ಬಜೆಟ್ ಅಂದರೆ ಬರುವ ಆದಾಯ ಹಾಗೂ ಮಾಡುವ ವೆಚ್ಚದ ಅಂದಾಜು. ಈ ಬಾರಿಯ ಬಜೆಟ್ ಕೂಡ ಇದಕ್ಕೆ ಹೊರತಾಗಿಲ್ಲ. ಸರಕಾರಕ್ಕೆ ಬರುವ 1 ರುಪಾಯಿಯಲ್ಲಿ 70 ಪೈಸೆ ನೇರ ಹಾಗೂ ಪರೋಕ್ಷ ತೆರಿಗೆ ಮೂಲಕ ಬರುತ್ತದೆ. ಇನ್ನು ಸರಕಾರ ವೆಚ್ಚ ಮಾಡುವ ಪೈಕಿ 23 ಪೈಸೆ ರಾಜ್ಯಗಳ ತೆರಿಗೆ ಹಾಗೂ ಸುಂಕಗಳಿಗೆ ಆಗುತ್ತದೆ.
2019-20ನೇ ಸಾಲಿನ ಬಜೆಟ್ ನಲ್ಲಿ ಕೇಂದ್ರ್ ಹಣಕಾಸು ಸಚಿವ ಪಿಯೂಷ್ ಗೋಯಲ್ ಘೋಷಣೆ ಮಾಡಿರುವಂತೆ, ಸರಕಾರಕ್ಕೆ ಬರುವ ಒಂದು ರುಪಾಯಿ ಆದಾಯದಲ್ಲಿ 21 ಪೈಸೆ ಜಿಎಸ್ ಟಿ (ಸರಕು ಮತ್ತು ಸೇವಾ ತೆರಿಗೆ) ಮೂಲಕ ಬರುತ್ತದೆ. ಇದು ಸರಕಾರಕ್ಕೆ ಬರುವ ಅತಿ ದೊಡ್ಡ ಆದಾಯ ಮೂಲ.
ಸಾಲದ ಮೂಲಕ ಸಂಗ್ರಹ ಮತ್ತು ಇತರ ಬಗೆಯ ಸಾಲದ ರೂಪದಲ್ಲಿ 19 ಪೈಸೆ ಬರುತ್ತದೆ. ಇನ್ನು ಕೇಂದ್ರ ಅಬಕಾರಿ ಸುಂಕದ ರೂಪದಲ್ಲಿ 7 ಪೈಸೆ ಸಿಗುತ್ತದೆ.

ಸದ್ಯಕ್ಕೆ ಸರಕಾರವು ತೆರಿಗೆಯೇತರವಾಗಿ ಅಂದರೆ ಬಂಡವಾಳ ಹಿಂತೆಗೆತದ ಮೂಲಕವಾಗಿ 8 ಪೈಸೆ ಆದಾಯದ ಗುರಿ ಹೊಂದಿದೆ. ಇನ್ನು ಸಾಲಯೇತರ ಬಂಡವಾಳ ಸ್ವೀಕೃತಿ ಮೂಲಕ 3 ಪೈಸೆ ಸಂಗ್ರಹಿಸುವ ಉದ್ದೇಶ ಹೊಂದಿದೆ.
ಅದೇ ರೀತಿ, ಕಾರ್ಪೊರೇಷನ್ ತೆರಿಗೆ ಮೂಲಕ ತೆರಿಗೆ ಸಂಗ್ರಹವನ್ನು 21 ಪೈಸೆಗೆ ನಿಗದಿ ಪಡಿಸಲಾಗಿದೆ.
ಆದಾಯ ತೆರಿಗೆ ಸಂಗ್ರಹವನ್ನು ಮುಂದಿನ ಆರ್ಥಿಕ ವರ್ಷಕ್ಕೆ 17 ಪೈಸೆಗೆ ಏರಿಕೆ ಮಾಡಲಾಗಿದೆ. ಮುಂದಿನ ಆರ್ಥಿಕ ವರ್ಷಕ್ಕೆ ಸರಕಾರವು ಕಸ್ಟಮ್ಸ್ ಮೂಲಕ 4 ಪೈಸೆ ಗಳಿಸಲಿದೆ.
ಇನ್ನು ಖರ್ಚಿನ ವಿಚಾರಕ್ಕೆ ಬಂದರೆ, ಅತಿ ದೊಡ್ಡ ಪ್ರಮಾಣದ ವೆಚ್ಚ ಅಂತಾದರೆ ರಾಜ್ಯಗಳ ಪಾಲಿನ ತೆರಿಗೆ ಹಾಗೂ ಸುಂಕಗಳಿಗೆ 23 ಪೈಸೆ ಹಾಗೂ ಬಡ್ಡಿ ಪಾವತಿಗೆ 18 ಪೈಸೆ ಆಗುತ್ತದೆ.
ರಕ್ಷಣಾ ವೆಚ್ಚವು ಕಳೆದ ವರ್ಷ 9 ಪೈಸೆ ಇದ್ದದ್ದು 8 ಪೈಸೆಗೆ ಇಳಿಕೆಯಾಗಿದೆ.
ಕೇಂದ್ರ ವಲಯದ ಯೋಜನೆಗಳಿಗೆ 12 ಪೈಸೆ, ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ 9 ಪೈಸೆ.
ಹಣಕಾಸು ಆಯೋಗದ ವೆಚ್ಚಗಳು ಹಗೂ ಇತರ ವರ್ಗಾವಣೆ ಒಟ್ಟಾರೆಯಾಗಿ 8 ಪೈಸೆ.
ಸಬ್ಸಿಡಿ ಮತ್ತು ಪಿಂಚಣಿಗಾಗಿ ಕ್ರಮವಾಗಿ 9 ಪೈಸೆ ಹಾಗೂ 5 ಪೈಸೆ.
ಸರಕಾರವು ಇತರ ವೆಚ್ಚಗಳಿಗಾಗಿ 8 ಪೈಸೆ ವೆಚ್ಚವಾಗುತ್ತದೆ.


Click it and Unblock the Notifications