ನಿಮ್ಮ ಎಸ್‌ಬಿಐ ಖಾತೆಯಿಂದ 147.5 ರೂ ಡೆಬಿಟ್ ಆಗಿದೆಯೇ, ಯಾಕೆ?
ಎಲ್ಲ ಬ್ಯಾಂಕ್‌ಗಳು ತಮ್ಮ ಗ್ರಾಹಕರ ಖಾತೆಯಿಂದ ವಾರ್ಷಿಕವಾಗಿ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಶುಲ್ಕವನ್ನು ಕಡಿತ ಮಾಡುತ್ತದೆ. ಯಾವ ಕಾರ್ಡ್ ಹಾಗೂ ಎಷ್ಟು ವಹಿವಾಟು ನಡೆದಿದೆ ಎಂಬ ಆಧಾರದಲ್ಲಿ ಈ ಶುಲ್ಕವನ್ನು ಬ್ಯಾಂಕ್‌ಗಳು ವಿಧಿಸುತ್ತದೆ. ಆದರೆ ನಿಮ್ಮ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಗ್ರಾಹಕರ ಖಾತೆಯಿಂದ ನೀವು ಯಾವುದೇ ವಹಿವಾಟು ನಡೆಸದಿದ್ದರೂ 147.5 ರೂಪಾಯಿ ಡೆಬಿಟ್ ಆಗಿದೆಯೇ?
ಆ ಹಣ ಯಾಕಾಗಿ ಡೆಬಿಟ್ ಆಗಿದೆ ಎಂಬುವುದು ಹಲವಾರು ಮಂದಿಗೆ ತಿಳಿದಿಲ್ಲ. ವಾರ್ಷಿಕ ಸೇವಾ ಶುಲ್ಕದ ಅಡಿಯಲ್ಲಿ ಈ ಶುಲ್ಕವನ್ನು ನಿಮ್ಮ ಖಾತೆಯಿಂದ ಕಡಿತ ಮಾಡಲಾಗುತ್ತಿದೆ. 125 ರೂಪಾಯಿ ಮೊತ್ತವನ್ನು ಬ್ಯಾಂಕ್‌ನ ವಾರ್ಷಿಕ ನಿರ್ವಹಣಾ ಶುಲ್ಕವಾಗಿ ವಿಧಿಸಲಾಗುತ್ತಿದೆ.
ಬ್ಯಾಂಕ್‌ನ ವಾರ್ಷಿಕ ನಿರ್ವಹಣಾ ಶುಲ್ಕ 125 ರೂಪಾಯಿ ಆಗಿರುವಾಗ ಬ್ಯಾಂಕ್ 147.5 ರೂಪಾಯಿಯನ್ನು ಯಾಕಾಗಿ ಕಡಿತ ಮಾಡುತ್ತದೆ ಎಂಬುವುದು ಹಲವರಿಗೆ ಇರುವ ಪ್ರಶ್ನೆಯಾಗಿದೆ. ಆದರೆ ಬ್ಯಾಂಕ್ ಸರಕು ಹಾಗೂ ಸೇವಾ ಶುಲ್ಕ (ಜಿಎಸ್‌ಟಿ) ಲೆಕ್ಕಾಚಾರದಲ್ಲಿ ಅಧಿಕ ಮೊತ್ತವನ್ನು ಕಡಿತ ಮಾಡುತ್ತಿದೆ. ಹಾಗಾದರೆ ಇದರ ಲೆಕ್ಕಾಚಾರ ಹೇಗೆ ಎಂದು ನೋಡೋಣ ಮುಂದೆ ಓದಿ...

ಜಿಎಸ್‌ಟಿ ಲೆಕ್ಕಾಚಾರ ಹೇಗೆ?
ಸುಮಾರು ಶೇಕಡ 18ರಷ್ಟು ಸೇವಾ ಶುಲ್ಕವನ್ನು ವಿಧಿಸಲಾಗುತ್ತದೆ. ಇದಕ್ಕಾಗಿ ಬ್ಯಾಂಕು ಅಧಿಕ ಮೊತ್ತವನ್ನು ಕಡಿತ ಮಾಡುತ್ತಿದೆ. 125 ರೂಪಾಯಿಗೆ ಶೇಕಡ 18ರಷ್ಟು ಜಿಎಸ್‌ಟಿಯನ್ನು ವಿಧಿಸಲಾಗುತ್ತದೆ. ಅಂದರೆ 22.5 ರೂಪಾಯಿ ಜಿಎಸ್‌ಟಿ ಆಗುತ್ತದೆ. ಈ 125 ರೂಪಾಯಿಗೆ 22.5 ರೂಪಾಯಿ ಸೇರ್ಪಡೆ ಮಾಡಿದರೆ, 147.5 ರೂಪಾಯಿ ಆಗುತ್ತದೆ. ಒಂದು ವೇಳೆ ನೀವು ನಿಮ್ಮ ಡೆಬಿಟ್ ಕಾರ್ಡ್ ಅನ್ನು ಬದಲಾವಣೆ ಮಾಡಲು ಬಯಸಿದರೆ ಬ್ಯಾಂಕ್ ಅದಕ್ಕಾಗಿ 300 ರೂಪಾಯಿ+ಜಿಎಸ್‌ಟಿ ವಿಧಿಸುತ್ತದೆ.
ಎಸ್‌ಬಿಐ ಬ್ಯಾಂಕ್‌ನಲ್ಲಿ ಹಲವಾರು ವಿಧದ ಡೆಬಿಟ್ ಕಾರ್ಡ್ ಅನ್ನು ನೀಡಲಾಗುತ್ತದೆ. ಸ್ಥಳೀಯ, ಅಂತಾರಾಷ್ಟ್ರೀಯ, ಕೋ ಬ್ರಾಂಡೆಡ್ ಡೆಬಿಟ್ ಕಾರ್ಡ್ ಅನ್ನು ನೀಡಲಾಗುತ್ತದೆ. ನಿಮ್ಮ ಖರ್ಚು, ವೆಚ್ಚದ ಲೆಕ್ಕಾಚಾರದಲ್ಲಿ ನೀವು ಡೆಬಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಮಾಡಬಹುದು. ಬ್ಯಾಂಕ್ ನೀಡುವ ಎಲ್ಲ ಡೆಬಿಟ್ ಕಾರ್ಡ್‌ಗಳು ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುತ್ತದೆ. ನಿಮ್ಮ ಡೆಬಿಟ್ ಕಾರ್ಡ್ ಮೂಲಕ ನೀವು ವಹಿವಾಟು ನಡೆಸಿದಾಗ, ನಿಮ್ಮ ಬ್ಯಾಂಕ್ ಖಾತೆಯಿಂದಲೇ ಹಣ ಕಡಿತವಾಗುತ್ತದೆ.
ನಿಮ್ಮ ಡೆಬಿಟ್ ಕಾರ್ಡ್‌ಗೆ ಎಸ್‌ಬಿಐ ಮಾತ್ರ ವಾರ್ಷಿಕ ಶುಲ್ಕವನ್ನು ವಿಧಿಸುವುದಲ್ಲ. ಇತರೆ ಬ್ಯಾಂಕ್‌ಗಳು ಕೂಡಾ ವಾರ್ಷಿಕ ಶುಲ್ಕವನ್ನು ವಿಧಿಸುತ್ತದೆ. ಐಸಿಐಸಿಐ ಬ್ಯಾಂಕ್ 499 ರೂಪಾಯಿ ಡೆಬಿಟ್ ಕಾರ್ಡ್ ಶುಲ್ಕವನ್ನು ಕಡಿತ ಮಾಡುತ್ತದೆ. ಕೋರಲ್ ಡೆಬಿಟ್ ಕಾರ್ಡ್‌ಗಳಿಗೆ ಮಾತ್ರ ಈ ಶುಲ್ಕ. ಬೇರೆ ಡೆಬಿಟ್ ಕಾರ್ಡ್‌ಗಳಿಗೆ ಈ ಶುಲ್ಕವಿಲ್ಲ. ಐಸಿಐಸಿಐ ಬ್ಯಾಂಕ್‌ನ ಡೆಬಿಟ್ ಕಾರ್ಡ್ ಪಿನ್ ರಿಜಿನೆರೇಷನ್‌ಗೆ 25 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಖಾತೆಯಲ್ಲಿ ಕಡಿಮೆ ಮೊತ್ತವಿರುವ ಕಾರಣದಿಂದಾಗಿ ಬೇರೆ ಬ್ಯಾಂಕ್‌ನ ಎಟಿಎಂನಲ್ಲಿ ತಿರಸ್ಕೃತವಾಗುವ ಪ್ರತಿ ವಹಿವಾಟಿಗೂ ಬ್ಯಾಂಕ್ 25 ರೂಪಾಯಿ ಶುಲ್ಕವನ್ನು ವಿಧಿಸುತ್ತದೆ.