Bank Strike : ಗ್ರಾಹಕರೇ ಗಮನಿಸಿ: ನವೆಂಬರ್ 19ರಂದು ಬ್ಯಾಂಕ್ ನೌಕರರ ಮುಷ್ಕರ
ಅಖಿಲ ಭಾರತ ಬ್ಯಾಂಕ್ ನೌಕರರ ಅಸೋಸಿಯೇಷನ್ ರಾಷ್ಟ್ರವ್ಯಾಪ್ತಿ ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದೆ. ನವೆಂಬರ್ 19, 2022ರಂದು ಈ ಮುಷ್ಕರ ನಡೆಯಲಿದೆ. ಇದರಿಂದಾಗಿ ದೇಶದಾದ್ಯಂತ ನವೆಂಬರ್ 19ರಂದು ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಸೋಮವಾರ ಅಖಿಲ ಭಾರತ ಬ್ಯಾಂಕ್ ನೌಕರರ ಅಸೋಸಿಯೇಷನ್‌ನ (ಎಐಬಿಇಎ) ಪ್ರಧಾನ ಕಾರ್ಯದರ್ಶಿ ಬ್ಯಾಂಕುಗಳಿಗೆ ಈ ಬಗ್ಗೆ ನೋಟಿಸ್ ನೀಡಿದ್ದಾರೆ. ನಿಮ್ಮ ಬ್ಯಾಂಕ್‌ನ ನೌಕರರು ಕೂಡಾ ನವೆಂಬರ್ 19ರಂದು ನಡೆಯುವ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ ಎಂದು ಬ್ಯಾಂಕ್ ಆಫ್ ಬರೋಡಾ ತಿಳಿಸಿದೆ.
ಈ ಒಂದು ದಿನದ ಮುಷ್ಕರದ ಸಂದರ್ಭದಲ್ಲಿ ನಾವು ಸೇವೆಯನ್ನು ನೀಡುವ ಪ್ರಯತ್ನವನ್ನು ಮಾಡುತ್ತೇವೆ. ಆದರೆ ನೌಕರರು ಮುಷ್ಕರದಲ್ಲಿ ಭಾಗಿಯಾಗುವ ಕಾರಣದಿಂದಾಗಿ ನಮ್ಮ ಸೇವೆಯಲ್ಲಿ ವ್ಯತ್ಯಯ ಉಂಟಾಗಬಹುದು ಎಂದು ಬ್ಯಾಂಕ್ ಆಫ್ ಬರೋಡಾ ಮಾಹಿತಿ ನೀಡಿದೆ.

ಸಾಮಾನ್ಯವಾಗಿ ಬ್ಯಾಂಕ್‌ಗಳಿಗೆ ಎರಡನೇ ಹಾಗೂ ನಾಲ್ಕನೇ ಶನಿವಾರ ರಜೆ ಇರುತ್ತದೆ. ಮೊದಲ ಹಾಗೂ ಮೂರನೇ ಶನಿವಾರ ಬ್ಯಾಂಕ್‌ಗಳು ಸಾಮಾನ್ಯವಾಗಿ ಕಾರ್ಯನಿರ್ವಹಣೆ ಮಾಡುತ್ತದೆ. ಆದರೆ ಈ ಮುಷ್ಕರವು ಮೂರನೇ ಶನಿವಾರ ನಡೆಯಲಿದೆ. ಇದು ಬ್ಯಾಂಕ್‌ನ ಸೇವಾ ದಿನವಾಗಿದ್ದು, ಮುಷ್ಕರದಿಂದಾಗಿ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಈ ಮುಷ್ಕರ ಯಾಕಾಗಿ?
"ಬ್ಯಾಂಕ್ ಯೂನಿಯನ್‌ಗಳಲ್ಲಿ ನೌಕರರು ಸಕ್ರಿಯರಾಗಿರುವ ಕಾರಣಕ್ಕೆ ಬ್ಯಾಂಕ್ ನೌಕರರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಇದರ ವಿರುದ್ಧವಾಗಿ ನಾವು ಸಂಘಟನೆಯು ಪ್ರತಿಭಟನೆ ಮಾಡಲಿದೆ," ಎಂದು ಅಕ್ಟೋಬರ್‌ನಲ್ಲಿ ಅಖಿಲ ಭಾರತ ಬ್ಯಾಂಕ್ ನೌಕರರ ಅಸೋಸಿಯೇಷನ್‌ನ (ಎಐಬಿಇಎ) ಪ್ರಧಾನ ಕಾರ್ಯದರ್ಶಿ ಸಿಎಚ್ ವೆಂಕಟಚಲಂ ತಿಳಿಸಿದ್ದಾರೆ.
"ಬ್ಯಾಂಕ್ ನೌಕರರ ಮೇಲಿನ ದಾಳಿಯು ನಿರಂತರವಾಗಿ ಹೆಚ್ಚಳವಾಗುತ್ತಿದೆ. ಆದರೆ ಬ್ಯಾಂಕ್ ನೌಕರರ ಮೇಲೆ ಬೆದರಿಕೆಯು ಕೂಡಾ ಹೆಚ್ಚುತ್ತಿದೆ. ಬೇರೆ ಬೇರೆ ರೀತಿಯಲ್ಲಿ ದಾಳಿಯನ್ನು ನಡೆಸಲಾಗುತ್ತಿದೆ. ನಾವು ಈ ದಾಳಿಯ ವಿರುದ್ಧವಾಗಿ ಮಾತನಾಡುವುದು ಅತೀ ಮುಖ್ಯವಾಗಿದೆ," ಎಂದು ಕೂಡಾ ಸಿಎಚ್ ವೆಂಕಟಚಲಂ ಅಭಿಪ್ರಾಯಿಸಿದ್ದಾರೆ.
ನವೆಂಬರ್‌ನಲ್ಲಿ ಇನ್ನುಳಿದ ಬ್ಯಾಂಕ್ ರಜಾದಿನ ಪಟ್ಟಿ
ನವೆಂಬರ್ 11: ಕನಕದಾಸ ಜಯಂತಿ, ವಾಂಗಾಲ ಹಬ್ಬ, ಬ್ಯಾಂಕ್ ಬೆಂಗಳೂರು, ಇಂಫಾಲ್, ಶಿಲ್ಲಾಂಗ್‌ನಲ್ಲಿ ಬಂದ್
ನವೆಂಬರ್ 12: ಎರಡನೇ ಶನಿವಾರ, ದೇಶಾದಾದ್ಯಂತ ಬ್ಯಾಂಕ್ ಬಂದ್
ನವೆಂಬರ್ 13: ಭಾನುವಾರ, ವಾರದ ರಜೆ, ದೇಶಾದಾದ್ಯಂತ ಬ್ಯಾಂಕ್ ಬಂದ್
ನವೆಂಬರ್ 20: ಭಾನುವಾರ, ವಾರದ ರಜೆ, ದೇಶಾದಾದ್ಯಂತ ಬ್ಯಾಂಕ್ ಬಂದ್
ನವೆಂಬರ್ 23: ಸೆಂಗ್ ಕುಂಟ್ಸ್‌ನೆಮ್, ಶಿಲಾಂಗ್‌ನಲ್ಲಿ ಎಲ್ಲ ಬ್ಯಾಂಕ್‌ಗಳು ಬಂದ್ ಆಗಿರುತ್ತದೆ
ನವೆಂಬರ್ 26: ನಾಲ್ಕನೇ ಶನಿವಾರ, ದೇಶಾದಾದ್ಯಂತ ಬ್ಯಾಂಕ್ ಬಂದ್
ನವೆಂಬರ್ 27: ಭಾನುವಾರ, ವಾರದ ರಜೆ, ದೇಶಾದಾದ್ಯಂತ ಬ್ಯಾಂಕ್ ಬಂದ್