For Quick Alerts
ALLOW NOTIFICATIONS  
For Daily Alerts

"ಹಳೇ ಕಾಲದವರ ಆಲೋಚನೆಗಳು" ಮತ್ತು 4 ಉದಾಹರಣೆ

|

"ನಮ್ಮ ಅಪ್ಪ- ಅಮ್ಮ, ಅಜ್ಜಿ- ತಾತ ಅಥವಾ ಅತ್ತೆ- ಮಾವ ಹಳೇ ಕಾಲದವರು. ಅವರಿಗೆ ನಾವು ಏನು ಹೇಳ್ತೀವೋ ಅರ್ಥವೇ ಆಗಲ್ಲ. ಹಿಡಿದಿದ್ದು ಮುಟ್ಟಿದ್ದಕ್ಕೆಲ್ಲ ತಪ್ಪು ಅಂತಾರೆ. ಆದ್ದರಿಂದ ಈ ಮಧ್ಯೆ ಮನೆಯಲ್ಲಿ ನಾನು ಮಾತನಾಡೋದೇ ಬಿಟ್ಟಿದ್ದೀನಿ. ಪ್ರತಿಯೊಂದಕ್ಕೂ ಆಕ್ಷೇಪ. ಸಲಹೆ- ಸೂಚನೆಗಳನ್ನು ಕೊಡುವುದಕ್ಕೆ ಬಂದು ಬಿಡುತ್ತಾರೆ".

- ಈ ಮೇಲಿನ ಮಾತುಗಳನ್ನು ಕನಿಷ್ಠ ಒಂದು ಸಲ ಆಡಿರುವವರಿಗೆ, ಅಂದುಕೊಂಡಿರುವವರಿಗೆ ಅಥವಾ ಪ್ರತಿ ದಿನವೂ ಅಂದುಕೊಳ್ಳುತ್ತಿರುವವರಿಗೆ ಈ ಲೇಖನ. ಈಗಿನ ಆರ್ಥಿಕ ಸನ್ನಿವೇಶದಲ್ಲಿ "ಓಬೀರಾಯನ ಕಾಲದವರ" ಎಕನಾಮಿಕ್ಸ್ ಹೊಂದಿಕೆ ಆಗುತ್ತಾ? ಅವರು ಹೇಳುವುದೇನು, ಕಿರಿಕಿರಿ ಆಗುವಂತೆ ಮಾಡುವ ಆ ವಿಷಯಗಳಲ್ಲಿ ಸತ್ಯ ಎಷ್ಟಿರುತ್ತದೆ ಅನ್ನೋದನ್ನು ಒಮ್ಮೆ ಪರೀಕ್ಷಿಸೋಣ.

ನಾವು ಈಗ ಖರೀದಿ ಮಾಡುವ ಅಗತ್ಯ ಇದೆಯಾ?

ನಾವು ಈಗ ಖರೀದಿ ಮಾಡುವ ಅಗತ್ಯ ಇದೆಯಾ?

ಒಂದು ವಸ್ತು ಪೂರ್ತಿಯಾಗಿ ಬಳಕೆಯಾಗುತ್ತಿಲ್ಲ ಅನ್ನುವ ತನಕ ಹೊಸದನ್ನು ತರುವುದು ಬೇಡ. ಅದು ಕಾರಿರಲಿ, ಮನೆಯ ಫರ್ನೀಚರ್ ಇರಲಿ, ಮೊಬೈಲ್ ಫೋನ್, ವಾಷಿಂಗ್ ಮಶೀನ್... ಹೀಗೆ ಎಲ್ಲದಕ್ಕೂ ಅದೇ ಸಲಹೆ. ಆದರೆ ಈಗಿನ ಟ್ರೆಂಡ್ ಏನೆಂದರೆ, ಹಳೆಯದಾಯಿತು ಅಥವಾ ಈಗ ಒಳ್ಳೆ ಡಿಸ್ಕೌಂಟ್ ಸಿಗುತ್ತಿದೆ. ಕ್ರೆಡಿಟ್ ಕಾರ್ಡ್ ನಲ್ಲಿ ಖರೀದಿ ಮಾಡಿದರೆ ಜೀರೋ ಕಾಸ್ಟ್ ಇಎಂಐ. ನನ್ನ ಫ್ರೆಂಡ್ ಬೇರೆ ಊರಿಗೆ ಹೋಗ್ತಿದ್ದಾರೆ, ಅವರಿಗೆ ತುರ್ತಾಗಿ ಮಾರಾಟ ಮಾಡಬೇಕಿದೆ... ಹೀಗೆ ಏನಾದರೊಂದು ಕಾರಣ ಅಥವಾ ಸಮರ್ಥನೆ ಜತೆಗೆ ಒಂದು ವಸ್ತುವನ್ನು ಮನೆಗೆ ತರುವುದಕ್ಕೆ ಸಿದ್ಧರಾಗಿ ಬಿಡ್ತೀವಿ. "ನಾವು ಈಗ ಖರೀದಿ ಮಾಡುವ ಅಗತ್ಯ ಇದೆಯಾ?" ಎಂಬ ಮೂಲ ಪ್ರಶ್ನೆಯನ್ನು ಮರೆತು ಬಿಡ್ತೀವಿ. ಮನೆಯಲ್ಲಿ ಆ ಪ್ರಶ್ನೆ ನಮಗೆ ಎದುರಾಗುತ್ತದೆ. ಆಗ ಕಿರಿಕಿರಿ ಶುರುವಾಗುತ್ತದೆ. ಏಕೆಂದರೆ, ಆ ತರ್ಕಕ್ಕೆ ಉತ್ತರ ನೀಡಲು ಆಗುವುದಿಲ್ಲ. ಆ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಂಡು, ಅದಕ್ಕೆ ತರ್ಕಬದ್ಧ ಉತ್ತರ ಇದ್ದಲ್ಲಿ ಆಗ ಖರೀದಿಸಿ.

ಮನೆಯಲ್ಲಿ ತಿಂಡಿ ತಿನ್ನು, ಮನೆಯಲ್ಲೇ ಊಟ ಮಾಡು

ಮನೆಯಲ್ಲಿ ತಿಂಡಿ ತಿನ್ನು, ಮನೆಯಲ್ಲೇ ಊಟ ಮಾಡು

ಮನೆಯಲ್ಲಿ ತಿಂಡಿ ತಿನ್ನು, ಮನೆಯಲ್ಲೇ ಊಟ ಮಾಡು ಎಂಬ ಮಾತಂತೂ ಕೇಳಿ ಕೇಳಿ ರೋಸತ್ತಿದ್ದೇವೆ ಎನ್ನುವವರು ಹೆಚ್ಚು. ಏಕೆಂದರೆ ಮುಂಚೆಲ್ಲ ಹೋಟೆಲ್ ನ ಊಟವೋ ತಿಂಡಿಯೋ ಅನಿವಾರ್ಯ ಸಂದರ್ಭದಲ್ಲಿ ಮಾತ್ರ. ಆದರೆ ಈಗ ವೀಕೆಂಡ್ ಗಳಲ್ಲಿ ಅಥವಾ ಯಾವಾಗೆಂದರೆ ಆಗ ಹೋಟೆಲ್, ರೆಸ್ಟೋರೆಂಟ್ ಗಳಿಗೆ ಹೋಗುವುದು ಸಾಮಾನ್ಯವಾಗಿದೆ. ಒಂದು ತಿಂಗಳಲ್ಲಿ ಮನೆಯ ಹೊರಗಿನ ಊಟ- ತಿಂಡಿಗೆ (ಅನಿವಾರ್ಯ ಅಲ್ಲದ ಸಂದರ್ಭದಲ್ಲಿ) ಎಷ್ಟು ಖರ್ಚು ಮಾಡುತ್ತಿದ್ದೀರಿ ಎಂಬುದನ್ನು ಲೆಕ್ಕ ಹಾಕಿ. ಇನ್ನು ಹೀಗೆ ಊಟ- ತಿಂಡಿ ಮಾಡುವುದರಿಂದ ಆಗುವ ಅನಾರೋಗ್ಯ ಸಮಸ್ಯೆಗೆ ಎಷ್ಟು ಹಣ ಖರ್ಚಾಗಬಹುದು ಎನ್ನುವುದನ್ನೂ ಲೆಕ್ಕ ಹಾಕಿ ನೋಡಿ. ಈ ಹಿಂದೆ ಅಷ್ಟೇ ಅಲ್ಲ, ಈಗಲೂ ಸ್ನೇಹಿತರನ್ನು ಮನೆಗೇ ಊಟ- ತಿಂಡಿಗೆ ಕರೆಯುವ ಪರಿಪಾಠ ಇದೆ. ಇದನ್ನು ಉಪದೇಶ ಅಂದುಕೊಳ್ಳದೇ ಇಪ್ಪತ್ತೊಂದು ದಿನ ನಿರಂತರವಾಗಿ ಮನೆಯಲ್ಲೇ ಊಟ- ತಿಂಡಿ ಮಾಡಿ. ಯಾವುದೇ ಕೆಲಸ ಇಪ್ಪತ್ತೊಂದು ದಿನ ನಿರಂತರವಾಗಿ ಮಾಡಿದರೆ ಅದೇ ರೂಢಿಯಾಗುತ್ತದೆ ಎನ್ನುತ್ತಾರೆ ಮಾನಸಿಕ ತಜ್ಞರು. ಇದರಿಂದ ಹಣ, ಆರೋಗ್ಯ ಉಳಿಯುತ್ತದೆ.

ಓದು ಓದು ಅಂತ ಒತ್ತಡ ಹಾಕಬೇಡ

ಓದು ಓದು ಅಂತ ಒತ್ತಡ ಹಾಕಬೇಡ

"ಓದು ಓದು ಅಂತ ಒತ್ತಡ ಹಾಕಬೇಡ ಅಂತ ಅಪ್ಪ- ಅಮ್ಮ ಅಡ್ಡ ಬಂದು ಬಿಡುತ್ತಾರೆ. ಅವರಿಗೆ ಮೊಮ್ಮಗ ಅಥವಾ ಮೊಮ್ಮಗಳು ಅನ್ನೋ ಪ್ರೀತಿ. ಆದರೆ ನಮಗೆ ಶಾಲೆಯಲ್ಲಿ ಅವಮಾನ" - ಹೀಗೆ ಅಲವತ್ತುಕೊಳ್ಳುವ ತಂದೆ, ತಾಯಿಗಳಿಗೆ ತಮ್ಮ ಜತೆಗೂ ಹಿರಿಯರು ಹೇಳಿದಂತೆಯೇ ನಡೆದುಕೊಂಡಿದ್ದರು ಎಂಬುದು ಮರೆತುಹೋಗುತ್ತದೆ. ಶಿಕ್ಷಣ ವ್ಯವಸ್ಥೆಯಲ್ಲಿ ಎಷ್ಟೆಲ್ಲ 'ಕ್ರಾಂತಿ' ಆಗಿದೆಯಲ್ಲ, ಶ್ರೇಷ್ಠ ವಿಜ್ಞಾನಿಗಳು, ಅರ್ಥಶಾಸ್ತ್ರಜ್ಞರು, ಗಣಿತಜ್ಞರು, ಗುರುಗಳು, ಕವಿಗಳು, ಪತ್ರಕರ್ತರು ಅಂತ ಪಟ್ಟಿ ಮಾಡಿದರೆ ಅವರಿಗೆ ದೊರೆತ ಶಿಕ್ಷಣ ಎಂಥದ್ದು ಯೋಚಿಸಿ ನೋಡಿ. ಅವರಿಗೆ ಈಗಿನ ರೀತಿಯಲ್ಲೇ ಒತ್ತಡ, ಸ್ಪರ್ಧೆ ಇತ್ತಾ? ಅವರಿಗೆ ಈಗಿನಂತೆ ತಂತ್ರಜ್ಞಾನದ ಮೂಲಕ ವಿಶೇಷವಾದದ್ದು ಸಿಕ್ಕಿತಾ? ಒತ್ತಡ ಇಲ್ಲದಿರುವುದೇ ಅತ್ಯುತ್ತಮವಾದದ್ದನ್ನು ಸಾಧಿಸಲು ದಾರಿ ಎಂಬುದನ್ನು ನಾವು ಮೊದಲಿಗೆ ಅರ್ಥ ಮಾಡಿಕೊಳ್ಳಬೇಕು. ಮಕ್ಕಳ ಬೌದ್ಧಿಕ ಸಾಮರ್ಥ್ಯಕ್ಕೆ ಮೀರಿದ್ದನ್ನು ಹೇರಲು ಹೊರಟರೆ ಆ ನಂತರ ಪರಿತಪಿಸಬೇಕಾಗುತ್ತದೆ.

ಸಾಲ ಮಾಡಬಾರದು, ಇರುವುದನ್ನು ಮಾರಬಾರದು

ಸಾಲ ಮಾಡಬಾರದು, ಇರುವುದನ್ನು ಮಾರಬಾರದು

"ಈಗಿರುವ ಮನೆ ಅಥವಾ ಜಾಗ ಮಾರಿ, ಬೇರೆಯದನ್ನು ತೆಗೆದುಕೊಳ್ಳೋಣ ಅಂದರೆ ಮನೆಯಲ್ಲಿ ಬಿಡುತ್ತಲೇ ಇಲ್ಲ. ಇನ್ನು ಸಾಲ ಮಾಡಿ, ಮನೆ ಕಟ್ಟುವುದಕ್ಕೂ ಬಿಡುತ್ತಿಲ್ಲ" - ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಬಹುತೇಕ ಮನೆಗಳಲ್ಲಿ ಆಗುವ ವಾಗ್ವಾದ ಇದೇ ವಿಚಾರಕ್ಕೆ. ಈ ಹಿಂದಿನ ತಲೆಮಾರು ಅನುಕೂಲ ಆದಂತೆ ಸ್ವಲ್ಪ- ಸ್ವಲ್ಪವಾಗಿ ಮನೆಯನ್ನು ವಿಸ್ತರಣೆ ಮಾಡಿಕೊಂಡಿದ್ದು ಬಿಟ್ಟರೆ, ಇರುವ ಜಾಗ ಮಾರಿ, ಅಲ್ಲಿಂದ ಸ್ವಲ್ಪ ದೂರಕ್ಕೆ ಹೋಗಿ ಜಾಗ ಅಥವಾ ಮನೆ ಖರೀದಿಸಿದ ಉದಾಹರಣೆ ಸಿಗಲ್ಲ. ಇರುವುದನ್ನು ಮಾರಿದರೆ ಅದರ ವಿತರಣೆ ಹೇಗೆ ಆಗುತ್ತದೋ ಎಂಬ ಆತಂಕ ಅವರದು. "ಸಾಲ ಮಾಡಬಾರದು, ಇರುವುದನ್ನು ಮಾರಬಾರದು" ಎಂಬುದು ಅವರಿಗೆ ಗೊತ್ತಿರುವ ಅರ್ಥಶಾಸ್ತ್ರದ ಮೂಲ ಪಾಠ. ಆದರೆ ಈ ಮಾತುಗಳು ಬಹಳ ಕಿರಿಕಿರಿ ಮಾಡುತ್ತವೆ. ಈಗ ಇಪ್ಪತ್ತು- ಮೂವತ್ತು- ನಲವತ್ತರ ಹರೆಯದವರಿಗೂ ಅನುಭವ ಆದ ನಂತರ ಈ ಮಾತಿನ ಸತ್ಯ ಗೊತ್ತಾಗುತ್ತದೆ. ಈ ಮಾತು ಮನೆ ಅಡಮಾನ ಮಾಡಿ ಬಿಜಿನೆಸ್ ಮಾಡ್ತೀನಿ ಆನ್ನೋರಿಗೂ ಅನ್ವಯಿಸುತ್ತದೆ.

English summary

Will Old Age People Economics Suits Today?

Here is the 4 example normally suggested by old age people. Will it suits today? Let's evaluate.
Story first published: Thursday, December 12, 2019, 13:39 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X