For Quick Alerts
ALLOW NOTIFICATIONS  
For Daily Alerts

5000 ಸಂಬಳ- ಎರಡು ಸೋಲು ಕಂಡಿದ್ದ ಅಣ್ಣ, ತಮ್ಮಂದಿರ 150 ಕೋಟಿ ಬಿಜಿನೆಸ್

By ಅನಿಲ್ ಆಚಾರ್
|

ಒಂದು ಸೋಲಿಗೆ ಕಂಗಾಲಾಗಿ ಕನಸನ್ನೇ ಕೈ ಬಿಡುವವರು ಬೇಕಾದಷ್ಟು ಮಂದಿ ಸಿಗ್ತಾರೆ. ಅದೆಷ್ಟು ಬಾರಿ ಪೆಟ್ಟು ಬಿದ್ದರೂ ಮೈ ಕೊಡವಿ ಎದ್ದು ನಿಂತು, ಸೋಲನ್ನೇ ಸೋಲಿಸಿ, ಗೆಲುವಿಗೆ ಕೇರಾಫ್ ಅಡ್ರೆಸ್ ಅಂತ ಆಗುವವರು ಕೆಲವರು ಮಾತ್ರ. ಈ ಲೇಖನದಲ್ಲಿ ನಿಮಗೆ ಹೇಳಲು ಹೊರಟಿರುವುದು ಅಂಥ ಅಣ್ಣ- ತಮ್ಮನ ಕಥೆ. ಉಹುಂ, ಯಶೋಗಾಥೆ.

 

ಆ ಅಣ್ಣ- ತಮ್ಮಂದಿರ ಹೆಸರು ಸುಮಿತ್ ಅಗರ್ವಾಲ್ ಹಾಗೂ ಸಚಿನ್ ಅಗರ್ವಾಲ್. ಒಂದು ಕಾಲಕ್ಕೆ ಸಚಿನ್ ಗೆ ಚಾರ್ಟರ್ಡ್ ಅಕೌಂಟೆಂಟ್ ಆಗಬೇಕು ಅನ್ನೋ ಗುರಿ ಇತ್ತು. ಆದರೆ ಏನೇನೋ ಕಾರಣಗಳಿಂದ ಆಗಲೇ ಇಲ್ಲ. ಆ ನಂತರ ಹಳ್ಳಿಯ ಮಕ್ಕಳಿಗಾಗಿ ಸಿಎ ಕೋಚಿಂಗ್ ಸೆಂಟರ್ ಶುರು ಮಾಡಿದರು ಸಚಿನ್. ಅದು ಸರಿಯಾಗಿ ನಡೆಯದೆ ಎರಡು ವರ್ಷಕ್ಕೆ ಮುಚ್ಚಿಬಿಟ್ಟರು.

 

ಅದಾದ ಮೇಲೆ ಜ್ಯುವೆಲ್ಲರಿ ಬಾಕ್ಸ್ ವ್ಯಾಪಾರ ಶುರು ಮಾಡಿ, ಅದರಲ್ಲಿ ಯಶಸ್ಸು ಸಿಗಲಿಲ್ಲ. ಆ ನಂತರ ಸಚಿನ್ ತನ್ನ ಅಣ್ಣ ಸುಮಿತ್ ಜತೆ ಸೇರಿ ಕಟ್ಟಿದ ಈ ಕಂಪೆನಿ ಈಗ ನೂರಾರು ಕೋಟಿ ರುಪಾಯಿ ವ್ಯವಹಾರ ನಡೆಸುತ್ತಿದೆ. ಒಂದು ನಿಮಿಷ. ಕಂಪೆನಿ ಅಂದರೆ, ಎಮ್.ಡಿ., ಸಿಇಒ, ಸ್ಥಾಪಕರು ಹೀಗೆ ನಾನಾ ಕಿರೀಟಗಳನ್ನು ಊಹಿಸಿಕೊಳ್ಳಬೇಡಿ.

5000 ಸಂಬಳ- 2 ಸೋಲು ಕಂಡಿದ್ದ ಅಣ್ಣ, ತಮ್ಮಂದಿರ 150 ಕೋಟಿ ಬಿಜಿನೆಸ್

ಈ ಕಂಪೆನಿಯಲ್ಲಿ ಎಲ್ಲವೂ ಅಣ್ಣ- ತಮ್ಮಂದಿರೇ
ಏಕೆಂದರೆ, ಸುಮಿತ್- ಸಚಿನ್ ಈ ಕಂಪೆನಿಯಲ್ಲಿ ಪ್ರಾಡಕ್ಟ್ ತಯಾರಿಕೆಯಿಂದ ಶುರು ಮಾಡಿ, ಡಿಸ್ಟ್ರಿಬ್ಯೂಷನ್, ಡೀಲರ್ ಗಳ ವ್ಯವಹಾರ ಎಲ್ಲದರಲ್ಲೂ ಪಾಲ್ಗೊಳ್ಳುತ್ತಾರೆ. ಸ್ವತಃ ತಾವೇ ಅವರಿಗೆ ತರಬೇತಿ ನೀಡಿ, ಗ್ರಾಹಕರ ಜತೆಗೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಕೂಡ ಹೇಳಿಕೊಡುತ್ತಾರೆ. ಇವರಿಬ್ಬರ ಶ್ರಮದ ಫಲವಾಗಿ ನಾತುರಾಂ ಅಂಡ್ ಸನ್ಸ್ ಕಂಪೆನಿ ದಕ್ಷಿಣ ಭಾರತದ ಬ್ಯಾಟರಿ ವಲಯದಲ್ಲಿ ದೊಡ್ಡ ಹೆಸರು. ಸಾಧನೆ ಮಾಡಿದೆ.

1983ರಲ್ಲಿ ವಿಜಯವಾಡದಲ್ಲಿ ದೀಪಕ್ ಮಿತ್ತಲ್ ಶುರು ಮಾಡಿದ ಕಂಪೆನಿ ನಾತುರಾಂ ಅಂಡ್ ಸನ್ಸ್. ಅಲ್ಲಿಗೆ ಸುಮಿತ್ ಅಗರ್ವಾಲ್ 1999ರಲ್ಲಿ 5000 ರುಪಾಯಿ ಸಂಬಳಕ್ಕೆ ಕೆಲಸಕ್ಕೆ ಸೇರುತ್ತಾರೆ. 2001ರ ಹೊತ್ತಿಗೆ ದೀಪಕ್ ಜೊತೆಗೆ ಪಾರ್ಟನರ್ ಷಿಪ್ ತೆಗೆದುಕೊಳ್ಳುವ ಮಟ್ಟಕ್ಕೆ ಬೆಳೆದಿದ್ದರು. ಆದರೆ ಅದಾಗಲೇ ಎರಡು ಸೋಲು ಕಂಡಿದ್ದ ಸಚಿನ್ ಕೂಡ ಅಣ್ಣನಿಗೆ ಜತೆಯಾದರು.

ಬೆಂಗಳೂರಿನಲ್ಲಿ ಆರು ಶಾಖೆ
ಇವರಿಬ್ಬರೂ ಸೇರಿ ಬೆಂಗಳೂರಿನಲ್ಲಿ ಬ್ಯಾಟರಿ ವಿತರಣೆ ಶುರು ಮಾಡಿದರು. ನಾತುರಾಂ ಅಂಡ್ ಸನ್ಸ್ ಕಂಪೆನಿ ಹೆಸರಿನಲ್ಲಿ ಮೈಕ್ರೋಟೆಕ್, ಎಕ್ಸೈಡ್, ಲುಮಿನಸ್ ಕಂಪೆನಿ ಬ್ಯಾಟರಿಗಳನ್ನು ವಿತರಿಸುತ್ತಾ ಕೆಲವೇ ಸಮಯದಲ್ಲಿ ಬೆಂಗಳೂರಿನಲ್ಲಿ ಆರು ಶಾಖೆ ತೆರೆಯುವ ಮಟ್ಟಕ್ಕೆ ಬೆಳೆದರು. ಇದೀಗ ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಬ್ಯಾಟರಿಗಳನ್ನು ಮಾರುವ ಕಂಪೆನಿಯಾಗಿ ಬೆಳೆದಿದೆ. ಅದರ ಜತೆಜತೆಗೆ ಸಚಿನ್, ಸುಮಿತ್ ಕೂಡ ಬೆಳೆಯುತ್ತಲೇ ಇದ್ದಾರೆ.

ಕರ್ನಾಟಕ ಅಷ್ಟೇ ಅಲ್ಲದೆ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ಹೀಗೆ ದಕ್ಷಿಣ ಭಾರತದಲ್ಲೇ ಬ್ಯಾಟರಿ ವಿತರಣೆಯ ಜಾಲ ರೂಪಿಸಿದ್ದಾರೆ. ಇವತ್ತಿಗೆ ದಕ್ಷಿಣ ಭಾರತದಲ್ಲಿ 1500 ಡೀಲರ್ಸ್ ಹಾಗೂ 50 ವಿತರಕರನ್ನು ಹೊಂದಿದ್ದಾರೆ. ಆ ನಂತರ ಮೆಸ್ಸಿಮೋ ಬ್ಯಾಟರಿ ವಿತರಣೆಯ ಜವಾಬ್ದಾರಿ ವಹಿಸಿಕೊಂಡ ಸಚಿನ್- ಸುಮಿತ್ ಎರಡು ವರ್ಷಗಳಲ್ಲಿ 50 ಕೋಟಿ ವ್ಯವಹಾರ ಆಗುವಷ್ಟು ಬೆಳೆಸಿದ್ದಾರೆ.

1000 ಕೋಟಿ ರುಪಾಯಿ ವ್ಯವಹಾರದ ಗುರಿ
ಆ ನಂತರ 2019- 2020ರಲ್ಲಿ ಸುಮಾರು 150 ಕೋಟಿಯ ವ್ಯಾಪಾರ ಮಾಡುವಷ್ಟು ಬೆಳೆದಿದೆ. ಹಾಗಂತ ಇಲ್ಲಿಗೇ ಇವರಿಬ್ಬರ ಗುರಿ ನಿಂತಿಲ್ಲ. ತಮ್ಮದೇ ಹೊಸ ಬ್ರ್ಯಾಂಡ್ ಪರಿಚಯಿಸುವ ಮಹದಾಸೆ ಇಟ್ಟುಕೊಂಡಿದ್ದಾರೆ. ಹೋಮ್ ಆಟೋಮೆಷನ್, ಸೋಲಾರ್, ಲಿಥಿಯಂ ಬ್ಯಾಟರಿಗಳನ್ನು ಮಾರುಕಟ್ಟೆಗೆ ಪರಿಚಯ ಮಾಡುತ್ತಿದ್ದಾರೆ.

ಇದೆಲ್ಲ ಸರಿ, ಮುಂದೆ ನಿಮ್ಮ ಗುರು ಏನು ಎಂದು ಪ್ರಶ್ನೆ ಮಾಡಿದರೆ, ಒಂದು ಸಾವಿರ ಕೋಟಿ ವ್ಯವಹಾರ ಮಾಡುವಂತೆ ಆಗಬೇಕು ಅನ್ನುತ್ತಾರೆ. ತಮ್ಮ ಡಿಸ್ಟ್ರಿಬ್ಯೂಟರ್ ಗಳು, ಡೀಲರ್ ಗಳು ಇದನ್ನೂ ಸಾಧ್ಯ ಮಾಡುತ್ತಾರೆ ಎಂಬ ಭರ್ತಿ ಭರವಸೆಯೂ ಅವರಲ್ಲಿದೆ. ಎಷ್ಟಾದರೂ ಬ್ಯಾಟರಿ ಮಾರಾಟ ಮಾಡುತ್ತಲೇ ಬೆಳೆದವರಲ್ಲವಾ, ಬೆಳಕಿನ ಬಗ್ಗೆ ಅವರಿಗೆ ನಂಬಿಕೆ ಇದೆ. ಅದು ಸಾಕಾರ ಮಾಡಿಕೊಳ್ಳುವಂತೆ ಆಗಲಿ, ಅಲ್ಲವಾ?

English summary

Success Story Of Sachin, Sumit Agarwal In Battery Business

Here is the Success story of Sachin and Sumit Agarwal brothers in battery business. Complete details about them and their business.
Story first published: Thursday, May 14, 2020, 21:23 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X