Englishहिन्दी മലയാളം தமிழ் తెలుగు

ಜಗತ್ತಿನ ಟಾಪ್ 10 ಅತಿ ಭ್ರಷ್ಟ ರಾಷ್ಟ್ರಗಳು

Written By: Siddu
Subscribe to GoodReturns Kannada

ಭ್ರಷ್ಟಚಾರ/ಲಂಚಕೋರತನ ಎಂದರೆ ಸಮಾಜದ ಹಣವನ್ನು ತಮ್ಮ ಸ್ವಂತಕ್ಕಾಗಿ ಬಳಸಿಕೊಳ್ಳುವುದು ಮತ್ತು ತಪ್ಪು ದಾರಿಯಿಂದ ಹಣವನ್ನು ಸಂಗ್ರಹಿಸುವುದು. ಜನಸಾಮಾನ್ಯರ ಕಣ್ಣಿಗೆ ಅಧಿಕಾರಿಗಳು ಕೆಲಸವನ್ನು ಬೇಗನೆ ಮಾಡಿಕೊಡಲು ಪಡೆದುಕೊಳ್ಳುವ ಲಂಚ ಮಾತ್ರ ಕಣ್ಣಿಗೆ ಕಾಣುತ್ತದೆ. ಆದರೆ ಕೆಲ ಬುದ್ದಿವಂತ ದುರುಳರು ದೇಶದ ಕಾನೂನಿನ ಲೋಪಗಳನ್ನು ಉಪಯೋಗಿಸಿಕೊಳ್ಳುವ ಮೂಲಕ ಭ್ರಷ್ಟತೆ ನಡೆಸುತ್ತಾರೆ.

ಯಾರಿಗೇನಾದರೂ ನನಗೇನು, ನಾನು ಹಣ ಮಾಡಿದರೆ ಸಾಕು ಎಂಬ ಮನೋಭಾವ ಇರುವ ವ್ಯಕ್ತಿಗಳು ಇದ್ದಷ್ಟೂ ದೇಶದಲ್ಲಿ ಭ್ರಷ್ಟತೆ ಹೆಚ್ಚುತ್ತಲೇ ಹೋಗುತ್ತದೆ. ಅಮೇರಿಕಾ, ಯೋರೋಪಿಯನ್ ನಂತಹ ಮುಂದುವರೆದ ರಾಷ್ಟ್ರಗಳಲ್ಲಿ ಕಾನೂನು ಬಹಳವೇ ಕಠಿಣವಾಗಿರುವ ಕಾರಣ ಸಾಮಾನ್ಯರು ಭ್ರಷ್ಟರಾಗಲು ಹೆದರುತ್ತಾರೆ. 

ಆದರೆ ಅಭಿವೃದ್ದಿಶೀಲ ರಾಷ್ಟ್ರಗಳಲ್ಲಿ ಮೂಲಭೂತ ಸೌಕರ್ಯಗಳೆಲ್ಲಾ ಹಣವಿದ್ದವರ ಪಾಲಾದಾಗ, ಹಣವಿದ್ದವನೇ ದೊಡ್ಡಪ್ಪನಾದಾಗ, ಹಣಕ್ಕೇ ಹೆಚ್ಚಿನ ಪ್ರಾಧಾನ್ಯತೆ, ಶಿಕ್ಷಣದ ಕೊರತೆ, ಸಂಪನ್ಮೂಲಗಳ ಕೊರತೆ, ಹಣದ ತೀವ್ರ ಅಗತ್ಯತೆ ಮೊದಲಾದ ಕಾರಣಗಳಿಂದ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಸಿಗುತ್ತದೆ. ಅವಿದ್ಯಾವಂತರು ಭಾರೀ ಸಂಖ್ಯೆಯಲ್ಲಿರುವ ಕಾರಣ ಇವರಿಗೆ ನೆರವು ನೀಡುವ ಭರವಸೆ ಒದಗಿಸಿ ನೆರವಿನ ಒಂದಂಶವನ್ನು ಮಾತ್ರ ನೀಡಿ ಉಳಿದುದನ್ನು ನುಂಗುವ ಮೂಲಕ ಭ್ರಷ್ಟಾಚಾರ ತಾಂಡವವಾಡುತ್ತದೆ.

ಅಧಿಕಾರದಲ್ಲಿದ್ದವರೇ ಈ ನಿಟ್ಟಿನಲ್ಲಿ ವ್ಯಸ್ತರಾದಾಗ ದೇಶ ಹೇಗೆ ಮುಂದುವರೆಯಬೇಕು? ಈ ನಿಟ್ಟಿನಲ್ಲಿ ಪ್ರತಿ ವರ್ಷವೂ ಅತಿ ಭ್ರಷ್ಟ ರಾಷ್ಟ್ರಗಳ ಪಟ್ಟಿಯೊಂದು ತಯಾರಾಗುತ್ತದೆ. ಈ ಪಟ್ಟಿಯಲ್ಲಿ ಭಾರತ ಇದೆಯೇ? ಆ ಹತ್ತು ಕಡು ಭ್ರಷ್ಟ ದೇಶಗಳು ಯಾವುವು? ಎಂಬ ಕುತೂಹಲ ನಿಮ್ಮಲ್ಲಿ ಇದೆಯಲ್ಲವೇ? ನಿಮ್ಮ ಕುತೂಹಲವನ್ನು ಕೆಳಗಿನ ಮಾಹಿತಿ ತಣಿಸಲಿದೆ...

1. ನೈಜೀರಿಯಾ

ನೈಜೀರಿಯಾ 2016ರಲ್ಲಿನ ವಿಶ್ವದ ಅತಿ ಭ್ರಷ್ಟ ರಾಷ್ಟ್ರ. ರಸ್ತೆಯಲ್ಲಿ ನಡೆದು ಹೋಗುತ್ತಿರುವಾಗ ಯಾರಿಗಾದರೂ ವಿಳಾಸ ಕೇಳಿದಾಗ ದಿಕ್ಕು ತೋರಿಸಲು ಲಂಚ ಕೇಳುವಷ್ಟರ ಮಟ್ಟಿಗೆ ಇಲ್ಲಿ ಭ್ರಷ್ಟತೆ ವ್ಯಾಪಕವಾಗಿದೆ.
ಅಂದಹಾಗೆ ನೈಜೀರಿಯಾದಲ್ಲಿ ಸಂಪನ್ಮೂಲಗಳು ಇಲ್ಲ ಅಂತಲ್ಲ. ಇಲ್ಲಿರುವ ತೈಲ ಭಂಡಾರ ಆಫ್ರಿಕಾದಲ್ಲಿ ಅತಿ ಹೆಚ್ಚು ಮತ್ತು ವಿಶ್ವದಲ್ಲಿ ಹನ್ನೊಂದನೆಯ ಸ್ಥಾನದಲ್ಲಿದೆ. ಆದರೆ ಈ ಎಣ್ಣೆ ಮಾರಿ ಬಂದ ಹಣ ಜನರಿಗೆ ಅಥವಾ ಅಭಿವೃದ್ದಿಗೆ ಬಳಕೆಯಾಗುವ ಬದಲಿಗೆ ನಾಯಕರ ಮನೆಯನ್ನು ಚಿನ್ನದಿಂದ ಅಲಂಕರಿಸುತ್ತಿದೆ. ಬೇಲಿಯೇ ಎದ್ದು ಹೊಲ ಮೇದಂತೆ ಜನನಾಯಕರೇ ಇಲ್ಲಿನ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ.

2. ಉತ್ತರ ಕೊರಿಯಾ

ದಶಕಗಳಿಂದ ಉತ್ತರ ಕೊರಿಯಾವನ್ನು ಆಳುತ್ತಿರುವ ನಿರಂಕುಶ ಆಡಳಿತಗಾರ ಕಿಮ್ ಜುಂಗ್ ಕುಟುಂಬ ದೇಶಕ್ಕೆ ಒಳ್ಳೆಯದು ಮಾಡುವುದಕ್ಕಿಂತ ಹೆಚ್ಚಾಗಿ ದಬ್ಬಾಳಿಕೆಯನ್ನೇ ಮಾಡುತ್ತಾ ಬಂದಿದ್ದಾರೆ. ಈ ನಾಡಿನ ನಿಯಮಗಳ ಪ್ರಕಾರ ಜನರೆಲ್ಲರೂ ಬಡವರೇ ಆಗಿದ್ದು, ಅವರ ಶ್ರಮದ ಪ್ರತಿಫಲವೆಲ್ಲಾ ಈ ಅರಸರಿಗೇ ಹೋಗುತ್ತದೆ. ಸಾಮಾಜಿಕ ಮತ್ತು ಆರ್ಥಿಕ ವಲಯಗಳನ್ನೆಲ್ಲಾ ದೇಶದ ಮಿಲಿಟರಿಯೇ ಆವರಿಸಿದ್ದು ಚಕ್ರವರ್ತಿಯ ಆಜ್ಞೆಗಳನ್ನೇ ಅಧಿಕಾರದಂತೆ ಚಲಾಯಿಸುತ್ತಿದೆ. ಇಲ್ಲಿನ ಧನ ಸಂಪತ್ತು ಮಿಲಿಟರಿಗೆ ಬಳಕೆಯಾಗುತ್ತದೆ. ಇಲ್ಲವೇ ಕಿಂ ಜುಂಗ್ ಕುಟುಂಬದ ಕಿಸೆ ಸೇರುತ್ತದೆ.

3. ಸೋಮಾಲಿಯಾ

ಕಡಲುಗಳ್ಳರಿಗೆ ಕುಖ್ಯಾತಿ ಪಡೆದಿರುವ ಸೋಮಾಲಿಯಾದಲ್ಲಿ ಸ್ಥಿರವಾದ ಸರ್ಕಾರವೇ ಇಲ್ಲ. ಅಧಿಕಾರ ವಹಿಸಿಕೊಂಡಿರುವ ಅಲ್ ಶಬಾಬ್ ದೊರೆಗಳು ತಮ್ಮ ಪ್ರಜೆಗಳಿಗೆ ರಕ್ಷಣೆ ನೀಡುವ ಬದಲಿಗೆ ಕ್ರೌರ್ಯವನ್ನೇ ಎಸಗುತ್ತಾ ಬಂದಿದ್ದಾರೆ. ರಾಜಧಾನಿ ಮೊಗಾದಿಶು ಮತ್ತು ರೇವು ಪಟ್ಟಣ ಕಿಸ್ಮಾಯು ಸಹಿತ ಇತರ ಪ್ರಮುಖ ಪಟ್ಟಣಗಳೆಲ್ಲಾ ಈ ಗುಂಪಿನ ಆಧೀನದಲ್ಲಿವೆ. ತಮ್ಮ ಸರ್ಕಾರ ಯಾವಾಗ ಬೀಳುತ್ತದೋ ಎಂಬ ಅನಿಶ್ಚಿತತೆ ಇರುವಾಗ ಯಾರಾದರೂ ಸಮಯವಿರುವಾಗಲೇ ಸಾಕಷ್ಟು ದೋಚಿಕೊಳ್ಳೋಣ ಎಂಬುದು ಅಧಿಕಾರಕ್ಕೆ ಬರುವವರ ಮಾನಸಿಕತೆ ಆಗಿರುವುದರಿಂದ ಈ ದೇಶದಲ್ಲಿ ಅಭಿವೃದ್ದಿಯ ಮಾತೇ ಇಲ್ಲ. ಇಲ್ಲಿನ ಲಕ್ಷಾಂತರ ಜನರು ಇನ್ನೂ ಅನಕ್ಷರಸ್ಥರಾಗಿಯೇ ಉಳಿದಿದ್ದಾರೆ. ಇವರು ಕಡು ಬಡವರಾಗಿದ್ದು ಸರ್ಕಾರದಿಂದ ಏನನ್ನೂ ಬೇಡುವ ಸ್ಥಿತಿಯಲ್ಲಿಯೂ ಇಲ್ಲ. ಸರ್ಕಾರವೇ ಹಣವನ್ನು ಲೂಟಿ ಮಾಡುತ್ತಿರುವಾಗ ಉಳಿದವರು ಕಡಲುಗಳ್ಳತನದಂತಹ ಅಪರಾಧಿ ಕಾರ್ಯಗಳಿಗೆ ಇಳಿಯುತ್ತಾರೆ.

4. ಇರಾಕ್

ಗಲ್ಫ್ ಯುದ್ದದ ಬಳಿಕ ಹದಿನೈದು ವರ್ಷ ಕಳೆದ ಮೇಲೆ ಎರಡನೆಯ ಬಾರಿಯ ಧಾಳಿಯಿಂದ ಇರಾಕ್ ನಿಂದ ಅಮೇರಿಕಾದ ಪಡೆಗಳು ಹಿಮ್ಮೆಟ್ಟಿದ ಬಳಿಕ ಈ ನಾಡಿನಲ್ಲಿ ಈಗ ಎಲ್ಲವೂ ಖಾಲಿ ಖಾಲಿ. ಅಳಿದುಳಿದ ನಾಡಿನ ನಾಯಕತ್ವ ವಹಿಸಲು ಕೆಲವು ನಾಯಕರು ಕಚ್ಚಾಟ ನಡೆಸಿದ್ದಾರೆ. ಈ ನಡುವೆ ಆಗಮಿಸಿದ ಐಸಿಸ್ (Islamic State(ISIS) ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿದ್ದು ಭಯೋತ್ಪಾದನೆಯ ಮೂಲಕ ದೇಶದಲ್ಲಿ ಅಭಿವೃದ್ದಿಯನ್ನು ಹಿಮ್ಮೆಟ್ಟಿಸುತ್ತಿದೆ. ಆದರೆ ಇರಾಕ್ ನಲ್ಲಿರುವ ಬೃಹತ್ ತೈಲ ಭಂಡಾರದ ಮೇಲೆಯೇ ಎಲ್ಲರಿಗೂ ಕಣ್ಣಿದ್ದು ಇದರಿಂದ ಬರಬಹುದಾದ ಲಾಭವನ್ನು ಪಡೆಯಲು ಹೊಂಚು ಹಾಕುತ್ತಿದ್ದಾರೆ. ಇದಕ್ಕಾಗಿ ಕಾನೂನು ಬಾಹಿರವಾಗಿ ತೈಲವನ್ನು ಹೊರತೆಗೆದು ಮಾರುತ್ತಿದ್ದಾರೆ.

5. ಅಫ್ಘಾನಿಸ್ತಾನ

ಅಫ್ಘಾನಿಸ್ಥಾನ ಯುದ್ಧದಲ್ಲಿ ತೊಡಗಿರುವ ದೇಶಗಳ ನಟ್ಟನಡುವೆ ಇದೆ. ಈ ಪರಿಸ್ಥಿತಿ ಕಾನೂನಿನ ಸ್ಥಿರತೆ ಮತ್ತು ಸರ್ಕಾರದ ಕಾರ್ಯ ನಿರ್ವಹಣೆಗೆ ತೊಡಕಾಗಿದೆ.
ಕಾರ್ಯನಿರ್ವಹಿಸಲು ಸಾಮರ್ಥ್ಯವನ್ನು ಪ್ರಭಾವ ಬೀರಿದೆ. ಬಂಡುಕೋರರು ಆಡಳಿತ ವ್ಯವಹಾರಗಳಲ್ಲಿ ಮೂಗು ತೂರಿಸುವ ಮೂಲಕ ಸರ್ಕಾರದ ಕಾರ್ಯವಿಧಾನವನ್ನೇ ಬುಡ ಮೇಲಾಗಿಸುತ್ತಾರೆ. ಅಷ್ಟೇ ಅಲ್ಲ ಅಧಿಕಾರದಲ್ಲಿ ಯಾರು ಇರಬೇಕು ಯಾರು ಇರಬಾರದು ಎಂಬುದನ್ನೂ ಇವರೇ ನಿರ್ಧರಿಸುವ ಮೂಲಕ ಅತಿ ಭ್ರಷ್ಟ ರಾಷ್ಟ್ರದ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದಿದೆ.

6. ಸೂಡಾನ್

1989ರಲ್ಲಿ ಸರ್ವಾಧಿಕಾರದ ಬಲವನ್ನು ಬಳಸಿ ಅಧಿಕಾರಕ್ಕೆ ಬಂದ ಒಮರ್ ಅಲ್ ಬಶೀರ್ ರವರ ಆಡಳಿತ ನಿರಂಕುಶವಾಗಿ ಇಂದಿಗೂ ಮುಂದುವರೆಯುತ್ತಿದೆ. ತಮಗೆ ಸಿಕ್ಕ ಅಧಿಕಾರದ ಗರಿಷ್ಟ ಬಳಕೆಯನ್ನು ಮಾಡಿಕೊಂಡ ಈ ದೊರೆ ತನ್ನ ಮತ್ತು ತನ್ನ ಜನರಿಗೆ ಮುಂದಿನ ನೂರು ಪೀಳಿಗೆಗೆ ಆಗುವಷ್ಟು ಹಣವನ್ನು ಸರ್ಕಾರ ಮತ್ತು ಜನರಿಂದ ದೋಚಿದ್ದಾರೆ. ಇದಕ್ಕಾಗಿ ಅಮಾನವೀಯ ಕ್ರಮಗಳನ್ನೂ ಕೈಗೊಂಡಿದ್ದು ಇವನ್ನು ಪ್ರಶ್ನಿಸಿದವರಿಗೆ ಉಪಟಳ, ಹಿಂಸೆಯನ್ನು ನೀಡಿ ಬಲವಂತವಾಗಿ ಬಾಯಿ ಮುಚ್ಚಿಸಲಾಗುತ್ತದೆ. ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯ(International Criminal Court(ICC)ದ ವಿಚಾರಣಾಧೀನರಾಗಿದ್ದಾರೆ. ದಶಕಗಳ ಹಿಂದೆಯೇ ಶೀತಲ ಸಮರ ನಡೆಯುತ್ತಿದ್ದು, ಇಂದಿಗೂ ಈ ತುಮುಲ ಮುಂದುವರೆದಿದೆ. ಭಾರೀ ಪ್ರಮಾಣದ ತೈಲ ನಿಕ್ಷೇಪವಿದ್ದರೂ ಸೂಡಾನ್ ಇಂದಿಗೂ ಬಡರಾಷ್ಟ್ರಗಳಲ್ಲೊಂದಾಗಿರುವುದು ಈ ಸರ್ಕಾರದ ಭ್ರಷ್ಟತೆಗೆ ಹಿಡಿದ ಕೈಗನ್ನಡಿಯಾಗಿದೆ.

7. ವೆನೆಜುವೆಲಾ

ಸರ್ವಾಧಿಕಾರಿ ಹ್ಯೂಗೋ ಚಾವೆಚ್ ರವರ ಸರ್ವಾಧಿಕಾರಕ್ಕೆ ಒಳಗಾಗಿರುವ ವೆನೆಜುವೆಲಾ ವಿಶ್ವದ 7ನೇ ಭ್ರಷ್ಟ ರಾಷ್ಟ್ರವಾಗಿದೆ. ಗಲ್ಫ್ ರಾಷ್ಟ್ರಗಳಿಗೂ ಹೆಚ್ಚಿನ ತೈಲ ಭಂಡಾರವಿರುವ(ಪ್ರಸ್ತುತ ವಿಶ್ವದಲ್ಲಿಯೇ ಅತ್ಯಧಿಕ) ಈ ದೇಶ ಅಭಿವೃದ್ದಿ ಹೊಂದದೇ ಇರಲು ಕಾರಣ ಸರ್ವಾಧಿಕಾರಿ ಹ್ಯೂಗೋ ಚಾವೆಚ್ ದುರಾಡಳಿತ.
ಚಾವೆಜ್ ಈ ರಾಷ್ಟದ ಜನರನ್ನು ಅತ್ಯಂತ ಬಿಗಿಯಾದ ಕಾನೂನಿನ ಚೌಕಟ್ಟಿನಲ್ಲಿರಿಸಿ ದೇಶದ ಎಲ್ಲಾ ಆರ್ಥಿಕ ವ್ಯವಸ್ಥೆಯನ್ನೇ ನಿಯಂತ್ರಿಸುವ ಮೂಲಕ ದೇಶವನ್ನು ಕಪಿಮುಷ್ಠಿಯಲ್ಲಿರಿಸಿದ್ದಾರೆ. ಪರಿಣಾಮವಾಗಿ ದೇಶದಲ್ಲಿ ಅತ್ಯಂತ ದೊಡ್ಡ ತೈಲಭಂಡಾರವಿದ್ದರೂ ಜನತೆಗೆ ಸರಿಯಾದ ಕುಡಿಯುವ ನೀರು, ರಸ್ತೆ ಅಥವಾ ಮೂಲಭೂತ ಸೌಕರ್ಯಗಳ ವ್ಯವಸ್ಥೆಯೂ ಇಲ್ಲ.

8. ಲಿಬಿಯಾ

ಕಳೆದ ನಲವತ್ತು ವರ್ಷದಿಂದ ಕರ್ನಲ್ ಮುಮ್ಮರ್ ಗಡ್ಡಾಫಿಯವರ ಆಳ್ವಿಕೆಯಲ್ಲಿದ್ದ ಲಿಬಿಯಾ 2011ರಲ್ಲಿ ಇವರ ಅಧಿಕಾರದಿಂದ ಹೊರಬಂದಿದೆ. ಇವರ ಬಳಿಕ ತೆರವಾದ ಸ್ಥಾನ ತುಂಬಲು ಬಂಡುಕೋರರು ನಾಮುಂದು ತಾಮುಂದು ಎಂದು ಜಗಳವಾಡುತ್ತಿರುವ ಕಾರಣ ತೈಲ ಭಂಡಾರದ ಲಾಭಗಳೆಲ್ಲಾ ಇವರ ಜೇಬುಗಳನ್ನು ಸೇರುತ್ತಿವೆ. ಇವರಿಗೆ ಜೇಬು ತುಂಬಿಕೊಳ್ಳಲೇ ಪುರುಸೊತ್ತಿಲ್ಲದಾಗ ರಾಷ್ಟ್ರದ ಅಭಿವೃದ್ಧಿಯ ಬಗ್ಗೆ ಯೋಚಿಸುವವರಾರು? ಪರಿಣಾಮವಾಗಿ ಲಿಬಿಯಾ ಪ್ರಜೆಗಳು ಕಷ್ಟಕರ ಜೀವನ ನಡೆಸುತ್ತಿದ್ದಾರೆ.

9. ಎರೀಟ್ರಿಯಾ

ಒಂದೆಡೆ ಕೆಂಪು ಸಮುದ್ರ ಮತ್ತು ಇನ್ನೊಂದೆಡೆ ದಿಜಿಬೂತಿ ಇರುವ ಎರೀಟ್ರಿಯಾ ಇದುವರೆಗೂ ಹೊರ ಜಗತ್ತಿನೊಂದಿಗೆ ಸಂಪರ್ಕವನ್ನು ಕಡಿದುಕೊಂಡಿತ್ತು. ತೀರಾ ಇತ್ತೀಚೆಗೆ ಹೊರ ಜಗತ್ತಿನ ಸಂಪರ್ಕ ಪಡೆದು ವಾಣಿಜ್ಯ ವಹಿವಾಟುಗಳಿಗೆ ಬಾಗಿಲು ತೆರೆದಿದೆ. ಈ ದೇಶದ ಸಮುದ್ರ ತೀರ ಇತರ ರಾಷ್ಟ್ರಗಳಿಂದ ಸಮುದ್ರ ಮಾರ್ಗದಲ್ಲಿ ಸಾಗುವ ಹಡಗುಗಳಿಗೆ ಅತ್ಯಂತ ಸೂಕ್ತ ನಿಲುಗಡೆಯ ತಾಣವಾಗಿದ್ದು ಇದರ ಪ್ರಯೋಜನವನ್ನು ದೇಶ ಪಡೆಯಬೇಕಿದೆ. ಆದರೆ ಭಾರೀ ಪ್ರಮಾಣದಲ್ಲಿ ಹಡಗುಗಳು ಇಲ್ಲಿ ಆಗಮಿಸುತ್ತಿದ್ದರೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನುಭವದ ಕೊರತೆ, ಅಧಿಕಾರಿಗಳ ಅಸಹಾಯಕತೆ ಹಾಗೂ ದೇಶದಲ್ಲಿ ಭ್ರಷ್ಟ ಅಧಿಕಾರಿಗಳು ಹೆಚ್ಚಿರುವುದರಿಂದ ವಿಶ್ವದ ಒಂಭತ್ತನೆಯ ಭ್ರಷ್ಟ ರಾಷ್ಟ್ರದ ಪಟ್ಟ ಪಡೆದಿದೆ.

10. ದಕ್ಷಿಣ ಸೂಡಾನ್

ಕೇವಲ ಆರು ವರ್ಷಗಳ ಹಿಂದೆ ಅಂದರೆ 2011ರಲ್ಲಿ ಸೂಡಾನ್ ನಿಂದ ಪ್ರತ್ಯೇಕವಾಗಿ ಸ್ವಾತಂತ್ರ್ಯ ಪಡೆದಾಗ ಇಲ್ಲಿನ ನಿವಾಸಿಗಳ ಸಂತೋಷ ಹೇಳತೀರದಾಗಿತ್ತು. ಆದರೆ ಈ ಸಂತೋಷ ಹೆಚ್ಚು ಕಾಲ ಬಾಳಲಿಲ್ಲ. ಏಕೆಂದರೆ ಸರ್ಕಾರ ನಡೆಸಲು ಸಮರ್ಥರಾದ ವ್ಯಕ್ತಿಗಳೇ ಈ ದೇಶದಲ್ಲಿರಲಿಲ್ಲ ಹಾಗೂ ದೇಶವನ್ನು ಕಟ್ಟಲು ಬೇಕಾದ ಸಾಮಾಗ್ರಿಗಳ ಕೊರತೆ ಎದುರಾಗಿತ್ತು. ಇದರ ಪ್ರಯೋಜನವನ್ನು ಪಡೆದ ದುರುಳರು ದೇಶದ ಸಂಪತ್ತನ್ನು ತಮ್ಮ ಸ್ವಂತ ಸಂಪತ್ತಾಗಿಸುವಲ್ಲಿ ವ್ಯಸ್ತರಾದರು. ದೇಶದ ಉತ್ಪಾದನೆಯೆಲ್ಲಾ ನೇರವಾಗಿ ಇವರ ಮನೆಯಂಗಳಕ್ಕೆ ಹೋಗುವಂತೆ ಕಾನೂನುಗಳನ್ನು ರಚಿಸಿದರು. ಪರಿಣಾಮವಾಗಿ ಉತ್ತಮ ಸಂಪನ್ಮೂಲಗಳಿದ್ದೂ ವಿಶ್ವದ ಭ್ರಷ್ಟ ರಾಷ್ಟ್ರಗಳಲ್ಲಿ ಹತ್ತನೆಯ ಸ್ಥಾನ ಪಡೆದಿದೆ. ಇದರ ನೇರ ಪರಿಣಾಮ ಮಾತ್ರ ಜನಸಾಮಾನ್ಯರ ಮೇಲಾಗಿದ್ದು ಪ್ರಸ್ತುತ ದೇಶದ ಮೇಲೆ ನಿಯಂತ್ರಣ ಪಡೆಯಲು ನಡೆಸುತ್ತಿರುವ ಹೋರಾಟಗಳಿಂದ ನಾಗರಿಕ ಕ್ಷೋಬೆಯುಂಟಾಗಿದೆ.

English summary

Top 10 Most Corrupt Countries in the World

Corruption is the embezzlement of public funds for personal gain. It also means attaining unfair advantages in government procurement and state appointments. Corruption leads to economic turmoil and under development in any country where such practices are rife.
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns