ದೇಶದ ಶೇ.40 ಸಂಪತ್ತು ಶೇ.1ರಷ್ಟು ಜನರ ಕೈಯಲ್ಲಿ ಎಂದ ಆಕ್ಸ್‌ಫಾಮ್ ವರದಿ, ಅತೀ ಶ್ರೀಮಂತರಿಗೆ ತೆರಿಗೆ ಇದೆಯೇ?
ಭಾರತದಲ್ಲಿ ಸಂಪತ್ತು ಹಂಚಿಕೆಯಲ್ಲಿನ ಅಸಮತೋಲನವನ್ನು ಆಕ್ಸ್‌ಫಾಮ್ ವರದಿಯು ವಿವರಿಸಿದೆ. ಕೇವಲ ಶೇಕಡ 5ರಷ್ಟು ಜನರ ಕೈಯಲ್ಲಿ ಭಾರತದ ಸುಮಾರು ಶೇಕಡ 60ರಷ್ಟು ಸಂಪತ್ತುಯಿದೆ. ಅದರಲ್ಲೂ 2012ರಿಂದ 2021ರವರೆಗಿನ ಲೆಕ್ಕಾಚಾರದ ಪ್ರಕಾರ ಶೇಕಡ 40ರಷ್ಟು ಸಂಪತ್ತು ಕೇವಲ ಶೇಕಡ 1ರಷ್ಟು ಜನರಲ್ಲಿದ್ದರೆ, ಶೇಕಡ 50ರಷ್ಟು ಸಂಪತ್ತು ಕೇವಲ ಶೇಕಡ 3ರಷ್ಟು ಜನರ ನಡುವೆ ಹಂಚಿಕೆಯಾಗಿದೆ ಎಂದು ಆಕ್ಸ್‌ಫಾಮ್ ವರದಿಯು ಉಲ್ಲೇಖಿಸಿದೆ.
ಆಕ್ಸ್‌ಫಾಮ್ ಇಂಡಿಯಾವು "ಶ್ರೀಮಂತರ ಬದುಕು: ಭಾರತದ ಕಥೆ" (Survival of the Richest: The India story) ಎಂಬ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಭಾರತದಲ್ಲಿರುವ ಸಂಪತ್ತು ಹಂಚಿಕೆಯಲ್ಲಿನ ಅಸಮತೋಲನ ಮತ್ತು ತೆರಿಗೆ ನೀತಿಯ ಬಗ್ಗೆ ವಿವರಿಸಲಾಗಿದೆ. ಹಾಗೆಯೇ 2022ರಲ್ಲಿ ಭಾರತದ ಶ್ರೀಮಂತ ವ್ಯಕ್ತಿಗಳ ಆದಾಯವು ಬರೋಬ್ಬರಿ ಶೇಕಡ 46ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.
ವರದಿ ಪ್ರಕಾರ ಈ ಶ್ರೀಮಂತರ ಆದಾಯದ ಮೇಲೆ 2017ರಿಂದ 2022ರವರೆಗೆ ವಿಧಿಸಲಾಗುವ ಶೇಕಡ 20ರಷ್ಟು ತೆರಿಗೆಯು ಸುಮಾರು 1.8 ಲಕ್ಷ ಕೋಟಿ ರೂಪಾಯಿ ಆಗಬಹುದು. ಈ ಆದಾಯವು ಭಾರತದ 5 ಮಿಲಿಯನ್ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ಒಂದು ವರ್ಷದ ಆದಾಯಕ್ಕಾಗಿ ಬಳಸಬಹುದು. ಈ ಅಸಮತೋಲನಕ್ಕೆ ಕೇಂದ್ರ ಹಣಕಾಸು ಸಚಿವರು ಅಂತ್ಯ ಹಾಡಬೇಕು. ಪರಿಷ್ಕೃತ ತೆರಿಗೆ ನಿಯಮವನ್ನು ಜಾರಿ ಮಾಡಬೇಕು. ಮುಂದಿನ ಬಜೆಟ್‌ನಲ್ಲಿ ಸಂಪತ್ತಿನ ಮೇಲೆಯೂ ತೆರಿಗೆ ವಿಧಿಸಬೇಕು ಎಂದು ಹೇಳಿದೆ. ಈ ವರದಿ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ....

ಸರ್ಕಾರದ ಮುಂದೇ ಏನೆಲ್ಲ ಮನವಿಯಿದೆ?
* ಆಕ್ಸ್‌ಫಾಮ್ ಇಂಡಿಯಾ ಒಂದು ಎನ್‌ಜಿಒ ಆಗಿದೆ. ಇದು ಮಕ್ಕಳ ಶಿಕ್ಷಣ, ಮಹಿಳಾ ಸಬಲೀಕರಣ, ಅಸಮಾನತೆಯ ಬಗ್ಗೆ ಧ್ವನಿ ಎತ್ತುವ ಕಾರ್ಯವನ್ನು ತನ್ನ ವರದಿಯ ಮೂಲಕ ಮಾಡುತ್ತದೆ. ಈ ವರದಿಯ ಮೂಲಕ ಕೇಂದ್ರ ಹಣಕಾಸು ಸಚಿವರು ಪರಿಷ್ಕೃತ ತೆರಿಗೆ, ಸಂಪತ್ತು ತೆರಿಗೆಯನ್ನು ಮುಂದಿನ ಬಜೆಟ್‌ನಲ್ಲಿ ಪ್ರಸ್ತುತ ಪಡಿಸಬೇಕು ಎಂದು ಹೇಳಿದೆ.
* ಪ್ರಸ್ತುತ ಭಾರತದಲ್ಲಿ ಸಂಪತ್ತು ತೆರಿಗೆ ಎಂಬುವುದಿಲ್ಲ. ಸಂಪತ್ತು ತೆರಿಗೆ ಎಂಬುವುದು ಸಂಪೂರ್ಣ ಸಂಪತ್ತಿನ ಮೇಲಿನ ತೆರಿಗೆಯಾಗಿದೆ.
* ಸಂಪತ್ತು ತೆರಿಗೆ ಕಾಯ್ದೆ 1957ರ ಪ್ರಕಾರ ಸಂಪತ್ತಿನ ಮೇಲೆ ಶೇಕಡ 1ರಷ್ಟು ತೆರಿಗೆಯನ್ನು ವಿಧಿಸಲಾಗುತ್ತಿತ್ತು. 30 ಲಕ್ಷ ರೂಪಾಯಿಗಿಂತ ಅಧಿಕ ಸಂಪತ್ತಿನ ಮೇಲೆ ಈ ತೆರಿಗೆಯನ್ನು ವಿಧಿಸಲಾಗುತ್ತದೆ. ಆದರೆ ಈ ಕಾಯ್ದೆಯನ್ನು 2015ರಲ್ಲಿ ರದ್ದು ಮಾಡಲಾಗಿದೆ. ಇದನ್ನು ಮತ್ತೆ ಜಾರಿಗೆ ತರಬೇಕು ಎಂಬ ಬೇಡಿಕೆಯಿದೆ.

ಭಾರತದಲ್ಲಿ ಶ್ರೀಮಂತರ ಸಂಖ್ಯೆ ಏರಿಕೆ
* 2020ರಲ್ಲಿ ಭಾರತದಲ್ಲಿ 102 ಮಂದಿ ಅತೀ ಶ್ರೀಮಂತರು ಇದ್ದರು, 2022ರ ವೇಳೆಗೆ ಈ ಅತೀ ಶ್ರೀಮಂತರ ಸಂಖ್ಯೆಯು ಏರಿಕೆಯಾಗಿದೆ. ಪ್ರಸ್ತುತ 166 ಮಂದಿ ಅತೀ ಶ್ರೀಮಂತರು ಇದ್ದಾರೆ.
* ಭಾರತದ 100 ಶ್ರೀಮಂತರ ಆದಾಯವು 660 ಬಿಲಿಯನ್ ಡಾಲರ್ (54.12 ಲಕ್ಷ ಕೋಟಿ ರೂಪಾಯಿ) ಆಗಿದೆ. ಈ ಮೊತ್ತದಲ್ಲಿ 18 ತಿಂಗಳ ಕೇಂದ್ರ ಬಜೆಟ್ ಅನ್ನು ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ.
* "ಬಡವರು ಅತೀ ಕಷ್ಟದಲ್ಲಿರುವ ದೇಶದ ಟಾಪ್ 10 ಶ್ರೀಮಂತರ ಆದಾಯವು 27.52 ಲಕ್ಷ ಕೋಟಿ ರೂಪಾಯಿ (335.7 ಬಿಲಿಯನ್ ಡಾಲರ್) ಆಗಿದೆ. 2021ರಿಂದ ಶೇಕಡ 32.8ರಷ್ಟು ಆದಾಯ ಹೆಚ್ಚಳವಾಗಿದೆ," ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
* ದೇಶದ ಟಾಪ್ 10 ಶ್ರೀಮಂತರ ಸಂಪತ್ತು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ಆಯುಷ್ ಸಚಿವಾಲಯಕ್ಕೆ 30 ವರ್ಷಕ್ಕೂ ಅಧಿಕ ಕಾಲದ ಬಜೆಟ್ ಆಗಿದೆ. ಭಾರತದ ಕೇಂದ್ರ ಶಿಕ್ಷಣ ಬಜೆಟ್‌ಗೆ 26 ವರ್ಷದ ಮೊತ್ತ ಇದಾಗಿದೆ. MGNREGAಗೆ 38 ವರ್ಷದ ಫಂಡ್ ಇದಾಗಿದೆ ಎಂದು ವರದಿಯು ಹೇಳಿದೆ.

ಶ್ರೀಮಂತರಿಗೆ-ಬಡವರಿಗೆ ತೆರಿಗೆ ಹೇಗಿದೆ?
ಕಳೆದ 40 ವರ್ಷದಲ್ಲಿ ಆಫ್ರಿಕಾ, ಏಷ್ಯಾ, ಯುರೋಪ್, ಅಮೆರಿಕಾ ದೇಶದಲ್ಲಿ ಶ್ರೀಮಂತರ ಮೇಲಿನ ಆದಾಯ ತೆರಿಗೆಯನ್ನು ಕಡಿತ ಮಾಡಿದೆ. ಈ ಸಂದರ್ಭದಲ್ಲೇ ಬಡವರಿಗೆ ಸರಕು ಹಾಗೂ ಸೇವೆ ಮೇಲಿನ ತೆರಿಗೆಯನ್ನು ಹೆಚ್ಚಿಸಲಾಗಿದೆ. ಭಾರತದಲ್ಲಿ ಮಧ್ಯಮ ಮತ್ತು ಬಡವರಿಗಿಂತ ಕಡಿಮೆ ತೆರಿಗೆಯನ್ನು ಶ್ರೀಮಂತರಿಗೆ ವಿಧಿಸಲಾಗುತ್ತದೆ. ಬಡವರಿಗೆ ತೆರಿಗೆ ಹೆಚ್ಚಿಸಲಾಗುತ್ತಿದೆ. ಶ್ರೀಮಂತರಿಗೆ ತೆರಿಗೆ ವಿನಾಯಿತಿಯನ್ನು ಹೆಚ್ಚಿಸಲಾಗುತ್ತಿದೆ. 2019ರಲ್ಲಿ ಕೇಂದ್ರ ಸರ್ಕಾರವು ಕಾರ್ಪೋರೇಟ್ ತೆರಿಗೆ ಸ್ಲ್ಯಾಬ್ ಅನ್ನು ಶೇಕಡ 30ರಿಂದ ಶೇಕಡ 22ಕ್ಕೆ ಇಳಿಸಿದೆ. ಕಾರ್ಪೋರೇಟ್ ಅಲ್ಲದ ಸಂಸ್ಥೆಗಳು ಶೇಕಡ 15ಕ್ಕೂ ಕಡಿಮೆ ತೆರಿಗೆ ಪಾವತಿಸುತ್ತಿದೆ.