For Quick Alerts
ALLOW NOTIFICATIONS  
For Daily Alerts

ಮಗುವನ್ನು ಯಾವ ಶಾಲೆಗೆ ಸೇರಿಸಬೇಕು? ಗಮನಿಸಬೇಕಾದ ಅಂಶಗಳು ಯಾವುವು?

|

"ಮಕ್ಕಳನ್ನು ಯಾವ ಶಾಲೆಗೆ ಸೇರಿಸಬೇಕು?"

ಇತ್ತೀಚಿನ ದಿನಮಾನಗಳಲ್ಲಿ ಅತಿ ಹೆಚ್ಚು ಚರ್ಚೆಗೆ ಗುರಿಯಾಗಿರುವ ಪ್ರಶ್ನೆ ಇದು. ತಂದೆ- ತಾಯಿಗಳು ತಮ್ಮ ಮಗುವನ್ನು ಅತ್ಯುತ್ತಮ ಶಾಲೆಗೇ ಸೇರಿಸಬೇಕು ಅಂದುಕೊಳ್ಳುತ್ತಾರೆ. ಆದರೆ 'ಅತ್ಯುತ್ತಮ' ಎಂದು ಹುಡುಕಲು ಹೊರಟರೆ ಆ ಹುಡುಕಾಟಕ್ಕೆ ಕೊನೆಯೇ ಇರುವುದಿಲ್ಲ. ಆದ್ದರಿಂದ ಪೋಷಕರು ಸಾಮಾನ್ಯವಾಗಿ ಪರಿಗಣಿಸುವ, ಶಿಕ್ಷಕರು ಸಹ ಒಪ್ಪುವ ಪಟ್ಟಿಯೊಂದನ್ನು ಇಲ್ಲಿ ನಿಮ್ಮೆದುರು ಇಡಲಾಗುತ್ತಿದೆ.

ಈ ಅಂಶಗಳ ಪೈಕಿ ಕೆಲವನ್ನು ನೀವೂ ಯೋಚಿಸಿರಬಹುದು. ಈಗಾಗಲೇ ಶಾಲೆಗೆ ಸೇರಿಸಿರಬಹುದು. ಆದರೂ ಇಲ್ಲಿ ನೀಡಿರುವ ಅಂಶಗಳನ್ನು ಪೋಷಕರು ಖಂಡಿತಾ ಗಮನಿಸುವುದು ಹೌದು. ಯಾವುವು ಆ ಅಂಶಗಳು? ತಿಳಿಯಲು ಮುಂದೆ ಓದಿ.

ಶಾಲೆ ಮನೆಗೆ ಹತ್ತಿರ ಇರಬೇಕು, ಫೀ ಕಡಿಮೆ ಇರಬೇಕು

ಶಾಲೆ ಮನೆಗೆ ಹತ್ತಿರ ಇರಬೇಕು, ಫೀ ಕಡಿಮೆ ಇರಬೇಕು

ಆ ದಂಪತಿ ಹೆಸರು ಅನಿಲ್- ಸ್ಮಿತಾ. ಬೆಂಗಳೂರಿನ ಉತ್ತರಹಳ್ಳಿ ರಸ್ತೆಯಿಂದ ಒಳಕ್ಕೆ ಹೋದರೆ ಸಿಗುವ ಹೆಮ್ಮಿಗೆಪುರದಲ್ಲಿ ಮನೆ ಇದೆ. ಅವರು ತಮ್ಮ ಒಬ್ಬನೇ ಮಗನ ಶಿಕ್ಷಣದ ಬಗ್ಗೆ ಆಲೋಚಿಸಿದ್ದು ಹೀಗೆ. ಶಾಲೆಯು ಮನೆಗೆ ಎರಡರಿಂದ ಐದು ಕಿಲೋಮೀಟರ್ ಒಳಗೆ ಇರಬೇಕು. ತಾವು ನಂಬುವ ಧರ್ಮದ ಹಬ್ಬಗಳು, ಆಚರಣೆ ಎಲ್ಲಕ್ಕೂ ಶಾಲೆಯಲ್ಲಿ ಪ್ರೋತ್ಸಾಹ ಇರಬೇಕು. ಫೀ, ಯೂನಿಫಾರ್ಮ್, ಟೆಕ್ಸ್ಟ್ ಬುಕ್ ಹಾಗೂ ಶಾಲೆಗೆ ಕರೆದುಕೊಂಡು ಹೋಗಿ, ವಾಪಸ್ ಕರೆತರುವ ವ್ಯಾನ್ ಸೇರಿ ವರ್ಷಕ್ಕೆ ನಲವತ್ತರಿಂದ ಅರವತ್ತು ಸಾವಿರ ಖರ್ಚು ದಾಟಬಾರದು. ಹೀಗೆ ಅವರು ಅಂದುಕೊಂಡಿದ್ದ ಎಲ್ಲ ಅಂಶಗಳು ಇರುವಂತೆ ಒಂದು ಶಾಲೆ ಸಿಕ್ಕಿತು. ಸ್ಮಿತಾ ಅವರಿಗೆ ಅದೇ ಶಾಲೆಯಲ್ಲಿ ಆಡಳಿತ ವಿಭಾಗದಲ್ಲಿ ಕೆಲಸವೂ ಸಿಕ್ಕಿತು. ಅವರಿಗೆ ಈ ಉದ್ಯೋಗ ಅನಿವಾರ್ಯ ಅಲ್ಲದಿದ್ದರೂ ಅಲ್ಲೇ ಕೆಲಸಕ್ಕೆ ಸೇರಿದರು. ಮಗನ ಶಿಕ್ಷಣ ಹೇಗೆ ಸಾಗುತ್ತಿದೆ ಮತ್ತು ಅವನಿಗೆ ಯಾವ ವಿಷಯದಲ್ಲಿ ಯಾವ ಶಿಕ್ಷಕಿ ಪಾಠ ಮಾಡುತ್ತಾರೆ, ಆ ಪೈಕಿ ಯಾವುದು ಅವನಿಗೆ ಅರ್ಥ ಆಗುತ್ತಿದೆ ಅಥವಾ ಆಗುತ್ತಿಲ್ಲ ಇತ್ಯಾದಿ ವಿಚಾರದ ಬಗ್ಗೆ ಸಂಪೂರ್ಣ ಮಾಹಿತಿ ಇರುತ್ತದೆ. ಐದನೇ ಕ್ಲಾಸ್ ಮುಗಿಯುವ ತನಕ ಅದೇ ಶಾಲೆಯಲ್ಲಿ ಓದಿಸಬೇಕು ಎಂಬುದು ಅವರ ಉದ್ದೇಶ.

ಓದುವ- ಬರೆಯುವ- ಕಲಿಯುವ ಸಾಮರ್ಥ್ಯ ಬರಲಿ

ಓದುವ- ಬರೆಯುವ- ಕಲಿಯುವ ಸಾಮರ್ಥ್ಯ ಬರಲಿ

ಇನ್ನು ವೃತ್ತಿಯಿಂದ ಶಿಕ್ಷಕಿ ಆಗಿರುವ ರೂಪಾ ಬನಶಂಕರಿ ಮೂರನೇ ಹಂತದಲ್ಲಿ ಇದ್ದಾರೆ. ಅವರು ಕೆಲಸ ನಿರ್ವಹಿಸುವ ಶಾಲೆಯಲ್ಲಿ ಶಿಕ್ಷಕಿಯರ ಮಕ್ಕಳಿಗೆ ಫೀ ಮತ್ತಿತರ ವಿಚಾರದಲ್ಲಿ ವಿನಾಯಿತಿ ಇದೆ. ಆದರೂ ಅವರು ತಮ್ಮ ಮನೆ ಹತ್ತಿರದ- ಈ ಹಿಂದೆ ತಾವೇ ಪಾಠ ಮಾಡುತ್ತಿದ್ದ ಶಾಲೆಗೆ ಇಬ್ಬರೂ ಮಕ್ಕಳನ್ನೂ ಸೇರಿಸಿದ್ದಾರೆ. ಅವರ ಪ್ರಕಾರ: ಪ್ರಿ ನರ್ಸರಿ, ನರ್ಸರಿ ಹಾಗೂ ಒಂದರಿಂದ ನಾಲ್ಕನೇ ಕ್ಲಾಸ್ ತನಕ ಮಕ್ಕಳಿಗೆ ಸ್ವತಂತ್ರವಾಗಿ ಓದುವುದನ್ನು- ಬರೆಯುವುದನ್ನು, ಭಾಷೆಗಳ ವರ್ಣಮಾಲೆ, ಸಂಖ್ಯೆ, ಮಗ್ಗಿ ಇವುಗಳನ್ನೆಲ್ಲ ಚೆನ್ನಾಗಿ ಕಲಿಯುವಂತೆ ಮಾಡಬೇಕು. ಐದನೇ ಕ್ಲಾಸ್ ಗೆ ಶಿಕ್ಷಕರು ಹೇಳಿದ್ದನ್ನು ಬರೆದುಕೊಳ್ಳುವ, ತಮ್ಮಷ್ಟಕ್ಕೆ ಓದುವ ಸಾಮರ್ಥ್ಯ ಇರಬೇಕು. ಆ ಹಂತಕ್ಕೆ ಮಕ್ಕಳನ್ನು ಸಿದ್ಧಗೊಳಿಸುವ ಶಿಕ್ಷಕರು ಯಾವ ಶಾಲೆಯಲ್ಲಿ ಇದ್ದರೇನು, ಫೀ ಜಾಸ್ತಿ ಇದ್ದರಷ್ಟೇ ಶಾಲೆ ಚೆನ್ನಾಗಿರುತ್ತದೆ ಎಂಬ ಭ್ರಮೆ ಇಲ್ಲ. ಮನೆಯಲ್ಲಿ ತಂದೆ- ತಾಯಿಯೂ ಮಕ್ಕಳ ಆಸಕ್ತಿ ಗಮನಿಸಿ, ಪ್ರೋತ್ಸಾಹಿಸಿದರೆ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸಿಕೊಂಡು, ಕಲಿಯುತ್ತವೆ. ತಂದೆ- ತಾಯಿ ಪಾಲಿಗೆ ಮಕ್ಕಳು ಮೆಡಲ್ ಗಳಲ್ಲ. ಮನೆಗೆ ಬಂದವರು- ಹೋದವರ ಮುಂದೆ ರೈಮ್ಸ್ ಹೇಳು, ಟೇಬಲ್ಸ್ ಹೇಳು... ಎಂದು ವಯಸ್ಸಿಗೆ ಮೀರಿದ ಪ್ರತಿಭಾ ಪ್ರದರ್ಶನ ಮಾಡಿಸಿ, ಭೇಷ್ ಎನಿಸಿಕೊಳ್ಳಬೇಕಿಲ್ಲ.

ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡೆಗೆ ಪ್ರಾಮುಖ್ಯ

ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡೆಗೆ ಪ್ರಾಮುಖ್ಯ

ಐಬಿಎಂನಲ್ಲಿ ಉದ್ಯೋಗಿ ಆಗಿರುವ ಮಧುಸೂದನ್ ತಮ್ಮ ಮಗನನ್ನು ಸ್ಟೇಟ್ ಸಿಲಬಸ್ ಗೆ ಸೇರಿಸಿದ್ದಾರೆ. ಆ ಶಾಲೆ ತುಂಬ ಹೆಸರು ಪಡೆದಿದೆ. ಆದರೆ ಅಲ್ಲಿ ಸಿಬಿಎಸ್ ಇ, ಐಸಿಎಸ್ ಇ ಸಿಲಬಸ್ ಗೆ ಸೀಟ್ ಸಿಗುವುದು ಕಷ್ಟ. ಆದರೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಪಠ್ಯೇತರ ಚಟುವಟಿಕೆಗಳು ತುಂಬ ಚೆನ್ನಾಗಿ ಮಾಡುತ್ತಾರೆ. ಫೀ ಕೂಡ ಸಿಬಿಎಸ್ ಸಿ, ಐಸಿಎಸ್ ಇ ಗಿಂತ ಕಡಿಮೆ. ಶಾಲೆಯಲ್ಲಿ ಒಳ್ಳೆ ಮೈದಾನ ಇದೆ. ಜತೆಗೆ ಅಗತ್ಯ ಕಂಡು ಬಂದಾಗ ಮಕ್ಕಳಿಗೆ- ಪೋಷಕರಿಗೆ ಕೌನ್ಸೆಲಿಂಗ್ ವ್ಯವಸ್ಥೆ ಮಾಡುತ್ತಾರೆ. ಇಷ್ಟು ಅಂಶಗಳನ್ನೂ ಗಮನಿಸಿರುವ ಅವರಿಗೆ ಪಠ್ಯೇತರ ಚಟುವಟಿಕೆ ಹಾಗೂ ಕ್ರೀಡೆಗೆ ಪ್ರಾಮುಖ್ಯ ನೀಡುವ ಶಾಲೆ ಮತ್ತು ಓದಿನಲ್ಲಿ ಹೆಚ್ಚಿನ ಒತ್ತಡ ಆಗದ ಸಿಲಬಸ್ ಬೇಕಿತ್ತು. ಆದ್ದರಿಂದ ಅವರು ಹೆಚ್ಚಿನ ಯೋಚನೆ ಮಾಡದೆ ತಮ್ಮ ಮಗನನ್ನು ಆ ಶಾಲೆಗೆ ಸೇರಿಸಿದ್ದಾರೆ.

ಆಕ್ಸೆಂಚರ್ ನಲ್ಲಿ ಉದ್ಯೋಗ ಮಾಡುವ ಕುಮಾರ್ ಅವರದು ಸಹ ಹೀಗೆ ಯೋಚನೆ. ಅವರು ಮತ್ತೂ ಒಂದು ಅಂಶ ಗಮನಿಸಿದ್ದಾರೆ: ಶಾಲೆಗೆ ಬರುವ ಮಕ್ಕಳು ಯಾವ ಆರ್ಥಿಕ ವರ್ಗಕ್ಕೆ ಸೇರಿದವರು. ತೀರಾ ಶ್ರೀಮಂತರ ಮಕ್ಕಳು ಬರುವ ಶಾಲೆಗೆ ಸೇರಿಸಿದರೆ ಮಕ್ಕಳ ಜೀವನಶೈಲಿಯಲ್ಲಿ ಬದಲಾವಣೆಯಾದರೆ ಭವಿಷ್ಯದಲ್ಲಿ ಕಷ್ಟ ಆಗಬಹುದು ಎಂಬ ಕಾರಣಕ್ಕೆ ಮಧ್ಯಮ ವರ್ಗದವರು ತಮ್ಮ ಮಕ್ಕಳನ್ನು ಸೇರಿಸುವಂಥ ಶಾಲೆಗೆ ಸೇರಿಸಿದ್ದಾರೆ.

 

ಮಾತೃ ಭಾಷೆಯಲ್ಲಿ ಶಿಕ್ಷಣ ಪಡೆಯಬೇಕು

ಮಾತೃ ಭಾಷೆಯಲ್ಲಿ ಶಿಕ್ಷಣ ಪಡೆಯಬೇಕು

ಪತ್ರಕರ್ತರಾದ ರಘು ಅವರಿಗೆ ಮಾತೃ ಭಾಷೆ ಕನ್ನಡ ಮಾಧ್ಯಮದಲ್ಲೇ ಕನಿಷ್ಠ ಒಂದರಿಂದ ಏಳನೇ ತರಗತಿ ತನಕ ತಮ್ಮ ಮಗುವಿಗೆ ಶಿಕ್ಷಣ ದೊರೆಯಬೇಕು ಎಂಬ ಆಸೆ. ಅದಕ್ಕೆ ತಮ್ಮ ಮನೆ ಹತ್ತಿರದ ಸರ್ಕಾರಿ ಶಾಲೆಗೆ ಮಗುವನ್ನು ಸೇರಿಸಿದ್ದಾರೆ. ಶಾಲೆಯ ಸಮಿತಿಯಲ್ಲಿ ಸದಸ್ಯರೂ ಆಗಿದ್ದಾರೆ. ವಾರದಲ್ಲಿ ಕೆಲ ಸಮಯ ಬಿಡುವು ಮಾಡಿಕೊಂಡು ಆ ಶಾಲೆಯ ಮಕ್ಕಳಿಗೆ ತಮ್ಮ ಪರಿಚಯದ ಗಣಿತ, ವಿಜ್ಞಾನ, ಇಂಗ್ಲಿಷ್ ಮತ್ತಿತರ ವಿಷಯಗಳ ಶಿಕ್ಷಕರಿಂದ ಪಾಠದ ವ್ಯವಸ್ಥೆ ಮಾಡಿಸುತ್ತಾರೆ. ಜತೆಗೆ ಎಲ್ಲ ಮಕ್ಕಳಿಗೂ ಕಂಪ್ಯೂಟರ್ ಶಿಕ್ಷಣ ಸಿಗಲು ಆ ಕ್ಷೇತ್ರದಲ್ಲಿ ಇರುವವರಿಂದ ಪಾಠ ಮಾಡಿಸುತ್ತಾರೆ. ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ತಮ್ಮಂತೆಯೇ ಆಸಕ್ತಿ ಇರುವವರಿಗೆಲ್ಲ ಒಟ್ಟುಗೂಡಿಸಿಕೊಂಡು, ಒಂದು ಸಂಘಟನೆ ಮಾಡಿಕೊಂಡಿದ್ದಾರೆ. ಆ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ, ವಿವಿಧ ವಿಷಯಗಳ ತಜ್ಞರಿಂದ ಪಾಠ ಮಾಡಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳ ಶಿಕ್ಷಕರು, ಶಿಕ್ಷಕಿಯರ ಜತೆ ಸಂವಾದ ಏರ್ಪಡಿಸುತ್ತಾರೆ. ಗುಣಮಟ್ಟದ ಶಿಕ್ಷಣಕ್ಕೆ ಏನೆಲ್ಲ ಮಾಡಬೇಕೋ ಅವೆಲ್ಲಕ್ಕೂ ಪ್ರಯತ್ನ ಪಡುತ್ತಿದ್ದಾರೆ. ಅವರ ಪ್ರಕಾರ ಭಾಷೆ ಒಂದು ಮಾಧ್ಯಮ (ಮೀಡಿಯಂ) ಹೊರತು ಅದೇ ಜ್ಞಾನವಲ್ಲ.

ಇವತ್ತಿನ ಮಕ್ಕಳಿಗೆ ಎಷ್ಟು ಸಾಧ್ಯವೋ ಅಷ್ಟು ಭಾಷೆ ಕಲಿಸಿ: ಅವರು ಇಷ್ಟಪಟ್ಟು ಕಲಿತರೆ.

ಆದರೆ ಮಾತೃ ಭಾಷೆಯಲ್ಲಿ ಶಿಕ್ಷಣ ಕೊಡಿಸಿ. ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಚೆನ್ನಾಗಿ ಕಲಿಸಿ ಎಂಬುದು ಅವರ ಅಭಿಪ್ರಾಯ.

 

English summary

What Are The Points To Consider Before Admitting Child To School

Before admitting child in to school following points parents must be consider.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X