For Quick Alerts
ALLOW NOTIFICATIONS  
For Daily Alerts

ಸೆಲ್ಪಮೇಡ್ ಬಿಲಿಯನೇರ್! ಜಗತ್ತಿನ ಶ್ರೀಮಂತರಾದ ಇವರ ಆರಂಭ ಹೇಗಿತ್ತು ಗೊತ್ತಾ?

|

ಜಗತ್ತಿನ ಕೆಲ ವ್ಯಕ್ತಿಗಳ ಸಾಧನೆ, ಸಾಹಸ, ಛಲ, ಇಚ್ಛಾಶಕ್ತಿ ನೋಡಿದರೆ ಇಡೀ ಜೀವನಕ್ಕೆ ಸಾಕಾಗುವಷ್ಟು ಸ್ಪೂರ್ತಿ ಸಿಗುತ್ತದೆ. ಜೀವನದಲ್ಲಿ ನಾವೂ ಕೂಡ ಏನಾದರೂ ಸಾಧಿಸಬೇಕು ಎಂಬ ಅದಮ್ಯ ಛಲ ಹೊರಹೊಮ್ಮುತ್ತದೆ.
ಇಂತಹ ಸಾಹಸಿ ವ್ಯಕ್ತಿಗಳು ಜಗತ್ತಿನ ಅತಿ ದೊಡ್ಡ ಶ್ರೀಮಂತರಾಗಲು ಪಟ್ಟ ಪರಿಶ್ರಮವೆಷ್ಟು ಹಾಗೂ ಈ ಸಾಧನೆ ಮಾಡುವ ಮುನ್ನ ಅವರೇನಾಗಿದ್ದರು ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ. ಇಂತಹ ವ್ಯಕ್ತಿಗಳು ತಮ್ಮ ಕಂಪನಿಯಲ್ಲಿ ಹಾಗೂ ವೈಯಕ್ತಿಕವಾಗಿ ಹೊಂದಿರುವ ಸಂಪತ್ತಿನ ಆಧಾರದಲ್ಲಿ ಶ್ರೀಮಂತಿಕೆಯನ್ನು ನಿರ್ಧರಿಸಲಾಗುತ್ತದೆ. ಜಗತ್ತಿನ ಅತಿ ಶ್ರೀಮಂತ ವ್ಯಕ್ತಿಗಳ ಬಗ್ಗೆ ತಿಳಿಯುವ ಕುತೂಹಲ ನಿಮ್ಮಲ್ಲಿದ್ದರೆ ಈ ಲೇಖನ ನಿಮಗಾಗಿ..

 

ಜೆಫ್ ಬೆಜೋಸ್ (ಅಮೆಜಾನ್)

ಜೆಫ್ ಬೆಜೋಸ್ (ಅಮೆಜಾನ್)

ಒಟ್ಟು ಸಂಪತ್ತು : 112 ಬಿಲಿಯನ್ ಡಾಲರ್ (11,020 crores USD)
ಜೆಫ್ ಬೆಜೋಸ್ ಪ್ರಿನ್ಸಟನ್ ವಿಶ್ವವಿದ್ಯಾಲಯದಲ್ಲಿ ಪದವಿ ಅಭ್ಯಾಸ ಮಾಡಿದರು. ಪದವಿಯ ನಂತರ ಹಣಕಾಸು ನಿರ್ವಹಣೆ ಸಂಸ್ಥೆ ಡಿ.ಇ. ಶಾ ಆಂಡ್ ಕಂಪನಿಯಲ್ಲಿ ವೈಸ್ ಪ್ರೆಸಿಡೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಜಗತ್ತಿನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಇಂಟರ್‌ನೆಟ್ ಹಾಗೂ ಅದರ ಅಗಾಧ ಪ್ರಭಾವವನ್ನು ಬಹು ಬೇಗನೆ ಇವರು ಗುರುತಿಸಿದರು. ಹೀಗಾಗಿಯೇ ೧೯೯೪ ರಲ್ಲಿ ವೈಸ್ ಪ್ರೆಸಿಡೆಂಟ್ ಹುದ್ದೆಗೆ ರಾಜಿನಾಮೆ ನೀಡಿ ಆನ್‌ಲೈನ್ ಶಾಪಿಂಗ್ ಪೋರ್ಟಲ್ ಅಮೆಜಾನ್ ಡಾಟ್ ಕಾಂ ಅನ್ನು ಆರಂಭಿಸಿದರು.
ಆರಂಭದಲ್ಲಿ ಗ್ಯಾರೇಜೊಂದರ ಪುಟ್ಟ ಕೋಣೆಯಲ್ಲಿಯೇ ಅಮೆಜಾನ್ ಇ-ಕಾಮರ್ಸ್ ಕಂಪನಿಯನ್ನು ಆರಂಭಿಸಿದ್ದರು ಎಂದು ತಿಳಿದರೆ ಆಶ್ಚರ್ಯವಾಗುತ್ತದೆ. ಆದರೆ ತಮ್ಮ ಚಾಣಾಕ್ಷ ಬುದ್ಧಿ ಹಾಗೂ ಸತತ ಪರಿಶ್ರಮದಿಂದ ಜಗತ್ತಿನ ಅತಿ ದೊಡ್ಡ ಇ-ಕಾಮರ್ಸ್ ಕಂಪನಿಯನ್ನಾಗಿ ಪರಿವರ್ತಿಸಿದರು. ಪ್ರಸ್ತುತ ಅಮೇರಿಕದ ವಾಶಿಂಗ್ಟನ್ ಪ್ರದೇಶದ ಸಿಯಾಟಲ್‌ನಲ್ಲಿ ಈ ಕಂಪನಿಯ ಕೇಂದ್ರ ಕಚೇರಿ ಇದೆ.

ಬಿಲ್ ಗೇಟ್ಸ್ (ಮೈಕ್ರೊಸಾಫ್ಟ್)
 

ಬಿಲ್ ಗೇಟ್ಸ್ (ಮೈಕ್ರೊಸಾಫ್ಟ್)

ಒಟ್ಟು ಸಂಪತ್ತು: 106 ಬಿಲಿಯನ್ ಡಾಲರ್
ಹಾರ್ವರ್ಡ ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡುತ್ತಿರುವಾಗಲೇ ಬಿಲ್ ಗೇಟ್ಸ್ ಬೇಸಿಕ್ (BASIC) ಎಂಬ ಕಂಪ್ಯೂಟರ್ ಪ್ರೊಗ್ರಾಮಿಂಗ್ ಲ್ಯಾಂಗ್ವೇಜ್ ಮೇಲೆ ಪ್ರಭುತ್ವ ಸಾಧಿಸಿದ್ದರು. ಇದನ್ನು ಆಲ್ಟೇರ್ ಕಂಪ್ಯೂಟರ ಸಿಸ್ಟಂ ಎಂಬ ಸಂಸ್ಥೆಗೆ ಯಶಸ್ವಿಯಾಗಿ ಗೇಟ್ಸ್ ಅಳವಡಿಸಿದರು.
ಇದರ ಯಶಸ್ಸಿನಿಂದ ಪ್ರೇರಣೆ ಪಡೆದ ಅವರು ೧೯೭೬ ರಲ್ಲಿ ಜಂಟಿಯಾಗಿ ಮೈಕ್ರೊಸಾಫ್ಟ್ ಕಂಪನಿ ಆರಂಭಿಸಿದರು. ಮುಂದೆ ವಿಂಡೋಸ್ ಆಪರೇಟಿಂಗ್ ಸಿಸ್ಟಂ ತಂತ್ರಾಂಶವನ್ನು ಮೈಕ್ರೊಸಾಫ್ಟ್ ಕಂಪನಿ ಅಭಿವೃದ್ಧಿ ಪಡಿಸಿತು. ಇಂದು ವಿಂಡೋಸ್ ಆಪರೇಟಿಂಗ್ ಸಿಸ್ಟಂ ಜಗತ್ತಿನಲ್ಲಿ ಅತಿ ಹೆಚ್ಚು ಬಳಸಲ್ಪಡುವ ಜನಪ್ರಿಯ ಓಎಸ್ ಆಗಿದೆ.

ವಾರೆನ್ ಬಫೆಟ್ (ಬರ್ಕಶೈರ್ ಹಾಥವೇ)

ವಾರೆನ್ ಬಫೆಟ್ (ಬರ್ಕಶೈರ್ ಹಾಥವೇ)

ಒಟ್ಟು ಸಂಪತ್ತು: 82 ಬಿಲಿಯನ್ ಡಾಲರ್
ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಪದವಿ ಪಡೆದ ವಾರೆನ್ ಬಫೆಟ್ ಅವರ ಸಾಧನೆ ಅದ್ವಿತೀಯವಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ಇವರು ಯಶಸ್ವಿ ಉದ್ಯಮಿಯಾಗುವ ಎಲ್ಲ ಲಕ್ಷಣಗಳನ್ನು ಹೊಂದಿದ್ದರು ಎಂಬುದು ಸತ್ಯ. ವೃತ್ತಿ ಜೀವನದ ಆರಂಭದಲ್ಲಿ ಶಿಕ್ಷಕ ಹಾಗೂ ಸ್ಟಾಕ್ ಬ್ರೋಕರ್ ಮುಂತಾದ ಚಿಕ್ಕ ಪುಟ್ಟ ಕೆಲಸಗಳನ್ನು ಬಫೆಟ್ ಮಾಡುತ್ತಿದ್ದರು. ನಂತರ ನಷ್ಟದಲ್ಲಿದ್ದ ಟೆಕ್ಸಟೈಲ್ ಕಂಪನಿಯೊಂದರಲ್ಲಿ ಹೂಡಿಕೆ ಮಾಡಿದ ಅವರು ಬಹು ಬೇಗ ಲಾಭ ಗಳಿಸಿದರು. ಕಾಲಾನಂತರ ೧೯೬೨ ರಲ್ಲಿ ವಿಮಾ ಕ್ಷೇತ್ರಕ್ಕೆ ಧುಮುಕಿದ ಬಫೆಟ್ ಅತಿ ಯಶಸ್ವಿ ಉದ್ಯಮಿಯಾಗಿ ಬೆಳೆದರು. ಇಂದು ಬೃಹತ್ ಬಹುರಾಷ್ಟ್ರೀಯ ಕಂಪನಿ ಬರ್ಕಶೈರ್ ಹಾಥವೇ ಯನ್ನು ಅವರು ಮುನ್ನಡೆಸುತ್ತಿದ್ದಾರೆ.

ಮಾರ್ಕ್ ಜುಕರಬರ್ಗ್ (ಫೇಸ್ ಬುಕ್)

ಮಾರ್ಕ್ ಜುಕರಬರ್ಗ್ (ಫೇಸ್ ಬುಕ್)

ಒಟ್ಟು ಸಂಪತ್ತು: 68.2 ಬಿಲಿಯನ್ ಡಾಲರ್
ಇಂದು ಮನೆಮಾತಾಗಿರುವ ಸೋಶಿಯಲ್ ಮೀಡಿಯಾ ನೆಟ್‌ವರ್ಕ್ ಫೇಸ್ ಬುಕ್ ಇದರ ಸಂಸ್ಥಾಪಕ ಮಾರ್ಕ್ ಜುಕರಬರ್ಗ್. ಇವರು ಆರಂಭದಲ್ಲಿ ಹಾರ್ವರ್ಡ್ ಯುನಿವರ್ಸಿಟಿಯ ವಿದ್ಯಾರ್ಥಿಗಳ ಮಧ್ಯೆ ಸಂಪರ್ಕ ಏರ್ಪಡಿಸಲು 2004 ರಲ್ಲಿ ಫೇಸ್ ಬುಕ್ ಅಭಿವೃದ್ಧಿ ಪಡಿಸಿದರು.
ಇದು ಯಶಸ್ವಿಯಾದಾಗ 2006ರಲ್ಲಿ ಇಂಟರನೆಟ್ ಮೂಲಕ ಫೇಸ್ ಬುಕ್ ಅನ್ನು ಸಾರ್ವಜನಿಕರ ಬಳಕೆಗೆ ಮುಕ್ತವಾಗಿರಿಸಿದರು. ಕೆಲವೇ ಸಮಯದಲ್ಲಿ ಜಗತ್ತಿನಾದ್ಯಂತ ಫೇಸ್ ಬುಕ್ ಅತ್ಯಂತ ಜನಪ್ರಿಯ ಸೋಶಿಯಲ್ ಮೀಡಿಯಾ ನೆಟ್ ವರ್ಕ ಆಗಿ ಹೊರ ಹೊಮ್ಮಿತು. ಇಂದು ಫೇಸ್ ಬುಕ್ ಇಲ್ಲದ ದಿನವನ್ನು ಊಹಿಸಿಕೊಳ್ಳಲು ಸಹ ಸಾಧ್ಯವಿಲ್ಲದ ಮಟ್ಟಿಗೆ ನಮ್ಮ ದಿನನಿತ್ಯದ ಜೀವನದಲ್ಲಿ ಆವರಿಸಿಕೊಂಡಿದೆ.

ಅಮಾನ್ಸಿಯೊ ಒರ್ಟೆಗಾ (ಝಾರಾ)

ಅಮಾನ್ಸಿಯೊ ಒರ್ಟೆಗಾ (ಝಾರಾ)

ಒಟ್ಟು ಸಂಪತ್ತು: 70 ಬಿಲಿಯನ್ ಡಾಲರ್
ಫ್ಯಾಶನ್ ಜಗತ್ತಿನಲ್ಲಿ ಜಗದ್ವಿಖ್ಯಾತಿ ಗಳಿಸಿರುವ ಅಮಾನ್ಸಿಯೊ ಒರ್ಟೆಗಾ ಒಂದು ಕಾಲಕ್ಕೆ ಶರ್ಟ ಅಂಗಡಿಯಲ್ಲಿ ಸಾಮಾನ್ಯ ಕೆಲಸಗಾರನಾಗಿದ್ದರು. ಫ್ಯಾಶನ್ ಬಗ್ಗೆ ತಿಳಿದುಕೊಂಡ ಇವರು ತಮ್ಮ ಪತ್ನಿ ರೋಸಾಲಿಯಾ ಮೆರಾ ಅವರೊಂದಿಗೆ ಗೌನ್‌ಗಳು ಹಾಗೂ ಒಳ ಉಡುಪುಗಳನ್ನು ತಯಾರಿಸಿ ಮಾರಲಾರಂಭಿಸಿದರು. ಕೆಲ ವರ್ಷಗಳ ನಂತರ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಕಾಲಿಟ್ಟ ಇವರು ಅದರಲ್ಲಿಯೂ ಯಶ ಸಾಧಿಸಿದರು.

ಲ್ಯಾರಿ ಎಲಿಸನ್ (ಒರಾಕಲ್)

ಲ್ಯಾರಿ ಎಲಿಸನ್ (ಒರಾಕಲ್)

ಒಟ್ಟು ಸಂಪತ್ತು: 68.5 ಬಿಲಿಯನ್ ಡಾಲರ್
ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದ ಲ್ಯಾರಿ ಎಲಿಸನ್ ಇಲಿನಾಯ್ಸ್ ಹಾಗೂ ಚಿಕಾಗೊ ಯುನಿವರ್ಸಿಟಿಗಳಲ್ಲಿ ಶಿಕ್ಷಣ ಪೂರ್ಣಗೊಳಿಸಲಾಗದೆ ಹೊರ ಬಂದಿದ್ದರು. ಸಾಫ್ಟವೇರ್‌ನಲ್ಲಿ ಪರಿಣಿತಿ ಸಾಧಿಸಿದ ಕಾರಣ ವೃತ್ತಿ ಜೀವನದ ಆರಂಭದಲ್ಲಿ ಇವರು ಸಿಐಎ ಡೇಟಾಬೇಸ್ ಕೆಲಸ ಮಾಡುತ್ತಿದ್ದರು. ತಂತ್ರಜ್ಞಾನದಲ್ಲಿ ಜ್ಞಾನ ಬೆಳೆದಂತೆ ಪಾಲುದಾರಿಕೆಯಲ್ಲಿ ಸಾಫ್ಟವೇರ್ ಡೆವಲಪಮೆಂಟ್ ಲ್ಯಾಬೊರೇಟರೀಸ್ ಎಂಬ ಸಾಫ್ಟವೇರ್ ಕಂಪನಿಯನ್ನು ಹುಟ್ಟು ಹಾಕಿದರು. ಇದೇ ಕಂಪನಿ ೧೯೯೨ ರಲ್ಲಿ ಒರ್‍ಯಾಕಲ್ ಎಂದು ಮರುನಾಮಕರಣಗೊಂಡಿತು.

ಮೈಕೆಲ್ ಬ್ಲೂಮಬರ್ಗ್ (ಬ್ಲೂಮಬರ್ಗ್ ಎಲ್‌ಪಿ)

ಮೈಕೆಲ್ ಬ್ಲೂಮಬರ್ಗ್ (ಬ್ಲೂಮಬರ್ಗ್ ಎಲ್‌ಪಿ)

ಒಟ್ಟು ಸಂಪತ್ತು: 50.1 ಬಿಲಿಯನ್ ಡಾಲರ್
ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದ ಬ್ಲೂಮಬರ್ಗ್ ಹಾರ್ವರ್ಡ್ ಬಿಸಿನೆಸ್ ಸ್ಕೂಲ್‌ನಲ್ಲಿ ಪದವಿ ಪಡೆದರು. ಖ್ಯಾತ ವಾಲ್ ಸ್ಟ್ರೀಟ್ ಕಂಪನಿ ಸೊಲೊಮನ್ ಬ್ರದರ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಇವರು, ತಮ್ಮ ವೃತ್ತಿ ಜೀವನದಲ್ಲಿ ಏಳಿಗೆ ಸಾಧಿಸುತ್ತಿರುವಾಗಲೇ ಕೆಲಸದಿಂದ ತೆಗೆದು ಹಾಕಲ್ಪಟ್ಟರು. ಹಣಕಾಸು ವ್ಯವಹಾರಗಳಲ್ಲಿ ಪಾರದರ್ಶಕತೆ ತರಬೇಕೆಂಬ ದೂರದೃಷ್ಟಿ ಇವರದ್ದಾಗಿತ್ತು. ಇದನ್ನು ಕಾರ್ಯಗತಗೊಳಿಸಲು ಇನೊವೇಟಿವ್ ಮಾರ್ಕೆಟ್ ಸಿಸ್ಟಮ್ಸ್ ಎಂಬ ಸಂಸ್ಥೆಯನ್ನು ಆರಂಭಿಸಿದರು. ಇದು ಆರಂಭದಲ್ಲಿ ಕೇವಲ ಒಂದು ಕೋಣೆಯ ಆಫೀಸ್ ಹೊಂದಿತ್ತು. ಈ ಕಂಪನಿ ೧೯೮೭ ರಲ್ಲಿ ಬ್ಲೂಮಬರ್ಗ್ ಎಲ್‌ಪಿ ಎಂದು ಮರುನಾಮಕರಣಗೊಂಡಿತು.

ಜಾಕ್ ಮಾ (ಅಲಿಬಾಬಾ ಗ್ರೂಪ್)

ಜಾಕ್ ಮಾ (ಅಲಿಬಾಬಾ ಗ್ರೂಪ್)

ಒಟ್ಟು ಸಂಪತ್ತು: 41.1 ಬಿಲಿಯನ್ ಡಾಲರ್
ಚೀನಾದ ಹ್ವಾಂಗ್‌ಜು ಯುನಿವರ್ಸಿಟಿಯಲ್ಲಿ ಪದವಿ ಪಡೆದ ಜಾಕ್ ಮಾ ಆರಂಭದಲ್ಲಿ ಒಂದು ನೌಕರಿ ಸಹ ಸಿಗದೆ ಪರದಾಡಿದ್ದರು. ಇಂಟರನೆಟ್ ವಲಯದ ಶಕ್ತಿ ಅರಿತ ಜಾಕ್ ಅಲಿಬಾಬಾ ಎಂಬ ಆನ್‌ಲೈನ್ ಪೋರ್ಟಲ್ ಆರಂಭಿಸಲು ಮುಂದಾದರು. ತನ್ನ ಕೆಲ ಗೆಳೆಯರನ್ನು ಒಪ್ಪಿಸಿ, ಆರಂಭಿಕ ಬಂಡವಾಳವನ್ನು ಸೇರಿಸಿ ಅಲಿಬಾಬಾ ಆರಂಭಿಸಿದರು. ಅತಿ ಶೀಘ್ರವಾಗಿ ಬೆಳೆಯುತ್ತ ಸಾಗಿದ ಕಂಪನಿ ಜಗತ್ತಿನ ಗಮನ ಸೆಳೆಯಿತು. ಗೋಲ್ಡಮ್ಯಾನ ಸ್ಯಾಕ್ಸ್ ಹಾಗೂ ಸಾಫ್ಟ್ ಬ್ಯಾಂಕ್ ಸೇರಿದಂತೆ ಜಗತ್ತಿನ ಹಲವಾರು ಬಂಡವಾಳ ಹೂಡಿಕೆ ಕಂಪನಿಗಳು ಇವರ ಕಂಪನಿಯಲ್ಲಿ ಹಣ ತೊಡಗಿಸಿದವು. ೨೦೦೫ ರಲ್ಲಿ ಯಾಹೂ ಕಂಪನಿ ೧ ಬಿಲಿಯನ್ ಡಾಲರ್ ಪಾವತಿಸಿ ಅಲಿಬಾಬಾದಲ್ಲಿ ಶೇರು ಪಡೆದುಕೊಂಡಿತು.

ಶೆಲ್ಡನ್ ಅಡೆಲ್ಸನ್ (ಲಾಸ ವೆಗಾಸ್ ಸ್ಯಾಂಡ್ಸ್)

ಶೆಲ್ಡನ್ ಅಡೆಲ್ಸನ್ (ಲಾಸ ವೆಗಾಸ್ ಸ್ಯಾಂಡ್ಸ್)

ಒಟ್ಟು ಸಂಪತ್ತು: 35 ಬಿಲಿಯನ್ ಡಾಲರ್
ಜಗತ್ತಿನ ಅತಿ ದೊಡ್ಡ ಕ್ಯಾಸಿನೊ ಕಂಪನಿ ನಡೆಸುವ ಶೆಲ್ಡನ್ ಅಡೆಲ್ಸನ್ ಸಾಗಿ ಬಂದ ದಾರಿ ಬಹು ಪರಿಶ್ರಮದ್ದಾಗಿದೆ. ೧೨ನೇ ವಯಸ್ಸಿನಲ್ಲಿ ತನ್ನ ಅಂಕಲ್ ಬಳಿ ೨೦೦ ಡಾಲರ್ ಸಾಲ ಪಡೆದು ಒಂದು ನ್ಯೂಸ್ ಪೇಪರ್ ಸ್ಟಾಲ್ ಅನ್ನು ಶೆಲ್ಡನ್ ಆರಂಭಿಸಿದ್ದರು. ನಂತರ ಪತ್ರಿಕೆಗಳಿಗೆ ಜಾಹೀರಾತು ನೀಡುವ ಏಜೆನ್ಸಿ, ವೆಂಡಿಂಗ್ ಮಶೀನ್ ವ್ಯವಹಾರ, ಔದ್ಯಮಿಕ ಪ್ರದರ್ಶನ ಮುಂತಾದ ವ್ಯವಹಾರಗಳಲ್ಲಿ ತೊಡಗಿಸಿಕೊಂಡು ಯಶಸ್ವಿ ಉದ್ಯಮಿಯಾಗಿ ಬೆಳೆದರು.

ಎಲಾನ್ ಮಸ್ಕ್ (ಸ್ಪೇಸ್ ಎಕ್ಸ್)

ಎಲಾನ್ ಮಸ್ಕ್ (ಸ್ಪೇಸ್ ಎಕ್ಸ್)

ಒಟ್ಟು ಸಂಪತ್ತು: 21.1 ಬಿಲಿಯನ್ ಡಾಲರ್
ತಮ್ಮ ಚಿಕ್ಕ ವಯಸ್ಸಿನಲ್ಲಿ ಎಲಾನ್ ಸೌತ್ ಆಫ್ರಿಕಾದಿಂದ ಕೆನಡಾಗೆ ಶಿಫ್ಟ್ ಆದರು. ನಂತರ ೧೯೯೭ ರಲ್ಲಿ ಪೆನಿಸಿಲ್ವೇನಿಯಾ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಪದವಿ ಪಡೆದರು. ಕಾಲಾನಂತರ ಎಲೆಕ್ಟ್ರಿಕ್ ಕಾರು ಕಂಪನಿ ಟೆಸ್ಲಾ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಕೆಲಸ ಮಾಡುವ ಸ್ಪೇಸ್ ಎಕ್ಸ್ ಕಂಪನಿಗಳನ್ನು ಇವರು ಸ್ಥಾಪಿಸಿದರು.

ರಾಬಿನ್ ಲಿ (ಬೈದು)

ರಾಬಿನ್ ಲಿ (ಬೈದು)

ಒಟ್ಟು ಸಂಪತ್ತು: 12 ಬಿಲಿಯನ್ ಡಾಲರ್
ಅಮೇರಿಕಾದ ನ್ಯೂಯಾರ್ಕ ಬಫ್ಯಾಲೊ ಯುನಿವರ್ಸಿಟಿಯಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ರಾಬಿನ್ ಸ್ನಾತಕೋತ್ತರ ಪದವಿ ಪಡೆದರು. ನಂತರ ಡೌ ಜೋನ್ಸ್‌ನ ಸಹಯೋಗಿ ಕಂಪನಿಯೊಂದರಲ್ಲಿ ಸಲಹೆಗಾರನಾಗಿ ಇವರು ತಮ್ಮ ವೃತ್ತಿ ಜೀವನ ಆರಂಭಿಸಿದರು. ಇದರ ನಂತರ ಸಿಲಿಕಾನ್ ವ್ಯಾಲಿಯ ಸರ್ಚ್ ಎಂಜಿನ್ ಕಂಪನಿ ಇನ್ಫೊಸೀಕ್ ಕಂಪನಿಯಲ್ಲಿ ಕೆಲಸ ಮಾಡಿದ ಅನುಭವದ ಆಧಾರದಲ್ಲಿ ಪಾಲುದಾರಿಕೆಯೊಂದಿಗೆ 2000ರಲ್ಲಿ ಬೈದು ಎಂಬ ತಮ್ಮದೇ ಆದ ಇಂಟರನೆಟ್ ಸರ್ಚ್ ಎಂಜಿನ್ ಆರಂಭಿಸಿದರು. ಬೈದು ಸರ್ಚ್ ಎಂಜಿನ್ ಈಗ ಚೀನಾದ ನಂಬರ್ ವನ್ ಸರ್ಚ್ ಎಂಜಿನ್ ಆಗಿದೆ.

ರೋಮನ್ ಅಬ್ರಾಮೊವಿಚ್ (ಮಿಲ್‌ಹೌಸ್ ಎಲ್‌ಎಲ್‌ಸಿ)

ರೋಮನ್ ಅಬ್ರಾಮೊವಿಚ್ (ಮಿಲ್‌ಹೌಸ್ ಎಲ್‌ಎಲ್‌ಸಿ)

ಒಟ್ಟು ಸಂಪತ್ತು: 12.9 ಬಿಲಿಯನ್ ಡಾಲರ್
ರೋಮನ್ ಅಬ್ರಾಮೊವಿಚ್ ಓರ್ವ ರಶಿಯನ್ ಉದ್ಯಮಿಯಾಗಿದ್ದಾರೆ. ಆರಂಭದಲ್ಲಿ ಮಾಸ್ಕೋದಲ್ಲಿನ ತನ್ನ ಮನೆಯಿಂದಲೇ ರಬ್ಬರ ಬೋಟ್‌ಗಳನ್ನು ಆಮದು ಮಾಡಿ ಮಾರುವ ವ್ಯವಹಾರ ಆರಂಭಿಸಿದರು. ಕೆಲ ದಿನಗಳಲ್ಲಿಯೇ ರಶಿಯಾ ಸರ್ಕಾರದಲ್ಲಿ ತನಗಿದ್ದ ಸಂಪರ್ಕಗಳ ಮೂಲಕ ದೇಶದ ಅತಿ ದೊಡ್ಡ ತೈಲ ಇಂಧನ ಕಂಪನಿ ಸಿಬ್‌ನೆಫ್ಟ್ ಅನ್ನು ತನ್ನದಾಗಿಸಿಕೊಂಡರು. ತೈಲ ವ್ಯಾಪಾರ, ಸ್ಟೀಲ್, ಚಿನ್ನ, ರಿಯಲ್ ಎಸ್ಟೇಟ್, ಹಡಗುಗಳು ಮುಂತಾದ ಉದ್ಯಮಗಳ ಮೂಲಕ ಭಾರಿ ಮೊತ್ತದ ಸಂಪತ್ತನ್ನು ಅಬ್ರಾಮೊವಿಚ್ ಗಳಿಸಿದರು. ಇವರು ಇಂಗ್ಲಿಷ್ ಸಾಕರ್ ಕ್ಲಬ್ ಚೆಲ್ಸಿಯಾದ ಮಾಲೀಕರಾಗಿದ್ದಾರೆ.

ಜಾನ್ ಕೌಮ್ (ವಾಟ್ಸ್‌ಆಪ್)

ಜಾನ್ ಕೌಮ್ (ವಾಟ್ಸ್‌ಆಪ್)

ಒಟ್ಟು ಸಂಪತ್ತು: ೧೦.೧ ಬಿಲಿಯನ್ ಡಾಲರ್
ಪ್ರಸ್ತುತ ಜಗತ್ತಿನ ಅತಿ ದೊಡ್ಡ ಮೆಸೇಜಿಂಗ್ ಆಪ್ ವಾಟ್ಸ್‌ಆಪ್‌ನ ಸಹ ಸಂಸ್ಥಾಪಕರಲ್ಲಿ ಜಾನ್ ಕೌಮ್ ಒಬ್ಬರು. ತನ್ನ ಚಿಕ್ಕ ವಯಸ್ಸಿನಿಂದಲೇ ಇವರು ಕಂಪ್ಯೂಟರ್ ಕ್ಷೇತ್ರದಲ್ಲಿ ಅಪಾರ ಪರಿಣತಿ ಗಳಿಸಿದ್ದರು. ವಾಟ್ಸ್‌ಆಪ್ ಆರಂಭಿಸುವ ಮೊದಲು ಯಾಹೂನಲ್ಲಿ ೯ ವರ್ಷಗಳ ಕಾಲ ಇನಫ್ರಾಸ್ಟ್ರಕ್ಚರ್ ಎಂಜಿನಿಯರ್ ಆಗಿ ಇವರು ಕೆಲಸ ಮಾಡಿದ್ದರು. ೨೦೧೪ ರಲ್ಲಿ ವಾಟ್ಸ್‌ಆಪ್ ಅನ್ನು ಫೇಸ್ ಬುಕ್ ಕಂಪನಿ ಖರೀದಿಸಿತು.

ಶಾಹಿದ್ ಖಾನ (ಉದ್ಯಮಿ ಹಾಗೂ ಬಂಡವಾಳ ಹೂಡಿಕೆದಾರ)

ಶಾಹಿದ್ ಖಾನ (ಉದ್ಯಮಿ ಹಾಗೂ ಬಂಡವಾಳ ಹೂಡಿಕೆದಾರ)

ಒಟ್ಟು ಸಂಪತ್ತು: 7.9 ಬಿಲಿಯನ್ ಡಾಲರ್
ಶಾಹಿದ್ ಖಾನ ಇಲಿನಾಯ್ಸ್ ಯುನಿವರ್ಸಿಟಿಯಲ್ಲಿ ಅಭ್ಯಾಸ ಮಾಡುತ್ತಿರುವಾಗಲೇ ಅಟೊಮೊಟಿವ್ ಉತ್ಪಾದಕ ಕಂಪನಿ ಫ್ಲೆಕ್ಸ್-ಎನ್-ಗೇಟ್‌ನಲ್ಲಿ ಪಾರ್ಟ ಟೈಂ ಕೆಲಸ ಆರಂಭಿಸಿದರು. ೧೯೭೮ ರಲ್ಲಿ ತನ್ನದೇ ಆದ ಬಂಪರ್ ವರ್ಕ್ಸ್ ಎಂಬ ಕಂಪನಿಯನ್ನು ಶಾಹಿದ್ ಆರಭಿಸಿದರು. ಆದರೆ ಎರಡು ವರ್ಷಗಳ ನಂತರ ತಾನು ಆರಂಭಿಸಿದ ಈ ಕಂಪನಿಯನ್ನು ಬಂದ್ ಮಾಡಿ ಒಂದು ಕಾಲಕ್ಕೆ ತಾನು ಕೆಲಸ ಮಾಡಿದ ಫ್ಲೆಕ್ಸ್-ಎನ್-ಗೇಟ್ ಕಂಪನಿಯನ್ನು ಖರೀದಿ ಮಾಡಿದರು.

ರಿಚರ್ಡ್ ಬ್ರಾನ್ಸನ್ (ವರ್ಜಿನ್ ಗ್ರುಪ್)

ರಿಚರ್ಡ್ ಬ್ರಾನ್ಸನ್ (ವರ್ಜಿನ್ ಗ್ರುಪ್)

ಒಟ್ಟು ಸಂಪತ್ತು: ೫.೧ ಬಿಲಿಯನ್ ಡಾಲರ್
ಆರಂಭದಲ್ಲಿ 'ಸ್ಟುಡೆಂಟ್' ಹೆಸರಿನ ಮ್ಯಾಗಜೀನ್ ಆರಂಭಿಸಿದ ಬ್ರಾನ್ಸನ್, ನಂತರ ಲಂಡನ್‌ನ ಆಕ್ಸ್‌ಫರ್ಡ್ ಸ್ಟ್ರೀಟ್‌ನಲ್ಲಿ ರೆಕಾರ್ಡಿಂಗ್ ಸಂಸ್ಥೆ ಪ್ರಾರಂಭಿಸಿದರು. ಇದರ ನಂತರ ತಮ್ಮದೇ ಬ್ರ್ಯಾಂಡ್ ವರ್ಜಿನ್ ರೆಕಾರ್ಡ್ಸ್ ಆರಂಭಿಸಿದರು. ೨೦೧೮ ವೇಳೆಗೆ ವಿಶ್ವದ ಖ್ಯಾತ ಬಹುರಾಷ್ಟ್ರೀಯ ಕಂಪನಿಯಾಗಿ ಬೆಳೆದ ವರ್ಜಿನ್ ವಿಮಾನಯಾನ, ಮೊಬೈಲ್ ಫೋನ್‌ಗಳು, ಹಣಕಾಸು ಸೇವೆ, ಸಂಗೀತ, ಇಂಟರ್‌ನೆಟ್ ಮುಂತಾದ ಕ್ಷೇತ್ರಗಳಲ್ಲಿ ತನ್ನ ವ್ಯವಹಾರ ವ್ಯಾಪ್ತಿಯನ್ನು ಹೊಂದಿದೆ.

English summary

Self-made billionaires: how they started, must know

ಜೆಫ್ ಬೆಜೋಸ್ ಪ್ರಿನ್ಸಟನ್ ವಿಶ್ವವಿದ್ಯಾಲಯದಲ್ಲಿ ಪದವಿ ಅಭ್ಯಾಸ ಮಾಡಿದರು. ಪದವಿಯ ನಂತರ ಹಣಕಾಸು ನಿರ್ವಹಣೆ ಸಂಸ್ಥೆ ಡಿ.ಇ. ಶಾ ಆಂಡ್ ಕಂಪನಿಯಲ್ಲಿ ವೈಸ್ ಪ್ರೆಸಿಡೆಂಟ್ ಆಗಿ ಕೆಲಸ ಮಾಡುತ್ತಿದ್ದರು.
Story first published: Tuesday, October 29, 2019, 11:39 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X