ಜಿಯೋ 5ಜಿ ಲಭ್ಯತೆ, ವೇಗ, ಸಿಮ್, ಅಗತ್ಯ ಮಾಹಿತಿ ವಿವರ
ಭಾರ್ತಿ ಏರ್ ಟೆಲ್ ಬಳಿಕ ರಿಲಯನ್ಸ್ ಜಿಯೋ 5ಜಿ ಜಾರಿಗೊಳಿಸುವ ಬಗ್ಗೆ ಘೋಷಿಸಿಕೊಂಡಿದೆ. ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಶುಭ ಸಂದರ್ಭದಲ್ಲಿ ಆಗಸ್ಟ್ 15ರಂದೇ ಗ್ರಾಹಕರಿಗೆ 5ಜಿ ಲಭ್ಯವಾಗಲಿದೆ ಎಂದು ಜಿಯೋ ಹೇಳಿದೆ. ಇತ್ತೀಚೆಗೆ ನಡೆದ 5ಜಿ ತರಂಗಗುಚ್ಛ ಹರಾಜಿನಲ್ಲಿ ರಿಲಯನ್ಸ್ ಜಿಯೋ, ಭಾರ್ತಿ ಏರ್ ಟೆಲ್, ವೋಡಾಫೋನ್- ಐಡಿಯಾ(ವಿ) ಅಲ್ಲದೆ ಅದಾನಿ ಸಮೂಹದ ಟೆಲಿಕಾಂ ಸಂಸ್ಥೆ ಅಂತಿಮವಾಗಿ ತಮ್ಮ ಆಯ್ಕೆಯ ಸ್ಪೆಕ್ಟ್ರಮ್ ಪಡೆದುಕೊಂಡಿವೆ. ಜಿಯೋ 5ಜಿ ಲಭ್ಯತೆ, ವೇಗ, ಸಿಮ್, ಅಗತ್ಯ ಮಾಹಿತಿ ವಿವರ ಇಲ್ಲಿದೆ.
ರಿಲಯನ್ಸ್ ಜಿಯೋ ಇನ್‌ಫೋಕಾಮ್ ಅಧ್ಯಕ್ಷ ಆಕಾಶ್ ಅಂಬಾನಿ ಮಾತನಾಡಿ, ''ಭಾರತವು ತಂತ್ರಜ್ಞಾನ ಶಕ್ತಿ ಅಳವಡಿಸಿಕೊಂಡು ವಿಶ್ವದ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಲಿದೆ ಎಂಬುದರಲ್ಲಿ ನಮಗೆ ವಿಶ್ವಾಸವಿದೆ. ಈ ಧ್ಯೇಯವನ್ನು ಇಟ್ಟುಕೊಂಡೇ ನಾವು ಜಿಯೋ ಸ್ಥಾಪಿಸಿದ್ದೇವೆ. ಜಿಯೋ 4ಜಿ ಮೂಲಕ ಹೊರಹೊಮ್ಮಿಸಿದ ವೇಗ, ತೀವ್ರತೆ ಮತ್ತು ಸಾಮಾಜಿಕ ಬದಲಾವಣೆ ಅತ್ಯಂತ ಮಹತ್ವದ್ದು. ಈಗ ಇನ್ನೊಂದು ಮಹತ್ವಾಕಾಂಕ್ಷೆ ಮತ್ತು ಸಂಕಲ್ಪದಿಂದ 5ಜಿ ಯುಗವನ್ನು ಮುನ್ನಡೆಸಲು ಜಿಯೋ ಸಿದ್ಧವಾಗಿದೆ'' ಎಂದರು.
ದೇಶಾದ್ಯಂತ 5ಜಿ ನೆಟ್‌ವರ್ಕ್ ಆರಂಭಕ್ಕೆ ಸಿದ್ಧ ಎಂದ ಜಿಯೋ
''ಜಿಯೋ ತನ್ನ ರಾಷ್ಟ್ರವ್ಯಾಪಿ ಫೈಬರ್ ಉಪಸ್ಥಿತಿ, ಯಾವುದೇ ಮೂಲಸೌಕರ್ಯವಿಲ್ಲದ ಆಲ್-ಐಪಿ ನೆಟ್‌ವರ್ಕ್, ಸ್ಥಳೀಯ 5G ಸ್ಟಾಕ್ ಮತ್ತು ತಂತ್ರಜ್ಞಾನ ಪರಿಸರ ವ್ಯವಸ್ಥೆಯಾದ್ಯಂತ ಬಲವಾದ ಜಾಗತಿಕ ಪಾಲುದಾರಿಕೆಯಿಂದಾಗಿ ಕಡಿಮೆ ಅವಧಿಯಲ್ಲಿ 5G ರೋಲ್‌ಔಟ್‌ಗೆ ಸಂಪೂರ್ಣವಾಗಿ ಸಿದ್ಧವಾಗಿದೆ" ಎಂದು ಕಂಪನಿ ತಿಳಿಸಿದೆ.

* ಗುರುಗ್ರಾಮ, ಬೆಂಗಳೂರು, ಕೋಲ್ಕತಾ, ದೆಹಲಿ, ಅಹಮದಾಬಾದ್, ಹೈದರಾಬಾದ್, ಪುಣೆ, ಚೆನ್ನೈ, ಲಕ್ನೋ, ಚಂಡೀಗಢ, ಜಾಮ್ ನಗರ್ ಹಾಗೂ ಗಾಂಧಿನಗರ ಸೇರಿದಂತೆ ಸುಮಾರು 1,000 ಪಟ್ಟಣಗಳಲ್ಲಿ 5ಜಿ ಜಾರಿಗೆ ತರಲು ಜಿಯೋ ಮುಂದಾಗಿದೆ.
* ಜಿಯೋ ಕಡಿಮೆ-ಬ್ಯಾಂಡ್, ಮಿಡ್-ಬ್ಯಾಂಡ್ ಮತ್ತು ಎಂಎಂವೇವ್ ಸ್ಪೆಕ್ಟ್ರಮ್‌ನ ವಿಶಿಷ್ಟ ಸಂಯೋಜನೆಯನ್ನು ಪಡೆದುಕೊಂಡಿದೆ, ಇದು ಕಂಪನಿಯ ಡೀಪ್ ಫೈಬರ್ ನೆಟ್‌ವರ್ಕ್ ಮತ್ತು ಸ್ಥಳೀಯ ತಂತ್ರಜ್ಞಾನದ ವೇದಿಕೆಗಳೊಂದಿಗೆ ಸೇರಿಕೊಂಡು, ಎಲ್ಲೆಡೆ 5G ಒದಗಿಸಲು ಸಾಧ್ಯವಾಗಿಸುತ್ತದೆ.
* 5G ಗೆ ಅತ್ಯುತ್ತಮವೆಂದು ಪರಿಗಣಿಸಲಾಗಿರುವ ಪ್ರೀಮಿಯಂ 700 MHz ಬ್ಯಾಂಡ್‌ನಲ್ಲಿ 5G ಸ್ಪೆಕ್ಟ್ರಮ್ ಖರೀದಿಸಲು ಎಲ್ಲಾ 22 ಟೆಲಿಕಾಂ ವಲಯಗಳಲ್ಲಿ ಜಿಯೋ ಏಕೈಕ ಆಪರೇಟರ್ ಆಗಿದೆ.
* ಇದಲ್ಲದೆ, 800MHz, 1800MHz, 3300MHz ಹಾಗೂ 26GHz ಬ್ಯಾಂಡ್‌ನಲ್ಲೂ 5ಜಿ ಸೇವೆ ಒದಗಿಸಲು ಜಿಯೋಗೆ ಟೆಲಿಕಾಂ ಇಲಾಖೆಯಿಂದ ಅನುಮತಿ ಸಿಕ್ಕಿದೆ.
* ಸುಮಾರು 20 ವರ್ಷಗಳ ಅವಧಿಗೆ ಸುಮಾರು 88, 078 ಕೋಟಿ ರು ವ್ಯಯಿಸಿ ಈ ಉನ್ನತ ತಂತ್ರಜ್ಞಾನವನ್ನು ಗ್ರಾಹಕರಿಗೆ ಒದಗಿಸಲು ಜಿಯೋ ಮುಂದಾಗಿದೆ.
* ಜಿಯೋ 5ಜಿ ಸುಮಾರು 1ಜಿಬಿಪಿಎಸ್ ಗೂ ಅಧಿಕ ವೇಗ ಪಡೆದುಕೊಳ್ಳಲಿದೆ ಎಂದು ಪ್ರಾಯೋಗಿಕ ಹಂತದಲ್ಲಿ ಸಾಬೀತಾಗಿದೆ. ಡೌನ್ ಲೋಡ್ ವೇಗ 420 ಎಂಬಿಪಿಎಸ್ ಹಾಗೂ ಅಪ್ ಲೋಡ್ 412 ಎಂಬಿಪಿಎಸ್ ಇರಲಿದೆ.
* ಜಿಯೋ 5ಜಿ ಜಾರಿಗೊಳ್ಳುತ್ತಿದ್ದಂತೆ ಅದಕ್ಕೆ ತಕ್ಕ ಸಿಮ್ ಕೂಡಾ ಲಭ್ಯವಾಗಲಿದೆ. ಜಿಯೋ 4ಜಿ LTE ಸಿಮ್ ಇರುವ ಸ್ಮಾರ್ಟ್ ಫೋನ್ ಗಳಲ್ಲಿ 5ಜಿ ಬಳಸಬಹುದಾಗಿದೆ.
* ಜಿಯೋ 5ಜಿ ಫೋನ್ 9 ಸಾವಿರ ರು ನಿಂದ 12 ಸಾವಿರ ರು ಆರಂಭಿಕ ಬೆಲೆಯೊಂದಿಗೆ ಲಭ್ಯವಾಗಲಿದೆ.
* 5ಜಿ ಬೆಲೆ ಬಗ್ಗೆ ಇನ್ನೂ ಯಾವುದೇ ಟೆಲಿಕಾಂ ಸಂಸ್ಥೆಗಳು ನಿಖರ ಮಾಹಿತಿ ನೀಡಿಲ್ಲ. ಪ್ರೀಮಿಯಂ ದರವನ್ನು ಹೊಂದುವ ನಿರೀಕ್ಷೆಯಿದೆ.
ಹೆಚ್ಚಿನ ಸಂಖ್ಯೆಯ ಜನರು ಹಳ್ಳಿಗಳಲ್ಲಿ ವಾಸಿಸುವ ಭಾರತದಂತಹ ದೇಶದಲ್ಲಿ, 700 MHz ಬ್ಯಾಂಡ್‌ನ ವಿಶಾಲ ವ್ಯಾಪ್ತಿಯು ಗ್ರಾಮೀಣ ಭಾರತವನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ. ಅಂದರೆ, 5G ನಗರಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಅದರ ಪ್ರಯೋಜನ ಹಳ್ಳಿಗಳಿಗೂ ತಲುಪುವುದು ಖಚಿತ. ದೂರದ ಗ್ರಾಮೀಣ/ದಟ್ಟಣೆಯ ಪ್ರದೇಶಗಳಲ್ಲಿ ಸಂಪರ್ಕವನ್ನು ಒದಗಿಸಲು 700 MHz ಬ್ಯಾಂಡ್ ಸಹಾಯ ಮಾಡುತ್ತದೆ ಎಂದು ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.