For Quick Alerts
ALLOW NOTIFICATIONS  
For Daily Alerts

ಬಳ್ಳಾರಿ: ರಾಜ್ಯ ಬ್ಯಾಂಕರ್ ಸಮಿತಿಯಿಂದ ಸಾಲ ಸಂಪರ್ಕ ಕಾರ್ಯಕ್ರಮ

|

ಬಳ್ಳಾರಿ, ಅಕ್ಟೋಬರ್ 29: ಸಮಾಜದಲ್ಲಿ ದುರ್ಬಲರಿಗೆ, ಅದ್ಯತಾ ವಲಯಕ್ಕೆ ಸಾಲ ಸೌಲಭ್ಯ ಒದಗಿಸುವ ಮೂಲಕ ಆ ವಲಯಗಳ ಬೆಳವಣಿಗೆಗೆ ಬ್ಯಾಂಕ್‍ಗಳು ಸಹಕಾರ ನೀಡಬೇಕು ಎಂದು ಜಿಪಂ ಸಿಇಒ ನಂದಿನಿ ಕೆ.ಆರ್ ಅವರು ಹೇಳಿದರು.

ಅಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ನಗರದ ಕಮ್ಮ ಭವನದಲ್ಲಿ ಜಿಲ್ಲಾ ಬ್ಯಾಂಕರ್ಸ್ ಸಮಿತಿಯ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಸಾಲ ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬ್ಯಾಂಕ್‍ಗಳು ಮಹಿಳಾ ಸ್ವಸಹಾಯ ಗುಂಪುಗಳು, ರೈತರು ಒಳಗೊಂಡಂತೆ ಆದ್ಯತಾ ವಲಯಗಳಿಗೆ ಸಾಲ ಸೌಲಭ್ಯ ಕಲ್ಪಿಸಬೇಕು. ಸಾಲ ಸೌಲಭ್ಯ ಪಡೆಯುವ ಪ್ರತಿಯೊಬ್ಬರು ಪಡೆದ ಸಾಲವನ್ನು ಎನ್‍ಇಪಿ (ಅನುತ್ಪಾದಕ ಆಸ್ತಿ ಅಥವಾ ವಸೂಲಾಗದ ಸಾಲ) ಮಾಡದೇ, ಮರು ಪಾವತಿ ಮಾಡಿದರೆ ಮತ್ತಷ್ಟು ಜನರಿಗೆ ಅನುಕೂಲವಾಗಲಿದೆ ಎಂದರು.

ಬ್ಯಾಂಕ್‍ಗಳು ಸಾರ್ವಜನಿಕರಿಗೆ ಸುಲಭವಾಗಿ ಸೌಲಭ್ಯ ಒದಗಿಸುವ ಕೆಲಸ ಮಾಡುವ ಮೂಲಕ ಜನರ ಅಲೆದಾಟವನ್ನು ತಪ್ಪಿಸಬೇಕು. ಸರ್ಕಾರಿ ಇಲಾಖೆಗಳ ಮುಖಾಂತರ ಬ್ಯಾಂಕ್‍ನಿಂದ ತುಂಬಾ ಜನರು ಸಾಲ ಸೌಲಭ್ಯ ಪಡೆಯುತ್ತಿದ್ದು, ಇಲಾಖೆಗಳು ಗುರುತಿಸುವ ಫಲಾನುಭವಿಗಳು, ಸಾಲ ಮರು ಪಾವತಿ ಮಾಡುವವರೇ ಎನ್ನುವುದನ್ನು ಗಮನಿಸಿ, ಅರ್ಹರಾದವರಿಗೆ ಸಾಲ ಕೊಡಿಸುವ ಕೆಲಸ ಮಾಡಿ ಎಂದು ಸೂಚಿಸಿದರು.

ಬಳ್ಳಾರಿ: ರಾಜ್ಯ ಬ್ಯಾಂಕರ್ ಸಮಿತಿಯಿಂದ ಸಾಲ ಸಂಪರ್ಕ ಕಾರ್ಯಕ್ರಮ

ಆರ್ಥಿಕ ಅಭಿವೃದ್ಧಿ, ಸುಸ್ಥಿರ ಬೆಳವಣಿಗೆಗೆ, ಆರ್ಥಿಕ ಸ್ಥಿತಿ ಸುಧಾರಣೆಗೆ ಇಂತಹ ಕಾರ್ಯಕ್ರಮ ನೆರವಾಗಲಿದೆ. ಸ್ವಸಹಾಯ ಗುಂಪುಗಳು ಪಡೆದ ಸಾಲವನ್ನು ಆದಾಯ ವೃದ್ಧಿಸುವ ಕೆಲಸಕ್ಕೆ ಬಳಕೆ ಮಾಡುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು ಮಾತನಾಡಿ, ''ಸಾಲಕ್ಕಾಗಿ ರೈತರು ಅಲೆದಾಡುವುದನ್ನು ತಪ್ಪಿಸಿ, ರೈತ ಸಮುದಾಯಕ್ಕೆ ಸರಿಯಾದ ಸಮಯಕ್ಕೆ ಸಾಲ ಸೌಲಭ್ಯ ನೀಡುವ ಕೆಲಸ ಬ್ಯಾಂಕ್‍ಗಳಿಂದ ನಡೆಯಬೇಕು. ಸೂಕ್ತ ಸಮಯಕ್ಕೆ ಸಾಲ ನೀಡಿದರೆ ರೈತರಿಗೆ ಅನುಕೂಲವಾಗಲಿದೆ,'' ಎಂದರು.

ಸೈಬರ್ ಕ್ರೈಂ ಬಗ್ಗೆ ಬ್ಯಾಂಕ್ ಗ್ರಾಹಕರು, ಸಾರ್ವಜನಿಕರು ಎಚ್ಚರಿಕೆಯಿಂದಿರಿ. ಫೇಸ್‍ಬುಕ್, ವಾಟ್ಸ್ಯಾಪ್‍ಗಳಲ್ಲಿ ಬರುವ ಸಂದೇಶ ಮತ್ತು ನಕಲಿ ಕರೆಗಳ ಬಗ್ಗೆ ಜಾಗೃತಿ ಅಗತ್ಯ. ಇಂತಹ ಕಾರ್ಯಕ್ರಮಗಳು ತಾಲೂಕು ಮಟ್ಟದಲ್ಲಿ ನಡೆದರೆ ತುಂಬಾ ಜನರಿಗೆ ಅನುಕೂಲವಾಗಲಿದೆ ಎಂದರು.

ಆನ್‍ಲೈನ್ ಮೂಲಕ ಎಲ್ಲಾ ಸೌಲಭ್ಯಗಳು ಬೆರಳಂಚಿನಲ್ಲಿ ಸಿಗಲಿದ್ದು, ಇದರ ಜೊತೆಗೆ ಸೈಬರ್ ಕ್ರೈಂಗಳು ಕೂಡ ಜಾಸ್ತಿಯಾಗುತ್ತಿವೆ. ಇದನ್ನು ತಡೆಯಲು ಸಾರ್ವಜನಿಕರು ಗಮನಹರಿಸಬೇಕಿದೆ ಎಂದರು.

ಲೀಡ್ ಬ್ಯಾಂಕ್ ಮ್ಯಾನೇಜರ್ ನವೀನ್‍ಕುಮಾರ್ ಪ್ರಾಸ್ತವಿಕವಾಗಿ ಮಾತನಾಡಿ, ''ಎಲ್ಲಾ ಬ್ಯಾಂಕ್‍ಗಳು ಒಂದೇ ವೇದಿಕೆಯಲ್ಲಿ ಗ್ರಾಹಕರ ಸೇವೆಗೆ ಲಭ್ಯವಾಗಲಿದ್ದು, ಜಿಲ್ಲೆಯ ಸಾರ್ವಜನಿಕರಿಗೆ ವಿವಿಧ ಬ್ಯಾಂಕ್‍ಗಳಿಂದ ದೊರೆಯುವ ಸಾಲ ಸೌಲಭ್ಯಗಳ ಬಗ್ಗೆ ಜನ ಜಾಗೃತಿ ಹಾಗೂ ಅರಿವು ಮೂಡಿಸಲಾಗುತ್ತದೆ'' ಎಂದರು.

ಸುರಕ್ಷಾ ಭೀಮಾ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಸ್ವ ಸಹಾಯ ಗುಂಪುಗಳಿಗೆ ಸಾಲ ವಿತರಣೆ, ಬೀದಿ ಬದಿ ವ್ಯಾಪಾರಿಗಳಿಗೆ ಸಾಲ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ಸೌಲಭ್ಯ ಸೇರಿದಂತೆ ಹಲವು ವಿಷಯಗಳ ಕುರಿತು ಗ್ರಾಹಕರಿಗೆ ಅರಿವು, ಸೈಬರ್ ಕ್ರೈಮ್ ಕುರಿತು ಜಾಗೃತಿ, ಡಿಜಿಟಲ್ ಸೇವೆಯ ಸದುಪಯೋಗ ಸೇರಿ ಹತ್ತು ವಿಷಯಗಳ ಮಾಹಿತಿ ಪಡೆಯಿರಿ ಎಂದರು.

ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್‍ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಡಿ.ಸಿ.ಮೋಹನ್ ಕುಮಾರ್, ಎಸ್‍ಬಿಐ ಡೆಪ್ಯೂಟಿ ಜನರಲ್ ಮ್ಯಾನೇಜರ್ ಪ್ರದೀಪ್ ನಾಯರ್, ಹುಬ್ಬಳ್ಳಿಯ ಕೆನರಾ ಬ್ಯಾಂಕ್ ವೃತ್ತ ಕಚೇರಿಯ ಜನರಲ್ ಮ್ಯಾನೇಜರ್ ಜೆ.ಎಸ್. ರವಿಸುಧಾಕರ್ ಸೇರಿದಂತೆ ಇತರರು ಇದ್ದರು.

ಎಲ್ಲಾ ಬ್ಯಾಂಕುಗಳ ಸಹಯೋಗದೊಂದಿಗೆ ಗ್ರಾಹಕರಿಗೆ ಸಾಲ ಸಂಪರ್ಕ (ಕ್ರೆಡಿಟ್ ಔಟ್ ರೀಚ್) ಕಾರ್ಯಕ್ರಮವನ್ನು ಜಿಲ್ಲಾ ಕೇಂದ್ರಗಳಲಿ ಆಯೋಜಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ವಿವಿಧ ಸಾಲ ಯೋಜನೆ, ಬ್ಯಾಂಕ್ ಗ್ರಾಹಕರಿಗೆ ಉಪಯುಕ್ತ ಮಾಹಿತಿ ಹಂಚಿಕೆಗೆ ಸಹಕಾರಿಯಾಗಿದೆ.

English summary

Ballari: State Level Bankers Committee event on Loan connector program

CEO Of Ballari Zilla Panchayat KR Nandini inaugurated State Level Bankers Committee organised event on Loan connector program.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X