ಡಿಸೆಂಬರ್ 2ರಿಂದ 4 ಬರ್ಗರ್ ಕಿಂಗ್ ಐಪಿಒ; ಪ್ರತಿ ಷೇರಿಗೆ 59- 60
ಶೀಘ್ರ ಸೇವೆ ಒದಗಿಸುವ ರೆಸ್ಟೋರೆಂಟ್ ಜಾಲವಾದ ಬರ್ಗರ್ ಕಿಂಗ್ ನಿಂದ ಮುಂದಿನ ವಾರ ಚೊಚ್ಚಲ ಪಬ್ಲಿಕ್ ಆಫರ್ (ಐಪಿಒ) ಶುರು ಮಾಡುವ ನಿರೀಕ್ಷೆ ಇದೆ. ಮರ್ಚೆಂಟ್ ಬ್ಯಾಂಕರ್ ಗಳ ಬಳಿ ಮಾತುಕತೆ ನಡೆಸಿದ ನಂತರ ಐಪಿಒ ದರವನ್ನು ಪ್ರತಿ ಷೇರಿಗೆ 59- 60 ರುಪಾಯಿಗೆ ದರ ನಿಗದಿ ಮಾಡಲಾಗಿದೆ. ಅಂದರೆ ಷೇರಿನ ಮುಖಬೆಲೆಗಿಂತ 5.9ರಿಂದ 6 ಪಟ್ಟು ಹೆಚ್ಚು ಬೆಲೆ ನಿಗದಿ ಮಾಡಿದಂತಾಗಿದೆ.
ಐಪಿಒ ಡಿಸೆಂಬರ್ 2ರಿಂದ ಆರಂಭವಾಗಿ 4ನೇ ತಾರೀಕಿಗೆ ಕೊನೆ ಆಗುತ್ತದೆ. ಐಪಿಒದಲ್ಲಿ ಹೊಸ ವಿತರಣೆ 450 ಕೋಟಿ ರುಪಾಯಿ ಮತ್ತು ಪ್ರವರ್ತಕರಾದ ಕ್ಯೂಎಸ್ ಆರ್ ಏಷ್ಯಾ ಪಿಟಿಇ ಲಿ. ನಿಂದ ಆಫರ್ ಫಾರ್ ಸೇಲ್ ಆಗಿ 6 ಕೋಟಿ ಷೇರುಗಳನ್ನು ಮಾರಾಟ ಮಾಡಲಿದೆ.
ಡಾಲರ್ ಎದುರು ರೂಪಾಯಿ ಬಲ: ಸತತ 6ನೇ ದಿನ ಏರಿಕೆ
ಯುಎಸ್ ಮೂಲದ ಭಾರತದಲ್ಲಿನ ಅಂಗಸಂಸ್ಥೆ ಬರ್ಗರ್ ಕಿಂಗ್ ಸಾರ್ವಜನಿಕ ವಿತರಣೆ ಮೂಲಕ 810 ಕೋಟಿ ರುಪಾಯಿ ಸಂಗ್ರಹಿಸುವ ಗುರಿ ಹಾಕಿಕೊಂಡಿದೆ. ಕಂಪೆನಿಯಿಂದ ರೈಟ್ಸ್ ಇಶ್ಯೂ ಮೂಲಕವಾಗಿ ಪ್ರೀ ಐಪಿಒ ಪ್ಲೇಸ್ ಮೆಂಟ್ ಆಗಿ, ಪ್ರವರ್ತಕರಿಗೆ ಪ್ರತಿ ಷೇರಿಗೆ 44 ರುಪಾಯಿಯಂತೆ 58.08 ಕೋಟಿ ರುಪಾಯಿ ಹಾಗೂ 58.50 ರುಪಾಯಿ ಪ್ರತಿ ಷೇರಿಗೆ ಎಂಬಂತೆ 91.92 ಕೋಟಿ ರುಪಾಯಿಗೆ ಪ್ರಿಫರೆನ್ಷಿಯಲ್ ಅಲಾಟ್ ಮೆಂಟ್ ಮಾಡಲಾಗಿದೆ.
ಆ ಕಾರಣದಿಂದಾಗಿ ಹೊಸದಾಗಿ ವಿತರಣೆ ಗಾತ್ರ 600 ಕೋಟಿ ರುಪಾಯಿಯಿಂದ 450 ಕೋಟಿ ರುಪಾಯಿಗೆ ಇಳಿಕೆ ಆಗಿದೆ. ಅಂದ ಹಾಗೆ ಕನಿಷ್ಠ 250 ಷೇರುಗಳಿಗೆ ಅರ್ಜಿ ಹಾಕಬೇಕು. ಅದರ ಮೇಲೆ 250ರಂತೆ ಹೆಚ್ಚಿಸುತ್ತಾ ಅರ್ಜಿ ಹಾಕಬೇಕಾಗುತ್ತದೆ. ಗರಿಷ್ಠ 3250 ಈಕ್ವಿಟಿ ಷೇರುಗಳನ್ನಷ್ಟೇ ಖರೀದಿ ಮಾಡಲು ಸಾಧ್ಯ.
ಕಂಪೆನಿಯು 10 ಪರ್ಸೆಂಟ್ ಭಾಗದ ಐಪಿಒ ಅನ್ನು ರೀಟೇಲ್ ಹೂಡಿಕೆದಾರರಿಗೆ, 15 ಪರ್ಸೆಂಟ್ ತನಕ ನಾನ್ ಇನ್ ಸ್ಟಿಟ್ಯೂಷನಲ್ ಹೂಡಿಕೆದಾರರಿಗೆ ಹಾಗೂ 75 ಪರ್ಸೆಂಟ್ ತನಕ ಕ್ವಾಲಿಫೈಡ್ ಇನ್ ಸ್ಟಿಟ್ಯೂಷನಲ್ ಹೂಡಿಕೆದಾರರಿಗೆ ಮೀಸಲಾಗುತ್ತದೆ. ಈಕ್ವಿಟಿ ಷೇರು ಡಿಸೆಂಬರ್ 14, 2020ರಂದು ಲಿಸ್ಟಿಂಗ್ ಆಗುವ ಸಾಧ್ಯತೆ ಇದೆ.