Englishहिन्दी മലയാളം தமிழ் తెలుగు

ಬಿಟ್ ಕಾಯಿನ್ ಬಗ್ಗೆ ನಿಮಗೆ ಗೊತ್ತಿರಬೇಕಾದ 14 ಸಂಗತಿಗಳು

Written By: Siddu
Subscribe to GoodReturns Kannada

ಇಂದು ಬಿಟ್ ಕಾಯಿನ್ ಎಂಬ ವಿಷಯವನ್ನು ಪದೇ ಪದೇ ಪ್ರಸ್ತಾಪಿಸುತ್ತಿರುವುದು, ಪತ್ರಿಕೆಗಳಲ್ಲಿಯೂ ಬಿಟ್ ಕಾಯಿನ್ ಬಗ್ಗೆ ವರದಿಗಳು ಬರುತ್ತಿರುವುದು ಸ್ವಾಭಾವಿಕವಾಗಿಯೇ ನಿಮ್ಮಲ್ಲಿ ಕುತೂಹಲ ಮೂಡಿಸಿರಬಹುದು. ವಿಶೇಷವಾಗಿ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡುವ ಹೂಡಿಕೆದಾರದು, ದೊಡ್ಡ ಸಂಸ್ಥೆಗಳ ಮಾಲಿಕರು, ಉದ್ಯಮಿಗಳು, ಸ್ಟಾಕ್ ಮಾರುಕಟ್ಟೆಯ ದಲ್ಲಾಳಿಗಳು ಈ ಬಗ್ಗೆ ತಮ್ಮ ಗಮನವನ್ನು ಹೆಚ್ಚಾಗಿ ಹರಿಸುತ್ತಿದ್ದಾರೆ. ಹಾಗಾಗಿ ಈ ಬಗ್ಗೆ ಎಲ್ಲರೂ ಕೊಂಚ ಅರಿವನ್ನು ಹೊಂದಿರುವುದು ಅವಶ್ಯವಾಗಿದೆ.

ಬಿಟ್ ಕಾಯಿನ್ ಎಂದರೇನು ಎಂದು ಕೊಂಚವೂ ಗೊತ್ತಿಲ್ಲದಿದ್ದರೆ ಇದರ ಸಂಕ್ಷಿಪ್ತ ಪರಿಚಯ ಹೀಗಿದೆ:
ಇದೊಂದು ಡಿಜಿಟಲ್ ಹಣಕಾಸು ಅಥವಾ ಡಿಜಿಟಲ್ ಕರೆನ್ಸಿ ಆಗಿದೆ. ಅಂದರೆ ಆನ್ಲೈನ್ ಮೂಲಕ ಪಾವತಿಸಲು ನಿಜವಾದ ನಾಣ್ಯವನ್ನು ನೀಡಬೇಕಾಗಿಲ್ಲ. ಇಂದು ಸುಮಾರು 800ರಷ್ಟು ಇಂತಹ ಕ್ರಿಪ್ಟೋಕರೆನ್ಸಿ (cryptocurrency) ಗಳಿವೆ. ಈ ತಂತ್ರಜ್ಞಾನವನ್ನು ಬ್ಲಾಕ್ಚೈನ್ (blockchain) ಎಂಬ ನೂತನ ವಿಧಾನದ ಆಧಾರದಲ್ಲಿ ಸಾರ್ವಜನಿಕರಿಗೆ ಮಿಥ್ಯಾಹಣದ ಮೂಲಕ ಸುಲಭವಾಗಿ ತಮ್ಮ ಹಣಕಾಸಿನ ವ್ಯವಹಾರಗಳನ್ನು ವಿಶ್ವಮಟ್ಟದಲ್ಲಿ ನಡೆಸಲು ಸಾಧ್ಯವಾಗುತ್ತದೆ. ಕ್ರಿಪ್ಟೋಕರೆನ್ಸಿಯನ್ನು ಬಳಸಿ ಹಣದ ವ್ಯವಹಾರ ನಡೆಸುವ ವೀಸಾ, ಮಾಸ್ಟರ್ ಕಾರ್ಡ್ ಮೊದಲಾದ ವ್ಯವಸ್ಥೆಗಳು ಈಗಾಗಲೇ ಇವೆ. ಆದರೆ ಇವು ಒಂದು ದೇಶದಿಂದ ಇನ್ನೊಂದು ದೇಶದ ನಡುವಣ ವ್ಯವಹಾರದಲ್ಲಿ ಮೊದಲು ಈ ದೇಶದ ಹಣವನ್ನು ಡಾಲರುಗಳಿಗೂ, ಬಳಿಕ ಡಾಲರುಗಳಿಂದ ಆ ದೇಶದ ಹಣಕ್ಕೂ ಪರಿವರ್ತಿಸಿ ವಹಿವಾಟು ನಡೆಸುತ್ತವೆ. ಆದರೆ ಈ ಎರಡೂ ಪರಿವರ್ತನೆಗಳಲ್ಲಿ ಸಂಸ್ಥೆಗಳು ಅಪಾರವಾದ ಕಮೀಶನ್ ಅಥವಾ ದಲ್ಲಾಳಿ ಹಣವನ್ನು ಪಡೆಯುತ್ತವೆ. ಅಲ್ಲದೇ ಈ ವಹಿವಾಟು ಸರ್ಕಾರದ ಆಧೀನದಲ್ಲಿಯೇ ಬ್ಯಾಂಕುಗಳ ಮುಖಾಂತರ ನಡೆಯುತ್ತದೆ. ಆದರೆ ಬಿಟ್ ಕಾಯಿನ್ ಗೆ ಯಾವುದೇ ನಿರ್ಬಂಧವಿಲ್ಲ. ನಮ್ಮ ದೇಶದ ವಿತ್ತ ಸಚಿವಾಲಯ ಹಾಗೂ ಆರ್ಬಿಐ ಸದ್ಯಕ್ಕೆ ಈ ಹಣಕ್ಕೆ ಭಾರತದಲ್ಲಿ ಸರ್ಕಾರದ ಮಾನ್ಯತೆ ಇಲ್ಲ ಎಂದಿದೆ.

ಬಿಟ್ ಕಾಯಿನ್ ಪ್ರಸ್ತುತಪಡಿಸಿ ಕೇವಲ ಎಂಟೂವರೆ ವರ್ಷಗಳಾಗಿವೆ ಅಷ್ಟೇ. ಆದರೆ ಜಗತ್ತಿನಲ್ಲಿ ಇಷ್ಟು ವೇಗವಾಗಿ ಅತ್ಯಂತ ದುಬಾರಿಯಾದ ನಾಣ್ಯವಾಗಿ ಹೊರಹೊಮ್ಮಿದ ಯಾವುದೇ ಹಣಕಾಸು ಇಲ್ಲ. ಇಂದಿನ ಇದರ ಬೆಲೆ ಲಕ್ಷಾಂತರ ರೂಪಾಯಿಗಳಾಗಿದ್ದು, ಇದರ ಇತಿಹಾಸ ಕೊಂಚ ವಿವಾದಾತ್ಮಕವೂ ಆಗಿದೆ. ಆದರೆ ಲಾಭ ತರುವ ಏನೇ ಇದ್ದರೂ ಜನರು ಇದರ ಇತಿಹಾಸದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎನ್ನುವುದಕ್ಕೆ ಈ ಬಿಟ್ ಕಾಯಿನ್ ಪ್ರತ್ಯಕ್ಷ ಸಾಕ್ಷಿ. ಬಿಟ್ ಕಾಯಿನ್ ಏನಿದು? ಇದರ ಬಗ್ಗೆ ಎಚ್ಚರವಿರಲಿ..

ಪ್ರಸ್ತುತ ಬಿಟ್ ಕಾಯಿನ್ ಚರ್ಚೆಯಲ್ಲಿ ಎಲ್ಲರೂ ಭಾಗಿಯಾಗಿ ನೀವು ಮಾತ್ರ ಮಂಕು ಕವಿದಂತೆ ಇರದೇ ಇರಲು ಕೆಳಗೆ ವಿವರಿಸಿರುವ ಹದಿನಾಲ್ಕು ಮಾಹಿತಿಗಳು ನೆರವಾಗಲಿವೆ. ಮುಂದೆ ಓದಿ..

1. ಬಿಟ್ ಕಾಯಿನ್ ಹುಟ್ಟು

ಇದರ ಪ್ರಾರಂಭ ಸುಮಾರು 2008ರಲ್ಲಿ ಸಾತೋಷಿ ನಾಕಾಮೋಟೋ (Satoshi Nakamoto) ಎಂಬ ವ್ಯಕ್ತಿಯಿಂದ ಆಗಿತ್ತು. ಆದರೆ ಈ ಹೆಸರು ಸಹ ಕಾಲ್ಪನಿಕವಾಗಿರಬಹುದು ಎಂದು ತಿಳಿಯಲಾಗಿದೆ. ಈ ವ್ಯಕ್ತಿ ಅಂದು ಬಿಟ್ ಕಾಯಿನ್ ಎಂಬ ಕ್ರಿಪ್ಟೋಕರೆನ್ಸಿ ಪ್ರಾರಂಭದ ಋಜುವಾತನ್ನು ಪ್ರಕಟಿಸಿದ್ದರು. ಬಳಿಕ ಈ ಋಜುವಾತಿನ ಪ್ರತಿ 2009ರಲ್ಲಿ ಪ್ರಕಟವಾದ ಕ್ರಿಪ್ಟೋಕರೆನ್ಸಿ ಮೇಲಿಂಗ್ ಲಿಸ್ಟ್ ಅಥವಾ ಪ್ರಸ್ತುತ ಇರುವ ಹಣಗಳ ಪಟ್ಟಿಯಲ್ಲಿ ಒಳಗೊಂಡಿರುವುದಾಗಿ ಪ್ರಕಟಗೊಂಡಿತು. ಆದರೆ 2010ರಲ್ಲಿ ಬಿಟ್ ಕಾಯಿನ್ ಎಂಬ ಈ ಕೂಸನ್ನು ಅನಾಥವಾಗಿಸಿ ಈ ನಾಕಾಮೋಟೋ ಮಹಾಶಯ ಎಲ್ಲೋ ನಾಪತ್ತೆಯಾದ. ಆದರೆ ಈ ಕೂಸಿನ ಶುಶ್ರೂಶೆಯಲ್ಲಿ ತಮ್ಮ ಮನೆಯ ಖರ್ಚು ನಿಭಾಯಿಸುತ್ತಿದ್ದ ಇತರ ಡೆವಲಪರುಗಳು ಈ ಕೂಸಿನ ಲಾಲನೆ ಪಾಲನೆಯ ಹೊಣೆಯನ್ನು ಹೊತ್ತು ದೈತ್ಯನಾಗಿ ಬೆಳೆಯಲು ನೆರವಾದರು. ಅಧಿಕೃತ ದಾಖಲೆಗಳ ಪ್ರಕಾರ ನಾಕಾಮೋಟೋ ಮಹಾಶಯ ಜನವರಿ 3 ರಂದು ಈ ಬಿಟ್ ಕಾಯಿನ್ ಕೂಸನ್ನು ಕೇವಲ ಐವತ್ತು ನಾಣ್ಯಗಳನ್ನು ಬಿಡುಗಡೆ ಮಾಡುವ ಮೂಲಕ ಜಗತ್ತಿಗೆ ಪರಿಚಯಿಸಿದ್ದ. ಬಿಟ್ ಕಾಯಿನ್ (Bitcoin) ಬಗ್ಗೆ ಎಲ್ಲರೂ ಕೇಳುವ 10 ಪ್ರಶ್ನೆಗಳೇನು ಗೊತ್ತೆ?

2. ಜಾರಿಕೊಳ್ಳುವ ನಿರ್ಮಾತೃ

ನಾಕಾಮೋಟೋ ಮಹಾಶಯ ಎಂಬ ವ್ಯಕ್ತಿ ಈ ಜಗತ್ತಿನಲ್ಲಿಯೇ ಇಲ್ಲ ಎಂದುಕೊಂಡಿದ್ದವರಿಗೆ ನ್ಯೂಸ್ ವೀಕ್ ಎಂಬ ಪತ್ರಿಕೆ ಒಂದು ಅಚ್ಚರಿಯ ಸಂದೇಶ ನೀಡಿತ್ತು. 2014ರಲ್ಲಿ ಪ್ರಕಟಗೊಳಿಸಿದ ವರದಿಯೊಂದರಲ್ಲಿ ಬಿಟ್ ಕಾಯಿನ್ ನಿರ್ಮಾತೃ ನಾಕಾಮೋಟೋ ಎಂಬ ವ್ಯಕ್ತಿ ಕ್ಯಾಲಿಫೋರ್ನಿಯಾದಲ್ಲಿರುವ ಟೆಂಪಲ್ ಸಿಟಿ ಎಂಬ ಪ್ರದೇಶದ ನಿವಾಸಿ ಡೋರಿಯನ್ ಸಾತೋಷಿ ನಾಕಾಮೋಟೋ ಎಂಬುವರೇ ಆಗಿದ್ದಾರೆ ಎಂದು ತಿಳಿಸಿತ್ತು. ಈ ಹೆಸರಿನ ವ್ಯಕ್ತಿ ಇರುವುದು ನಿಜವೇ ಹೌದಾದರೂ ಈ ವ್ಯಕ್ತಿ ಬಿಟ್ ಕಾಯಿನ್ ನಿರ್ಮಾತೃ ಮಾತ್ರ ತಾನಲ್ಲ ಎಂದು ಕಟುವಾಗಿ ಹೇಳಿ ಜಾರಿಕೊಂಡ. 2015ರಲ್ಲಿ ಆಸ್ಟ್ರೇಲಿಯಾದ ಉದ್ಯಮಿಯಾದ ಕ್ರೇಗ್ ರೈಟ್ ಎಂಬ ವ್ಯಕ್ತಿ ಬಿಟ್ ಕಾಯಿನ್ ನಿರ್ಮಿಸಿದ್ದು ನಾನೇ ಎಂದು ಎದೆತಟ್ಟಿಕೊಂಡು ಎದ್ದು ನಿಂತ. ಆದರೆ ಇದಕ್ಕಾಗಿ ಸೂಕ್ತ ದಾಖಲೆಗಳನ್ನು ಒದಗಿಸುವಲ್ಲಿ ವಿಫಲನಾದ. ಆದರೆ ನಾಕಾಮೋಟೋ ಎಂಬ ವ್ಯಕ್ತಿ ಯಾರೇ ಇರಲಿ, ಈ ನಾಣ್ಯದ ಪ್ರತಿ ಬಿಕರಿಯಲ್ಲಿಯೂ ಅಪಾರವಾದ ಕಮೀಶನ್ ಸಿಗುವ ಕಾರಣ ಈಗ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾನೆ. ಏಕೆಂದರೆ ಈ ವ್ಯಕ್ತಿ ಬಿಟ್ ಕಾಯಿನ್ ನ ಪ್ರಾರಂಭಿಕ ದಿನಗಳಲ್ಲಿಯೇ ಸುಮಾರು ಹತ್ತು ಲಕ್ಷ ಬಿಟ್ ಕಾಯಿನ್ ಗಳನ್ನು ಹೊಂದಿದ್ದ. ಇಂದು ಒಂದು ಬಿಟ್ ಕಾಯಿನ್ ಬೆಲೆ ರೂ. 625866.68. ಹಾಗಾದರೆ ಹತ್ತು ಲಕ್ಷಕ್ಕೆ ಎಷ್ಟಾಗಬಹುದು? ರೂ. 625,86,66,78,445.00. ಅಬ್ಬಾ..!

3. ವಿಶ್ವದ ಅತಿ ದುಬಾರಿ ಪಿಜ್ಜಾ

2008ರಲ್ಲಿಯೇ ಬಿಟ್ ಕಾಯಿನ್ ಪ್ರಾರಂಭಗೊಂಡಿದ್ದರೂ ಇದನ್ನು ಬಳಸಿ ವಸ್ತುವೊಂದನ್ನು ಖರೀದಿಸಿದ್ದು ಮೊದಲ ಬಾರಿಗೆ ಮೇ 22, 2010 ರಂದು. ಲಾಸ್ಜ್ಲೋ ಹಾನ್ಯೆಕ್ಸ್ ಎಂಬ ಪ್ರೋಗ್ರಾಮರ್ ಒಬ್ಬರು ಸುಮ್ಮನೇ ಪ್ರಯತ್ನಿಸಲೆಂದು ಒಂದು ಪಿಜ್ಜಾವನ್ನು ಬಿಟ್ ಕಾಯಿನ್ ಬಳಸಿ ಕೊಂಡಿದ್ದರು. ಇದಕ್ಕಾಗಿ ಸುಮಾರು ಹತ್ತು ಸಾವಿರ ಬಿಟ್ ಕಾಯಿನ್ ಗಳನ್ನು ಪಾವತಿಸಿದ್ದರು. ಆದರೆ ನವೆಂಬರ್ 28, 2017ರ ಬೆಲೆಯಂತೆ ಈ ಪಿಜ್ಜಾದ ಬೆಲೆ $99 ಮಿಲಿಯನ್ ಡಾಲರುಗಳಾಗಿವೆ. ಆ ಲೆಕ್ಕದಲ್ಲಿ ಈ ಪಿಜ್ಜಾ ವಿಶ್ವದ ಅತಿ ದುಬಾರಿ ಪಿಜ್ಜಾ ಆಯಿತು.

4. ನೀವು ಬಿಟ್ ಕಾಯಿನ್ ಗಳನ್ನು ಖರ್ಚು ಮಾಡಬಹುದು

ಬಿಟ್ ಕಾಯಿನ್ ಎಂದರೆ ಅಗತ್ಯವಸ್ತುಗಳನ್ನು ಕೊಳ್ಳಲು ಸಾಧ್ಯವಾಗುವ ಹಣಕಾಸು ಎಂದೇ ನಾವೆಲ್ಲಾ ತಿಳಿಯುತ್ತೇವೆ. ಆದರೆ ಇವನ್ನು ಚಲಾವಣೆ ಮಾಡುವ ಮುನ್ನ ಇದನ್ನು ಅಂಗಡಿಯವರೂ ಸ್ವೀಕರಿಸುವಂತಾಗಬೇಕು. ಶ್ರೀಲಂಕಾಕ್ಕೆ ಹೋಗಿ ಭಾರತದ ರೂಪಾಯಿ ಕೊಟ್ಟರೆ ಎಲ್ಲಾ ಅಂಗಡಿಯವರು ತೆಗೆದುಕೊಳ್ಳುವುದಿಲ್ಲ. ಆದರೆ ಭಾರತ ರೂಪಾಯಿಯಲ್ಲಿಯೂ ವ್ಯಾಪಾರ ಮಾಡಿ ಎಂದು ಬೋರ್ಡು ಹಾಕಿಕೊಂಡ ಅಂಗಡಿಗಳಲ್ಲಿ ಭಾರತದ ರೂಪಾಯಿಗಳನ್ನು ಪಾವತಿಸಬಹುದು. ಅಂತೆಯೇ ಈಗ ವಿಶ್ವಮಟ್ಟದಲ್ಲಿ ವ್ಯವಹಾರ ನಡೆಸುವ Overstock.com, Expedia, Newegg ಹಾಗೂ Dish ಮೊದಲಾದ ಸಂಸ್ಥೆಗಳು ನಾವು ಬಿಟ್ ಕಾಯಿನ್ ಹಣವನ್ನು ಸ್ವೀಕರಿಸುತ್ತೇವೆ ಎಂದು ಬೋರ್ಡು ಹಾಕಿ ಕುಳಿತಿದ್ದಾರೆ.

5. ಬಿಟ್ ಕಾಯಿನ್ ಸಂಯುಕ್ತ ಕಛೇರಿ (Federal Bureau)

ಒಂದು ಹಂತದಲ್ಲಿ ಅಮೇರಿಕಾದ ಸರ್ಕಾರವೇ ಅತಿ ಹೆಚ್ಚಿನ ಬಿಟ್ ಕಾಯಿನ್ ಹೊಂದಿತ್ತು. 2013ರಲ್ಲಿ ಅಮೇರಿಕಾದ ಕುಖ್ಯಾತ ಸಿಲ್ಕ್ ರೋಡ್ ಎಂಬ ಪ್ರದೇಶವನ್ನು ಅಲ್ಲಿ ಮುಕ್ತವಾಗಿ ಸಿಗುತ್ತಿದ್ದ ಮಾದಕ ಪದಾರ್ಥ ಹಾಗೂ ಇತರ ಕಾನೂನು ಬಾಹಿರ ಚಟುವಟಿಕೆಗಳಿಗಾಗಿ ನಿಷೇಧಿಸಿ ನಿರ್ಬಂಧಗೊಳಿಸಿ ಮುಚ್ಚಿತು. ಬಳಿಕ ಈ ಪ್ರದೇಶದ ಕಳ್ಳವ್ಯವಹಾರವನ್ನೆಲ್ಲಾ ನಿರ್ವಹಿಸುತ್ತಿದ್ದ ಬಿಟ್ ಕಾಯಿನ್ ವ್ಯಾಲೆಟ್ ಗಳನ್ನೆಲ್ಲಾ ವಶಪಡಿಸಿಕೊಂಡಿತು. ಬರೆಯ ಒಂದು ತಾಣದಲ್ಲಿ ಸರ್ಕಾರಕ್ಕೆ 144,000 ಬಿಟ್ ಕಾಯಿನ್ ಗಳು ಸಿಕ್ಕವು. ಆದರೆ ಜೂಜುಕೋರರು ಈ ಹಣದ ಮೇಲೂ ಪಣಕಟ್ಟಿ ಮೋಜು ನೋಡುತ್ತಿದ್ದಾರೆ.

6. ಎತ್ತರಕ್ಕಿಳಿದು ಧಡ್ಡನೇ ಬಿದ್ದ ಹಣ

2014ರ ಪ್ರಾರಂಭದ ದಿನಗಳಲ್ಲಿ ಅದುವರೆಗೆ ಸತತವಾಗಿ ಮೌಲ್ಯವನ್ನು ವರ್ಧಿಸಿಕೊಳ್ಳುತ್ತಾ ಸಾಗಿದ್ದ ಬಿಟ್ ಕಾಯಿನ್ ಒಮ್ಮೆಲೇ ಬೆಲೆ ಕುಸಿತ ಕಂಡಿತು. ಅಂದು ಜಪಾನ್ ನ ಷೇರು ಮಾರುಕಟ್ಟೆಯನ್ನು ನಿಯಂತ್ರಿಸುವ ಮೌಂಟ್ ಗಾಕ್ಸ್ ಎಂಬ ಜಾಲತಾಣವನ್ನು ತಾಣಗಳ್ಳರು ಅಥವಾ ಹ್ಯಾಕರ್ಸ್ ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. 2014ರ ಮೌಲ್ಯದ ಪ್ರಕಾರ $460 ಮಿಲಿಯನ್ ನಷ್ಟು ಹಣವನ್ನು ಈ ಕಳ್ಳರು ದೋಚಿದರು. ಪರಿಣಾಮವಾಗಿ ಇದನ್ನು ಅವಲಂಬಿಸಿರುವ ಬಿಟ್ ಕಾಯಿನ್ ಸಹ ಬೆಲೆ ಕಳೆದುಕೊಂಡಿತು. ಈ ಕುಸಿತ ವಿಶ್ವದಲ್ಲಿ ಗಟ್ಟಿಯಾಗಿ ಯಾವುದೇ ಹಣಕಾಸು ಶಾಶ್ವತವಾಗಿ ನಿಲ್ಲುವುದಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿತು.

7. ಬಿಟ್ ಕಾಯಿನ್ ನಿಂದ ದೂರವಿರಿ ಎಂದ ವಾರೆನ್ ಬಫೆಟ್

ಷೇರು ಮಾರುಕಟ್ಟೆಯ ಪಿತಾಮಹ ಎಂದೇ ಪ್ರಸಿದ್ದಿ ಪಡೆದಿರುವ ವಾರೆನ್ ಬಫೆಟ್ (Warren Buffett) ವಿಶ್ವದ ಅಗ್ರಗಣ್ಯ ಹೂಡಿಕೆದಾರರಾಗಿದ್ದು, ಷೇರು ಮಾರುಕಟ್ಟೆಯ ಬಗ್ಗೆ ವಿಶ್ವದ ಯಾವುದೇ ವ್ಯಕ್ತಿಗಿಂತ ಹೆಚ್ಚಿನ ಪಾಂಡಿತ್ಯ ಹೊಂದಿರುವ ವ್ಯಕ್ತಿಯಾಗಿದ್ದಾರೆ. ಆದರೆ ಈ ವಿದ್ವಾಂಸರೇ ಬಿಟ್ ಕಾಯಿನ್ ಬಗ್ಗೆ ಯಾವುದೇ ಕುತೂಹಲ ತೋರದೇ ಕೆಲವು ಬಾರಿ ಮಾತ್ರ ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇವರ ಒಂದೇ ಮಾತೆಂದರೆ "ಈ ನಾಣ್ಯದಿಂದ ದೂರವಿರಿ. ವಾಸ್ತವವಾಗಿ ಇದೊಂದು ಮರೀಚಿಕೆ" ಎಂದು ಸಿಎನ್ ಬಿಸಿ ತಾಣದಲ್ಲಿ ಸ್ಪಷ್ಟಮಾತುಗಳಲ್ಲಿ ತಿಳಿಸಿದ್ದಾರೆ. "ಉಳಿದವರ ಪಾಲಿಗೆ ಇದು ಮಹಾಭಾಗ್ಯವೇ ಎಂದೆನ್ನಿಸಿದರೂ ನನ್ನ ಪಾಲಿಗೆ ಇದೊಂದು ನಗೆಹನಿ ಮಾತ್ರ" ಎಂದು ಈ ನಾಣ್ಯದ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಜೆಪಿ ಮೋರ್ಗಾನ್ ಚೇಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಇನ್ನೊಬ್ಬ ಬಿಲಿಯಾಧೀಶ ಹೂಡಿಕೆದಾರ ಜಮೀ ಡೈಮಾನ್ ರವರು ಬಿಟ್ ಕಾಯಿನ್ ಬಗ್ಗೆ ಇನ್ನೂ ಕಟುವಾದ ಅಭಿಪ್ರಾಯ ಹೊಂದಿದ್ದಾರೆ. "ಸುಮ್ಮನೇ ಗಾಳಿಯಲ್ಲಿ ಕೈಯಾಡಿಸಿ ಹಣವನ್ನು ಸೃಷ್ಟಿಸುವ ಯಾವುದೇ ವ್ಯಾಪಾರವನ್ನು ನೀವು ಸಾಧಿಸಲಾರಿರಿ. ಇದು ಎಂದಿಗೂ ಸುಖಾಂತಗೊಳ್ಳುವುದಿಲ್ಲ. ಈ ಹಣ ಒಂದು ದಿನ ಯಾರನ್ನಾದರೂ ಕೊಲ್ಲಿಸುತ್ತದೆ, ಆ ಬಳಿಕವೇ ಸರ್ಕಾರ ಎಚ್ಚೆತ್ತು ಈ ಹಣವನ್ನು ಮಣ್ಣು ಮಾಡಲು ನಿರ್ಧರಿಸುತ್ತದೆ" ಎಂದು ಹೇಳಿದ್ದಾರೆ.
ಆದರೆ ಬಿಟ್ ಕಾಯಿನ್ ಪರವಾಗಿ ಮಾತನಾಡುವ ಕೆಲವು ಬಿಲಿಯಾಧೀಶರು ಇದ್ದಾರೆ. ಮಾರ್ಕ್ ಕ್ಯೂಬನ್ ರವರು ಈ ನಾಣ್ಯ ಹಣದುಬ್ಬರಕ್ಕೆ ಒಳಗಾಗಿದೆ ಎಂದು ತಿಳಿಸಿದ್ದಾರೆ. ಆದರೆ ಇತ್ತೀಚೆಗೆ ಇವರು ಬಿಟ್ ಕಾಯಿನ್ ಸ್ವೀಕರಿಸುವ ಸಂಸ್ಥೆಯೊಂದರಲ್ಲಿ ಬಂಡವಾಳ ನಿಧಿಯನ್ನು ತೊಡಗಿಸಿದ್ದಾರೆ. ಇನ್ನೊಬ್ಬ ಬಿಲಿಯಾಧೀಶ ರಿಚರ್ಡ್ ಬ್ರಾನ್ಸನ್ ರವರು ಬಿಟ್ ಕಾಯಿನ್ ಬಗ್ಗೆ ಆಶಾವಾದವನ್ನು ಹೊಂದಿದ್ದಾರೆ.

8. ಅತೀಶ್ರೀಮಂತ ಅವಳಿಗಳು ಹಾಗೂ ಚತುರ ಹದಿಹರೆಯದ ಯುವಕ

ಬಿಟ್ ಕಾಯಿನ್ ಇತಿಹಾಸದಲ್ಲಿ ಇನ್ನೊಂದು ಕುತೂಹಲಕರ ವಿಷಯವೆಂದರೆ ಅವಳಿ ಸೋದರರಾದ ಕ್ಯಾಮೆರಾನ್ ಹಾಗೂ ಟೈಲರ್ ವಿಂಕೆಲ್ವಾಸ್ ಎಂಬುವರ ಬಗ್ಗೆ. ಇವರು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದಾರೆ ಹಾಗೂ ಇತ್ತೀಚೆಗೆ ಫೇಸ್ ಬುಕ್ ನಿರ್ಮಾತೃ ಮಾರ್ಕ್ ಜುಕೆನ್ ಬರ್ಗ್ ರವರ ಮೇಲೆ ಫೇಸ್ ಬುಕ್ ಪರಿಕಲ್ಪನೆ ತಮ್ಮದು ಎಂದು ದಾವೆ ಹೂಡಿದ್ದರು. ಈ ಸೋದರರು 2013ರಲ್ಲಿ $11 ಮೌಲ್ಯದ ಬಿಟ್ ಕಾಯಿನ್ ಖರೀದಿಸಿದ್ದರು. ಆ ಸಮಯದಲ್ಲಿ ಒಟ್ಟಾರೆ ಇದ್ದ ಬಿಟ್ ಕಾಯಿನ್ ಗಳ ಶೇಕಡಾ ಒಂದರಷ್ಟು ಆಗಿತ್ತು. ಅದೇ ವರ್ಷ ಡಿಸೆಂಬರ್ ಮೊದಲ ವಾರದಲ್ಲಿ ಒಂದು ಬಿಟ್ ಕಾಯಿನ್ ಬೆಲೆ $11,000ಕ್ಕೇರಿತು. ಆ ಪ್ರಕಾರ ತಾವು ವಿಶ್ವದ ಮೊದಲ ಬಿಟ್ ಕಾಯಿನ್ ಬಿಲಿಯಾಧೀಶರು ಎಂದು ಪ್ರಕಟಿಸಿಕೊಂಡರು. ಬಳಿಕ U.S. Securities and Exchange Commission ಅಥವಾ SEC ಎಂದು ಕರೆಯಲಾಗುವ ಸಂಸ್ಥೆಗೆ ಈ ಹಣದ ವಿಲೇವಾರಿ ಮಾಡುವ ವಿನಿಮಯ ಕೇಂದ್ರದ ಸ್ಥಾಪನೆಗೆ ಕೋರಿಕೊಂಡರು. ಆದರೆ ಸಚಿವಾಲಯ ಇವರ ಕೋರಿಕೆಯನ್ನು 2017ರಲ್ಲಿ ಕಡೆಗೂ ತಳ್ಳಿಹಾಕಿತು. ಇನ್ನೊಬ್ಬ ಹೂಡಿಕೆದಾರ ಎರಿಕ್ ಫಿನ್ಮನ್ ಎಂಬುವರು ತಾವು ಹದಿನಾಲ್ಕು ವರ್ಷದವರಾಗಿದ್ದಾಗ ಒಂದು ಸಾವಿರ ಡಾಲರುಗಳನ್ನು ಬಿಟ್ ಕಾಯಿನ್ ನಲ್ಲಿ ಹೂಡಿದ್ದರು ಈಗ ಇವರು ಒಬ್ಬ ಮಿಲಿಯಾಧೀಶರಾಗಿದ್ದಾರೆ.

9. ಸೆಲೆಬ್ರೆಟಿಗಳು ಇದರ ಆಕರ್ಷಣೆಯಿಂದ ಹೊರತಾಗಿಲ್ಲ

ಸಿಹಿ ಇದ್ದಲ್ಲಿ ಇರುವೆಗಳು ಬಂದೇ ಬರುತ್ತವಂತೆ. ಯಾವಾಗ ಈ ಹಣ ಜನಪ್ರಿಯಗೊಳ್ಳುತ್ತಾ ಬಂದಿತೋ, ಇತರರಂತೆ ಪ್ರಸಿದ್ದ ವ್ಯಕ್ತಿಗಳೂ ಈ ಹಣ ತಂದುಕೊಡುವ ಲಾಭಕ್ಕೆ ಆಕರ್ಷಿತರಾಗಿದ್ದಾರೆ. ನಟಿ ಗ್ವೈನೆಥ್ ಪಾಲ್ತ್ರೋ, ಆಷ್ಟನ್ ಕಛರ್, ನಾಸ್, ಫ್ಲಾಯ್ಡ್ ಮೇವೆದರ್ ಮೊದಲಾದ ಪ್ರಸಿದ್ದ ವ್ಯಕ್ತಿಗಳೆಲ್ಲಾ ಬಿಟ್ ಕಾಯಿನ್ ಗಳಲ್ಲಿ ತಮ್ಮ ಹಣವನ್ನು ಹೂಡಿದ್ದಾರೆ.

10. ದೊಡ್ಡ ಹಣಕಾಸು ಸಂಸ್ಥೆಯಿಂದಲೂ ಪ್ರೋತ್ಸಾಹ

2017ರ ಆಗಸ್ಟ್ ನಲ್ಲಿ ಫಿಡೆಲಿಟಿ ಇನ್ವೆಸ್ಟ್ಮೆಂಟ್ಸ್ ಎಂಬ ಖ್ಯಾತ ಸಂಸ್ಥೆ ತನ್ನ ವಹಿವಾಟಿನಲ್ಲಿ ಬಿಟ್ ಕಾಯಿನ್ ಸಹಿತ ಇತರ ಕ್ರಿಪ್ಟೋಕರೆನ್ಸಿಗಳನ್ನು ಒಳಗೊಳ್ಳುವುದಾಗಿ ಪ್ರಕಟಿಸಿ ಎಲ್ಲರ ಅಚ್ಚರಿಗೆ ಕಾರಣವಾಯಿತು. ಈ ಸಂಸ್ಥೆ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಸಂಸ್ಥೆಯ ತಾಣದಲ್ಲಿ ನೋಂದಾಯಿಸಿಕೊಂಡ ವ್ಯಕ್ತಿಗಳು ತಾವು ಹೊಂದಿರುವ ಬಿಟ್ ಕಾಯಿನ್ ಗಳ ಪ್ರಮಾಣವನ್ನು ಈ ವ್ಯವಸ್ಥೆಯನ್ನು ಒದಗಿಸುವ ಡಿಜಿಟಲ್ ವ್ಯಾಲೆಟ್ ಸಂಸ್ಥೆ ಕಾಯಿನ್ ಬೇಸ್ ಮೂಲಕ ಪಡೆಯಬಹುದು ಎಂದೂ ಘೋಷಿಸಿತು. ಕ್ರಿಪ್ಟೋಕರೆನ್ಸಿಯನ್ನು ಜನರು ಹೇಗೆ ಸ್ವೀಕರಿಸುತ್ತಾರೆ ಹಾಗೂ ಈ ಹಣವನ್ನು ಬಳಸಿ ಹೇಗೆ ಜನರು ಕೊಡುಕೊಳ್ಳುವಿಕೆಯನ್ನು ಮಾಡುತ್ತಾರೆ ಎಂದು ನೋಡಲು ಇದೊಂದು ಪ್ರಯೋಗ ಮಾತ್ರವೇ ಆಗಿದೆ" ಎಂದು ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ಹ್ಯಾಡ್ಲಿ ಸ್ಟರ್ನ್ ರವರು ರಾಯ್ಟರ್ಸ್ ಮಾಧ್ಯಮದ ಮೂಲಕ ತಿಳಿಸಿದ್ದಾರೆ.

11. ಎ ಹಾರ್ಡ್ ಫೋರ್ಕ್ (A hard fork)

ಸ್ವನಿಯಂತ್ರಿತ ವ್ಯವಸ್ಥೆಯಾಗಿರುವ ಬ್ಲಾಕ್ ಚೈನ್ ತಂತ್ರಜ್ಞಾನದಲ್ಲಿ ಹಿಂದೆ ಅಸಾಧ್ಯವಾದುದನ್ನು ಈಗ ಸಾಧ್ಯವಾಗಿಸುವ ಅಥವಾ ಇದಕ್ಕೆ ತದ್ವಿರುದ್ದವಾದ ಕ್ರಿಯೆಗೆ ಎ ಹಾರ್ಡ್ ಫೋರ್ಕ್ ಎಂಬ ಪದಗಳನ್ನು ಬಳಸುತ್ತಾರೆ. ಆಗಸ್ಟ್ 1, 2017 ರಂದು ಬಿಟ್ ಕಾಯಿನ್ ಈ ಹಾರ್ಡ್ ಫೋರ್ಕ್ ಕಾರಣಗಳಿಂದಾಗಿ ಕೊಂಚ ತೊಂದರೆಯನ್ನು ಎದುರಿಸಿತು. ಆ ಪ್ರಕಾರ ಪ್ರತಿ ಸೆಕೆಂಡಿನಲ್ಲಿ ನಿರ್ವಹಿಸಬಹುದಾದ ಲೆಕ್ಕಾಚಾರಗಳಿಗೆ ಒಂದು ಮಿತಿ ಹೇರಲಾಯ್ತು. ಪರಿಣಾಮವಾಗಿ ಬಿಟ್ ಕಾಯಿನ್ ಕಾರ್ಯವವಸ್ಥೆಯನ್ನು Bitcoin Cash debuting ಎಂಬ ವ್ಯವಸ್ಥೆಯ ಮೂಲಕ ಎರಡು ಬಗೆಯಲ್ಲಿ ವಿಂಗಡಿಸಲಾಯಿತು. ಪಿಸಿ ಮ್ಯಾಗ್ ತಾಣದ ರಾಬ್ ಮಾರ್ವಿನ್ ರವರು ಈ ಕ್ಲಿಷ್ಟ ವಿಷಯವನ್ನು ಹೀಗೆ ವಿವರಿಸುತ್ತಾರೆ: ಎ ಹಾರ್ಡ್ ಫೋರ್ಕ್ ಮೂಲಭೂತ ಸಿದ್ಧಾಂತದ ಬಿರುಕಿಗಿಂತಲೂ ಯಾವುದು ಹೆಚ್ಚು ಮುಖ್ಯ ಎಂಬುದನ್ನು ಗಮನಿಸುತ್ತದೆ. ವಿಕೇಂದ್ರೀಕೃತ ಪ್ರಕೃತಿ ಮತ್ತು ಬಿಟ್ ಕಾಯಿನ್ ಜಾಲಬಂಧದ ಸ್ವತಂತ್ರ ನಿಯಂತ್ರಣವನ್ನು ಸಂರಕ್ಷಿಸುವುದೋ ಅಥವಾ ಮುಖ್ಯವಾಹಿನಿಯ ಇಕಾಮರ್ಸ್ ಮತ್ತು ಪಾವತಿಗಳಿಗೆ ಕ್ರಿಪ್ಟೋಕರೆನ್ಸಿ ಹೆಚ್ಚು ಕಾರ್ಯಸಾಧ್ಯವಾಗುವಂತೆ ಮಾಡಲು ವ್ಯವಹಾರ ವೇಗವನ್ನು ಹೆಚ್ಚಿಸುವುದೋ ಎಂಬುದಾಗಿದೆ" ಇದುವರೆಗೂ ಬಿಟ್ ಕಾಯಿನ್ ನ ಹೆಗ್ಗಳಿಕೆ ಎಂದರೆ ಇದನ್ನು ದೊಡ್ಡ ಪ್ರಮಾಣದ ಮೊತ್ತದ ವಿಲೇವಾರಿಗಳನ್ನು ಹಾಗೂ ಪ್ರತಿ ಸೆಕೆಂಡಿಗೆ ಇತರ ಹಣಗಳಿಗಿಂತಲೂ ಹೆಚ್ಚು ವಹಿವಾಟುಗಳನ್ನು ನಿರ್ವಹಿಸಲು ಸಮರ್ಥವಾಗಿದೆ.

12. ವಿಶ್ವದ ಶ್ರೀಮಂತರ ಪಟ್ಟಿಗೆ ಸೇರಿದ ಬಿಟ್ ಕಾಯಿನ್

2017ರ ನವೆಂಬರ್ ನ ಗಣತಿಯಂತೆ ಬಿಟ್ ಕಾಯಿನ್ ಬೆಲೆ ಒಂದಕ್ಕೆ $10,000 ಆಗಿದೆ. ಈಗ ಚಲಾವಣೆಯಲ್ಲಿ 16.7 ಮಿಲಿಯನ್ ಮಾತ್ರವೇ ಬಿಟ್ ಕಾಯಿನ್ ಗಳಿವೆ. ಅಂದರೆ ಈ ಹಣ ಇಷ್ಟೇ ಆಗಿದ್ದು ಇದನ್ನು ಬೇಕೆನ್ನುವವರು ಈಗಿರುವವರ ಹತ್ತಿರವೇ ಕೊಳ್ಳಬೇಕಾಗುತ್ತದೆ. ಇದೇ ಈ ಹಣದ ಬೆಲೆ ಏರುವ ಗುಟ್ಟು. ಈ ಪ್ರಕಾರ ಒಟ್ಟು ಬಿಟ್ ಕಾಯಿನ್ ಬೆಲೆ $167,156,585,840 (ನವೆಂಬರ್ 28, 2017ರಂತೆ) ಅಥವಾ ರೂ 10682074755470.87. ಈ ಬೃಹತ್ ಮೊತ್ತ ವಿಶ್ವದ ಶ್ರೀಮಂತ ಸಂಸ್ಥೆಗಳಾದ ಡಿಸ್ನಿ, ಮ್ಯಾಕ್ ಡೋನಾಲ್ಡ್, ಐಬಿಎಂ ಗಿಂತಲೂ ಹೆಚ್ಚಿದೆ ಹಾಗೂ ಜಿಇ ಸಂಸ್ಥೆಗಿಂತಲೂ ಕೊಂಚ ಮೇಲೇ ಇದೆ.

13. ಸಾರ್ವಜನಿಕರು ಮುಕ್ತವಾಗಿ ಕೊಳ್ಳಬಹುದು

ಡಿಸೆಂಬರ್ ಮೊದಲ ವಾರದಲ್ಲಿ ಪ್ರಕಟಿಸಿದಂತೆ ಇನ್ನು ಮುಂದೆ ಬಿಟ್ ಕಾಯಿನ್ ಗಳಲ್ಲಿ ಹಣ ಹೂಡಲು ಇತರ ಕ್ರಿಪ್ಟೋಕರೆನ್ಸಿ ಬೇಕೆಂದಿಲ್ಲ. ಡಿಸೆಂಬರ್ 10, 2017 ರಂದು ಬಿಟ್ ಕಾಯಿನ್ ನ ಅಧಿಕೃತ ಪ್ರಕಟಣೆಯಲ್ಲಿ ಈ ತರಹದ ಪ್ರಕಟಣೆ ಹೊರಡಿಸಲಾಗಿದೆ. "ಆಸ್ತಿಯನ್ನು ಮಾರಲು ಅಥವಾ ಖರೀದಿಸಲು ಕೊಡು ಕೊಳ್ಳುವವರ ಹಣಕಾಸು ಒಪ್ಪಂದಗಳಿಗೆ ಬಿಟ್ ಕಾಯಿನ್ ಬಳಸಬಹುದು" ಶಿಕಾಗೋ ನಗರದ ಒಂದು ವಿನಿಮಯ ಸಂಸ್ಥೆಯಾದ Cboe ದಲ್ಲಿ ಬಿಟ್ ಕಾಯಿನ್ ಗಳು ದೊರಕುತ್ತವೆ ಎಂದು ಇನ್ವೆಸ್ಟೋಪೀಡಿಯಾ ತಿಳಿಸಿದೆ.

14. ಬಿಟ್ ಕಾಯಿನ್ ತಯಾರಿಸಲು ಅಗಾಧ ಖರ್ಚು

ಬಿಟ್ ಕಾಯಿನ್ ಅನ್ನು ಸೃಷ್ಟಿಸುವುದು ಸುಲಭವಲ್ಲ. ಇದಕ್ಕೆ ಮೈನಿಂಗ್ ಎಂದು ಕರೆಯುತ್ತಾರೆ. ಈ ಕ್ರಿಯೆಯಲ್ಲಿ ನಿರತರಾಗಿರುವವರು ಮೈನರ್ಸ್ ಎಂದು ಕರೆಯಲ್ಪಡುತ್ತಾರೆ. ಈ ಕ್ರಿಯೆಗೆ ಅಪಾರವಾದ ಶ್ರಮ ತಗಲುತ್ತದೆ ಹಾಗೂ ವಿಶೇಷ ಉಪಕರಣಗಳನ್ನು ಉಪಯೋಗಿಸಲಾಗುತ್ತದೆ. ಈ ಉಪಕರಣಗಳನ್ನು ನಡೆಸಲು ಹೆಚ್ಚಿನ ವಿದ್ಯುತ್ ಸಹ ಬೇಕಾಗುತ್ತದೆ. ಹಾಗಾಗಿ ಕೆಲವು ದೇಶಗಳಲ್ಲಿ ವಿದ್ಯುತ್ ಇನ್ನೂ ಅಸಾಂಪ್ರಾದಾಯಿಕ ವಿಧಾನಗಳಾದ, ಉದಾಹರಣೆಗೆ ಕಲ್ಲಿದ್ದಲು ಉರಿಸುವ ಮೂಲಕ ವಿದ್ಯುತ್ ಉತ್ಪಾದಿಸುವ ಚೀನಾ ಮೊದಲಾದ ದೇಶಗಳಿಗೆ ಹೊರೆಯಾಗುತ್ತದೆ. ಇಂಗ್ಲೆಂಡಿನ ಪವರ್ ಕಂಪೇರ್ ಎಂಬ ಸಂಸ್ಥೆ ನೀಡಿರುವ ವರದಿಯಲ್ಲಿ ಬಿಟ್ ಕಾಯಿನ್ ಉತ್ಪಾದಿಸಲು ಬಳಸುವ ವಿದ್ಯುತ್ ಐರ್ಲೆಂಡ್, ಆಫ್ರಿಕಾದ ಕೆಲವು ದೇಶಗಳ ಸಹಿತ ಸುಮಾರು 159 ದೇಶಗಳಲ್ಲಿ ಬಳಸುವ ವಿದ್ಯುತ್ತಿಗಿಂತಲೂ ಹೆಚ್ಚಾಗಿದೆ ಎಂದು ತಿಳಿಸಿದೆ. ವಿಶ್ವದ ಎಲ್ಲಾ ಮಿಥ್ಯಾಹಣಗಳು ಬಳಸುವ ಒಟ್ಟಾರೆ ವಿದ್ಯುತ್ ಅಗಾಧವಾಗಿದ್ದು, 2018ರಲ್ಲಿ ಇದು ಬಳಸಲಿರುವ ವಿದ್ಯುತ್ತಿನಲ್ಲಿ ಇಡಿಯ ಅರ್ಜೆಂಟೀನಾ ದೇಶವನ್ನು ಬೆಳಗಿಸಬಹುದು ಎಂದು ಬ್ಲೂಮ್ಬರ್ಗ್ ತಿಳಿಸಿದೆ.

English summary

14 Things You Need to Know About Bitcoin

Even the most tech savvy among us have a hard time wrapping their heads around Bitcoin. It's a hot topic and a frequent point of discussion among investors, entrepreneurs and stock traders, so you should want to know all about it.
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns