25 ವರ್ಷದ ನಂತರ ಪನ್ನಾ- ಮುಕ್ತ ತೈಲ, ಅನಿಲ ಪ್ರದೇಶ ಒಎನ್ ಜಿಸಿಗೆ ಹಸ್ತಾಂತರ
ಇಪ್ಪತ್ತೈದು ವರ್ಷಗಳ ಕಾಲ ಪನ್ನಾ- ಮುಕ್ತ ತೈಲ ಮತ್ತು ಅನಿಲ ಪ್ರದೇಶಗಳಲ್ಲಿ ಒಟ್ಟಿಗೆ ಕಾರ್ಯ ನಿರ್ವಹಿಸಿದ ನಂತರ, ಪನ್ನಾ- ಮುಕ್ತ- ತಪತಿ (ಪಿಎಂಟಿ) ಜಂಟಿ ಭಾಗೀದಾರರು ಪನ್ನಾ- ಮುಕ್ತ ತೈಲ ಮತ್ತು ಅನಿಲ ಪ್ರದೇಶವನ್ನು ಸರ್ಕಾರದಿಂದ ನಾಮ ನಿರ್ದೇಶಿತವಾದ ಒಎನ್ ಜಿಸಿಗೆ ಒಪ್ಪಿಸಲಿದೆ. ಡಿಸೆಂಬರ್ ಇಪ್ಪತ್ತೊಂದರ ಶನಿವಾರ ಈ ಪ್ರಕ್ರಿಯೆ ನಡೆಯಲಿದೆ.
ಪಿಎಂಟಿ ಜಂಟಿ ಸಹಭಾಗಿತ್ವದಲ್ಲಿ ಒಎನ್ ಜಿಸಿ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಬಿಜಿ ಎಕ್ಸ್ ಪ್ಲೋರೇಷನ್ ಅಂಡ್ ಪ್ರೊಡಕ್ಷನ್ ಇಂಡಿಯಾ ಲಿಮಿಟೆಡ್ ಒಳಗೊಂಡಿವೆ. ಈ ಮೂರೂ ಕಂಪೆನಿಗಳದು ಕ್ರಮವಾಗಿ ಶೇಕಡಾ ನಲವತ್ತು, ಮೂವತ್ತು ಮತ್ತು ಮೂವತ್ತರಷ್ಟು ಪಾಲು ಹೊಂದಿವೆ.
1994ರಲ್ಲಿ ಪಿಎಂಟಿ ಸಹಭಾಗಿತ್ವವು ಭಾರತ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದವು. ಆ ಒಪ್ಪಂದವು ಡಿಸೆಂಬರ್ 21, 2019ಕ್ಕೆ ಕೊನೆಯಾಗಲಿದೆ. ತಪತಿ ಪ್ರದೇಶದಲ್ಲಿ ಮೂರು ವರ್ಷದ ಹಿಂದೆಯೇ ಉತ್ಪಾದನೆಯನ್ನು ನಿಲ್ಲಿಸಿ, ಒಎನ್ ಜಿಸಿಗೆ ವಹಿಸಲಾಗಿದೆ. ಅಂದ ಹಾಗೆ ಪಿಎಂಟಿ ಪ್ರದೇಶವು ಭಾರತದಲ್ಲಿ ಜಂಟಿ ಕಾರ್ಯನಿರ್ವಹಣೆ ಮಾದರಿಯಲ್ಲಿ ಜಾರಿಗೆ ಮೊದಲ ಯೋಜನೆ. ಮುಂಬೈ ಕಡಲ ತೀರದ ಬಳಿ ಪನ್ನಾ- ಮುಕ್ತ ಪ್ರದೇಶವಿದೆ.

ಸರ್ಕಾರಿ ಸಂಸ್ಥೆ (ಒಎನ್ ಜಿಸಿ), ಖಾಸಗಿ ದೇಶಿ ಸಂಸ್ಥೆ (ರಿಲಯನ್ಸ್) ಹಾಗೂ ಅಂತರರಾಷ್ಟ್ರೀಯ ಸಂಸ್ಥೆ (ಶೆಲ್) ಮಧ್ಯೆ ಒಪ್ಪಂದವಾಗಿ, ಯಶಸ್ವಿ ಕಾರ್ಯಾಚರಣೆ ನಡೆದಿರುವುದಕ್ಕೆ ಈ ಯೋಜನೆ ಅತ್ಯುತ್ತಮ ಉದಾಹರಣೆ ಎಂದು ಬಿಜಿಇಪಿಐಎಲ್ ನ ಕಾರ್ಯನಿರ್ವಾಹಕ ನಿರ್ದೇಶಕ ತ್ರಿವಿಕ್ರಮ್ ಅರುಣ್ ಹೇಳಿದ್ದಾರೆ.
ಪಿಎಂಟಿಯ ಉಚ್ಛ್ರಾಯ ಘಟ್ಟದಲ್ಲಿ ಭಾರತದ ಒಟ್ಟು ತೈಲ ಉತ್ಪಾದನೆಯಲ್ಲಿ ಆರು ಪರ್ಸೆಂಟ್ ಹಾಗೂ ಒಟ್ಟು ಅನಿಲ ಉತ್ಪಾದನೆಯಲ್ಲಿ ಏಳು ಪರ್ಸೆಂಟ್ ಕೊಡುಗೆ ನೀಡಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ನ ಬಿ. ಗಂಗೂಲಿ ಹೇಳಿದ್ದಾರೆ.