For Quick Alerts
ALLOW NOTIFICATIONS  
For Daily Alerts

ಭಾರತದ ಅತ್ಯಂತ ದುಬಾರಿ ಐಷಾರಾಮಿ 10 ಹೋಟೆಲ್

ಕೆಲವು ಹಿಂದಿನ ಕಾಲದ ರಾಜರು ಹಾಗೂ ನವಾಬರು ಕಟ್ಟಿಸಿ ವಾಸವಾಗಿದ್ದ ಕೋಟೆ ಕೊತ್ತಲುಗಳಾಗಿದ್ದು, ಇದನ್ನು ಇಂದು ಐಶಾರಾಮಿ ಹೋಟೆಲುಗಳಾಗಿಸಿ ಪುರಾತನ ವೈಭವವನ್ನು ಮತ್ತೊಮ್ಮೆ ಮರಳಿಸಿ ಇದನ್ನು ದುಬಾರಿ ಬಾಡಿಗೆಗೆ ನೀಡುವ ಮೂಲಕ ಪ್ರಸಿದ್ದತೆ ಪಡೆದಿವೆ.

By Siddu
|

ಐಶ್ವರ್ಯ ಹಾಗೂ ಬಡತನ ಎರಡರಲ್ಲಿಯೂ ಅತಿ ಹೆಚ್ಚು ವೈಪರೀತ್ಯಗಳಿರುವ ನಮ್ಮ ದೇಶದಲ್ಲಿ ಶ್ರೀಮಂತರಿಗಾಗಿಯೇ ಇರುವ ಐಷಾರಾಮಿ ರೆಸಾರ್ಟ್-ಹೋಟೆಲ್ ಗಳಿಗೆ ಕೊರತೆಯಿಲ್ಲ. ಇದರಲ್ಲಿ ಕೆಲವು ಹಿಂದಿನ ಕಾಲದ ರಾಜರು ಹಾಗೂ ನವಾಬರು ಕಟ್ಟಿಸಿ ವಾಸವಾಗಿದ್ದ ಕೋಟೆ ಕೊತ್ತಲುಗಳಾಗಿದ್ದು, ಇದನ್ನು ಇಂದು ಐಶಾರಾಮಿ ಹೋಟೆಲುಗಳಾಗಿಸಿ ಪುರಾತನ ವೈಭವವನ್ನು ಮತ್ತೊಮ್ಮೆ ಮರಳಿಸಿ ಇದನ್ನು ದುಬಾರಿ ಬಾಡಿಗೆಗೆ ನೀಡುವ ಮೂಲಕ ಪ್ರಸಿದ್ದತೆ ಪಡೆದಿವೆ. ಈ ಹೋಟೆಲುಗಳು ಭಾರತದ ಖ್ಯಾತ ಹಾಗೂ ಅತಿ ಶ್ರೀಮಂತ ಹೋಟೆಲ್ ಗುಂಪುಗಳಿಗೆ ಸೇರಿವೆ.

ಎಲ್ಲವೂ ಶ್ರೀಮಂತರ ಸ್ವತ್ತಲ್ಲ. ಇವತ್ತು ನಾನು ಬಡವನಾಗಿರಬಹುದು. ಆದರೆ ಒಂದು ದಿನ ನಾನು ಕೂಡ ಇಂತಹ ದುಬಾರಿ ಐಷಾರಾಮಿ ಹೋಟೆಲ್ ಗಳಿಗೆ ಹೋಗಿ ಎಂಜಾಯ್ ಮಾಡುತ್ತೇನೆ ಎನ್ನುವಂತಹ ಆಶಾವಾದಿ ಛಲಗಾರರು ಕೂಡ ಇದ್ದಾರೆ.

ಕೆಲವು ಹೋಟೆಲುಗಳು ನಗರದ ಒಳಗಿದ್ದು, ಇವು ಖ್ಯಾತ ಬಾಲಿವುಡ್-ಹಾಲಿವುಡ್ ತಾರೆಯರು, ನಿರ್ದೇಶಕರು, ನಿರ್ಮಾಪಕರು ಇಲ್ಲಿಯೇ ಉಳಿದುಕೊಳ್ಳಲು ಇಚ್ಛಿಸುತ್ತಾರೆ. ಗತವೈಭವವನ್ನು ಇಂದಿನ ದಿನದ ಸೌಕರ್ಯಗಳ ಜೊತೆಗೆ ನೀಡುವ ಈ ಹೋಟೆಲುಗಳ ವೈಖರಿಯನ್ನು ಇವರು ಮೆಚ್ಚುತ್ತಾರೆ. ಈ ಹೋಟೆಲುಗಳಲ್ಲಿ ನೀಡಲಾಗುವ ಸೇವೆ ಹಾಗೂ ಆತಿಥ್ಯ ಹಿಂದಿನ ರಾಜಮರ್ಯಾದೆಗೂ ಕಡಿಮೆ ಇಲ್ಲದಂತಿರದಿರುವುದೂ ಈ ಮೆಚ್ಚುಗೆಗೆ ಇನ್ನೊಂದು ಕಾರಣ. ಇವುಗಳ ಬಾಡಿಗೆಯೂ ಸಾಮಾನ್ಯ ವ್ಯಕ್ತಿಗಳು ಭರಿಸಲಾರದಷ್ಟು ದುಬಾರಿಯೂ ಆಗಿರುತ್ತವೆ.
ಹಾಗಿದ್ದರೆ ಭಾರತದ ಪ್ರಸಿದ್ದ ಹಾಗು ದುಬಾರಿಯಾಗಿರುವ ಹತ್ತು ಹೋಟೆಲುಗಳು ಯಾವುವು ಎಂಬುದನ್ನು ನೋಡೋಣ..

10. ತಾಜ್ ಫಲಕ್ನುಮಾ ಪ್ಯಾಲೇಸ್, ಹೈದರಾಬಾದ್

10. ತಾಜ್ ಫಲಕ್ನುಮಾ ಪ್ಯಾಲೇಸ್, ಹೈದರಾಬಾದ್

ಗತ ವೈಭವವನ್ನು ಸಾರುವ ಈ ಸುಂದರ ಹೋಟೆಲ್ ಹೈದರಾಬಾದ್ ನಗರದಲ್ಲಿ ಸುಮಾರು ಎರಡು ಸಾವಿರ ಅಡಿ ಎತ್ತರದಲ್ಲಿ ಬೆಟ್ಟದ ಮೇಲಿದೆ. ಹಿಂದೆ ಈ ಅರಮನೆ ಹೈದರಾಬಾದ್ ನಿಜಾಮರ ವಾಸಸ್ಥಾನವಾಗಿತ್ತು. ಇಂದು ಈ ಅರಮನೆಯನ್ನು ತಾಜ್ ಹೋಟೆಲ್ಸ್ ಅಂಡ್ ಪ್ಯಾಲೇಸಸ್ ಎಂಬ ಸಂಸ್ಥೆ ತನ್ನ ಒಡೆತನದಲ್ಲಿ ಪಂಚತಾರಾ ಹೋಟೆಲನ್ನಾಗಿ ಪರಿವರ್ತಿಸಿದೆ. ಒಟ್ಟು ಮೂವತ್ತೆರಡು ಎಕರೆ ಸ್ಥಳದಲ್ಲಿ ಹರಡಿಕೊಂಡಿರುವ ಈ ವಿಶಾಲ ಹೋಟೆಲಿನಲ್ಲಿ ಅರವತ್ತು ಅತ್ಯಂತ ವೈಭವದ ಕೋಣೆಗಳು ಹಾಗೂ ವಿಶೇಷ ಕೋಣೆ (ಸ್ವೀಟ್) ಹಾಗೂ 101 ಅತಿಥಿಗಳಿಗೆ ಒಮ್ಮೆಲೇ ಬಡಿಸಬಹುದಾದ ದೊಡ್ಡ ಊಟದ ಮನೆಯೂ ಇದೆ. ಇದರಲ್ಲಿ ಸ್ಪಾ, ಈಜುಕೊಳ, ದೇಹದಾರ್ಢ್ಯ ಕೇಂದ್ರ ಮೊದಲಾದ ಸೌಲಭ್ಯಗಳೂ ಇವೆ. ದಿನವೊಂದಕ್ಕೆ ನೀಡಬೇಕಾದ ಬಾಡಿಗೆ ಕೇವಲ ರೂ. 1,95,000.

9. ತಾಜ್ ಮಹಲ್ ಪ್ಯಾಲೇಸ್ ಹೋಟೆಲ್, ಮುಂಬೈ

9. ತಾಜ್ ಮಹಲ್ ಪ್ಯಾಲೇಸ್ ಹೋಟೆಲ್, ಮುಂಬೈ

ಮಹಾರಾಷ್ಟ್ರದ ರಾಜಧಾನಿ ಮುಂಬೈನ ಮಹಾದ್ವಾರ ಅಥವಾ ಗೇಟ್ ವೇ ಆಫ್ ಇಂಡಿಯಾದ ಎದುರಿಗಿರುವ ಮುಂಬೈ ದಕ್ಷಿಣ ಭಾಗದಲ್ಲಿರುವ ಈ ವೈಭವದ ಹೋಟೆಲ್ ಭಾರತಕ್ಕಿಂತಲೂ ವಿದೇಶದಲ್ಲಿಯೇ ಹೆಸರುವಾಸಿಯಾಗಿದೆ. ಇದರಲ್ಲಿ ಏಳು ಅಂತಸ್ತುಗಳಿದ್ದು, ಇದರ ಪಕ್ಕದಲ್ಲಿ ನಿರ್ಮಿಸಲಾದ ತಾಜ್ ಟವರ್ ಎಂಬ ಇನ್ನೊಂದು ಕಟ್ಟಡದಲ್ಲಿ 22 ಅಂತಸ್ತುಗಳಿವೆ. 44 ವಿಶೇಷ ಗಣ್ಯರ ಕೋಣೆಗಳು ಹಾಗೂ 560 ವೈಭವದ ಕೋಣೆಗಳಿವೆ. ಎಲ್ಲಾ ಕೋಣೆಗಳು ಸಮುದ್ರ ಹಾಗೂ ಗೇಟ್ ವೇ ಆಫ್ ಇಂಡಿಯಾಕ್ಕೆ ಎದುರಾಗಿರುವಂತೆ ನಿರ್ಮಿಸಲಾಗಿದ್ದು, ಕಟ್ಟಡ ಕಟ್ಟುವಾಗ ಇದ್ದ ಸಾಮಾನ್ಯ ನಂಬಿಕೆಗೆ ವಿರುದ್ದವಾಗಿತ್ತು. ಕೆಲವು ವರ್ಷಗಳ ಹಿಂದೆ ನಡೆದ ಭಯೋತ್ಪಾದನಾ ಧಾಳಿಯಿಂದ ಈ ಹೋಟೆಲ್ ಹೆಚ್ಚಿನ ಹೆಸರು ಗಳಿಸಿತ್ತು ಹಾಗೂ ಈ ದಾಳಿಯನ್ನು ಇಂದಿಗೂ 26/11 ದಾಳಿ ಎಂದೇ ಉಲ್ಲೇಖಿಸಲಾಗುತ್ತದೆ.
ಈ ಹೋಟೆಲಿನ ಸಾಮಾನ್ಯ ಒಂದು ಕೋಣೆಯ ಒಂದು ದಿನದ ಬಾಡಿಗೆ ರೂ. 1,75,000.

8. ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್, ಮುಂಬೈ

8. ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್, ಮುಂಬೈ

ಸಮುದ್ರಕ್ಕೆ ಮುಖ ಮಾಡಿಕೊಂಡು ನಿಂತಿರುವ ಇನ್ನೊಂದು ಹೋಟೆಲ್ ಆಗಿರುವ ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್ ಮುಂಬೈನ ಅತ್ಯಂತ ದುಬಾರಿ ಪ್ರದೇಶವಾಗಿರುವ ಬಾಂದ್ರಾದಲ್ಲಿದೆ. ಇದರಲ್ಲಿ 493 ಅತ್ಯಂತ ವೈಭವದ ಕೋಣೆಗಳು ಹಾಗೂ 33 ಅತಿಗಣ್ಯ ವ್ಯಕ್ತಿಗಳ ಕೋಣೆಗಳಿದ್ದು ಎಲ್ಲವೂ ಸಮುದ್ರಕ್ಕೆ ಮುಖಮಾಡಿರುವಂತೆ ನಿರ್ಮಿಸಲಾಗಿದೆ. ಇಲ್ಲಿನ ವಿಶೇಷತೆ ಎಂದರೆ ಊಟದ ವೈವಿಧ್ಯತೆ. ಒಂದೇ ಸ್ಥಳದಲ್ಲಿ ಮಸಾಲಾ ಬೇ ಎಂಬ ಭಾರತೀಯ ರೆಸ್ಟೋರೆಂಟ್ ಜೊತೆಗೆ ಮಿಂಗ್ ಯಾಂಗ್ ಎಂಬ ಚೈನೀಸ್ ರೆಸ್ಟೋರೆಂಟ್ ಸಹ ಇದೆ. ಇಲ್ಲಿ ಗ್ರಾಹಕರ ಬೇಡಿಕೆಯ ಮೇರೆಗೆ ಕುದುರೆ ಸವಾರಿ ಹಾಗೂ ಗಾಲ್ಫ್ ಆಟದ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ.
ಒಂದು ದಿನದ ಸಾಮಾನ್ಯ ಬಾಡಿಗೆ ರೂ. 2,50,000.

7. ದ ಒಬೆರಾಯ್ ಅಮರ್ವಿಲಾಸ್, ಆಗ್ರಾ

7. ದ ಒಬೆರಾಯ್ ಅಮರ್ವಿಲಾಸ್, ಆಗ್ರಾ

ಆಗ್ರಾದ ಸುಪ್ರಸಿದ್ಧ ತಾಜ್ ಮಹಲ್ ನಿಂದ ಕೇವಲ ಆರು ನೂರು ಮೀಟರುಗಳ ದೂರದಲ್ಲಿರುವ ದ ಒಬೆರಾಯ್ ಅಮರ್ವಿಲಾಸ್ ಹೋಟೆಲ್ ಸಹ ವೈಭವದಿಂದ ತುಂಬಿ ತುಳುಕುತ್ತಿದೆ. ಇದರಲ್ಲಿ 102 ವೈಭವದ ಹಾಗೂ ಗಣ್ಯರ ವಿಶೇಷ ಕೋಣೆಗಳಿವೆ. ಎಲ್ಲಾ ಕೋಣೆಗಳನ್ನು ತಾಜ್ ಮಹಲ್ ಸ್ಪಷ್ಟವಾಗಿ ಕಾಣುವಂತೆ ನಿರ್ಮಿಸಲಾಗಿದೆ. ಗ್ರಾಹಕರ ಆರಾಮಕ್ಕಾಗಿ ಸ್ಪಾ ಸೌಲಭ್ಯವನ್ನೂ ಒದಗಿಸಲಾಗಿದೆ. ಇಲ್ಲಿಂದ ತಾಜ್ ಮಹಲ್ ನಡೆದು ಹೋಗುವಷ್ಟೇ ಹತ್ತಿರವಿದ್ದರೂ ನಡೆಯಲು ಕಷ್ಟ ಇರುವ ಅತಿಥಿಗಳಿಗೆ ಬಗ್ಗಿ ಸರ್ವಿಸ್ ಎಂಬ ಬ್ಯಾಟರಿಚಾಲಿತ ಕಾರಿನ ಸೇವೆಯನ್ನೂ ಒದಗಿಸಲಾಗುತ್ತದೆ.
ಈ ಹೋಟೆಲಿನ ಒಂದು ದಿನದ ಸಾಮಾನ್ಯ ಬಾಡಿಗೆ ರೂ. 2,50,000.

6. ದ ಒಬೆರಾಯ್ ಉದಯ್ ವಿಲಾಸ್, ಉದಯ್ ಪುರ

6. ದ ಒಬೆರಾಯ್ ಉದಯ್ ವಿಲಾಸ್, ಉದಯ್ ಪುರ

ರಾಜಸ್ಥಾನದ ಉದಯ್ ಪುರದಲ್ಲಿರುವ ಈ ಅದ್ದೂರಿ ಹೋಟೆಲಿನಲ್ಲಿ 87 ವಿಶೇಷ ಕೋಣೆಗಳು ಹಾಗೂ ಅತಿಗಣ್ಯ ವ್ಯಕ್ತಿಗಳ ಕೋಣೆಗಳಿವೆ. ಈ ಹೋಟೆಲಿನ ವಿಶೇಷತೆ ಎಂದರೆ ಇದರ ಪೀಠೋಪಕರಣಗಳು. ಅತ್ಯಂತ ನಾಜೂಕಿನ ಕುಸುರಿ ಕೆಲಸವನ್ನು ಪ್ರತಿ ಪೀಠೋಪಕರಣದಲ್ಲಿಯೂ ಅಳವಡಿಸಲಾಗಿದೆ. ಅಲ್ಲದೇ ಒಳಾಂಗಣವನ್ನು ಹಿಂದಿನ ಅರಮನೆಯಂತೆಯೇ ಸಿಂಗರಿಸಲಾಗಿದೆ ಹಾಗೂ ಇಲ್ಲಿ ಆಗಮಿಸುವ ಅತಿಥಿ ತಾನು ಆ ದಿನದ ಮಟ್ಟಿಗೆ ರಾಜನಂತೆ ಇರುವ ಅನುಭವ ಪಡೆಯುವಂತೆ ಇಲ್ಲಿನ ಸಿಬ್ಬಂದಿಯನ್ನು ತರಬೇತಿಗೊಳಿಸಲಾಗಿದೆ. ಅಲ್ಲದೇ ನಗರದ ನಡುವೆ ಇರುವ ವಿಶಾಲ ಕೆರೆಯಲ್ಲಿ ದೋಣಿ ವಿಹಾರದ ಮೂಲಕ ನಗರದ ವೈಭವವನ್ನೂ ಕಣ್ತುಂಬಿಕೊಳ್ಳಲು ವ್ಯವಸ್ಥೆಯನ್ನು ಮಾಡಲಾಗಿದೆ.
ಸಾಮಾನ್ಯ ಕೋಣೆಯ ಒಂದು ದಿನದ ಬಾಡಿಕೆ ರೂ. 3,00,000.

5. ದ ಒಬೆರಾಯ್, ಮುಂಬೈ

5. ದ ಒಬೆರಾಯ್, ಮುಂಬೈ

ಮುಂಬೈ ನಗರ ಹಾಗೂ ಇಡಿಯ ಜಿಲ್ಲೆಯಲ್ಲಿಯೇ ಅತ್ಯಂತ ಉತ್ತಮ ಹಾಗೂ ವೈಭವಯುತ ಹೋಟೆಲ್ ಎಂದು ಪ್ರಸಿದ್ದಿ ಪಡೆದಿರುವ ಈ ಹೋಟೆಲ್ ಮುಂಬೈನ ವಾಣಿಜ್ಯ ಚಟುವಟಿಕೆಯ ಕೇಂದ್ರ ಭಾಗದಲ್ಲಿದೆ. ಗೇಟ್ ವೇ ಆಫ್ ಇಂಡಿಯಾ ಹಾಗೂ ವಾಂಖೇಡೆ ಕ್ರೀಡಾಂಗಣದ ನಡುವೆ ಇರುವ ಈ ಭವ್ಯ ಹೋಟೆಲಿನಲ್ಲಿ 287 ಕೋಣೆಗಳು ಹಾಗೂ ಮೂರು ರೆಸ್ಟೋರೆಂಟ್ ಗಳಿವೆ. ಇವು ಸಾಮಾನ್ಯ ಹಾಗೂ ವಿಶಿಷ್ಟ ಅಡುಗೆಗಳಿಗೆ ಖ್ಯಾತಿ ಪಡೆದಿವೆ. ಇದರಲ್ಲಿ ಗತವೈಭವ ಹಾಗೂ ಆಧುನಿಕ ಶೈಲಿಗಳನ್ನು ಬೆರೆಸಿ ಭಿನ್ನವಾದ ಅನುಭವ ಪಡೆಯುವಂತೆ ಪ್ರಯತ್ನಿಸಲಾಗಿದೆ. ಅಲ್ಲದೇ ಇದರಲ್ಲಿ ಎರಡು ಈಜುಕೊಳ ಹಾಗೂ ಇದರ ಪಕ್ಕದಲ್ಲಿ ಮದ್ಯ ಸರಬರಾಜು ಕೇಂದ್ರವೂ ಇದೆ. ಈ ಸ್ಥಳವನ್ನು ಗಣ್ಯವ್ಯಕ್ತಿಗಳ ವಿಶೇಷ ಕೂಟ, ಸಮಾರಂಭಗಳಿಗೆ ಬಾಡಿಗೆ ನೀಡಲಾಗುತ್ತದೆ.
ಈ ಹೋಟೆಲಿನ ಒಂದು ಕೋಣೆಯ ದಿನದ ಬಾಡಿಗೆ ರೂ. 3,00,000.

4. ದ ಒಬೆರಾಯ್, ಗುರ್ಗಾಂವ್

4. ದ ಒಬೆರಾಯ್, ಗುರ್ಗಾಂವ್

ದೆಹಲಿಯಿಂದ ಮೂವತ್ತೆರಡು ಕಿಮೀ ದೂರದಲ್ಲಿರುವ ಹರಿಯಾಣ ಗುರ್ಗಾಂವ್ ನ ವಾಣಿಜ್ಯ ಕೇಂದ್ರದಲ್ಲಿರುವ ಈ ಹೋಟೆಲಿನಲ್ಲಿ ಆರು ಅಂತಸ್ತುಗಳು ಹಾಗೂ 202 ವೈಭವದ ಹಾಗೂ 15 ಅತಿಗಣ್ಯ ವ್ಯಕ್ತಿಗಳ ಕೋಣೆಗಳಿವೆ. ಅಲ್ಲದೇ ವಿವಿಧ ಬಗೆಯ ಅಡುಗೆಯನ್ನು ಬಡಿಸುವ ಥ್ರೀ ಸಿಕ್ಸ್ಟಿವನ್ ಹಾಗೂ ಅಮರಾಂತ ಎಂಬ ಹೆಸರಿನ ಎರಡು ಮಲ್ಟಿ ಕ್ವುಸಿನ್ ರೆಸ್ಟೋರೆಂಟುಗಳೂ ಇವೆ. ಅಲ್ಲದೇ 'ದ ಪಿಯಾನೋ ಬಾರ್' ಎಂಬ ಲಂಬವಾದ ಕೋಣೆಯಲ್ಲಿ ಸ್ಪಾ ವ್ಯವಸ್ಥೆಯೂ ಇದೆ. ಇದು ದೆಹಲಿಯ ಐತಿಹಾಸಿಕ ಕುತುಬ್ ಮಿನಾರ್ ಮತ್ತು ತುಕ್ಕು ಹಿಡಿಯದ ಕಬ್ಬಿಣದ ಕಂಭದಿಂದ ಹದಿನಾಲ್ಕು ಕಿ.ಮೀ ಹಾಗೂ ಕಿಂಗ್ಡಂ ಆಫ್ ಡ್ರೀಮ್ಸ್ ನಿಂದ ಕೇವಲ ಐದು ಕಿ.ಮೀ ದೂರವಿದೆ.

ಈ ಹೋಟೆಲಿನಲ್ಲಿ ಒಂದು ರಾತ್ರಿ ಕಳೆಯಲು ನೀಡಬೇಕಾದ ಬಾಡಿಗೆ ರೂ. 3, 00,000

3. ದ ಲೀಲಾ ಪ್ಯಾಲೇಸ್, ನವ ದೆಹಲಿ

3. ದ ಲೀಲಾ ಪ್ಯಾಲೇಸ್, ನವ ದೆಹಲಿ

ಭಾರತದ ರಾಜಧಾನಿ ನವದೆಹಲಿಯ ಕೇಂದ್ರ ಭಾಗದಲ್ಲಿರುವ ಈ ವೈಭವಯುತ ಹೋಟೆಲಿನಲ್ಲಿ 194 ವೈಭವಯುತ ಗ್ರ್ಯಾಂಡ್ ರಾಯಲ್ ಕೋಣೆಗಳು, 42 ಗಣ್ಯ ವ್ಯಕ್ತಿಗಳ ರಾಯಲ್ ಕ್ಲಬ್ ಕೋಣೆಗಳು ಹಾಗೂ ಅತಿ ಗಣ್ಯ ವ್ಯಕ್ತಿಗಳಿಗಾಗಿ 18 ಸ್ವೀಟ್ ಕೋಣೆಗಳಿವೆ. ಇದರಲ್ಲಿ ನಾಲ್ಕು ರೆಸ್ಟೋರೆಂಟುಗಳಿವೆ. ದ ಕ್ಯೂಬ್, ಜಮಾವರ್ (ಭಾರತೀಯ ರೆಸ್ಟೋರೆಂಟ್), ಮೇಗು (ಜಪಾನೀ ರೆಸ್ಟೋರೆಂಟ್) ಹಾಗೂ ಲೆ ಸಿರ್ಕ್ ಸಿಗ್ನೇಚರ್ (ಇಟಾಲಿಯನ್ ರೆಸ್ಟೋರೆಂಟ್) ಎಂಬ ಈ ನಾಲ್ಕು ರೆಸ್ಟೋರೆಂಟುಗಳಲ್ಲಿ ಅತಿಥಿಗಳು ವಿವಿಧ ಖಾದ್ಯಗಳನ್ನು ಸವಿಯಬಹುದು. ಅಲ್ಲದೇ ಇಲ್ಲಿ ಸ್ಪಾ, ಸೆಲೂನ್ ಹಾಗೂ ಮಹಡಿಯ ಮೇಲಣ ಈಜುಕೊಳದ ಸೇವೆಯನ್ನೂ ಒದಗಿಸಲಾಗುತ್ತದೆ.

ಈ ಹೋಟೆಲಿನಲ್ಲಿ ಒಂದು ದಿನ ಕಳೆಯಲು ನೀಡಬೇಕಾದ ಬಾಡಿಗೆ ರೂ. 4,50,000.

2. ತಾಜ್ ಲೇಕ್ ಪ್ಯಾಲೇಸ್, ಉದಯ್ ಪುರ

2. ತಾಜ್ ಲೇಕ್ ಪ್ಯಾಲೇಸ್, ಉದಯ್ ಪುರ

ತಾಜ್ ಲೇಕ್ ಪ್ಯಾಲೇಸ್ ಭಾರತದ ಎರಡನೆಯ ಅತಿ ದುಬಾರಿ ಹೋಟೆಲ್ ಎಂಬ ಖ್ಯಾತಿ ಗಳಿಸಿದೆ. ರಾಜಸ್ಥಾನದ ಉದಯ್ ಪುರದ ನಡುವಣ ವಿಶಾಲ ಕೆರೆಯ ನಡುವೆ ಇರುವ ನಡುಗಡ್ಡೆಯಲ್ಲಿ ನಿರ್ಮಿಸಲಾಗಿರುವ ಈ ಭವ್ಯ ಹೋಟೆಲ್ ನಲ್ಲಿ ಒಟ್ಟು 83 ಕೋಣೆಗಳಿವೆ. ಇಲ್ಲಿನ ವಿಶೇಷತೆ ಎಂದರೆ ಪ್ರತಿ ಕೋಣೆಯ ಗೋಡೆಗಳಿಗೆ ಬಿಳಿಯ ಅಮೃತಶಿಲೆಯ ಚಪ್ಪಡಿಗಳನ್ನು ಅಳವಡಿಸಲಾಗಿದ್ದು, ಬೆಳ್ಳಗಿನ ಮಂಜಿನ ಕೋಣೆಯಲ್ಲಿರುವ ಅನುಭವ ನೀಡುತ್ತದೆ ಹಾಗೂ ಕಿಟಕಿಯಿಂದ ವಿಶಾಲವಾದ ಕೆರೆ ಹಾಗೂ ಅರಮನೆಗಳ ನೋಟ ಲಭಿಸುತ್ತದೆ. ಇದರಲ್ಲಿ ಮೂರು ವಿವಿಧ ಭಕ್ಷ್ಯಗಳನ್ನು ಒದಗಿಸುವ ರೆಸ್ಟೋರೆಂಟುಗಳಿದ್ದು, ಛಾವಣಿಯ ಮೇಲೆ ವಿಶಾಲವಾದ ಊಟದ ಮನೆ ಇದೆ. ಇದರಲ್ಲಿ ಹೊರಾಂಗಣದ ಈಜುಕೊಳ, ಬಾರ್ ಹಾಗೂ ಸ್ಪಾ ಸಹ ಇವೆ.
ಈ ಹೋಟೆಲಿನಲ್ಲಿ ಒಂದು ದಿನ ತಂಗಲು ಅತಿಥಿಗಳು 6,00,000 ನೀಡಬೇಕಾಗುತ್ತದೆ.

1. ದ ರಾಮ್ ಬಾಗ್ ಪ್ಯಾಲೇಸ್, ಜೈಪುರ

1. ದ ರಾಮ್ ಬಾಗ್ ಪ್ಯಾಲೇಸ್, ಜೈಪುರ

ರಾಮ್ ಬಾಗ್ ಪ್ಯಾಲೇಸ್ ಭಾರತದ ಅತ್ಯಂತ ದುಬಾರಿ ಹಾಗು ಐಷಾರಾಮಿ ಹೋಟೆಲ್ ಎಂಬ ಬಿರುದನ್ನೂ ಪಡೆದಿದೆ.
ಭಾರತದ ಪಿಂಕ್ ಸಿಟಿ ಅಥವಾ ಗುಲಾಬಿ ನಗರ ಎಂಬ ಖ್ಯಾತಿ ಪಡೆದಿರುವ ಜೈಪುರದ ಕೇಂದ್ರ ಭಾಗದಲ್ಲಿರುವ ರಾಮ್ ಬಾಗ್ ಪ್ಯಾಲೇಸ್ ಹೋಟೆಲ್ ಹಿಂದೆ ಇಲ್ಲಿನ ಆಡಳಿತಗಾರರಾಗಿದ್ದ ಮಹಾರಾಜಾ ಸವಾಯಿ ಮಾನ್ ಸಿಂಗ್ ಹಾಗೂ ಅವರ ಧರ್ಮಪತ್ನಿ ಮಹಾರಾಣಿ ಗಾಯತ್ರಿ ದೇವಿಯವರ ಅರಮನೆಯಾಗಿತ್ತು. ಇದರಲ್ಲಿ ಒಟ್ಟು 78 ವೈಭವದ ಹಾಗೂ ಅತಿಗಣ್ಯರ ಕೋಣೆಗಳಿವೆ. ಇದರಲ್ಲಿ ಮೂರು ವಿವಿಧ ಭಕ್ಷ್ಯಗಳನ್ನು ಒದಗಿಸುವ ರೆಸ್ಟೋರೆಂಟುಗಳಿವೆ ಹಾಗೂ ಎರಡು ಬಾರ್ ಗಳಿವೆ. ಅಲ್ಲದೇ ಒಳಾಂಗಣ ಹಾಗೂ ಹೊರಾಂಗಣ ಈಜುಕೊಳಗಳೂ ಇವೆ ಹಾಗೂ ಸ್ಪಾ ಮತ್ತು ವ್ಯಾಯಾಮಶಾಲೆಯೂ ಇದೆ.
ಅತಿಥಿಗಳು ಇಲ್ಲಿ ರಾಜಮರ್ಯಾದೆಯನ್ನು ಪಡೆಯಲು ದಿನವೊಂದಕ್ಕೆ ರೂ. 7,50,000. ತೆರಬೇಕಾಗುತ್ತದೆ.

ರಾಜಮರ್ಯಾದೆಯ ಅನುಭವ-ಅನುಭೋಗ

ರಾಜಮರ್ಯಾದೆಯ ಅನುಭವ-ಅನುಭೋಗ

ಇವು ಭಾರತದ ಸಮೃದ್ದ ಇತಿಹಾಸವನ್ನು ಪ್ರತಿನಿಧಿಸುವ ಅತ್ಯಂತ ದುಬಾರಿ ಹೋಟೆಲುಗಳಾಗಿವೆ. ಈ ಹೋಟೆಲುಗಳಲ್ಲಿರುವ ಸಿಬ್ಬಂದಿಯನ್ನು ತಮ್ಮ ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಲು ತರಬೇತಿ ನೀಡಲಾಗಿರುತ್ತದೆ ಹಾಗೂ ಅತ್ಯುತ್ತಮ ಸೌಲಭ್ಯಗಳನ್ನೂ ಒದಗಿಸುತ್ತವೆ. ಈ ಹೋಟೆಲುಗಳಲಿ ಕೆಲವು ಹಿಂದಿನ ಕಾಲದ ಅರಮನೆಗಳಾಗಿವೆ, ಅವುಗಳನ್ನು ಹೋಟೆಲುಗಳಾಗಿ ಮರು ವಿನ್ಯಾಸಗೊಳಿಸಲಾಗಿದೆ. ಈ ಹೋಟೆಲುಗಳ ಒಳಾಂಗಣ ಮತ್ತು ಹೊರವಿನ್ಯಾಸಗಳು ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ. ಈ ಹೋಟೆಲುಗಳಲ್ಲಿ ಯಾವುದಾದರೂ ನಿವಾಸವನ್ನು ಯೋಜಿಸುವ ಮೂಲಕ ಆ ದಿನಕ್ಕಾದರೂ ಸರಿ, ರಾಜರಿಗೆ ಸಲ್ಲಬೇಕಾದ ಸೇವೆಯನ್ನು ಪಡೆದು ಜೀವನದಲ್ಲಿ ಮರೆಯಲಾಗದ ಅನುಭೂತಿಯನ್ನು ಹೊಂದಬಹುದು.

English summary

10 Most Expensive Hotels in India

India is a hub of a lot of luxurious hotels and resorts. These are mainly the palaces of ancient times which were earlier owned by the Kings or Nawabs and have now been reconstructed has the luxurious hotels. These hotels are renowned by some wealthiest groups of hotels.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X