ಭಾರತ್ ಫೋರ್ಜ್ ನಿಂದ ಕಾರ್ಮಿಕರಿಗೆ ರು. 14,500ರಿಂದ 15,000 ವೇತನ ಹೆಚ್ಚಳ
ಭಾರತ್ ಫೋರ್ಜ್ ನಿಂದ ಕಾರ್ಮಿಕರ ಜತೆಗೆ ಮೂರು ವರ್ಷದ ವೇತನ ಒಪ್ಪಂದಕ್ಕೆ ಬರಲಾಗಿದೆ. ಅದರ ಪ್ರಕಾರ ಕಾರ್ಮಿಕರಿಗೆ ತಿಂಗಳಿಗೆ ರು. 14,500ರಿಂದ ರು. 15,000 ತನಕ ಹೆಚ್ಚಳ ಮಾಡಲಾಗುವುದು. ಈ ಏರಿಕೆ ನಂತರ ಭಾರತ್ ಫೋರ್ಜ್ ನಲ್ಲಿ ಸರಾಸರಿ ವೇತನ ಮಟ್ಟವು ತಿಂಗಳಿಗೆ ರು. 45,000ದಿಂದ ರು. 80,000 ಆಗುತ್ತದೆ.
ಪುಣೆಯ ಮುಂಧ್ವಾದಲ್ಲಿ ಇರುವ ಮುಖ್ಯ ಘಟಕದ ಕಾರ್ಮಿಕರ ಜತೆಗೆ ಈ ಹೊಸ ವೇತನ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ಜುಲೈ 1, 2019ರಿಂದ ಜೂನ್ 30, 2022ರ ಮಧ್ಯೆ ಈ ಒಪ್ಪಂದ ಜಾರಿಯಲ್ಲಿರುತ್ತದೆ. ಇದರಿಂದ ಭಾರತ್ ಫೋರ್ಜ್ ಮುಂಧ್ವಾ ಘಟಕದ ಕಾಮ್ ಗರ್ ಸಂಘ್ ಒಕ್ಕೂಟದ 1331 ಕಾಯಂ ಕಾರ್ಮಿಕರಿಗೆ ಅನುಕೂಲ ಆಗಲಿದೆ.
ಈ ಒಪ್ಪಂದದ ನಂತರ ಭಾರತ್ ಫೋರ್ಜ್ ಲಿಮಿಟೆಡ್ ಸಿಎಂಡಿ ಬಿ.ಎನ್. ಕಲ್ಯಾಣಿ ಮಾತನಾಡಿ, ಕಂಪೆನಿಯು ಬೆಳೆಯಲಿದೆ. ರಕ್ಷಣೆ ಹಾಗೂ ವೈಮಾಂತರಿಕ್ಷ ವಲಯಕ್ಕೆ ಪ್ರವೇಶಿಸಲಿದೆ. ಕಾರ್ಮಿಕರು ಕೌಶಲ ಹೆಚ್ಚಿಸಿಕೊಳ್ಳುವುದಕ್ಕೆ ಗಮನ ನೀಡಬೇಕು ಎಂದು ಹೇಳಿದ್ದಾರೆ.

ಕಾರ್ಮಿಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಂತೋಷ್ ಸಬಲ್ ಮಾತನಾಡಿ, ಕೊರೊನಾ ಕಾರಣಕ್ಕೆ ವೇತನ ಒಪ್ಪಂದ ಮಾಡಿಕೊಳ್ಳಲು ಹತ್ತೊಂಬತ್ತು ತಿಂಗಳು ತಡವಾಯಿತು. ಈಗಿನ ಏರಿಕೆಯೊಂದಿಗೆ ಉತ್ತಮ ವೇತನ ಹೆಚ್ಚಳ ಮತ್ತು ಈ ಭಾಗದಲ್ಲಿ ಉಳಿದ ಯಾವ ಕಂಪೆನಿಯಲ್ಲೂ ದೊರೆಯದ ಅನುಕೂಲಗಳು ದೊರೆಯುತ್ತವೆ ಎಂದಿದ್ದಾತೆ.
ಹೊಸ ಒಪ್ಪಂದದಲ್ಲಿ ಆರೋಗ್ಯ ಪಾಲಿಸಿ 1.50 ಲಕ್ಷದಿಂದ 2 ಲಕ್ಷ ರುಪಾಯಿಗೆ ಹೆಚ್ಚಿಸಲಾಗಿದೆ. ಅತಿ ಹೆಚ್ಚಿನ ಸಬ್ಸಿಡಿ ದರದ ಕ್ಯಾಂಟೀನ್ ಆಹಾರ ದೊರೆಯಲಿದೆ. ವಿಶೇಷ ಐದು ತಿಂಗಳ ಗ್ರಾಚ್ಯುಟಿ, ವಿದ್ಯಾರ್ಥಿ ವೇತನ, ಮದುವೆ ಭತ್ಯೆ, ಕೆಲಸದ ಸಂದರ್ಭದಲ್ಲಿ ಅಪಘಾತಕ್ಕೆ ತುತ್ತಾದರೆ ಶೇಕಡಾ 85ರಷ್ಟು ವೇತನ ನೀಡಲಾಗುತ್ತದೆ.