ಸ್ವಂತ ಉದ್ಯೋಗ; ಕೇವಲ 2 ಲಕ್ಷ ರೂಗೆ ಐಸ್‌ಕ್ರೀಮ್ ಪಾರ್ಲರ್ ಪ್ರಾರಂಭಿಸಿ
ಐಸ್‌ಕ್ರೀಮ್ ಬಹಳ ಮಂದಿಗೆ ಇಷ್ಟವಾಗುವ ಮತ್ತು ಯಾವ ಸೀಸನ್‌ಗೂ ಹೊಂದಿಕೆಯಾಗುವ ತಿನಿಸು. ಬೇಸಿಗೆ ಕಾಲದಲ್ಲಿ ಐಸ್ ಕ್ರೀಮ್ ತಂಪು ಕೊಡುತ್ತದೆ. ಚಳಿಗಾಲದಲ್ಲಿ ಐಸ್ ಕ್ರೀಮ್ ತಿನ್ನಲು ಮಜಾ ಎನಿಸುತ್ತದೆ. ಮಳೆಯಲಿ ಐಸ್‌ಕ್ರೀಮ್ ಜೊತೆಯಲ್ಲಿ ಇನ್ನೂ ರೋಚಕ. ಹೀಗಾಗಿ, ಐಸ್‌ಕ್ರೀಮ್‌ಗೆ ಸದಾ ಬೇಡಿಕೆ ಇದ್ದೇ ಇರುತ್ತದೆ. ಮಕ್ಕಳು ಮತ್ತು ಹೆಂಗಳೆಯರಿಗೆ ಸದಾ ಆಕರ್ಷಣೆಯ ವಸ್ತು.
ಐಸ್ ಕ್ರೀಮ್ ಪಾರ್ಲರ್ ಇಟ್ಟುಕೊಂಡರೆ ಒಳ್ಳೆಯ ಬ್ಯುಸಿನೆಸ್ ಮಾಡಬಹುದು. ಆದರೆ, ಸ್ವಂತವಾಗಿ ಪಾರ್ಲರ್ ಇಟ್ಟುಕೊಂಡು ವ್ಯವಹಾರ ಕುದುರಿಸುವುದು ಹೇಗೆ ಎಂಬ ಚಿಂತೆ ಹತ್ತುವುದು ಸಹಜ. ಈ ಗೊಂದಲಕ್ಕೆ ಪರಿಹಾರವೆಂದರೆ ದೊಡ್ಡ ಬ್ರ್ಯಾಂಡ್‌ನ ಐಸ್ ಕ್ರೀಮ್ ಪಾರ್ಲರ್ ಹೊಂದುವುದು. ಈಗಂತೂ ಐಸ್ ಕ್ರೀಮ್ ಎಂದರೆ ಅಮೂಲ್ ಐಸ್ ಕ್ರೀಮ್ ಎನ್ನುವಷ್ಟು ಅದರ ಬ್ರ್ಯಾಂಡಿಂಗ್ ಆಗಿದೆ. ಅಮೂಲ್ ಐಸ್ ಕ್ರೀಮ್ ಪಾರ್ಲರ್ ಅನ್ನು ಹೊಂದುವುದೂ ಕೂಡ ಸುಲಭ.
ಪರಿಶುದ್ಧ ಐಸ್ ಕ್ರೀಮ್ ಅನ್ನು ಹಾಲಿನಿಂದ ತಯಾರಿಸಲಾಗುತ್ತದೆ. ಈ ರೀತಿ ಶುದ್ಧ ಐಸ್‌ಕ್ರೀಮ್ ತಯಾರಿಸುವ ಕೆಲವೇ ಭಾರತೀಯ ಕಂಪನಿಗಳಲ್ಲಿ ಅಮೂಲ್ ಪ್ರಮುಖವಾದುದು. ಹೀಗಾಗಿ, ಐಸ್‌ಕ್ರೀಮ್ ಗುಣಮಟ್ಟದ ಬಗ್ಗೆ ಗ್ರಾಹಕರಿಗೆ ಸಂಶಯ ಬರುವ ಪ್ರಶ್ನೆಯೇ ಇರುವುದಿಲ್ಲ. ಈ ಎಲ್ಲಾ ದೃಷ್ಟಿಯಿಂದ ಅಮೂಲ್ ಐಸ್‌ಕ್ರೀಮ್ ಪಾರ್ಲರ್ ಒಳ್ಳೆಯ ಲಾಭ ಕೊಡುವ ಉದ್ದಿಮೆಯಾಗಿ ಕೈಹಿಡಿಯಬಲ್ಲುದು.
ನಮ್ಮ ಕರ್ನಾಟಕದಲ್ಲಿ ಕೆಎಂಎಫ್ ವತಿಯಿಂದ ನಂದಿನಿ ಪಾರ್ಲರ್ ಇರುವ ರೀತಿಯಲ್ಲಿ ಗುಜರಾತ್ ಹಾಲು ಒಕ್ಕೂಟಕ್ಕೆ ಸೇರಿದ್ದು ಅಮೂಲ್. ಭಾರತದ ಅತ್ಯಂತ ದೊಡ್ಡ ಹಾಲಿನ ಬ್ರ್ಯಾಂಡುಗಳಲ್ಲಿ ಅಮೂಲ್ ಒಂದು. ಅಮೂಲ್ ದೇಶಾದ್ಯಂತ ಮಾರುಕಟ್ಟೆಯಲ್ಲಿ ಒಳ್ಳೆಯ ಬ್ರ್ಯಾಂಡಿಂಗ್ ಹೊಂದಿದೆ.

2 ಲಕ್ಷ ರೂ ಬಂಡವಾಳ ಸಾಕು
ಸಾಮಾನ್ಯವಾಗಿ ಫ್ರಾಂಚೈಸಿ ಮಾಡೆಲ್‌ನಲ್ಲಿ ರಾಯಲ್ಟಿ ಶುಲ್ಕ ಪಾವತಿಸಬೇಕಾಗುತ್ತದೆ. ಅಥವಾ ಲಾಭದಲ್ಲಿ ಶೇರಿಂಗ್ ಕೊಡಬೇಕಾಗುತ್ತದೆ. ಇದು ಅಮೂಲ್ ಫ್ರಾಂಚೈಸಿಗೆ ಅನ್ವಯ ಆಗುವುದಿಲ್ಲ. 2ರಿಂದ 6 ಲಕ್ಷ ರೂ ವೆಚ್ಚ ಮಾಡಿ ಅಮೂಲ್ ಐಸ್ ಕ್ರೀಮ್ ಪಾರ್ಲರ್‌ನ ಫ್ರಾಂಚೈಸಿ ಪಡೆಯಬಹುದಾಗಿದೆ.
ಸಾಮಾನ್ಯ ಅಮೂಲ್ ಐಸ್ ಕ್ರೀಮ್ ಪಾರ್ಲರ್, ಅಮೂಲ್ ರೈಲ್ವೆ ಪಾರ್ಲರ್ ಅಥವಾ ಅಮೂಲ್ ಕಿಯೋಸ್ಕ್‌ಗೆ 2 ಲಕ್ಷ ರೂ ಬಂಡವಾಳ ಬೇಕಾಗುತ್ತದೆ. ಇನ್ನು ಐಸ್ ಕ್ರೀಮ್ ಸ್ಕೂಪಿಂಗ್ ಪಾರ್ಲರ್‌ಗೆ 5 ಲಕ್ಷ ರೂ ಬಂಡವಾಳದ ಅಗತ್ಯ ಬೀಳುತ್ತದೆ.
ಅಮೂಲ್ ಐಸ್ ಕ್ರೀಮ್ ಪಾರ್ಲರ್‌ನ ಫ್ರಾಂಚೈಸಿ ಪಡೆಬೇಕೆಂದರೆ 25 ಸಾವಿರ ರೂ ಸೆಕ್ಯೂರಿಟಿ ಡೆಪಾಸಿಟ್ ಇಡಬೇಕು. ಮಳಿಗೆ ಮರುವಿನ್ಯಾಸ, ಮೆಷೀನ್ ಇತ್ಯಾದಿಗೆ ಉಳಿದ ವೆಚ್ಚ ಸಾಕಾಗುತ್ತದೆ.

ಏನಿರಬೇಕು?
ನೀವು ಅಮೂಲ್ ಐಸ್‌ಕ್ರೀಮ್‌ನ ಫ್ರಾಂಚೈಸಿ ಪಡೆಯಬೇಕೆಂದರೆ ಭಾರತೀಯ ನಾಗರಿಕರಾಗಿರಬೇಕು. 200 ಚದರ ಅಡಿಯಿಂದ 400 ಚದರ ಅಡಿಯಷ್ಟು ಸ್ಥಳ ಹೊಂದಿರಬೇಕು. ನಿಮ್ಮ ಹಣಕಾಸು ಸ್ಥಿತಿ ಸ್ವಲ್ಪ ಉತ್ತಮವಾಗಿರಬೇಕೆಂದು ಕೆಲವೊಮ್ಮೆ ನಿರೀಕ್ಷಿಸಲಾಗುತ್ತದೆ.
ಐಸ್‌ಕ್ರೀಮ್ ಔಟ್‌ಲೆಟ್‌ನಲ್ಲಿ ಡೀಪ್ ಫ್ರೀಜರ್ ಇರಬೇಕು. ವಿಸಿ ಕೂಲರ್, ಮಿಲ್ಕ್ ಕೂಲರ್, ಓವನ್, ವಾಫಲ್ ಕೋನ್ ಮೆಷೀನ್, ಕೋನ್ ಹೋಲ್ಡರ್, ಸ್ಕೂಪಿಂಗ್ ಕ್ಯಾಬಿನೆಟ್ ಇವೆಲ್ಲಾ ವ್ಯವಸ್ಥೆ ಮಾಡಿಕೊಳ್ಳಬೇಕು.
ಪಾರ್ಲರ್‌ಗೆ ನೀವು ಆಯ್ಕೆ ಮಾಡಿಕೊಳ್ಳುವ ಸ್ಥಳ ಬಹಳ ಮುಖ್ಯ. ಒಳ್ಳೆಯ ಲೊಕೇಶನ್‌ನಲ್ಲಿ ನೀವು ಪಾರ್ಲರ್ ಇಟ್ಟರೆ ತಿಂಗಳಿಗೆ 10 ಲಕ್ಷ ರೂ ಮಾಸಿಕ ಟರ್ನೋವರ್ ನಿರೀಕ್ಷಿಸಬಹುದು.

ಅಮೂಲ್ ಬೆಂಬಲ
ನಿಮಗೆ ಫ್ರಾಂಚೈಸಿ ಸಿಕ್ಕರೆ ಅಮೂಲ್‌ನ ಡಿಸ್ಟ್ರಿಬ್ಯೂಟರ್‌ಗಳು ಎಲ್ಲಾ ಉತ್ಪನ್ನಗಳನ್ನು ಸರಬರಾಜು ಮಾಡುತ್ತಾರೆ. ಅಮೂಲ್ ಕಂಪನಿಯೇ ಆರಂಭಿಕ ಬೆಂಬಲ ನೀಡುತ್ತದೆ. ಫ್ರಾಂಚೈಸಿಯ ಮಾಲೀಕರು ಅಥವಾ ಕೆಲಸಕ್ಕಿರುವವರಿಗೆ ತರಬೇತಿಯ ವ್ಯವಸ್ಥೆಯೂ ಇರುತ್ತದೆ.
ಅಮೂಲ್‌ನ ಉತ್ಪನ್ನಗಳನ್ನು ಮಾರಿದರೆ ನಿಮಗೆ ಸಿಗುವ ಲಾಭದ ಮಾರ್ಜಿನ್ ಶೇ. 2.5ರಿಂದ ಶೇ. 50ರವರೆಗೂ ಇರುತ್ತದೆ. ಪೌಚ್ ಮಿಲ್ಕ್‌ಗೆ ಶೇ. 2.5 ಪ್ರಾಫಿಟ್ ಮಾರ್ಜಿನ್ ಇರುತ್ತದೆ. ಐಸ್ ಕ್ರೀಮ್‌ಗೆ ಶೇ. 20, ಐಸ್ ಕ್ರೀಮ್ ಸ್ಕೂಪ್‌ಗಳಿಗೆ ಶೇ. 50ರಷ್ಟು ಲಾಭ ಸಿಗುತ್ತದೆ.

ಫ್ರಾಂಚೈಸಿಗೆ ಪಡೆಯುವುದು ಹೇಗೆ?
ಅಮೂಲ್ ಐಸ್ ಕ್ರೀಮ್‌ನ ಅಧಿಕೃತ ವೆಬ್‌ಸೈಟ್‌ಗೆ ಹೋದರೆ ನಿಮಗೆ ಮಾಹಿತಿ ಸಿಗುತ್ತದೆ.
ಅದರ ಡೈರೆಕ್ಟ್ ಲಿಂಕ್ ಇಲ್ಲಿದೆ: https://amul.com/m/parlours
ಅಥವಾ ಅಮೂಲ್ ಡಾಟ್ ಕಾಮ್ ವೆಬ್‌ಸೈಟ್‌ಗೆ ಹೋಗಿ ಬಿ2ಬಿ ಡ್ರಾಪ್‌ಡೌನ್ ಮೆನುಗೆ ಹೋಗಿ ಅಮೂಲ್‌ಫೆಡ್ ಡೈರಿ ವೆಂಡರ್ ರಿಜಿಸ್ಟ್ರೇಷನ್ ಫಾರ್ಮ್ ಡೌನ್‌ಲೋಡ್ ಮಾಡಿ, ಅದನ್ನು ತುಂಬಿಸಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು:
General Manager,
AmulFed Dairy
Plot No. 35
Near. Indira Bridge,
Ahmedabad-Gandhinagar HIghway,
P.O. BHAT- 382428
Gandhinagar.
ಅಥವಾ (022)68526666 ಕಸ್ಟಮರ್ ಕೇರ್ ನಂಬರ್‌ಗೆ ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 10ರಿಂದ ಸಂಜೆ 6ರೊಳಗೆ ಕರೆ ಮಾಡಿ ಮನವಿ ಸಲ್ಲಿಸಬಹುದು. ಆಗ ಅಮೂಲ್‌ನ ಪ್ರತಿನಿಧಿಯೊಬ್ಬರು ನಿಮ್ಮನ್ನು ಮುಖತಃ ಭೇಟಿಯಾಗಿ ವೆರಿಫಿಕೇಶನ್ ನಡೆಸುತ್ತಾರೆ. ಅದಾದ ಬಳಿಕ ಸೆಕ್ಯೂರಿಟಿ ಡೆಪಾಸಿಟ್ ಆಗಿ 25 ಸಾವಿರ ರೂ ಅನ್ನು ಪಾವತಿಸಬೇಕಾಗುತ್ತದೆ.