For Quick Alerts
ALLOW NOTIFICATIONS  
For Daily Alerts

ವಂಚಕರ ಪಾಲಿನ ಟ್ರಂಪ್ ಕಾರ್ಡ್ ಗಳಿವು; ಪಿಗ್ಗಿ ಬೀಳುವ ಮುನ್ನ ಎಚ್ಚರವಾಗಿ

|

ನೀವು ಮಾಧ್ಯಮಗಳಲ್ಲಿ ಬರುವ ಸುದ್ದಿಯನ್ನು ಗಂಭೀರವಾಗಿ ನೋಡುತ್ತಿರುವವರಾದರೆ ಈ ಲೇಖನ ನಿಮಗೆ ಬಹಳ ಬೇಗ ಅರ್ಥ ಆಗುತ್ತದೆ. ಇಲ್ಲ, ನಾವು ಅಷ್ಟೇನೂ ಗಂಭೀರವಾಗಿ ಪರಿಗಣಿಸುವವರಲ್ಲ ಅಂದರೆ, ಇಲ್ಲಿನ ಅಂಶಗಳ ತೂಕ ಮತ್ತೂ ಚೆನ್ನಾಗಿ ಗೊತ್ತಾಗುತ್ತದೆ. ಒಟ್ಟಿನಲ್ಲಿ ನಮ್ಮ ದುಡಿಮೆಯ ಹಣವನ್ನು ಹೇಗೆ ನೈಸಾದ, ಒಂದೇ ಬಗೆಯ ಮಾತುಗಳಿಗೆ ಕಳೆದುಕೊಳ್ಳುತ್ತಿದ್ದೇವೆ ಎಂಬುದು ಅರಿವಿಗೆ ಬಂದರೆ ಸಾಕು.

ಹಣದ ಹೂಡಿಕೆ, ಸೈಟು- ಚಿನ್ನ ಖರೀದಿಯಿಂದ ಶುರುವಾಗಿ ಸೀರೆ, ದಿನಸಿ, ಎಲೆಕ್ಟ್ರಾನಿಕ್ಸ್ ಖರೀದಿ ತನಕ ಹೇಗೆ ಒಂದು ವ್ಯವಸ್ಥಿತವಾದ ದಂಧೆ ಬೆಳೆದು ನಿಂತಿದೆ ಎಂಬುದನ್ನು ಆಲೋಚನೆ ಮಾಡುವಂತಾದರೂ ಈ ಲೇಖನ ಸಾರ್ಥಕ ಆದಂತೆ. ನಿಮ್ಮ ಹಣವನ್ನು ಆ ದಂಧೆಗಳಿಂದ ರಕ್ಷಿಸಿಕೊಂಡರೆ ಅದು ತುಂಬ ಖುಷಿಯ ಸಂಗತಿ.

ವರ್ಷಕ್ಕೆ ಅರವತ್ತರಿಂದ ನೂರಿಪ್ಪತ್ತು ಪರ್ಸೆಂಟ್ ಬಡ್ಡಿ
 

ವರ್ಷಕ್ಕೆ ಅರವತ್ತರಿಂದ ನೂರಿಪ್ಪತ್ತು ಪರ್ಸೆಂಟ್ ಬಡ್ಡಿ

ನಿಮ್ಮ ಹಣಕ್ಕೆ ತಿಂಗಳಿಗೆ ಐದರಿಂದ ಹತ್ತು ಪರ್ಸೆಂಟ್ ರಿಟರ್ನ್ ಕೊಡ್ತೀವಿ ಅನ್ನೋದು ವಂಚನೆಯ ಮೊದಲ ಮೆಟ್ಟಿಲು. ತಿಂಗಳಿಗೆ ಐದರಿಂದ ಹತ್ತು ಪರ್ಸೆಂಟ್ ಅಂದರೆ, ವರ್ಷಕ್ಕೆ ಅರವತ್ತರಿಂದ ನೂರಿಪ್ಪತ್ತು ಪರ್ಸೆಂಟ್ ಬಡ್ಡಿ ಆಯಿತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಯಮದ ಪ್ರಕಾರ, ಈ ರೀತಿಯ ಯಾವುದೇ ಹಣಕಾಸು ವ್ಯವಹಾರವನ್ನು ಆರ್ ಬಿಐನ ಮಾರ್ಗದರ್ಶಿ ಸೂತ್ರದ ಪ್ರಕಾರವೇ ಮಾಡಬೇಕು. ಆ ರೀತಿ ನೋಡಿದರೆ ವರ್ಷಕ್ಕೆ ಹತ್ತರಿಂದ ಹನ್ನೆರಡು ಪರ್ಸೆಂಟ್ ಬಡ್ಡಿ ನೀಡಿದರೆ ಅದೇ ಹೆಚ್ಚು. ನಮಗೆ ಬಿಜಿನೆಸ್ ಗೆ ಹಣ ಬೇಕು, ಅದೇ ದುಡ್ಡಿಂದ ನಾವು ತಿಂಗಳಿಗೆ ನಲವತ್ತರಿಂದ ಐವತ್ತು ಪರ್ಸೆಂಟ್ ಗೂ ಹೆಚ್ಚು ದುಡಿಯುತ್ತೇವೆ. ವಿದೇಶದಲ್ಲಿ ಹೂಡಿಕೆ ಮಾಡಿದ್ದೀವಿ... ಹೀಗೆ ಏನೇ ಕಥೆ ಹೇಳಿದರೂ ನಂಬಬೇಡಿ. ಈ ರೀತಿ ವ್ಯಾಪಾರದ ಉದ್ದೇಶ ಇದ್ದು, ವಾಣಿಜ್ಯ ಬ್ಯಾಂಕ್ ಗಳಿಂದ ಸಾಲ ಪಡೆದರೂ ವರ್ಷಕ್ಕೆ ಹದಿನೆಂಟು ಪರ್ಸೆಂಟ್ ಗಿಂತ ಹೆಚ್ಚು ಬಡ್ಡಿ ಬೀಳಲ್ಲ. ಖಾಸಗಿ ಬ್ಯಾಂಕ್ ಗಳಾದರೆ ವರ್ಷಕ್ಕೆ ಇಪ್ಪತ್ನಾಲ್ಕು ಪರ್ಸೆಂಟ್ ಗಿಂತ ಹೆಚ್ಚು ಬಡ್ಡಿ ಆಗಲ್ಲ. ಆ ರೀತಿ 'ಕಡಿಮೆ' ಬಡ್ಡಿಯ ಸಾಲವನ್ನು ತೆಗೆದುಕೊಳ್ಳದೆ ಜನರಿಂದ ಹಣ ಸಂಗ್ರಹಿಸಿ, ವರ್ಷಕ್ಕೆ ಅರವತ್ತರಿಂದ ನೂರಿಪ್ಪತ್ತು ಪರ್ಸೆಂಟ್ ಬಡ್ಡಿ ಯಾಕೆ ಕೊಡಬೇಕು? ಈ ರೀತಿ ವ್ಯವಹಾರಗಳು ಇದ್ದಲ್ಲಿ ತಕ್ಷಣವೇ ಪೊಲೀಸರ ಗಮನಕ್ಕೆ ತನ್ನಿ. ಇಲ್ಲದಿದ್ದರೆ ವಿನಿವಿಂಕ್, ಐಎಂಎಯಂತೆ ತೀರಾ ದೊಡ್ಡ ಮಟ್ಟದಲ್ಲಿ ಅಲ್ಲದಿದ್ದರೂ ವಂಚಕರು 'ಯಥಾಶಕ್ತಿ' ಮೋಸ ಮಾಡುತ್ತಲೇ ಇರುತ್ತಾರೆ. ಚೈನ್ ಲಿಂಕ್ ಕಂಪೆನಿಗಳು, ಡೆರೆಕ್ಟ್ ಸೆಲ್ಲಿಂಗ್... ಇವು ಕೂಡ ಟೋಪಿಯನ್ನು ಬದಲಿಸಿ, ನಾವು- ನಾವೇ ಹಾಕಿಕೊಂಡಿರುವಂತೆ ಮಾಡುತ್ತವೆ. ಪೊಲೀಸರ ಬಳಿ ಹೋಗದಿರಲಿ ಎಂಬ ಕಾರಣಕ್ಕೆ ಮೂರರಿಂದ ಐದು ಸಾವಿರ ದಾಟದಂತೆ ಒಬ್ಬೊಬ್ಬರಿಂದ ವಸೂಲಿ ಮಾಡುತ್ತಾರೆ. ಇಷ್ಟು ಹಣಕ್ಕೆ ಯಾರಾದರೂ ಪೊಲೀಸರಿಗೆ ಕಂಪ್ಲೇಂಟ್ ಕೊಡ್ತಾರಾ ಎಂದು ಯೋಚಿಸಿಯೇ ಬಹಳ ಜನ ದೂರು ನೀಡಲ್ಲ.

ಎಲ್ಲ ಕಡೆಯೂ ರಿಯಲ್ ಎಸ್ಟೇಟ್ ಉದ್ಧಾರವಾಗಲ್ಲ

ಎಲ್ಲ ಕಡೆಯೂ ರಿಯಲ್ ಎಸ್ಟೇಟ್ ಉದ್ಧಾರವಾಗಲ್ಲ

ರಿಯಲ್ ಎಸ್ಟೇಟ್ ಇತ್ತೀಚೆಗಿನ ಟ್ರೆಂಡ್. ನೀವು ಎಲ್ಲಾದರೂ ಸೈಟ್ ಖರೀದಿ ಮಾಡಿದ ಮೇಲೆ ಮೂರು ತಿಂಗಳೋ, ಆರು ತಿಂಗಳೋ ಬಿಟ್ಟು ಅದೇ ಸ್ಥಳಕ್ಕೆ ಹೋಗಿ ನೀವು ಯಾರಿಂದ ಖರೀದಿ ಮಾಡಿದ್ದೀರೋ ಅವರನ್ನು ಅಥವಾ ರಿಯಲ್ ಎಸ್ಟೇಟ್ ಬ್ರೋಕರ್ ನ ಭೇಟಿಯಾದಿರಿ ಅಂದುಕೊಳ್ಳಿ. ಅಯ್ಯೋ, ನಿಮಗೆ ಸಿಗ್ತಲ್ಲಾ ಆ ರೇಟ್ ಗೆ ಈಗ ಇಲ್ಲಿ ಸೈಟೇ ಇಲ್ಲ ಅಂತ ಮಾತು ಶುರು ಮಾಡುತ್ತಾರೆ. ನೀವೇ ವಾಪಸು ಕೊಡುವ ಹಾಗಿದ್ದರೆ ಹೇಳಿ, ಚದರಡಿಗೆ ಮುನ್ನೂರೋ- ಐನೂರೋ ಹೆಚ್ಚಿಗೆ ಕೊಟ್ಟು ನಾನೇ ಖರೀದಿ ಮಾಡ್ತೀನಿ ಅಂತಾರೆ. ನೆನಪಿಟ್ಟುಕೊಳ್ಳಿ: ಯಾವುದೇ ಸೈಟ್, ಅಪಾರ್ಟ್ ಮೆಂಟ್ ಗೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿಗೆ ಎಂದು ಸರ್ಕಾರ ಇಂತಿಷ್ಟು ಬೆಲೆ ಅಂತ ನಿಗದಿ ಮಾಡುತ್ತದೆ. ಅದರ ಮೇಲೆ ಯಾವುದೇ ಮೊತ್ತ ಹೇಳಿದರೂ ಅದು ಕಾಲ್ಪನಿಕ ಬೆಲೆ. ಅಂದರೆ ಚಿನ್ನ, ಬೆಳ್ಳಿ ರೀತಿ ನಿತ್ಯವೂ ಬೆಲೆಯನ್ನು ತೋರಿಸುವ ಯಾವ ಮಾರುಕಟ್ಟೆಯೂ ರಿಯಲ್ ಎಸ್ಟೇಟ್ ಗೆ ಇಲ್ಲ. ಯಾವುದೇ ಪ್ರದೇಶದಲ್ಲಿ ಕೊನೆಯದಾಗಿ ಸೈಟೋ ಅಥವಾ ಮನೆಯನ್ನೋ ಎಷ್ಟು ಮೊತ್ತಕ್ಕೆ ಖರೀದಿ ಮಾಡಲಾಗಿದೆಯೋ ಅದನ್ನೇ ವಾಸ್ತವ ಬೆಲೆ ಎಂದು ಬಿಂಬಿಸಲಾಗುತ್ತದೆ. ಬಿಡಿಎನಿಂದ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ನಿರ್ಮಿಸಿದ ಲೇಔಟ್ ಗಳಿಗೆ ಹೋಗಿ ವಾಸ ಮಾಡಲು ಜನ ಮನಸು ಮಾಡುತ್ತಿಲ್ಲ. ಏಕೆಂದರೆ, ವಿಪರೀತ ದೂರ. ತಮ್ಮ ನಿತ್ಯದ ಕೆಲಸ, ವ್ಯಾಪಾರಕ್ಕೆ ಅನುಕೂಲ ಎಂಬುದು ಕಾರಣ. ಆದ್ದರಿಂದ ರಿಯಲ್ ಎಸ್ಟೇಟ್ ಎಲ್ಲ ಕಡೆಯೂ ಬೆಳವಣಿಗೆ ಆಗಿಲ್ಲ, ಆಗುವುದಿಲ್ಲ. ಸೈಟ್ ಖರೀದಿ ಮಾಡುವಾಗ ಡಿಸಿ ಕನ್ವರ್ಷನ್ ಆಗಿರುವುದು ಮತ್ತು ಸ್ಥಳೀಯ ಪ್ರಾಧಿಕಾರದಿಂದ ಮಾನ್ಯತೆ ಪಡೆದದ್ದೇ ಖರೀದಿಸಿ. ಯಾವ ರಿಯಲ್ ಎಸ್ಟೇಟ್ ನವರೂ ಲಾಭ ಇಲ್ಲದೆ ಧರ್ಮಾರ್ಥವಾಗಿ ಮಾಡಲ್ಲ. ಹೇಗಿದ್ದರೂ ಸಾಲ ಸಿಗುತ್ತದೆ, ಒಂದು ಸೈಟ್ ಇರಲಿಬಿಡು ಎಂಬ ಆಲೋಚನೆ ಕೂಡ ನಷ್ಟಕ್ಕೆ ಕಾರಣ ಆಗುತ್ತದೆ.

ಕಂತಿನಲ್ಲಿ ಸಿಗುತ್ತದೆ ಎಂದು ಖರೀದಿಗೆ ಮುಗಿಬೀಳಬೇಡಿ
 

ಕಂತಿನಲ್ಲಿ ಸಿಗುತ್ತದೆ ಎಂದು ಖರೀದಿಗೆ ಮುಗಿಬೀಳಬೇಡಿ

ಇನ್ನು ಮಹಿಳೆಯರು ಸೀರೆ, ಎಲೆಕ್ಟ್ರಾನಿಕ್ ವಸ್ತುಗಳು, ದಿನಸಿ ಖರೀದಿ ಮಾಡುವಾಗ ಇಎಂಐನಲ್ಲಿ ಸಿಗುತ್ತದೆ ಅಥವಾ ತಿಂಗಳ ಕೊನೆಗೆ ಹಣ ನೀಡಿದರೆ ಆಯಿತು ಎಂಬ ಕಡೆಗೇ ಖರೀದಿ ಮಾಡುತ್ತಾರೆ. ಇಂಥ ಸನ್ನಿವೇಶದಲ್ಲಿ ಮಾರಾಟ ಮಾಡುವವರು ಹೆಚ್ಚಿನ ಲಾಭದ ಪ್ರಮಾಣವನ್ನು ಖಚಿತವಾಗಿಯೂ ಇಟ್ಟುಕೊಂಡಿರುತ್ತಾರೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಯಾರಾದರೂ ಸರಿ, ತಾವು ಬಂಡವಾಳ ಹೂಡಿ ತಂದ ಮೊತ್ತದಲ್ಲಿ ಏನನ್ನಾದರೂ ಕಂತಿನಲ್ಲಿ ವಾಪಸ್ ಪಡೆಯುತ್ತಾರೆಂದರೆ ಅವರು ಬಡ್ಡಿಯನ್ನೂ ಸೇರಿಸಿ ಲೆಕ್ಕ ಹಾಕಿರಲಿಕ್ಕೆ ಸಾಧ್ಯವಾ? ಉದಾಹರಣೆಗೆ ಸಾವಿರ ರುಪಾಯಿ ಬೆಲೆಯ ಸೀರೆಗೆ ಬರೀ ನೂರು ರುಪಾಯಿಯ ಲಾಭ ಇಟ್ಟುಕೊಂಡು, ಐದು ತಿಂಗಳೋ ಅಥವಾ ಹತ್ತು ತಿಂಗಳೋ ಹಣ ವಾಪಸ್ ಪಡೆದರೆ ಅದ್ಯಾವ ಪರಿಯಲ್ಲಿ ವರ್ಕೌಟ್ ಆಗಬಹುದು ಎಂಬುದನ್ನು ಒಮ್ಮೆ ಯೋಚಿಸಿ. ದಿನಸಿ ಪದಾರ್ಥಗಳು, ಎಲೆಕ್ಟ್ರಾನಿಕ್ ವಸ್ತುಗಳಿಗೂ ಇದೇ ಮಾತು ಅನ್ವಯ ಆಗುತ್ತದೆ. ನಗದು ಇಟ್ಟುಕೊಂಡು ವ್ಯವಹರಿಸಿದರೆ ಚೌಕಾಸಿ ಮಾಡುವ ಅಧಿಕಾರ ನಿಮಗಿರುತ್ತದೆ. ಇಎಂಐನಲ್ಲಿ ಖರೀದಿ ಮಾಡಿದರೆ ಲಾಭದ ಜತೆಗೆ ಬಡ್ಡಿಯನ್ನೂ ಕೊಟ್ಟಿರುತ್ತೀರಿ ಎಂಬುದು ನಿಮಗೆ ಗೊತ್ತಿರಲಿ.

ಚೀಟಿ ವ್ಯವಹಾರ ಎಂಬ ಬೃಹತ್ ಅಪಾಯ

ಚೀಟಿ ವ್ಯವಹಾರ ಎಂಬ ಬೃಹತ್ ಅಪಾಯ

ಎಷ್ಟೋ ಸಂಸಾರಗಳು ಬೇರೆಯಾಗಿರುವುದು, ಬಹಳ ಮಂದಿಯ ಆತ್ಮಹತ್ಯೆಗೆ ಕಾರಣವಾಗಿರುವುದು ಚೀಟಿ ವ್ಯವಹಾರ. ಕಾನೂನಿನ ಪ್ರಕಾರ ಹೇಳುವುದಾದರೆ, ಈಗ ಚೀಟಿ ವ್ಯವಹಾರ ನಡೆಸುತ್ತಿರುವುದು ಶೇಕಡಾ ತೊಂಬತ್ತೆಂಟಕ್ಕೂ ಹೆಚ್ಚು ಪ್ರಕರಣಗಳಲ್ಲಿ ಕಾನೂನುಬಾಹಿರ. ಏಕೆಂದರೆ, ಚೀಟಿ ವ್ಯವಹಾರ ನಡೆಸುವುದಕ್ಕೆ ಕೂಡ ಕಾನೂನು ಪ್ರಕಾರ ನಿಯಮಾವಳಿಗಳು ಇವೆ ಮತ್ತು ಬಹಳ ಕಠಿಣವಾಗಿವೆ. ಜನಸಾಮಾನ್ಯರಿಗೆ ಈ ನಿಯಮಾವಳಿಗಳನ್ನು ಪಾಲಿಸಿ, ಅದರಿಂದ ಲಾಭ ಪಡೆಯುವುದು ಕಷ್ಟ. ಹಾಗಂತ ಯಾವ ಭದ್ರತೆ- ಸುರಕ್ಷತೆ ಇಲ್ಲದೆ ಚೀಟಿ ಹಾಕಿ, ಹಣ ಕಳೆದುಕೊಳ್ಳುವುದು ಇನ್ನೂ ನಿಂತಿಲ್ಲ. ಚೀಟಿ ನಡೆಸುತ್ತಿರುವವರಿಗೆ ಸ್ವಂತ ಮನೆ ಇದೆ, ಸರ್ಕಾರಿ ನೌಕರಿ ಇದೆ, ಅವರ ಸಂಬಂಧಿಕರು ಕೌನ್ಸಿಲರ್ ಅಥವಾ ಎಂಎಲ್ ಎ ಅಂತೆ. ಇವೆಲ್ಲ ಚೀಟಿ ಹಾಕುವುದಕ್ಕೆ ಖಂಡಿತಾ ಮಾನದಂಡಗಳಲ್ಲ. ಚೀಟಿ ನಡೆಸುವುದಕ್ಕೆ ನೋಂದಣಿ ಮಾಡಿಸಿರಬೇಕು. ಇನ್ನು ಸರ್ಕಾರಿ ಕೆಲಸದಲ್ಲಿ ಇರುವವರು ಇಂಥ ವ್ಯವಹಾರ ಮಾಡುವಂತಿಲ್ಲ. ಸಂಬಂಧಿಗಳು ಮಾಡುವ ವ್ಯವಹಾರಕ್ಕೆ ಕೌನ್ಸಿಲರ್ ಅಥವಾ ಎಂಎಲ್ ಎ ಹೇಗೆ ಜವಾಬ್ದಾರರಾಗುತ್ತಾರೆ? ಚೀಟಿ ಹಾಕಬೇಕಿದ್ದರೆ ಅಧಿಕೃತವಾಗಿ ನೋಂದಣಿ ಮಾಡಿದವರ ಬಳಿ ಹಾಕಿ (ಉದಾ: ಎಂಎಸ್ ಐಎಲ್). ಇಲ್ಲದಿದ್ದಲ್ಲಿ ನಿಮ್ಮ ಹಣಕ್ಕೆ ಭದ್ರತೆ ಮಾಡಿಕೊಳ್ಳಿ.

English summary

These Are The Trump Cards Of Fraudsters; Beware Of Them

Here are the list of trump cards used by fraudsters to cheat people. So, beware of them.
Story first published: Friday, January 10, 2020, 14:01 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X