ಮೇ 26ರಿಂದ ಬ್ಯಾಂಕಿಂಗ್ ನಿಯಮ ಬದಲಾವಣೆ: 'ಇಷ್ಟು' ನಗದು ವಹಿವಾಟಿಗೆ ಪ್ಯಾನ್, ಆಧಾರ್ ಕಡ್ಡಾಯ
ಇಂದಿನಿಂದ (ಮೇ 26) ಪ್ರಮುಖ ಬ್ಯಾಂಕಿಂಗ್ ನಿಯಮ ಬದಲಾವಣೆ ಆಗಿದೆ. ಗ್ರಾಹಕರು ಒಂದೇ ಹಣಕಾಸು ವರ್ಷದಲ್ಲಿ 20 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ನಗದು ಹಿಂಪಡೆಯುವಿಕೆ / ಠೇವಣಿಗಳಿಗಾಗಿ ತಮ್ಮ ಪ್ಯಾನ್ ಅಥವಾ ಆಧಾರ್ ಕಾರ್ಡ್ ಸಂಖ್ಯೆಯನ್ನು ಒದಗಿಸುವುದು ಈಗ ಕಡ್ಡಾಯವಾಗಿದೆ.
ಹೊಸ ಮಾರ್ಗಸೂಚಿಯು ವಾಣಿಜ್ಯ ಬ್ಯಾಂಕ್‌ಗಳಿಗೆ ಮಾತ್ರವಲ್ಲದೆ ಸಹಕಾರಿ ಬ್ಯಾಂಕ್‌ಗಳು ಅಥವಾ ಅಂಚೆ ಕಚೇರಿಗಳಿಗೂ ಅನ್ವಯಿಸುತ್ತದೆ. ಬದಲಾದ ನಿಯಮವನ್ನು ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು (CBDT) ಮೇ 10 ರ ಅಧಿಸೂಚನೆಯಲ್ಲಿ ಪ್ರಕಟಿಸಿದೆ.
20 ಲಕ್ಷಕ್ಕಿಂತ ಹೆಚ್ಚಿನ ನಗದು ವಹಿವಾಟಿಗೆ ಪ್ಯಾನ್, ಆಧಾರ್ ಕಡ್ಡಾಯ
ಹೆಚ್ಚುವರಿಯಾಗಿ, ಒಬ್ಬರು ಒಂದೇ ಹಣಕಾಸು ವರ್ಷದಲ್ಲಿ 20 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ನಗದು ವಿತ್‌ಡ್ರಾ ಅಥವಾ ಠೇವಣಿ ಮಾಡಲು ಬಯಸಿದರೆ ವಹಿವಾಟುಗಳನ್ನು ಮಾಡುವ ಕನಿಷ್ಠ ಏಳು ದಿನಗಳ ಮೊದಲು ಪ್ಯಾನ್‌ಗೆ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ. ಲೆಕ್ಕಕ್ಕೆ ಸಿಗದ ಹಣಕಾಸು ವಹಿವಾಟುಗಳಿಗೆ ಕಡಿವಾಣ ಹಾಕುವುದು ಈ ಹೊಸ ನಿಯಮದ ಹಿಂದಿನ ಪ್ರಮುಖ ಉದ್ದೇಶವಾಗಿದೆ.

ಯಾವೆಲ್ಲಾ ವಹಿವಾಟುಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯ?
* ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಅಥವಾ ಆದಾಯ ತೆರಿಗೆ ಅಧಿಕಾರಿಗಳೊಂದಿಗೆ ಯಾವುದೇ ಪತ್ರವ್ಯವಹಾರವನ್ನು ಪ್ರಾರಂಭಿಸಲು ಪ್ಯಾನ್ ಕಡ್ಡಾಯ
* ಬ್ಯಾಂಕ್ ಅಥವಾ ಡಿಮ್ಯಾಟ್ ಖಾತೆ ತೆರೆಯಲು ಅಥವಾ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಪಡೆಯಲು ಪ್ಯಾನ್ ಕಾರ್ಡ್ ಅಗತ್ಯ
* ಮ್ಯೂಚುವಲ್ ಫಂಡ್‌ಗಳು, ಡಿಬೆಂಚರ್‌ಗಳು ಅಥವಾ ಬಾಂಡ್‌ಗಳಲ್ಲಿ ರೂ 50,000 ಕ್ಕಿಂತ ಹೆಚ್ಚು ಹೂಡಿಕೆ ಮಾಡುವಾಗ ಪ್ಯಾನ್ ವಿವರ ಕಡ್ಡಾಯ
* ವಿಮಾದಾರರಿಗೆ ಜೀವ ವಿಮಾ ಪ್ರೀಮಿಯಂನಂತೆ ಆರ್ಥಿಕ ವರ್ಷದಲ್ಲಿ ರೂ 50,000 ಕ್ಕಿಂತ ಹೆಚ್ಚು ಮೊತ್ತದ ಪಾವತಿಗೆ ಪ್ಯಾನ್ ಕಡ್ಡಾಯ
* ಯಾವುದೇ ಒಂದು ದಿನದ ಅವಧಿಯಲ್ಲಿ ರೂ 50,000 ಕ್ಕಿಂತ ಹೆಚ್ಚಿನ ನಗದು ಠೇವಣಿ ಅಥವಾ ರೂ 50,000 ಕ್ಕಿಂತ ಹೆಚ್ಚಿನ ಮೊತ್ತದ ಫಿಕ್ಸಿಡ್ ಡೆಪಾಸಿಟ್‌ಗಳಿಗೆ ಅಥವಾ ಬ್ಯಾಂಕಿಂಗ್ ಕಂಪನಿ ಅಥವಾ ಸಹಕಾರಿ ಬ್ಯಾಂಕ್, ಅಂಚೆ ಕಛೇರಿ ಅಥವಾ ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಯೊಂದಿಗೆ ಹಣಕಾಸು ವರ್ಷದಲ್ಲಿ 5 ಲಕ್ಷ ರೂ. ವಹಿವಾಟಿಗೆ ಪ್ಯಾನ್
* ದ್ವಿಚಕ್ರ ವಾಹನಗಳನ್ನು ಹೊರತುಪಡಿಸಿ ಮೋಟಾರು ವಾಹನ ಅಥವಾ ವಾಹನವನ್ನು ಮಾರಾಟ ಮಾಡುವ ಅಥವಾ ಖರೀದಿಸುವ ಸಮಯದಲ್ಲಿ ಪ್ಯಾನ್ ಅಗತ್ಯ
* ಯಾವುದೇ ವಿದೇಶಕ್ಕೆ ಪ್ರಯಾಣಿಸಲು ಅಥವಾ ಯಾವುದೇ ಒಂದು ಸಮಯದಲ್ಲಿ ಯಾವುದೇ ವಿದೇಶಿ ಕರೆನ್ಸಿಯನ್ನು ಖರೀದಿಸಲು ಪ್ಯಾನ್ ಅಗತ್ಯ