ಯಾವಾಗ ಸಾಲವನ್ನು ಪಡೆಯುವುದು/ಪಡೆಯದಿರುವುದು ಸೂಕ್ತ?
ನಾವು ಎಂದಿಗೂ ಸಾಲ ಮುಕ್ತವಾಗಿ ಇರುವುದು ಉತ್ತಮ. ಹಾಸಿಗೆ ಇದ್ದಷ್ಟು ಕಾಲು ಚಾಚಿ ಎಂಬಂತೆ ನಾವು ನಮ್ಮ ಆದಾಯ ಎಷ್ಟು ಇದೆಯೋ ಅಷ್ಟೇ ಹಣವನ್ನು ಖರ್ಚು ಮಾಡಿ ಜೀವನ ಸಾಗಿಸಿದರೆ, ಅದು ನೆಮ್ಮದಿ. ಸಾಲವಿದ್ದಷ್ಟು ತಲೆ ನೋವು ಹೆಚ್ಚು. ಸಾಮಾನ್ಯವಾಗಿ ನಾವು ಕಾರು ಅಥವಾ ಗೃಹ ಸಾಲವನ್ನು ಪಡೆಯುತ್ತೇವೆ. ಇದಕ್ಕಾಗಿ ನಾವು ಸಾಲವನ್ನು ಪಡೆಯುವುದು ಮುಖ್ಯವಾಗುತ್ತದೆ. ಒಂದೇ ಬಾರಿಗೆ ಅಷ್ಟೂ ಮೊತ್ತವನ್ನು ಹೊಂದಿಸುವುದು ಸಾಧ್ಯವಾಗದು.
ನಾವು ಆಸ್ತಿಯನ್ನು ಖರೀದಿ ಮಾಡುವ ಸಂದರ್ಭದಲ್ಲೂ ಸಾಲವನ್ನು ಪಡೆಯಬೇಕಾಗುತ್ತದೆ. ಆದರೆ ನಮಗೆ ಕೆಲವು ಸಂದರ್ಭದಲ್ಲಿ ಈ ಆಸ್ತಿಗಾಗಿ ಹೊರತಾಗಿ ಬೇರೆ ವಿಚಾರಗಳಿಗೆ ಹಣದ ತುರ್ತನ್ನು ಅನುಭವಿಸಬಹುದು. ಈ ವೇಳೆ ವೈಯಕ್ತಿಕ ಸಾಲ, ಕ್ರೆಡಿಟ್ ಕಾರ್ಡ್ ಸಾಲವನ್ನು ನಾವು ಪಡೆಯಬಹುದು.
ಸಾಮಾನ್ಯವಾಗಿ ವೈಯಕ್ತಿಕ ಸಾಲವು ಅತೀ ಅಧಿಕ ಬಡ್ಡಿದರವನ್ನು ಹೊಂದಿರುತ್ತದೆ. ಆದರೆ ಈಗ ವೈಯಕ್ತಿಕ ಸಾಲವು ಡಿಜಿಟಲ್ ರೂಪದಲ್ಲಿ ಅರ್ಜಿ ಸಲ್ಲಿಸಿದರೆ ಲಭ್ಯವಾಗಲಿದೆ. ಸಾಲ ನೀಡುವ ಸಂಸ್ಥೆಗಳ ಆಪ್‌ಗಳ ಮೂಲಕ ನಾವು ಸಾಲವನ್ನು ಸುಲಭವಾಗಿ ಪಡೆಯಲು ಸಾಧ್ಯವಾಗಲಿದೆ. ನಮಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಬೇಕಾದರೆ ಹಲವು ದಾಖಲೆಗಳು ನೀಡಬೇಕಾಗುತ್ತದೆ, ಹಾಗೆಯೇ ವೇತನವು ಅಧಿಕವಾಗಿರಬೇಕಾಗುತ್ತದೆ. ಆದರೆ ನಾವು ಯಾವ ಸಂದರ್ಭದಲ್ಲಿ ವೈಯಕ್ತಿಕ ಸಾಲವನ್ನು ಪಡೆಯಬಹುದು ಅಥವಾ ಯಾವ ಸಂದರ್ಭದಲ್ಲಿ ವೈಯಕ್ತಿಕ ಸಾಲವನ್ನು ಪಡೆಯುವುದು ಸೂಕ್ತವಲ್ಲ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ.....

ವೈಯಕ್ತಿಕ ಸಾಲ ಪಡೆಯುವುದು ಯಾವಾಗ?
ಬಿಲ್ ಹಾಗೂ ದೈನಂದಿನ ವೆಚ್ಚ: ಬಿಲ್ ಹಾಗೂ ದೈನಂದಿನ ವೆಚ್ಚಕ್ಕಾಗಿಯೂ ಕೆಲವರು ವೈಯಕ್ತಿಕ ಸಾಲವನ್ನು ಪಡೆಯುತ್ತಾರೆ. ಇದಕ್ಕೆ ಮುಖ್ಯವಾಗಿ ಕ್ರೆಡಿಟ್ ಕಾರ್ಡ್ ಅನ್ನು ಬಳಕೆ ಮಾಡಲಾಗುತ್ತದೆ. ತಿಂಗಳ ಮಧ್ಯದಲ್ಲೇ ನಮ್ಮ ಹಣವೆಲ್ಲವೂ ಖರ್ಚಾಗಿ ಇನ್ನು ಕೂಡಾ ಬಿಲ್ ಪಾವತಿ ಹಾಗೂ ದೈನಂದಿನ ವೆಚ್ಚಕ್ಕೆ ಕಷ್ಟವಾದಾಗ ಕ್ರೆಡಿಟ್ ಕಾರ್ಡ್ ಮೂಲಕ ವೈಯಕ್ತಿಕ ಸಾಲವನ್ನು ಪಡೆಯಲಾಗುತ್ತದೆ.
ತುರ್ತು ಸಂದರ್ಭ: ಆರೋಗ್ಯ ತುರ್ತು ಪರಿಸ್ಥಿತಿ ಉಂಟಾದ ಸಂದರ್ಭದಲ್ಲಿಯೂ ವೈಯಕ್ತಿಕ ಸಾಲವನ್ನು ಪಡೆಯಲಾಗುತ್ತದೆ. ಈ ಸಂದರ್ಭದಲ್ಲಿ ನಮಗೆ ವೈಯಕ್ತಿಕ ಸಾಲವು ತುರ್ತಾಗಿಯೇ ಲಭ್ಯವಾಗಲಿದೆ.ಸಣ್ಣ ಸಾಲ ಮರುಪಾವತಿ: ಜನರು ಸಣ್ಣ ಮೊತ್ತದ ಸಾಲವನ್ನು ಪಡೆದಿರುತ್ತಾರೆ. ಆದರೆ ಅದಕ್ಕೆ ಅಧಿಕ ಬಡ್ಡಿದರವನ್ನು ಪಾವತಿ ಮಾಡುತ್ತಿರುತ್ತಾರೆ. ಈ ಸಂದರ್ಭದಲ್ಲಿ ವೈಯಕ್ತಿಕ ಸಾಲವನ್ನು ಪಡೆದುಕೊಂಡು ಈ ಸಣ್ಣ ಮೊತ್ತದ ಸಾಲವನ್ನು ಪಾವತಿ ಮಾಡಿಬಿಟ್ಟು ಬಳಿಕ ಈ ಸಾಲವನ್ನು ಪಾವತಿ ಮಾಡುತ್ತಾರೆ. ಈ ಮೂಲಕ ಅಧಿಕ ಬಡ್ಡಿದರದಿಂದ ಪಾರಾಗುತ್ತಾರೆ.
ಹಬ್ಬ, ವಿವಾಹ, ಶಿಕ್ಷಣದ ವೆಚ್ಚಕ್ಕಾಗಿ ಸಾಲ
ಹಬ್ಬ, ವಿವಾಹ: ಭಾರತವು ಹಲವಾರು ಹಬ್ಬಗಳನ್ನು ಆಚರಣೆ ಮಾಡಲಾಗುತ್ತದೆ. ಈ ಹಬ್ಬಗಳನ್ನು ನಮ್ಮ ಮಾಸಿಕ ವೇತನವನ್ನು ಹೊಂದಿಸಿಕೊಂಡು ಆಚರಿಸಲು ಸಾಧ್ಯವಾಗದೆ ಸಾಲವನ್ನು ಪಡೆಯಬೇಕಾಗುತ್ತದೆ. ಇದಕ್ಕಾಗಿ ನೀವು ಸಾಲವನ್ನು ಪಡೆಯಬಹುದಾಗಿದೆ. ಬಳಿಕ ಇಎಂಐ ಪಾವತಿ ಮಾಡಬಹುದು. ಇನ್ನು ವಿವಾಹಕ್ಕಾಗಿಯೂ ಭಾರತದಲ್ಲಿ ಅಧಿಕ ಖರ್ಚು ಮಾಡಲಾಗುತ್ತದೆ. ಈ ಸಂದರ್ಭದಲ್ಲಿಯೂ ವೈಯಕ್ತಿಕ ಸಾಲವನ್ನು ಪಡೆಯಬಹುದು.
ಶಿಕ್ಷಣ ಶುಲ್ಕ: ಶಿಕ್ಷಣ ಶುಲ್ಕವನ್ನು ಪಾವತಿ ಮಾಡಲು ಶಿಕ್ಷಣ ಸಾಲವಿದೆ. ಆದರೆ ಕೆಲವೊಬ್ಬರ ವೈಯಕ್ತಿಕ ಸಾಲವನ್ನು ಪಡೆದು ಶಿಕ್ಷಣಕ್ಕಾಗಿ ಖರ್ಚು ಮಾಡಿ ಮಾಸಿಕವಾಗಿ ಸಾಲ ಪಾವತಿ ಮಾಡುತ್ತಾರೆ. ಶಿಕ್ಷಣ ಪಡೆದ ಬಳಿಕ ಸಾಲವನ್ನು ಮರುಪಾವತಿ ಮಾಡುವ ವ್ಯವಸ್ಥೆಗೆ ಬದಲಾಗಿ ಮಾಸಿಕವಾಗಿ ಪಾವತಿ ಮಾಡಿ ಶೀಘ್ರವಾಗಿ ಸಾಲ ಮುಕ್ತವಾಗಲು ಬಯಸುವವರು ಈ ವೈಯಕ್ತಿಕ ಸಾಲವನ್ನು ಶಿಕ್ಷಣ ಶುಲ್ಕ ಪಾವತಿಗೆ ಬಳಕೆ ಮಾಡಿಕೊಳ್ಳುತ್ತಾರೆ.

ಈ ಸಂದರ್ಭ ವೈಯಕ್ತಿಕ ಸಾಲ ಪಡೆಯದಿರಿ
ಜೂಜು: ಜೂಜು ಆಡಲೆಂದು ವೈಯಕ್ತಿಕ ಸಾಲವನ್ನು ಪಡೆಯುವುದು ಕಾನೂನುಬಾಹಿರವಾಗಿದೆ. ಹಾಗೆಯೇ ಇದರಲ್ಲಿ ನಾವು ಸೋಲುತ್ತೇವೆಯೋ ಅಥವಾ ಗೆಲ್ಲುತ್ತೇವೆಯೋ ಎಂದು ತಿಳಿದಿರುವುದಿಲ್ಲ. ಹಾಗಿರುವಾಗ ಸಾಲವನ್ನು ಪಡೆಯುವುದು ಸರಿಯಲ್ಲ. ಇನ್ನು ವೈಯಕ್ತಿಕ ಸಾಲವನ್ನು ಪಡೆದು, ಅದನ್ನು ಅಕ್ರಮ ಅಥವಾ ಕ್ರಿಮಿನಲ್ ಉದ್ದೇಶಕ್ಕಾಗಿ ಬಳಕೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.
ಉಳಿತಾಯಕ್ಕೆ ವೈಯಕ್ತಿಕ ಸಾಲ: ನಮಗೆ ಉಳಿತಾಯ ಮಾಡಲು ವೈಯಕ್ತಿಕ ಸಾಲವನ್ನು ಪಡೆಯುವುದು ಎಂದಿಗೂ ಕೂಡಾ ಪರ್ಯಾಯವಲ್ಲ. ನಾವು ಉಳಿತಾಯ ಮಾಡುವಾಗ ಲಾಭ ಗಳಿಸುವುದು ಮುಖ್ಯ. ಆದರೆ ಸಾಲವನ್ನು ಪಡೆದು ಅದರ ಬಡ್ಡಿದರವನ್ನು ಪಾವತಿ ಮಾಡುತ್ತಾ ಹಣವನ್ನು ಉಳಿತಾಯ ಮಾಡುತ್ತಿದ್ದೇವೆ ಅಂದುಕೊಳ್ಳುವುದು ಭ್ರಮೆಯಷ್ಟೆ. ಇತರೆ ಸಾಲಗಳಿಗಿಂತ ವೈಯಕ್ತಿಕ ಸಾಲದ ಬಡ್ಡಿದರ ಅಧಿಕವಾಗಿರುವಾಗ ಈ ಸಾಲವನ್ನು ಪಡೆದು ಉಳಿತಾಯ ಮಾಡುವುದು ಸೂಕ್ತವಲ್ಲ. ಇದರ ಮರುಪಾವತಿ ನಿಮ್ಮನ್ನು ತೊಂದರೆಗೆ ದೂಡಬಹುದು.

ಷೇರು ಮಾರುಕಟ್ಟೆ ಹೂಡಿಕೆಗೆ ವೈಯಕ್ತಿಕ ಸಾಲ
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ನಿಟ್ಟಿನಲ್ಲಿ ವೈಯಕ್ತಿಕ ಸಾಲವನ್ನು ಪಡೆಯುವುದು ಅತೀ ಕೆಟ್ಟ ಉಪಾಯವಾಗಿದೆ. ಷೇರು ಮಾರುಕಟ್ಟೆ ಎಂದಿಗೂ ಕೂಡಾ ಸುರಕ್ಷಿತ ಆಯ್ಕೆಯಲ್ಲ. ಇಲ್ಲಿ ಪ್ರತಿ ನಿಮಿಷಕ್ಕೂ ಏರಿಳಿತ ಕಂಡು ಬರುತ್ತದೆ. ಒಂದು ದಿನ ಲಾಭವಾದರೆ ಇನ್ನೊಂದು ದಿನ ಭಾರೀ ನಷ್ಟವಾಗಬಹುದು. ಮತ್ತೆ ಇನ್ನೆಂದೋ ಭಾರಿ ಲಾಭವಾಗಬಹುದು. ಹಾಗಿರುವಾಗ ನಾವು ಇಂತಹ ಅಸುರಕ್ಷಿತ ಹೂಡಿಕೆ ಮಾಡಲು ಸಾಲ ಪಡೆಯುವುದು ಅಪಾಯಕಾರಿಯಾಗಿದೆ. ಇನ್ನು ಸಾಮಾನ್ಯವಾಗಿ ಕೆಲವು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ನಮಗೆ ಸಾಲವನ್ನು ನೀಡುತ್ತದೆ. ಆದರೆ ಇದರಲ್ಲಿ ಬಡ್ಡಿದರ ಭಾರಿ ಅಧಿಕವಾಗಿರುತ್ತದೆ. ಆದ್ದರಿಂದಾಗಿ ನಾವು ವೈಯಕ್ತಿಕ ಸಾಲವನ್ನು ಪಡೆಯುವಾಗ ಎಂದಿಗೂ ಎಚ್ಚರದಿಂದ ಇರಬೇಕಾಗುತ್ತದೆ.