ಬ್ಯಾಂಕ್‌ನ ವಿಡಿಯೋ ಕಾಲ್ ಪ್ರಕ್ರಿಯೆ ಮೂಲಕ ಗ್ರಾಹಕರು ಕೆವೈಸಿ ಪ್ರಕ್ರಿಯೆಯನ್ನು ಮಾಡಬಹುದು. ಇದಕ್ಕಾಗಿ ಗ್ರಾಹಕರು ತಮ್ಮ ಬ್ಯಾಂಕ್ ಅನ್ನು ಸಂಪರ್ಕ ಮಾಡಬಹುದು. ಬ್ಯಾಂಕ್‌ನಲ್ಲಿ ಇರುವ ದಾಖಲೆಗೂ ಪ್ರಸ್ತುತ ಗ್ರಾಹಕರ ದಾಖಲೆಯ ನಡುವೆ ವ್ಯತ್ಯಾಸಗಳು ಇದ್ದರೆ ಮಾತ್ರ ಮತ್ತೆ ಕೆವೈಸಿಯನ್ನು ಮಾಡುವಂತೆ ಬ್ಯಾಂಕ್‌ಗಳು ತಿಳಿಸುತ್ತದೆ.
ಪ್ರಸ್ತುತ ಎಲ್ಲ ಬ್ಯಾಂಕ್‌ಗಳಲ್ಲಿ ಕೆವೈಸಿ ಪ್ರಕ್ರಿಯೆಯು ಕಡ್ಡಾಯವಾಗಿದೆ. ವಿಮಾ ಸಂಸ್ಥೆಗಳಲ್ಲಿಯೂ ಇದನ್ನು ಮಾಡಲಾಗುತ್ತದೆ. ಇನ್ನು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಸೇರಿದಂತೆ ಬೇರೆ ಬೇರೆ ಯೋಜನೆಗಳಿಗೂ ಈ ಕೆವೈಸಿ ಕಡ್ಡಾಯವಾಗಿದೆ.
ಕೆವೈಸಿ (know your customer) ಎಂದರೇನು?
ಕೆವೈಸಿ ಎಂಬುದು "ನೋ ಯುವರ್ ಕಸ್ಟಮರ್" (ನಿಮ್ಮ ಗ್ರಾಹಕರನ್ನು ಅರಿತುಕೊಳ್ಳಿ) ಎಂಬುದರ ಸಂಕ್ಷಿಪ್ತ ರೂಪವಾಗಿದೆ. ಯಾವುದೇ ಹಣಕಾಸು ಸಂಬಂಧಿತ ಕಾರ್ಯಗಳಿಗೂ ಕೆವೈಸಿ ಕಡ್ಡಾಯವಾಗಿದೆ. ಇದಕ್ಕೆ ಪ್ರಮುಖ ದಾಖಲೆಗಳಾದ ಫೋಟೋ ಐಡಿ (ಉದಾ., ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್) ಮತ್ತು ವಿಳಾಸ ದಾಖಲೆ ಮತ್ತು ಇನ್‌ಪರ್ಸನ್ ಪರಿಶೀಲನೆ (ಐಪಿವಿ) ನೀಡಬೇಕಾಗುತ್ತದೆ. ಈ ದಾಖಲೆಗಳನ್ನು ಸಲ್ಲಿಸಿದರೆ ಕೆವೈಸಿ ಸಂಪೂರ್ಣವಾಗುತ್ತದೆ.