Closing Bell: ಆರ್‌ಬಿಐ ಎಂಪಿಸಿ ಸಭೆ, ಷೇರುಪೇಟೆಯಲ್ಲಿ ಕರಡಿ ಕುಣಿತ
ದೇಶದಲ್ಲಿ ಹಣದುಬ್ಬರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಪ್ರತಿ ತಿಂಗಳು ಹಣದುಬ್ಬರ ದರ ಹೆಚ್ಚಳವಾಗುತ್ತಲೇ ಇದೆ. ಹಣದುಬ್ಬರವನ್ನು ಹತೋಟಿಗೆ ತರಲು ನಾಲ್ಕು ಬಾರಿ ಆರ್‌ಬಿಐ ರೆಪೋ ದರವನ್ನು ಏರಿಸಿದೆ. ಆದರೆ ಹಣದುಬ್ಬರ ಹತೋಟಿಗೆ ಬಂದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆಗಾಗಿ ಆರ್‌ಬಿಐ ಗುರುವಾರ ಸಭೆ ನಡೆಸಿದೆ. ಈ ನಡುವೆ ಷೇರುಪೇಟೆಯಲ್ಲಿ ಕರಡಿ ಕುಣಿತ ಕಾಣಿಸಿಕೊಂಡಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಈ ಸಭೆಯನ್ನು ಸರ್ಕಾರಕ್ಕೆ ಹಣದುಬ್ಬರದ ಬಗ್ಗೆ ವರದಿಯನ್ನು ಸಲ್ಲಿಕೆ ಮಾಡಲು ಮಾತ್ರ ನಡೆಸಲಾಗುತ್ತಿದೆ ಎಂದು ಸ್ಪಷ್ಟಣೆ ನೀಡಿದೆ. ಆದರೂ ಈ ಹಿಂದೆ ಮೇ ತಿಂಗಳಿನಲ್ಲಿ ದಿಡೀರ್ ಆಗಿ ಆರ್‌ಬಿಐ ರೆಪೋ ದರವನ್ನು ಹೆಚ್ಚಳ ಮಾಡಿದಂತೆ, ಈಗಲೂ ದರ ಹೆಚ್ಚಳ ಮಾಡಿಬಹುದು ಎಂಬ ಸುದ್ದಿ ಇತ್ತು.
ಈ ಎಲ್ಲ ಬೆಳವಣಿಗೆಯ ನಡುವೆ ಷೇರು ಮಾರುಕಟ್ಟೆಯು ಗುರುವಾರ ಕುಸಿತ ಕಂಡಿದೆ. ಷೇರುಪೇಟೆಯಲ್ಲಿ ಆರಂಭಿಕ ವಹಿವಾಟಿನಿಂದ ವಹಿವಾಟಿನ ಅಂತ್ಯದವರೆಗೂ ಕರಡಿ ಕುಣಿತವೇ ಕಂಡು ಬಂದಿದೆ. ಸೆನ್ಸೆಕ್ಸ್, ನಿಫ್ಟಿ ಕುಸಿದಿದೆ. ಪ್ರಮುಖವಾಗಿ ಟೆಕ್ ಮಹೀಂದ್ರಾ ಸ್ಟಾಕ್ ಭಾರೀ ಇಳಿಕೆಯಾಗಿದೆ. ಯಾವೆಲ್ಲ ಷೇರುಗಳು ಏರಿದೆ, ಯಾವುದು ಇಳಿದಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....

ವಹಿವಾಟಿನ ಅಂತ್ಯಕ್ಕೆ ಷೇರುಪೇಟೆ ಎಲ್ಲಿದೆ?
ನವೆಂಬರ್ 3ರಂದು ಷೇರು ಮಾರುಕಟ್ಟೆಯು ಭಾರೀ ಇಳಿಕೆಯಾಗಿದೆ. 30 ಷೇರುಗಳ ಬಿಎಸ್‌ಇ ಸೂಚ್ಯಂಕ 69.68 ಅಂಕ ಅಥವಾ ಶೇಕಡ 0.11ರಷ್ಟು ಇಳಿಕೆಯಾಗಿ 60,836.41ಕ್ಕೆ ಸ್ಥಿರವಾಗಿದೆ. ಇನ್ನು ನಿಫ್ಟಿ 30.10 ಅಂಕ ಅಥವಾ ಶೇಕಡ 0.17ರಷ್ಟು ಕುಸಿದು 18,052.70ಕ್ಕೆ ವಹಿವಾಟು ಅಂತ್ಯ ಮಾಡಿದೆ. ಇನ್ನು 1725 ಷೇರುಗಳು ಏರಿಕೆಯಾಗಿದ್ದರೆ, 1630 ಸ್ಟಾಕ್‌ಗಳು ಇಳಿಕೆಯಾಗಿದೆ. ಇನ್ನು 120 ಷೇರುಗಳು ಯಥಾಸ್ಥಿತಿ ಕಾಯ್ದುಕೊಂಡಿದೆ. ಆರಂಭಿಕ ವಹಿವಾಟಿನಲ್ಲಿ 30 ಷೇರುಗಳ ಬಿಎಸ್‌ಇ ಸೂಚ್ಯಂಕ 270.48 ಅಂಕ ಅಥವಾ ಶೇಕಡ 0.44ರಷ್ಟು ಇಳಿಕೆಯಾಗಿ 60635.61ಕ್ಕೆ ವಹಿವಾಟು ಆರಂಭ ಮಾಡಿದೆ. ಇನ್ನು ನಿಫ್ಟಿ 79.00 ಅಂಕ ಅಥವಾ ಶೇಕಡ 0.44ರಷ್ಟು ಕುಸಿದು 18003.80ಕ್ಕೆ ವಹಿವಾಟಿಗೆ ಇಳಿದಿದೆ. ಇನ್ನು 765 ಷೇರುಗಳು ಏರಿಕೆಯಾಗಿದ್ದರೆ, 1119 ಸ್ಟಾಕ್‌ಗಳು ಇಳಿಕೆಯಾಗಿದೆ. ಇನ್ನು 129 ಷೇರುಗಳು ಯಥಾಸ್ಥಿತಿ ಕಾಯ್ದುಕೊಂಡಿದೆ.

ಯಾವೆಲ್ಲ ಸ್ಟಾಕ್‌ಗಳು ಏರಿಕೆ, ಯಾವುದು ಇಳಿಕೆ?
ಷೇರುಪೇಟೆಯಲ್ಲಿ ಎಸ್‌ಬಿಐ ಇನ್ಶೂರೆನ್ಸ್, ಟೈಟಾನ್, ಭಾರ್ತಿ ಏರ್‌ಟೆಲ್, ಹಿಂದೂಸ್ತಾನ್ ಯೂನಿಲಿವರ್, ಇಂಡಸ್‌ಇಂಡ್ ಬ್ಯಾಂಕ್, ಟಾಟಾ ಸ್ಟೀಲ್ಸ್, ಡಾ ರೆಡ್ಡೀಸ್, ಬಜಾಜ್ ಫಿನ್‌ಸರ್ವ್, ಐಸಿಐಸಿಐ ಬ್ಯಾಂಕ್, ರಿಲಯನ್ಸ್, ಏಷ್ಯನ್‌ಪೇಂಟ್ಸ್, ಆಕ್ಸಿಸ್ ಬ್ಯಾಂಕ್, ಮಾರುತಿ, ಎಚ್‌ಸಿಎಲ್ ಟೆಕ್ ಸ್ಟಾಕ್ ಭಾರೀ ಏರಿಕೆಯಾಗಿದೆ. ಈ ನಡುವೆ ನೆಸ್ಲೆ ಇಂಡಿಯಾ, ಐಟಿಸಿ, ಎಲ್‌ಟಿ, ಕೋಟಕ್ ಬ್ಯಾಂಕ್, ಬಜಾಜ್ ಫೈನಾನ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಎನ್‌ಫಾರ್ಮಾ, ಅಲ್ಟ್ರಾಟೆಕ್ ಸಿಮೆಂಟ್, ಎಂ&ಎಂ, ಟಿಸಿಎಸ್, ಎಚ್‌ಡಿಎಫ್‌ಸಿ, ವಿಪ್ರೋ, ಇನ್ಫೋಸಿಸ್, ಎನ್‌ಟಿಪಿಸಿ, ಪವರ್‌ಗ್ರಿಡ್, ಟೆಕ್ ಎಂ ಸ್ಟಾಕ್ ಇಳಿಕೆಯಾಗಿದೆ. ಇನ್ನು ಟೆಕ್ ಮಹೀಂದ್ರಾ ಸ್ಟಾಕ್ ಭಾರೀ ಇಳಿಕೆಯಾಗಿದೆ. ಶೇಕಡ 2.69ರಷ್ಟು ಇಳಿಕೆಯಾಗಿ, 1,052.85 ರೂಪಾಯಿಗೆ ಇಳಿದಿದೆ. ಎಸ್‌ಬಿಐ ಸ್ಟಾಕ್ ಟಾಪ್ ಗೇನರ್ ಆಗಿದೆ. ಶೇಕಡ 1.93ರಷ್ಟು ಏರಿಕೆಯಾಗಿ, 584.90 ರೂಪಾಯಿಗೆ ತಲುಪಿದೆ.

ಎಂಪಿಸಿ ಸಭೆಯ ಬಗ್ಗೆ ಮಾಹಿತಿ
ಮಾನೆಟರಿ ಪಾಲಿಸಿ ಕಮಿಟಿ (ಎಂಪಿಸಿ) ಸಭೆಯಲ್ಲಿ ಒಟ್ಟು ಆರು ಮಂದಿ ಹಾಜರಿದ್ದರು. ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಇಕಾಮಿನಿಕ್ ರಿಸರ್ಚ್, ದೆಹಲಿಯ ಹಿರಿಯ ಸಲಹಗಾರರಾದ ಶಶಾಂಕ ಬಿಂದೆ, ಮುಂಬೈನ ಇಂಧಿರಾ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಡೆವಲಪ್‌ಮೆಂಟ್ ರಿಸರ್ಚ್‌ನ ಪ್ರೋಫೆಸರ್ ಆಶಿಮ ಗೋಯಲ್, ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೆಜ್‌ಮೆಂಟ್‌ನ ಪ್ರೋಫೆಸರ್ ಜಯಂತ್ ಆರ್ ವರ್ಮಾ, ಆರ್‌ಬಿಐ ಡೆಪ್ಯೂಟಿ ಗವರ್ನರ್ ಮೈಕಲ್ ದೇವಬ್ರತ ಪಾತ್ರಾ, ಆರ್‌ಬಿಐ ಡೈರೆಕ್ಟರ್ ರಾಜೀವ್ ರಂಜನ್ ಸಭೆಯಲ್ಲಿ ಹಾಜರಿದ್ದರು. ಪ್ರಮುಖವಾಗಿ ಹಣದುಬ್ಬರದ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿಯನ್ನು ಸಲ್ಲಿಕೆ ಮಾಡುವ ನಿಟ್ಟಿನಲ್ಲಿ ಆರ್‌ಬಿಐ ಈ ಸಭೆಯನ್ನು ನಡೆಸಿದೆ. ಸಾಮಾನ್ಯವಾಗಿ ವರ್ಷದಲ್ಲಿ ಆರು ಬಾರಿ ಮಾತ್ರ ಸಭೆಯನ್ನು ನಡೆಸುತ್ತದೆ. ಈ ಸಂದರ್ಭದಲ್ಲಿ ರೆಪೋ ದರದ ಪರಿಷ್ಕರಣೆ ಮಾಡುತ್ತದೆ. ಈ ಸಭೆಗಳು ಪೂರ್ವ ನಿರ್ಧರಿತವಾಗಿರುತ್ತದೆ. ಆದರೆ ನವೆಂಬರ್ 3ರಂದು (ಇಂದು) ನಡೆದ ಸಭೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಕಾಯ್ದೆ 1934ರ ಸೆಕ್ಷನ್ 45ZN ಅಡಿಯಲ್ಲಿ ಕರೆದಿರುವುದಾಗಿದೆ.