For Quick Alerts
ALLOW NOTIFICATIONS  
For Daily Alerts

ಕಡಿಮೆ ಶ್ರಮದಲ್ಲಿ ಹೆಚ್ಚು ಶ್ರೀಮಂತರಾಗಲು 5 ಮಾರ್ಗಗಳು

By ಅನಿಲ್ ಆಚಾರ್
|

ದುಡ್ಡಿನ ವಿಚಾರದಲ್ಲಿ ಸ್ವಾತಂತ್ರ್ಯ ಬಯಸದವರು ಯಾರು? ವಿಲಾಸಿ ಬಂಗಲೆ, ಸಿಕ್ಕಾಪಟ್ಟೆ ಬ್ಯಾಂಕ್ ಬ್ಯಾಲೆನ್ಸ್, ಕಾರು... ಹೀಗೆ ಶ್ರೀಮಂತಿಕೆಯ ಕನಸುಗಳಿಗೆ ಕೊನೆ ಮೊದಲಿಲ್ಲ. ಆದರೆ ಇದೆಲ್ಲ ರಾತ್ರೋರಾತ್ರಿ ಆಗಲ್ಲ. ಅದಕ್ಕೊಂದು ಶಿಸ್ತು ಬೇಕು. ದೀರ್ಘ ಕಾಲದ ಪ್ರಯತ್ನ, ಶ್ರಮ ಖಂಡಿತಾ ಬೇಕು.

ಹಣ ಹೂಡಿಕೆಯಲ್ಲಿ ಸೋತವರಿಂದಲೂ ಪಾಠ ಕಲಿಯಲು ಇಲ್ಲಿವೆ 4 ಕಾರಣ

ಮನಸ್ಥಿತಿ ಕೂಡ ಸರಿಯಾಗಿರಬೇಕು. ಇನ್ನೂ ಸರಿಯಾಗಿ ಹೇಳಬೇಕು ಅಂದರೆ, ಸಂತೆಯ ಗೌಜು- ಗದ್ದಲದ ಮಧ್ಯೆಯೂ ತಪಸ್ವಿಗೆ ಇರುವಂಥ ಏಕಾಗ್ರತೆ ಬೇಕಾಗುತ್ತದೆ. ಇಡೀ ಜಗತ್ತು ಕೊರೊನಾ ಹಿಡಿತದಲ್ಲಿ ಸಿಲುಕಿದೆ. ಇಂಥ ಸನ್ನಿವೇಶದಲ್ಲಿ ಹಣಕಾಸು ಸ್ಥಿತಿಯನ್ನು ಭದ್ರ ಮಾಡಿಕೊಳ್ಳುವುದಷ್ಟೇ ಪ್ರಾಮುಖ್ಯ ಪಡೆದಿಲ್ಲ. ಈ ಲೇಖದಲ್ಲಿ ಸಂಪತ್ತು ವೃದ್ಧಿಸಿಕೊಳ್ಳಲು ಸರಳ ಮಾರ್ಗಗಳನ್ನು ಸೂಚಿಸಲಾಗಿದೆ.

ನಿಮ್ಮ ಭವಿಷ್ಯಕ್ಕೆ ಏನು ಕೊಟ್ಟುಕೊಳ್ತೀರಿ?
 

ನಿಮ್ಮ ಭವಿಷ್ಯಕ್ಕೆ ಏನು ಕೊಟ್ಟುಕೊಳ್ತೀರಿ?

ನಿಮ್ಮ ಭವಿಷ್ಯಕ್ಕೆ ಏನು ಕೊಟ್ಟುಕೊಳ್ಳುತ್ತೀರಿ ಎಂಬುದು ಮುಖ್ಯವಾಗುತ್ತದೆ. ನಿಮ್ಮ ಕುಟುಂಬದ ಖರ್ಚುಗಳನ್ನು ಕಳೆದು, ಉಳಿದಿದ್ದರಲ್ಲಿ ಉಳಿತಾಯದ ಕಡೆಗೆ ವರ್ಗಾವಣೆ ಮಾಡಿ. ಅದು ಮ್ಯೂಚುವಲ್ ಫಂಡ್ ಎಸ್ ಐಪಿ ಇರಬಹುದು, ಸರ್ಕಾರಿ ಯೋಜನೆಗಳು, ರೆಕರಿಂಗ್ ಡೆಪಾಸಿಟ್ ಅಥವಾ ಮತ್ತೊಂದು ಉಳಿತಾಯ ಖಾತೆ ಒಟ್ಟಿನಲ್ಲಿ ಹಣ ವರ್ಗಾವಣೆ ಮಾಡಿ. ಇದು ಆಟೋಮೆಟ್ ಆಗುವಂತೆ ಮಾಡಬಹುದು. ಫ್ಲೆಕ್ಸಿ ಸೇವಿಂಗ್ಸ್ ಖಾತೆ ಇದ್ದಲ್ಲಿ ಅಕೌಂಟ್ ನಲ್ಲಿ ಬಳಸದೆ ಉಳಿದ ಮೊತ್ತ ಫಿಕ್ಸೆಡ್ ಡೆಪಾಸಿಟ್ (F.D.) ಆಗಿ ಬದಲಾಗುತ್ತದೆ. ರೆಕರಿಂಗ್ ಡೆಪಾಸಿಟ್ ಗಳು, ಪಿಪಿಎಫ್ ನಂಥ ಸಣ್ಣ ಉಳಿತಾಯ ಯೋಜನೆಗಳು, ಎಸ್ ಐಪಿಗಳು ಇಂಥದ್ದಕ್ಕೆ ಬ್ಯಾಂಕ್ ನಿಂದ ಪ್ರತಿ ತಿಂಗಳು ಹಣ ಹೋಗುವಂತೆ ಸೂಚನೆ ನೀಡಿ. ಹೀಗೆ ಹಣವನ್ನು ಆಟೋ ಡೆಬಿಟ್ ಮಾಡುವಂತೆ ಸೂಚನೆ ನೀಡಿದಲ್ಲಿ ನಿಮ್ಮ ವೇತನವನ್ನು ಬೇರೆ ಉದ್ದೇಶಕ್ಕೆ ಖರ್ಚು ಮಾಡುವ ಆಲೋಚನೆ ಬರುವುದಿಲ್ಲ. ವೇತನ ಹೆಚ್ಚಳ ಆದಾಗ ಹೂಡಿಕೆಯನ್ನೂ ಹೆಚ್ಚು ಮಾಡಬಹುದು ಅಥವಾ ಹೊಸ ಉಳಿತಾಯದಲ್ಲಿ ಹಣ ತೊಡಗಿಸಬಹುದು.

ರಿಯಲ್ ಎಸ್ಟೇಟ್ ಮೂಲಕ ಆದಾಯ

ರಿಯಲ್ ಎಸ್ಟೇಟ್ ಮೂಲಕ ಆದಾಯ

ಒಂದಕ್ಕಿಂತ ಹೆಚ್ಚು ಕೆಲಸಗಳನ್ನು ಮಾಡುತ್ತಾ ಸಾಗುವುದು ಚಿಕ್ಕ ವಯಸ್ಸಿನಲ್ಲಿ ಓಕೆ. ಆದರೆ ದೀರ್ಘಾವಧಿಗೆ ಅದು ಸಾಧ್ಯವಿಲ್ಲ. ವಯಸ್ಸಾಗುತ್ತಾ ಸಾಗಿದಂತೆ ಕೆಲಸ ಕಡಿಮೆ ಮಾಡಬೇಕು ಹಾಗೂ ಹೆಚ್ಚು ಸಂಪಾದನೆ ಆಗಬೇಕು. ಯೌವನದ ದಿನಗಳಲ್ಲಿ ಈ ಬಗ್ಗೆ ಸರಿಯಾದ ಯೋಜನೆ ರೂಪಿಸಿದಾಗ ಮಾತ್ರ ಇದು ಇದು ಸಾಧ್ಯ. ನಿಮಗೆ ಹಣ ನೀಡುವಂಥ ಆಸ್ತಿಯನ್ನು ಬೆಳೆಸಬೇಕು. ರಿಯಲ್ ಎಸ್ಟೇಟ್ ಅದಕ್ಕೆ ಅತ್ಯುತ್ತಮ ಉದಾಹರಣೆ. ವಸತಿ ಅಥವಾ ವಾಣಿಜ್ಯ ಸ್ಥಳವನ್ನು ಬಾಡಿಗೆಗೆ ನೀಡುವುದರಿಂದ ಹೆಚ್ಚುವರಿಯಾಗಿ ಆದಾಯಕ್ಕೆ ದಾರಿ ಮಾಡಿಕೊಳ್ಳಬಹುದು. ತುಂಬ ಪ್ರಮುಖ ಸ್ಥಳಗಳಲ್ಲಿ ಆಸ್ತಿ ಇದ್ದಲ್ಲಿ ಹೋರ್ಡಿಂಗ್ ಇಡುವುದಕ್ಕೆ ಅವಕಾಶ ಮಾಡಿಕೊಡುವ ಮೂಲಕವೂ ಆದಾಯ ಗಳಿಸಬಹುದು. ಕಾರು ಬಾಡಿಗೆಗೆ ಬಿಡುವುದು, ಬೆಳೆಯುತ್ತಿರುವ ಉದ್ಯಮದಲ್ಲಿ ಹೂಡಿಕೆ, ಗೋಡೌನ್ ಅನ್ನು ಆನ್ ಲೈನ್ ರೀಟೇಲರ್ ಗಳಿಗೆ ಬಾಡಿಗೆಗೆ ಬಿಡುವುದು, ನೆಟ್ ವರ್ಕ್ ಮಾರ್ಕೆಟಿಂಗ್ ಹೀಗೆ ನಾನಾ ವಿಧಾನ ಇದೆ. ಕಡಿಮೆ ನಿರ್ವಹಣೆಯ ಆದಾಯ ಮೂಲಗಳನ್ನು ನೋಡಿಕೊಳ್ಳಬೇಕು ಆ ಮೂಲಕ ಹೆಚ್ಚುವರಿಯಾಗಿ ಉಳಿಯುವ ಹಣವನ್ನು ಬೇರೆ ಆಸ್ತಿಗಳಲ್ಲಿ ತೊಡಗಿಸಬಹುದು.

ಈಕ್ವಿಟಿ, ಷೇರು, ಸ್ಟಾಕ್ಸ್ ಇತ್ಯಾದಿ
 

ಈಕ್ವಿಟಿ, ಷೇರು, ಸ್ಟಾಕ್ಸ್ ಇತ್ಯಾದಿ

ಈಕ್ವಿಟಿ, ಷೇರುಗಳು, ಸ್ಟಾಕ್ಸ್- ಹೀಗೆ ಯಾವ ಹೆಸರಿಂದಾದರೂ ಕರೆಯಿರಿ. ನಿಮ್ಮ ಒಟ್ಟಾರೆ ಆಸ್ತಿಯ ದೊಡ್ಡ ಭಾಗವನ್ನು ಅವುಗಳ ಮೇಲೆ ಹೂಡಿಕೆ. ಏಷ್ಯಾದ ಅತ್ಯಂತ ಶ್ರೀಮಂತ ಎನಿಸಿಕೊಂಡಿರುವ ಮುಕೇಶ್ ಅಂಬಾನಿ ಆಸ್ತಿ ಅಷ್ಟೊಂದು ಜಾಸ್ತಿ ಆಗಲು ಕಾರಣ ಆಗಿದ್ದು ರಿಲಯನ್ಸ್ ಇಂಡಸ್ಟ್ರೀಸ್ ನಲ್ಲಿ ಅವರು ಹೊಂದಿರುವ ಶೇಕಡಾ 49ರಷ್ಟು ಪಾಲು. ಸಾರ್ವಕಾಲಿಕ ದಾಖಲೆ ಮೊತ್ತಕ್ಕೆ ಅದು ಏರಿಕೆ ಆಗುತ್ತಿದ್ದಂತೆ ಆಸ್ತಿ ಕೂಡ ಏರಿತು. ನೀವು ನಿದ್ದೆ ಮಾಡುತ್ತಿದ್ದರೂ ನಿಮ್ಮ ಆಸ್ತಿ ತಾನಾಗಿಯೇ ಹೆಚ್ಚಳವಾಗುವ ಬಗೆ ಇದು. ಕೆಲವರಿಗೆ ಷೇರು ಮಾರುಕಟ್ಟೆ ಅಪಾಯಕಾರಿ ಎನಿಸಬಹುದು. ಅಂಥವರಿಗಾಗಿಯೇ ಮ್ಯೂಚುವಲ್ ಫಂಡ್ ಇದೆ. ನಿಮ್ಮ ಹಣವನ್ನು ಅಸೆಟ್ ಮ್ಯಾನೇಜ್ ಮೆಂಟ್ ಕಂಪೆನಿಗಳಿಗೆ ನೀಡಿದರೆ ಅವರು ಹೂಡಿಕೆ ಮಾಡುತ್ತಾರೆ. ಮಾರ್ಕೆಟ್ ಗೆ ಹೊಸಬರಾದರೆ ಇಂಡೆಕ್ಸ್ ಫಂಡ್ ಗಳ ಮೇಲೆ ಹೂಡಿಕೆ ಮಾಡಬಹುದು. ಅದು ಉತ್ತಮ ಮಾರ್ಗ. ನಿರ್ದಿಷ್ಟವಾದ ಷೇರು ಅಥವಾ ಸ್ಟಾಕ್ ಮೇಲೆ ಹೂಡಿಕೆ ಮಾಡುವುದಕ್ಕೆ ಹೆಚ್ಚಿನ ಶ್ರಮ ನಿರೀಕ್ಷಿಸುತ್ತದೆ. ನಾನಾ ವಲಯಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಇದು ಕಷ್ಟ ಎನಿಸಬಹುದು. ಆದ್ದರಿಂದ ಇಂಡೆಕ್ಸ್ ಫಂಡ್ ನಲ್ಲಿ ಹೂಡಿಕೆ ಮಾಡುವುದು ಉತ್ತಮ.

ಖರ್ಚು ಕಡಿಮೆ ಮಾಡಿದರೆ ಉಳಿತಾಯ

ಖರ್ಚು ಕಡಿಮೆ ಮಾಡಿದರೆ ಉಳಿತಾಯ

ನೀವು ಕಡಿಮೆ ಖರ್ಚು ಮಾಡಿದರೆ ಹೆಚ್ಚು ಉಳಿತಾಯ ಮಾಡಬಹುದು ಎಂದು ಹೇಳುವುದರಲ್ಲಿ ದೊಡ್ಡ ರಹಸ್ಯ ಏನಿಲ್ಲ. ಆದರೆ ಬಹಳ ಮಂದಿಗೆ ಆಫರ್ ಗಳು, ಡಿಸ್ಕೌಂಟ್ ಇಂಥ ಶಬ್ದಗಳು ಕಿವಿಗೆ ಬೀಳುತ್ತಿದ್ದಂತೆ ಮನಸ್ಸು ಶಾಪಿಂಗ್ ಮಾಡುವ ಕಡೆಗೆ ಸೆಳೆಯಲು ಶುರುವಾಗುತ್ತದೆ. ತಮಗೆ ಬೇಕೋ ಬೇಡವೋ ಖರೀದಿ ಮಾಡಿಬಿಡುತ್ತಾರೆ. ಆ ಮೇಲೆ ಅದಕ್ಕಾಗಿಯೇ ತಿಂಗಳುಗಟ್ಟಲೆ ಹಣ ಕಟ್ಟುತ್ತಾರೆ. ಖರೀದಿ ಜಗತ್ತಿನ ಸದ್ದಿಗೆ ಮೊದಲು ಕಿವಿಯನ್ನು ಮುಚ್ಚಿಕೊಳ್ಳಿ. ಇದು ಅಗತ್ಯವೇ? ಎಂದು ಪ್ರತಿಯೊಂದಕ್ಕೂ ಪ್ರಶ್ನೆ ಮಾಡಿಕೊಂಡ ನಂತರವೇ ಮುಂದುವರಿಯಿರಿ. ನಮ್ಮ ಬೇಕುಗಳಿಗೆ ಕೊನೆಯೇ ಇರುವುದಿಲ್ಲ. ಆದರೆ ಇರುವ ಹಣ ಬಹಳ ಕಡಿಮೆ. ಹೆಚ್ಚು ಸಮಯ ಸೋಷಿಯಲ್ ಮೀಡಿಯಾದಲ್ಲಿ ಕಳೆದಲ್ಲಿ ವಿಲಾಸಿ ಜೀವನಶೈಲಿ ಕಡೆಗೆ ಮನಸ್ಸು ಹಾತೊರೆಯುತ್ತದೆ. ಮನೆಯಲ್ಲಿ ಅಡುಗೆ ಮಾಡಿ. ಬಟ್ಟೆಯನ್ನು ಮನೆಯಲ್ಲೇ ಇಸ್ತ್ರಿ ಮಾಡಿಕೊಳ್ಳಿ. ಫೋನ್ ಗಳಿಂದ ಶಾಪಿಂಗ್ ಅಪ್ಲಿಕೇಷನ್ ಗಳನ್ನು ಡಿಲೀಟ್ ಮಾಡಿ. ಇವೆಲ್ಲ ನಿಮ್ಮ ಖರ್ಚನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಉತ್ತೇಜನ ನೀಡುವಂಥ ಅಂಶಗಳು. ಸಣ್ಣದಾಗಿ ಆರಂಭಿಸಿ ನೋಡಿದರೆ, ಬ್ಯಾಂಕ್ ಬ್ಯಾಲೆನ್ಸ್ ದೊಡ್ಡದಾಗಿ ಬೆಳೆಯುವುದನ್ನು ಕಣ್ಣೆದುರು ನೋಡಬಹುದು.

ಬಿಲ್ ಗೇಟ್ಸ್ ನಿಂದ ರತನ್ ಟಾಟಾ ತನಕ ಸಾಮಾನ್ಯವಾದ ಅಭಿರುಚಿ

ಬಿಲ್ ಗೇಟ್ಸ್ ನಿಂದ ರತನ್ ಟಾಟಾ ತನಕ ಸಾಮಾನ್ಯವಾದ ಅಭಿರುಚಿ

ನಮ್ಮ್ ಆಯ್ಕೆಗಳು, ಆಲೋಚನೆ ಮತ್ತಿತರ ಅಂಶಗಳು ಸುತ್ತಲಿನ ವ್ಯಕ್ತಿಗಳಿಂದ ಪ್ರಭಾವಿತ ಆಗುತ್ತದೆ. ನಿಮ್ಮ ಸುತ್ತ ಸರಿಯಾದ ಜನರು ಇಲ್ಲದಿದ್ದಾಗ ನಿರ್ಧಾರಗಳು ತಪ್ಪಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಬ್ಲಾಗ್ ಗಳನ್ನು ಓದಿ, ಪಾಡ್ ಕಾಸ್ಟ್ ಗಳನ್ನು ಕೇಳಿ, ಪುಸ್ತಕಗಳನ್ನು ಓದಿ ಹಾಗೂ ಜ್ಞಾನ ಹೆಚ್ಚಿಸುವಂಥ ವಿಡಿಯೋಗಳನ್ನು ನೋಡಿ. ಬಿಲ್ ಗೇಟ್ಸ್ ನಿಂದ ರತನ್ ಟಾಟಾ ತನಕ ಇವರೆಲ್ಲ ತಮ್ಮ ಯಶಸ್ಸಿನ ತುತ್ತ ತುದಿ ಏರಿದ ಮೇಲೆ ಓದುವ ಹವ್ಯಾಸವನ್ನು ಬಿಟ್ಟಿಲ್ಲ. ಈ ಪೈಕಿ ಕೆಲವರು ತಮ್ಮ ನೆಚ್ಚಿನ ಪುಸ್ತಕಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಾರೆ. ಇನ್ನು ಪುಸ್ತಕಗಳನ್ನು ಸಹ ಬರೆಯುತ್ತಾರೆ. ಶ್ರೀಮಂತ ವ್ಯಕ್ತಿಗಳಿಗೆ ಗೊತ್ತಿರುವ ವಿಚಾರ ಏನೆಂದರೆ, ಕಲಿಕೆ ಎಂಬುದು ಯಾವತ್ತಿಗೂ ನಿಲ್ಲಲ್ಲ. ಒಂದು ವೇಳೆ ಹಣಕಾಸಿನ ವಿಚಾರದಲ್ಲಿ ಶಿಕ್ಷಣ ಪಡೆದುಕೊಳ್ಳಲು ಆಗದಿದ್ದಲ್ಲಿ ಈಗ ನೀವು ಇರುವಂಥ ಕ್ಷೇತ್ರದಲ್ಲೇ ಕೌಶಲ ಹೆಚ್ಚಿಸಿಕೊಳ್ಳಿ.

English summary

5 Simple Ways To Become Rich By Doing Less

Personal finance: Here is the 5 simple ways to become rich by doing less.
Story first published: Sunday, October 18, 2020, 11:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X