ಬೆಂಗಳೂರು, ಫೆಬ್ರವರಿ 08 : ಹಣಕಾಸು ಸಚಿವರೂ ಆಗಿರುವ ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು 2019-20ನೇ ಸಾಲಿನ ಬಜೆಟ್ ಮಂಡನೆ ಮಾಡಿದರು. ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಅವರು ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.
ಶುಕ್ರವಾರ ಎಚ್.ಡಿ.ಕುಮಾರಸ್ವಾಮಿ ಅವರು 2019-20ನೇ ಸಾಲಿನ ಬಜೆಟ್ ಮಂಡನೆ ಮಾಡಿದರು. ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಅನುದಾನವನ್ನು ನೀಡಿದರು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಹಿಂದುಳಿದ ವರ್ಗ/ಅಲ್ಪ ಸಂಖ್ಯಾತರು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ 30 ಸಂಯುಕ್ತ ವಿದ್ಯಾರ್ಥಿ ನಿಲಯಗಳನ್ನು ಆರಂಭಿಸಲು 100 ಕೋಟಿ ರೂ. ಅನುದಾನ ಘೋಷಣೆ ಮಾಡಿದರು.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಶಿವಾರಪಟ್ಟಣದಲ್ಲಿ 10 ಕೋಟಿ ರೂ. ಅನುದಾನದಲ್ಲಿ ಅಮರಶಿಲ್ಪಿ ಜಕಣಾಚಾರಿ ಶಿಲ್ಪಕಲಾ ಕೇಂದ್ರವನ್ನು ಆರಂಭಿಸಲಾಗುತ್ತದೆ ಎಂದು ಎಚ್.ಡಿ.ಕುಮಾರಸ್ವಾಮಿ ಘೋಷಿಸಿದರು.

* ಪರಿಶಿಷ್ಟ ಜಾತಿ ವಿಶೇಷ ಘಟಕ ಉಪಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ 30,445 ಕೋಟಿ ರೂ. ಅನುದಾನ.
* ಕರ್ನಾಟಕ ವಸತಿ ಶಿಕ್ಷಣ ಸಂಗಳ ಸಂಘದ 100 ವಸತಿ ಶಾಲೆಗಳನ್ನು ಪಿ.ಯು.ಸಿ (ವಿಜ್ಞಾನ ಮತ್ತು ವಾಣಿಜ್ಯ) ಕೋರ್ಸ್‌ಗಳೊಂದಿಗೆ ಮೇಲ್ದರ್ಜೆಗೇರಿಸಲು ಕ್ರಮ.
* ಬೆಂಗಳೂರು ನಗರದಲ್ಲಿ ಸಂವಿಧಾನ ಮ್ಯೂಸಿಯಂ ಸ್ಥಾಪಿಸಲು 20 ಕೋಟಿ ರೂ. ಅನುದಾನ.
* ವಿಭಾಗ ಮಟ್ಟದಲ್ಲಿ 4 ಹಿಂದುಳಿದ ವರ್ಗಗಳ ಮೊರಾರ್ಜಿ ಪದವಿಪೂರ್ವ ಕಾಲೇಜುಗಳಲ್ಲಿ ಐ.ಐ.ಟಿ / ನೀಟ್ ಪರೀಕ್ಷಾ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಲು 4 ಕೋಟಿ ರೂ. ಅನುದಾನ.
* ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 100 ವಿದ್ಯಾರ್ಥಿ ನಿಲಯಗಳಿಗೆ ಸ್ವಂತ ಕಟ್ಟಡಗಳ ನಿರ್ಮಾಣಕ್ಕೆ 40 ಕೋಟಿ ರೂ. ಅನುದಾನ.
* ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ 25 ಕೋಟಿ ರೂ. ಅನುದಾನ. ಅಲೆಮಾರಿ ಜನಾಂಗದವರು ತಮ್ಮ ಸಮಯದಾಯದವರಿಗಾಗಿ ಸಮುದಾಯ ಭವನ ನಿರ್ಮಾಣ ಹಾಗೂ ಅಲೆಮಾರಿ ಜನಾಂಗದ ಸಂಪ್ರದಾಯ, ಸಂಸ್ಕೃತಿ, ಆಚಾರ-ವಿಚಾರಗಳ ಬಗ್ಗೆ ಅಧ್ಯಯನ ಕೈಗೊಳ್ಳಲು 11 ಕೋಟಿ ರೂ. ಅನುದಾನ.
* ವಿಶ್ವಕರ್ಮ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ 25 ಕೋಟಿ ರೂ. ಅನು ದಾನ. ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮಕ್ಕೆ 25 ಕೋಟಿ ರೂ. ಅನುದಾನ
* ಸವಿತಾ ಸಮಾಜ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕ್ರಮ.
* ಹಿಂದುಳಿದ ವರ್ಗಕ್ಕೆ ಸೇರಿದ ಸೂಕ್ಷ್ಮ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ 134 ಕೋಟಿ ರೂ. ಅನುದಾನ. ಈ ಸಮುದಾಯಗಳಿಗೆ ಮೀಸಲಿಟ್ಟಿರುವ ಅನುದಾನವು ನೇರವಾಗಿ ಅವರಿಗೆ ಸೇರುವಂತೆ ಮಾಡಲು ಒಬ್ಬ ನೋಡಲ್ ಅಧಿಕಾರಿ ಹಾಗೂ 4 ಅಧಿಕಾರೇತರ ಸದಸ್ಯರನ್ನೊಳಗೊಂಡ ಕಾರ್ಯಾಚರಣೆ ಪಡೆ ಸ್ಥಾಪನೆ.


Click it and Unblock the Notifications