For Quick Alerts
ALLOW NOTIFICATIONS  
For Daily Alerts

ಐಟಿ, ಎಂಎನ್‍ಸಿ ಉದ್ಯೋಗಿಗಳಲ್ಲಿ ಹೆಚ್ಚುತ್ತಿರುವ ಹತಾಶೆಗೆ ಕಾರಣಗಳೇನು?

ಬೆಂಗಳೂರಿನಂತಹ ನಗರಗಳ ಜನಸಂಖ್ಯೆ ಏರಿಕೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತಿದೆ. ಆದರೆ ಈ ನಗರಗಳ ಐಟಿ ವಲಯದಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಮಾತ್ರ ಹತಾಶೆ, ಉದ್ವಿಗ್ನತೆ ಮತ್ತು ಗೊಂದಲದ ಮಾನಸಿಕ ಸ್ಥಿತಿಯಿಂದ ಬಳಲುವಿಕೆ ಹೆಚ್ಚಾಗುತ್ತಿರುವುದು.

|

ಕರ್ನಾಟಕದ ರಾಜಧಾನಿ, ಸಿಲಿಕಾನ್ ಸಿಟಿ ಖ್ಯಾತಿಯ ಉದ್ಯಾನ ನಗರ ಬೆಂಗಳೂರು ದೇಶದ ಪ್ರಮುಖ ಮಹಾನಗರಗಳಲ್ಲಿ ಒಂದಾಗಿದೆ. ಅಲ್ಲದೆ ಇಲ್ಲಿನ ವಾಣಿಜ್ಯ ವಹಿವಾಟಿನಿಂದ ದೇಶದ ಜಿಡಿಪಿಗೆ ಬಹುದೊಡ್ಡ ಪ್ರಮಾಣದ ಆದಾಯ ಸಹ ಬರುತ್ತಿದೆ.
ಜಗತ್ತಿನಲ್ಲೇ ಹೆಸರುವಾಸಿಯಾದ ಇನ್ಫೊಸಿಸ್, ಐಬಿಎಂ, ಡೆಲಾಯಿಟ್, ವಿಪ್ರೋ, ಅಕ್ಸೆಂಚರ್, ಟಿಸಿಎಸ್ ಸೇರಿದಂತೆ ಇನ್ನೂ ಅನೇಕ ಐಟಿ ಹಾಗೂ ತಂತ್ರಜ್ಞಾನದ ಕಂಪನಿಗಳು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇವು ಮಾಹಿತಿ ತಂತ್ರಜ್ಞಾನ ಹಾಗೂ ಐಟಿ ಸಂಬಂಧಿತ ವಲಯದಲ್ಲಿ ಅಪಾರ ಅಭಿವೃದ್ಧಿ ಸಾಧಿಸಿದೆ.
ಬೆಂಗಳೂರು, ಮುಂಬೈ, ದೆಹಲಿ, ಚೆನ್ನೈ, ಹೈದರಾಬಾದ್ ನಂತಹ ನಗರಗಳಲ್ಲಿ ದಿನದಿಂದ ದಿನಕ್ಕೆ ಉದ್ಯೋಗಾವಕಾಶಗಳು ಹೆಚ್ಚಾಗುತ್ತಿದ್ದು, ಇಂಥ ಕಂಪನಿಗಳಲ್ಲಿ ಕೆಲಸ ಮಾಡುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದೆ. ಇದು ಬೆಂಗಳೂರಿನಂತಹ ನಗರಗಳ ಜನಸಂಖ್ಯೆ ಏರಿಕೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತಿದೆ. ಆದರೆ ಈ ನಗರಗಳ ಐಟಿ ವಲಯದಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಮಾತ್ರ ಹತಾಶೆ, ಉದ್ವಿಗ್ನತೆ ಮತ್ತು ಗೊಂದಲದ ಮಾನಸಿಕ ಸ್ಥಿತಿಯಿಂದ ಬಳಲುವಿಕೆ ಹೆಚ್ಚಾಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ.
ಇಂತಹ ಅಸಂತೃಪ್ತಿ ಹಾಗೂ ಅನಾರೋಗ್ಯಕರ ಜೀವನ ಶೈಲಿಗೆ ಕಾರಣವಾಗುತ್ತಿರುವ ಪ್ರಮುಖ ಅಂಶಗಳನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ.

ಕುಟುಂಬ ಬಿಟ್ಟು ಒಂಟಿ ಜೀವನ

ಕುಟುಂಬ ಬಿಟ್ಟು ಒಂಟಿ ಜೀವನ

ದೇಶದ ಐಟಿ ವಲಯವಾಗಿರುವ ಬೆಂಗಳೂರು, ಮುಂಬೈ, ಚೆನ್ನೈ, ಹೈದರಾಬಾದ್ ಐಟಿ ಕಂಪನಿಗಳಲ್ಲಿ ಕೆಲಸ ಮಾಡಿ, ಬದುಕು ಕಟ್ಟಿಕೊಳ್ಳಲು ದೇಶದ ಎಲ್ಲ ಭಾಗಗಳಿಂದ ಜನ ಆಗಮಿಸುತ್ತಾರೆ. ಆದರೆ ಇವರಲ್ಲಿ ಬಹುತೇಕರು ತಮ್ಮ ಕುಟುಂಬವನ್ನು ಊರಲ್ಲಿಯೇ ಬಿಟ್ಟು ಇಲ್ಲಿ ಒಂಟಿ ಜೀವನ ನಡೆಸುತ್ತಿರುರುತ್ತಾರೆ. ಹಲವಾರು ದಿನ, ವರ್ಷಗಳವರೆಗೆ ತಮ್ಮ ಗೆಳೆಯರು, ಸಹೋದ್ಯೋಗಿಗಳೊಂದಿಗೆ ವಾಸಿಸುತ್ತಾರೆ. ಈ ರೀತಿಯ ಜೀವನದಿಂದ ಅವರಲ್ಲಿ ಒಂದು ರೀತಿಯ ಹತಾಶೆ ಹಾಗೂ ಉದ್ವಿಗ್ನತೆ ಮನೆ ಮಾಡುತ್ತದೆ. ಅವರ ಮಾನಸಿಕ ಸಂತುಲನ ಏರುಪೇರಾಗಿ ಅರ್ಥವಿಲ್ಲದ ಜೀವನ ಸಾಗಿಸುವಂತಾಗುತ್ತದೆ.

ಟ್ರಾಫಿಕ್-ಒತ್ತಡದ ಜೀವನ ಶೈಲಿ

ಟ್ರಾಫಿಕ್-ಒತ್ತಡದ ಜೀವನ ಶೈಲಿ

ಬಹುತೇಕ ಐಟಿ ಉದ್ಯೋಗಿಗಳು ನಗರಗಳಲ್ಲಿ ಕೇವಲ ಕೆಲಸ ಮಾಡಿ ದುಡ್ಡು ಸಂಪಾದನೆ ಮಾಡುವ ದೃಷ್ಟಿಯಿಂದ ಇಲ್ಲಿ ವಾಸಿಸುತ್ತಾರೆ. ಆದರೆ ದಿನೆ ದಿನೆ ಹೆಚ್ಚುತ್ತಿರುವ ಜನಸಂಖ್ಯೆಯಿಂದ ಟ್ರಾಫಿಕ್ ಸಮಸ್ಯೆ ವಿಪರೀತವಾಗುತ್ತಿದೆ. ಯಾವಾಗ ನೋಡಿದರೂ ವಾಹನಗಳಿಂದ ಗಿಜಿಗುಡುತ್ತಿರುವ ರಸ್ತೆಗಳು ನಿರಂತರವಾಗಿ ಮನಸ್ಸಿಗೆ ಕಿರಿಕಿರಿ ಉಂಟು ಮಾಡುತ್ತವೆ. ಇನ್ನು ಅನೇಕ ಐಟಿ ಉದ್ಯೋಗಿಗಳು ತಮ್ಮ ಜೀವನವನ್ನು ನೆಮ್ಮದಿಯಾಗಿ ಅನುಭವಿಸುವ ಬದಲು ಕೇವಲ ಕೆಲಸದ ಮೇಲೆಯೇ ಮನಸ್ಸು ಕೇಂದ್ರೀಕರಿಸಿರುತ್ತಾರೆ.
ಅತಿಯಾದ ಒತ್ತಡದ ಜೀವನ ಶೈಲಿಯಿಂದ ನಿರಾಳವಾದ ಬದುಕು ನಡೆಸಲು ಸಾಧ್ಯವಾಗದೆ, ಈ ಪರಿಸ್ಥಿತಿಯಿಂದ ಹೊರಬರಲು ಸಹ ಆಗದೆ ಐಟಿ ಉದ್ಯೋಗಿಗಳು ಚಡಪಡಿಸುತ್ತಾರೆ. ಇದರಿಂದ ಜೀವನ ಮತ್ತಷ್ಟು ಒತ್ತಡಕ್ಕೀಡಾಗಿ ಅತಿಯಾದ ಬಳಲಿಕೆ, ಆಯಾಸ ಅನುಭವಿಸುವಂತಾಗುತ್ತದೆ.

ಭವಿಷ್ಯತ್ತಿನ ಚಿಂತೆ

ಭವಿಷ್ಯತ್ತಿನ ಚಿಂತೆ

ಐಟಿ ವಲಯದಲ್ಲಿ ಕೆಲಸ ಮಾಡುವವರು ಪ್ರತಿದಿನ ಬದಲಾಗುವ ತಂತ್ರಜ್ಞಾನದ ಬಗ್ಗೆ ಆಗಿಂದಾಗ ಜ್ಞಾನ ಪಡೆಯುವುದು ಅನಿವಾರ್ಯ. ನೂತನ ತಂತ್ರಜ್ಞಾನದ ಬಗ್ಗೆ ಅಪ್ಡೇಟ್ ಆಗದಿದ್ದರೆ ಮುಂದೇನು ಎಂಬ ಚಿಂತೆ ಕಾಡುತ್ತದೆ. ಹೀಗಾಗಿ ಕೆಲವರು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಮೊರೆ ಹೋದರೆ, ಇನ್ನು ಹಲವರು ಹೊಸ ಟೆಕ್ನಾಲಜಿಯ ಅಧ್ಯಯನದ ಮೊರೆ ಹೋಗುತ್ತಾರೆ. ಮುಂದಿನ ದಿನಗಳಲ್ಲಿ ನೆಮ್ಮದಿಯ ಸಮಯ ಬರಲಿದೆ ಎಂಬ ನಿರೀಕ್ಷೆಯಲ್ಲಿ ಸಾಕಷ್ಟು ಸಮಯಾವಕಾಶ ಕಳೆದು ಹೋಗುತ್ತದೆ. ಬಿಡುವಿನ ವೇಳೆಯಲ್ಲಿ ಕಂಪನಿಗಳ ವತಿಯಿಂದ ಆಗಾಗ ಟೂರ್‌ಗಳಿಗೆ ಹೋದರೂ ಜೀವನೋತ್ಸಾಹಕ್ಕೆ ಬೇಕಾದ ಸ್ಫೂರ್ತಿ ದೊರೆಯುವುದಿಲ್ಲ. ಇವೆಲ್ಲ ಕಾರಣಗಳಿಂದ ಜೀವನ ಖಾಲಿ ಎನಿಸತೊಡಗುತ್ತದೆ.

ಕೊನೆ ಮಾತು

ಕೊನೆ ಮಾತು

ಸಮಯ ಕಳೆದಂತೆ ಇಂಥ ಒಂದು ಖಾಲಿ ಜೀವನಕ್ಕೆ ಇವರು ಒಗ್ಗಿಕೊಳ್ಳುತ್ತ ಸಾಗುತ್ತಾರೆ. ಆದರೆ ಹತಾಶೆ, ಉದ್ವಿಗ್ನತೆಗಳು ಹೆಚ್ಚಾಗುತ್ತ ಹೋಗುವುದರಿಂದ ಇವರು ತಮ್ಮ ಕೆಲಸದ ಮೇಲೂ ಸರಿಯಾಗಿ ಗಮನವಿಡಲು ಸಾಧ್ಯವಾಗುವುದಿಲ್ಲ. ಮಹಾನಗರಗಳು ಐಟಿ ವಲಯದಲ್ಲಿನ ಉದ್ಯೋಗಿಗಳಿಗೆ ಅಪಾರ ಭವಿಷ್ಯ ನೀಡುವುದು ನಿಜವಾದರೂ ಜೊತೆಗೆ ಹತಾಶೆಯ ಜೀವನವೂ ದಯಪಾಲಿಸುತ್ತಿವೆ.
ಒಟ್ಟಾರೆಯಾಗಿ ಒತ್ತಡದ ಜೀವನದಲ್ಲಿ ರಿಲ್ಯಾಕ್ಸ್ ಆಗಲು ಸಮಯವೇ ಸಿಗುವುದಿಲ್ಲ. ಹೀಗಾಗಿ ಹತಾಶೆಯ ಸುಳಿಯಲ್ಲಿ ಸಿಲುಕುವ ಐಟಿ ಉದ್ಯೋಗಿಗಳ ಜೀವನದಲ್ಲಿ ನೆಮ್ಮದಿ ಎಂಬುದು ಮರೀಚಿಕೆಯಾಗುತ್ತಿದೆ.

Read more about: bangalore it employment jobs
English summary

Reason Why IT, MNCs Employees Are Always Frustrated

The capital city of Karnataka, Bengaluru is the main center of India’s whole high-tech industry.
Story first published: Monday, May 6, 2019, 17:25 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X