For Quick Alerts
ALLOW NOTIFICATIONS  
For Daily Alerts

ಇಲ್ಲಿವೆ ಸರ್ಕಾರದ 3 ಇನ್ಷೂರೆನ್ಸ್ ಸ್ಕೀಮ್; ಈಗಾಗಲೇ ನೀವು ಚಂದಾದಾರ ಆಗಿರಬಹುದು!

|

ನರೇಂದ್ರ ಮೋದಿ ಮುನ್ನಡೆಸುತಿರುವ ಎನ್ ಡಿಎ ಸರ್ಕಾರ ಹಲವಾರು ಸಾಮಾಜಿಕ ಭದ್ರತಾ ಯೋಜನೆಗಳನ್ನು ಪರಿಚಯಿಸಿದೆ. ಭಾರತದಲ್ಲಿ ಇನ್ಷೂರೆನ್ಸ್ ಪಾಲಿಸಿಗಳ ಪ್ರಮಾಣದಲ್ಲಿ ಹೆಚ್ಚಳ ಆಗಬೇಕು ಎಂಬುದು ಕೇಂದ್ರ ಸರ್ಕಾರದ ಗುರಿ. ಈ ಇನ್ಷೂರೆನ್ಸ್ ಯೋಜನೆಗಳಿಗೆ ನೀವು ಈಗಾಗಲೇ ಫಲಾನುಭವಿಗಳಾಗಿರಬಹುದು ಅಥವಾ ಈ ಯೋಜನೆಗಳಿಗೆ ಪ್ರೀಮಿಯಂ ಕೂಡ ಪಾವತಿಸುತ್ತಿರಬಹುದು.

ಈ ಲೇಖನದಲ್ಲಿ ಮೂರು ಇನ್ಷೂರೆನ್ಸ್ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ನೀವು ಈಗಾಗಲೇ ಬ್ಯಾಂಕ್ ಖಾತೆ ಹೊಂದಿದ್ದಲ್ಲಿ ಇನ್ಷೂರೆನ್ಸ್ ಕವರ್ ಕೂಡ ಆಗುತ್ತಿರಬಹುದು. ಆದ್ದರಿಂದಲೇ ಹೇಳಿದ್ದು, ನೀವು ಈಗಾಗಲೇ ಇದಕ್ಕೆ ಹಣ ಕೂಡ ಪಾವತಿಸುತ್ತಿರಬಹುದು. ಅದರ ಅನುಕೂಲ ಕೂಡ ಪಡೆಯಬೇಕಲ್ಲವೇ? ಅದಕ್ಕಾಗಿಯೇ ಈ ಮಾಹಿತಿ.

ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ
 

ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ

18ರಿಂದ 50 ವರ್ಷದೊಳಗಿನವರಿಗೆ ಸಿಗುವ ಹಾಗೂ ಲೈಫ್ ಕವರ್ ಆಗುವ ಸ್ಕೀಮ್ ಇದು. 2 ಲಕ್ಷ ರುಪಾಯಿ ಕವರ್ ಆಗುವುದಕ್ಕೆ ವಾರ್ಷಿಕವಾಗಿ 330 ರುಪಾಯಿ ಪಾವತಿ ಮಾಡಬೇಕಾಗುತ್ತದೆ. ಯಾರಿಗೆ ಬ್ಯಾಂಕ್ ನಲ್ಲಿ ಖಾತೆ ಇರುತ್ತದೋ ಅಂಥವರಿಗೆ ಇದು ಸಿಗುತ್ತದೆ. ತಮ್ಮ ಬ್ಯಾಂಕ್ ನವರಿಗೆ ಈ ಇನ್ಷೂರೆನ್ಸ್ ಗೆ ಸೇರ್ಪಡೆ ಮಾಡುವುದಕ್ಕೆ ಅನುಮತಿ ನೀಡಿರಬೇಕು ಹಾಗೂ ಈ ಯೋಜನೆಗೆ ಪ್ರೀಮಿಯಂ ಹಣವು ಖಾತೆಯಿಂದ ತಾನಾಗಿಯೇ ಹೋಗುವಂತೆ ಮಾಡಿರಬೇಕು. ಜೂನ್ 1ನೇ ತಾರೀಕಿಗೂ ಮುಂಚೆ ಪ್ರೀಮಿಯಂ ಹಣ ಕಡಿತ ಆಗುತ್ತದೆ. ಈ ಇನ್ಷೂರೆನ್ಸ್ ಕವರ್ ಜೂನ್ 1ರಿಂದ ಮೇ 31ರ ತನಕ ಒಂದು ವರ್ಷ ಇರುತ್ತದೆ. ಬ್ಯಾಂಕ್ ಖಾತೆಗೆ ಆಧಾರ್ ಪ್ರಾಥಮಿಕ ಕೆವೈಸಿ. ಈ ಯೋಜನೆ ಅಡಿಯಲ್ಲಿ ನೋಂದಣಿ ಮಾಡಿಕೊಂಡ 45 ದಿನಗಳ ನಂತರವೇ ಅಪಾಯದ ಕವರ್ ಆಗುತ್ತದೆ. ಒಂದು ವೇಳೆ ಅಪಘಾತದಲ್ಲೇನಾದರೂ ಖಾತೆದಾರರು ಸಾವನ್ನಪ್ಪಿದಲ್ಲಿ ಆ ನಿಯಮದ ವಿನಾಯಿತಿ ಇರುತ್ತದೆ. ಆ ನಲವತ್ತೈದು ದಿನದ ನಂತರ ಯಾವುದೇ ಕಾರಣಕ್ಕೆ ಸಾವು ಸಂಭವಿಸಿದರೂ ಇನ್ಷೂರೆನ್ಸ್ ಮೊತ್ತ ದೊರೆಯುತ್ತದೆ. ಒಂದು ವೇಳೆ ಇನ್ನೂ ಈ ಯೋಜನೆ ನೋಂದಣಿ ಮಾಡಿಸಿಲ್ಲ ಎಂದಾದಲ್ಲಿ ನಿಮ್ಮ ಬ್ಯಾಂಕ್ ಗೆ ಭೇಟಿ ನೀಡಿ, ಸೇರ್ಪಡೆ ಆಗಬಹುದು. ಕೆಲವು ಬ್ಯಾಂಕ್ ಗಳು ಎಸ್ ಎಂಎಸ್ ನೋಂದಣಿ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಕೂಡ ಈ ಯೋಜನೆ ಒದಗಿಸುತ್ತಿವೆ.

ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನಾ

ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನಾ

ಇದು ಅಪಘಾತ ವಿಮೆ ಯೋಜನೆ. 18ರಿಂದ 70 ವರ್ಷದೊಳಗಿದ್ದು, ಬ್ಯಾಂಕ್ ಖಾತೆ ಇರುವವರಿಗೆ ಇದು ದೊರೆಯುತ್ತದೆ. ತಮ್ಮ ಬ್ಯಾಂಕ್ ನವರಿಗೆ ಈ ಯೋಜನೆಗೆ ಸೇರ್ಪಡೆ ಆಗುವುದಾಗಿ ತಿಳಿಸಿ, ಪ್ರೀಮಿಯಂ ಮೊತ್ತವನ್ನು ಖಾತೆಯಿಂದ ತಾನಾಗಿಯೇ ಹೋಗುವಂತೆ ಮಾಡಿದರೆ ಆಯಿತು. ವಾರ್ಷಿಕ ಪ್ರೀಮಿಯಂ ಕೇವಲ 12 ರುಪಾಯಿ ಬ್ಯಾಂಕ್ ಖಾತೆಯಿಂದ ಪ್ರತಿ ವರ್ಷ ಮೇ 31ನೇ ತಾರೀಕು ತಾನಾಗಿಯೇ ಕಡಿತವಾಗುತ್ತದೆ. ಜೂನ್ 1ರಿಂದ ಮೇ 31ನೇ ತಾರೀಕಿನ ತನಕ ಕವರ್ ಆಗುತ್ತದೆ. ಆಧಾರ್ ಇದಕ್ಕೆ ಪ್ರಾಥಮಿಕ ಕೆವೈಸಿ ಆಗಿರುತ್ತದೆ. ಅಪಘಾತದಲ್ಲಿ ಸಾವನ್ನಪ್ಪಿದರೆ ಅಥವಾ ಪೂರ್ಣ ಪ್ರಮಾಣದ ಅಂಗವೈಕಲ್ಯಕ್ಕೆ 2 ಲಕ್ಷ ರುಪಾಯಿ ಮತ್ತು ಭಾಗಶಃ ಅಂಗವೈಕಲ್ಯಕ್ಕೆ 1 ಲಕ್ಷ ರುಪಾಯಿ ದೊರೆಯುತ್ತದೆ. ಈಗಾಗಲೇ ಅಪಘಾತ ವಿಮೆ ಇದ್ದರೂ ಅದರ ಜತೆಗೆ ಇದು ಕೂಡ ಕವರ್ ಆಗುತ್ತದೆ. ನೆನಪಿಡಿ, ಇದು ಮೆಡಿಕ್ಲೇಮ್ ಅಥವಾ ಹೆಲ್ತ್ ಇನ್ಷೂರೆನ್ಸ್ ಅಲ್ಲ. ಆಸ್ಪತ್ರೆಗೆ ಸೇರಿ, ಚಿಕಿತ್ಸೆ ಪಡೆದ ವೆಚ್ಚದ ಮರುಪಾವತಿಯೇನೂ ಆಗಲ್ಲ. ಒಂದು ವೇಳೆ ಈ ಯೋಜನೆಗೆ ನೋಂದಣಿ ಆಗಲಿದಿದ್ದಲ್ಲಿ ಬ್ಯಾಂಕ್ ಅನ್ನು ಸಂಪರ್ಕಿಸಿ, ಸೇರ್ಪಡೆ ಆಗಬಹುದು. ಇನ್ನು https://www.jansuraksha.gov.in/Forms-PMSBY.aspx. ವೆಬ್ ಸೈಟ್ ನಿಂದ ಅರ್ಜಿ ಡೌನ್ ಲೋಡ್ ಮಾಡಿಕೊಂಡು, ಅದನ್ನು ಸಲ್ಲಿಸಬಹುದು. ಕೆಲವು ಬ್ಯಾಂಕ್ ಗಳು ಎಸ್ಸೆಮ್ಮೆಸ್ ನೋಂದಣಿ ಅಥವಾ ನೆಟ್ ಬ್ಯಾಂಕಿಂಗ್ ನಿಂದಲೂ ಈ ಯೋಜನೆಗೆ ಅವಕಾಶ ನೀಡುತ್ತಿವೆ.

ಪ್ರಧಾನಮಂತ್ರಿ ಜನ್ ಧನ್ ಯೋಜನಾ ಅಡಿ ಜೀವ ವಿಮೆ
 

ಪ್ರಧಾನಮಂತ್ರಿ ಜನ್ ಧನ್ ಯೋಜನಾ ಅಡಿ ಜೀವ ವಿಮೆ

2014ರಲ್ಲಿ ಜನ್ ಧನ್ ಯೋಜನಾಗೆ ಸೇರಿದವರಿಗೆ ಜೀವ ವಿಮೆ ಮೊತ್ತ 30 ಸಾವಿರ ರುಪಾಯಿ ಕವರ್ ಆಗುತ್ತದೆ. PMJDY ಅಡಿಯಲ್ಲಿ ಯಾರು ಮೊದಲನೇ ಬಾರಿಗೆ 15.8.2014ರಿಂದ 31.1.2015ರ ಮಧ್ಯೆ ಖಾತೆ ತೆರೆದಿರುತ್ತಾರೋ ಅಂಥವರಿಗೆ 30 ಸಾವಿರ ರುಪಾಯಿ ಜೀವ ವಿಮೆ ಕವರ್ ಆಗುತ್ತದೆ. ಜೀವ ವಿಮೆ ಹೊಂದಿರುವವರು ಒಂದು ವೇಳೆ ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ ಮೊತ್ತ ದೊರೆಯುತ್ತದೆ. ನೇರವಾಗಿ ಇಂಥ ಇನ್ಷೂರೆನ್ಸ್ ಖರೀದಿ ಮಾಡುವುದಕ್ಕೆ ಆರ್ಥಿಕ ಚೈತನ್ಯ ಇಲ್ಲದ ಆರ್ಥಿಕ ದುರ್ಬಲ ವರ್ಗದವರಿಗಾಗಿ ಈ ಯೋಜನೆ ಇದೆ. PMJDY ಅಡಿಯಲ್ಲಿ ಇನ್ಷೂರೆನ್ಸ್ ಕವರ್ ಆಗುವುದಕ್ಕೆ ಸರ್ಕಾರದಿಂದ ಪ್ರೀಮಿಯಂ ಪಾವತಿ ಮಾಡಲಾಗುತ್ತದೆ.

English summary

Personal Finance: 3 Government Insurance Schemes Linked To Your Bank Account That You Must Know

Here are the 3 Insurance scheme, there may be chances that you may be a beneficiary of these schemes or maybe paying for premium towards these schemes already.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X