For Quick Alerts
ALLOW NOTIFICATIONS  
For Daily Alerts

ಭದ್ರಾವತಿ ಉಕ್ಕು ಕಾರ್ಖಾನೆ ಮಾರುವ ಪ್ರಯತ್ನ ಸದ್ಯ ವಿಫಲ

|

ನವದೆಹಲಿ, ಅ. 13: ಭದ್ರಾವತಿಯಲ್ಲಿರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ಪ್ರಯತ್ನಕ್ಕೆ ತಾತ್ಕಾಲಿಕ ಹಿನ್ನಡೆ ಆಗಿದೆ. ಬಿಡ್ ಸಲ್ಲಿಸಿದ ಸಂಸ್ಥೆಗಳು ಖರೀದಿ ಪ್ರಕ್ರಿಯೆಯಲ್ಲಿ ಮುಂದುವರಿಯಲು ಆಸಕ್ತಿ ತೋರದ ಹಿನ್ನೆಲೆಯಲ್ಲಿ ಸದ್ಯಕ್ಕೆ ಖಾಸಗೀಕರಣ ಪ್ರಯತ್ನವನ್ನು ಕೇಂದ್ರ ಸರಕಾರ ಕೈಬಿಟ್ಟಿದೆ.

 

ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ (ಎಸ್‌ಎಐಎಲ್) ಸ್ವಾಮ್ಯದ ವಿಐಸಿಎಲ್ ಅನ್ನು ಮಾರಾಟಕ್ಕಿಟ್ಟು 2019ರಲ್ಲಿ ಬಿಡ್ ಕರೆಯಲಾಗಿತ್ತು. 1918ರಲ್ಲಿ ಆರಂಭವಾಗಿ ಒಂದು ಕಾಲದಲ್ಲಿ 20 ಸಾವಿರ ಜನರು ಕೆಲಸ ಮಾಡುತ್ತಿದ್ದ ಉಕ್ಕಿನ ಕಾರ್ಖಾನೆ ಭಾರೀ ನಷ್ಟದಲ್ಲಿದ್ದು ಮುಚ್ಚುವ ಹಂತಕ್ಕೆ ಬಂದಿದೆ. ಹೀಗಾಗಿ ಅದನ್ನು ಖಾಸಗಿಯವರಿಗೆ ಮಾರಲು ನಿರ್ಧರಿಸಲಾಗಿದೆ.

"2019ರಲ್ಲಿ ವಿಎಸ್‌ಐಎಲ್‌ನ ಮಾರಾಟಕ್ಕೆ ಬಿಡ್ ಕರೆದಾಗ ಹಲವು ಆಸಕ್ತಿ ಅಭಿವ್ಯಕ್ತಿ (ಇಒಐ- ಎಕ್ಸ್‌ಪ್ರೆಸ್ ಆಫ್ ಇಂಟ್ರೆಸ್ಟ್) ಸಲ್ಲಿಕೆಯಾಗಿದ್ದವು. ಆದರೆ, ಅಲ್ಲಿಂದ ಮುಂದಿನ ಪ್ರಕ್ರಿಯೆಗೆ ಮುಂದುವರಿಯಲು ಸಾಕಷ್ಟು ಬಿಡ್ಡರ್‌ಗಳು ಆಸಕ್ತಿ ತೋರದಿದ್ದರಿಂದ ಇಒಐ ಅನ್ನು ರದ್ದುಗೊಳಿಸಲು ಕೇಂದ್ರ ಸರಕಾರ ನಿರ್ಧರಿಸಿದೆ" ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಸಂಸ್ಥೆ (ಡಿಐಪಿಎಂ) ನಿನ್ನೆ ಬುಧವಾರ ಹೇಳಿಕೆ ನೀಡಿದೆ.

ಬಿಪಿಸಿಎಲ್ ಬಿಡ್ಡಿಂಗ್ ಕೂಡ ನಿಂತಿತ್ತು

ಬಿಪಿಸಿಎಲ್ ಬಿಡ್ಡಿಂಗ್ ಕೂಡ ನಿಂತಿತ್ತು

ಇತ್ತೀಚಿನ ದಿನಗಳಲ್ಲಿ ಸರಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿಗೆ ಮಾರುವ ಪ್ರಯತ್ನ ವಿಫಲವಾಗಿರುವುದು ಇದು ಎರಡನೇ ಬಾರಿ. ಇದೇ ಮೇ ತಿಂಗಳಲ್ಲಿ ಬಿಪಿಸಿಎಲ್‌ನಲ್ಲಿ ಶೇ. 53ರಷ್ಟು ಪಾಲನ್ನು ಮಾರುವ ಪ್ರಯತ್ನವನ್ನು ಸರಕಾರ ಮಧ್ಯದಲ್ಲೇ ಕೈಬಿಟ್ಟಿತ್ತು. ಜಾಗತಿಕ ಇಂಧನ ಮಾರುಕಟ್ಟೆಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಹೆಚ್ಚಿನ ಬಿಡ್‌ದಾರರು ಬಿಪಿಸಿಎಲ್ ಖರೀದಿ ಪ್ರಕ್ರಿಯೆಯಲ್ಲಿ ಮುಂದುವರಿಯಲು ಹಿಂದೇಟು ಹಾಕಿದ್ದು ಕಾರಣ.

ವಿಶ್ವೇಶ್ವರಯ್ಯ ಉಕ್ಕಿನ ಕಾರ್ಖಾನೆ ಖರೀದಿಗೆ ಹೆಚ್ಚು ಆಸಕ್ತಿ ತೋರಿದಂತೆ ಬಿಪಿಸಿಎಲ್‌ಗೂ ಹಲವು ಆಸಕ್ತಿ ಅಭಿವ್ಯಕ್ತಿಗಳು ಸಲ್ಲಿಕೆಯಾಗಿದ್ದವು. ಮೂರು ಬಿಡ್‌ಗಳೂ ಸಲ್ಲಿಕೆ ಆಗಿದ್ದವು. ಆದರೆ, ಇಂಧನ ಬೆಲೆ ನಿಗದಿ ಮುಂತಾದ ವಿಚಾರಗಳಲ್ಲಿ ಸ್ಪಷ್ಟತೆ ಇಲ್ಲವೆಂಬ ಅಳಲಿನಲ್ಲಿ ಇಬ್ಬರು ಬಿಡ್‌ದಾರರು ಹೊರ ಉಳಿಯಲು ನಿರ್ಧರಿಸಿದರು. ಇದರಿಂದ ಒಬ್ಬರೇ ಬಿಡ್‌ದಾರರು ಉಳಿದುಕೊಂಡಿದ್ದರು. ಹೀಗಾಗಿ, ಬಿಪಿಸಿಎಲ್ ಮಾರಾಟ ಪ್ರಕ್ರಿಯೆಯನ್ನೂ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ಸಿಇಎಲ್ ಮಾರಾಟವೂ ರದ್ದು

ಸಿಇಎಲ್ ಮಾರಾಟವೂ ರದ್ದು

ಇನ್ನು, ಸೆಂಟ್ರಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಸಿಇಎಲ್) ಸಂಸ್ಥೆಯನ್ನು ಸಂಪೂರ್ಣವಾಗಿ ಖಾಸಗಿಯವರಿಗೆ ಮಾರುವ ಪ್ರಯತ್ನ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ವಿಫಲವಾಗಿತ್ತು. ನಂದಲಾಲ್ ಫೈನಾನ್ಸ್ ಅಂಡ್ ಲೀಸಿಂಗ್ ಪ್ರೈವೇಟ್ ಲಿ ಸಂಸ್ಥೆಯ ಬಿಡ್ಡಿಂಗ್ ಅನ್ನು ಅಂತಿಮಗೊಳಿಸಲಾಗಿತ್ತು. ಆದರೆ, ಅರ್ಹತಾ ಮಾನದಂಡ ಪಾಲಿಸಿಲ್ಲ ಎಂಬ ಕಾರಣಕ್ಕೆ ಮಾರಾಟ ಪ್ರಕ್ರಿಯೆಯನ್ನು ಪಿಐಪಿಎಎಂ ರದ್ದು ಮಾಡಿತ್ತು.

ವಿಐಎಸ್‌ಪಿ ಕಥೆ ದುರಂತ
 

ವಿಐಎಸ್‌ಪಿ ಕಥೆ ದುರಂತ

ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸ್ಥಾಪನೆಯಾಗಿದ್ದು 1919ರಲ್ಲಿ. ಉತ್ಕೃಷ್ಟ ಗುಣಮಟ್ಟದ ಕಬ್ಬಿಣ ಮತ್ತು ಉಕ್ಕುಗಳು ಇಲ್ಲಿ ತಯಾರಾಗಿ ಇಡೀ ದೇಶದ ಹೆಮ್ಮೆಯಾಗಿತ್ತು. ರಾಜ್ಯ ಸರಕಾರದ ಅಧೀನದಲ್ಲಿದ್ದ ಈ ಸಂಸ್ಥೆಯನ್ನು 1989ರಲ್ಲಿ ಕೇಂದ್ರ ಸರಕಾರಕ್ಕೆ ಒಪ್ಪಿಸಲಾಯಿತು. ಆಗ ಅದರ ಆಡಳಿತವನ್ನು ಭಾರತೀಯ ಉಕ್ಕು ಪ್ರಾಧಿಕಾರಕ್ಕೆ (ಎಸ್‌ಎಐಎಲ್) ವಹಿಸಲಾಯಿತು.

ಆದರೆ, ರಾಜ್ಯ ಸರಕಾರದಿಂದ ಕೇಂದ್ರದ ಅಂಕೆಗೆ ಒಳಗಾದ ಬಳಿಕ ವಿಐಎಸ್‌ಪಿ ಬಹಳ ವೇಗವಾಗಿ ಅವನತಿಯ ಹಾದಿ ಹಿಡಿಯಿತು. ಒಂದು ಕಾಲದಲ್ಲಿ 20 ಸಾವಿರ ಉದ್ಯೋಗಿಗಳನ್ನು ಹೊಂದಿ ರಾಜ್ಯಕ್ಕೆ ಹೆಮ್ಮೆ ಎನಿಸಿದ್ದ ಇಲ್ಲಿ ಈಗ 1300 ಗುತ್ತಿಗೆ ನೌಕರರು ಸೇರಿ 1520 ಮಂದಿ ಕೆಲಸ ಮಾಡುತ್ತಿದ್ದಾರೆ.

2000ರಲ್ಲಿ ವಾಜಪೇಯಿ ನೇತೃತ್ವದ ಕೇಂದ್ರ ಸರಕಾರದ ಅವಧಿಯಲ್ಲಿ ಈ ಕಂಪನಿಯ ಖಾಸಗೀಕರಣಕ್ಕೆ ಪ್ರಸ್ತಾಪವಾಗಿತ್ತು. ಆದರೆ ಅದು ಸಾಕಾರವಾಗಲಿಲ್ಲ. ರಕ್ಷಣಾ ಇಲಾಖೆಗೆ ವಹಿಸಲಾಗುವುದು, ಹೆಚ್ಚಿನ ಬಂಡವಾಳ ಹಾಕಿ ಪುನಶ್ಚೇತನಗೊಳಿಸಲಾಗುವುದು ಎಂಬೆಲ್ಲಾ ಭರವಸೆಗಳು, ಮಾತುಗಳು ಕೇಳಿಬಂದವಾದರೂ ಯಾವುದೂ ಆಗಲಿಲ್ಲ. ಸಾಕಷ್ಟು ಬಂಡವಾಳವೂ ಹರಿದುಬರಲಿಲ್ಲ.

2016ರಲ್ಲಿ ಇದರ ಖಾಸಗೀಕರಣದ ಪ್ರಸ್ತಾಪ ಮತ್ತೆ ಆಯಿತು. ವಿಐಎಸ್‌ಪಿಯನ್ನು ಸಂಪೂರ್ಣವಾಗಿ ಖಾಸಗಿಯವರಿಗೆ ಮಾರಲು ಕೇಂದ್ರ ಸಂಪುಟವೂ ಅನುಮೋದನೆ ಕೊಟ್ಟಿತ್ತು. 2019ರಲ್ಲಿ ಇಒಐಗೆ ಆಹ್ವಾನ ಕೊಡಲಾಯಿತು. ಅದರಂತೆ ಬಹಳಷ್ಟು ಆಸಕ್ತಿ ವ್ಯಕ್ತವಾದವಾದರೂ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಮುಂದುವರಿಯಲು ಹೆಚ್ಚಿನ ಮಂದಿ ಆಸಕ್ತಿ ತೋರಲಿಲ್ಲವಾದ್ದರಿಂದ ಭದ್ರಾವತಿ ಉಕ್ಕಿನ ಕಾರ್ಖಾನೆಯ ಖಾಸಗೀಕರಣ ತಾತ್ಕಾಲಿಕವಾಗಿ ನಿಂತಿದೆ.

ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಇದರ ಮಾರಾಟಕ್ಕೆ ಬಿಡ್ಡಿಂಗ್ ಆರಂಭಿಸುವ ಸಾಧ್ಯತೆ ಇಲ್ಲದಿಲ್ಲ.

(ಒನ್ಇಂಡಿಯಾ ಸುದ್ದಿ)

English summary

Bhadravathi Steel Plant's Privatisation Bid Failed

Central government has scrapped the privatisation of SAIL's Bhadravathi steel plant due to insufficient bidder interest. Govt had invited EoIs to buy VISP on 2019.
Story first published: Thursday, October 13, 2022, 10:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X