ದೆಹಲಿ ಮೂಲದ ಉದ್ಯಮಿಯೊಬ್ಬ ತನ್ನದೇ ಕೊಲೆಗೆ ಸಂಚು ರೂಪಿಸಿದ್ದ ಘಟನೆ ಪೊಲೀಸರು ಬಯಲು ಮಾಡಿದ್ದಾರೆ. ಆ ಉದ್ಯಮಿಯು ಸಾವನ್ನಪ್ಪಿದ್ದಾನೆ. ಆದರೆ ಆ ಯೋಜನೆ ಗೊತ್ತಾಗಿದೆ. ಅಸಲಿಗೆ ಆಗಿದ್ದೇನೆಂದರೆ, ತಾನು ಸಾವನ್ನಪ್ಪಿದರೆ 1 ಕೋಟಿ ರುಪಾಯಿ ಇನ್ಷೂರೆನ್ಸ್ ಮೊತ್ತ ಕುಟುಂಬದವರಿಗೆ ಬರುತ್ತದೆ. ಅದರಿಂದ ಸಾಲವನ್ನು ತೀರಿಸಬಹುದು ಎಂಬುದು ಲೆಕ್ಕಾಚಾರ ಆಗಿತ್ತು.
ಸಾವಗೀಡಾದ ವ್ಯಕ್ತಿಯ ಹೆಸರು ಗೌರವ್ ಬನ್ಸಾಲ್. ವಯಸ್ಸು 37 ವರ್ಷ. ಆತ ದೆಹಲಿಯ ಐಪಿ ಎಕ್ಸ್ ಟೆನ್ಷನ್ ನಲ್ಲಿ ಪತ್ನಿ ಹಾಗೂ ಮಕ್ಕಳ ಜತೆಗೆ ವಾಸವಿದ್ದ. ಆತನ ಸಾವಿನ ನಂತರ ಇಡೀ ಸಾವಿನ ಪ್ರಕರಣದ ಹಿನ್ನೆಲೆ ಗೊತ್ತಾಗಿದೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ, ದೆಹಲಿ ಹೊರವಲಯದ ರಣ್ ಹೌಲ ಪ್ರದೇಶದಲ್ಲಿ ಗೌರವ್ ಶವ ಜೂನ್ 10ನೇ ತಾರೀಕು ಪತ್ತೆಯಾಗಿದ್ದು, ಶವದ ಕೈ ಕಟ್ಟಿ ಹಾಕಿ, ಮರಕ್ಕೆ ನೇಣು ಹಾಕಲಾಗಿತ್ತು.
ಗೌರವ್ ಪತ್ನಿ ಶಾಲು ಪೊಲೀಸರಲ್ಲಿ ಜೂನ್ 10ರಂದು ದೂರು ದಾಖಲಿಸಿದ್ದರು. ತಾನು ನಡೆಸುತ್ತಿದ್ದ ದಿನಸಿ ಅಂಗಡಿಗೆ ತೆರಳಿದ ಗೌರವ್ ಮನೆಗೆ ವಾಪಸ್ ಆಗಿಲ್ಲ ಎಂದು ತಿಳಿಸಿದ್ದರು. ಇನ್ನು ಆಕೆಯೇ ನೀಡಿದ ಮಾಹಿತಿಯಂತೆ, ಫೆಬ್ರವರಿಯಲ್ಲಿ ಗೌರವ್ ಆರು ಲಕ್ಷ ರುಪಾಯಿ ಸಾಲ ಪಡೆದುಕೊಂಡಿದ್ದ. ಜತೆಗೆ ಖಿನ್ನತೆಗೆ ಚಿಕಿತ್ಸೆಗೆ ಪಡೆಯುತ್ತಿದ್ದ. ಇನ್ನು ಕ್ರೆಡಿಟ್ ಕಾರ್ಡ್ ವಂಚನೆಗೆ ಕೂಡ ಒಳಗಾಗಿದ್ದ.

ಪೊಲೀಸರು ತನಿಖೆ ಆರಂಭಿಸಿದಾಗ ಗೊತ್ತಾಗಿದ್ದೇನೆಂದರೆ, ಅಪ್ರಾಪ್ತ ವ್ಯಕ್ತಿಯ ಜತೆಗೆ ಗೌರವ್ ನಿರಂತರವಾಗಿ ಮಾತುಕತೆ ನಡೆಸಿದ್ದ. ಆ ವ್ಯಕ್ತಿಗೇ ತನ್ನ ಹತ್ಯೆಯ ಸುಪಾರಿ ನೀಡಿದ್ದ. ಜೂನ್ 9ನೇ ತಾರೀಕು ಸಾರ್ವಜನಿಕ ಸಾರಿಗೆಯಲ್ಲಿ ಹೊರವಲಯಕ್ಕೆ ತೆರಳಿದ ಗೌರವ್, ತನ್ನ ಫೋಟೋ ಕಳಿಸಿದ್ದ. ಆರೋಪಿಗಳು ಆತನ ಕೈಯನ್ನು ಕಟ್ಟಿ ಮರಕ್ಕೆ ನೇಣು ಹಾಕಿದ್ದರು.
ಅಂದ ಹಾಗೆ, ಗೌರವ್ ಗೆ ಆ ಅಪ್ರಾಪ್ತ ಫೇಸ್ ಬುಕ್ ಮೂಲಕ ಪರಿಚಯ ಆಗಿದ್ದ. ಇಪ್ಪತ್ತು ದಿನಗಳ ಹಿಂದಷ್ಟೇ ಆ ಅಪ್ರಾಪ್ತನನ್ನು ಫೇಸ್ ಬುಕ್ ಸ್ನೇಹಿತರ ಪಟ್ಟಿಯಿಂದ ಹೊರಹಾಕಿದ್ದ ಗೌರವ್. ಆದರೆ ಫೇಸ್ ಬುಕ್ ಚಾಟ್ ನಲ್ಲಿ ಗೌರವ್ ತನ್ನ ಕೊಲೆಗೆ ಮಾಡಿದ್ದ ಪ್ರಸ್ತಾವದ ಮಾಹಿತಿ ಇತ್ತು. ಆರಂಭದಲ್ಲಿ ಗೌರವ್ ಪ್ರಸ್ತಾವಕ್ಕೆ ಆ ಅಪ್ರಾಪ್ತ ನಿರಾಕರಿಸಿದ್ದು, ಆ ನಂತರ 80 ಸಾವಿರ ಮೊತ್ತಕ್ಕೆ ಒಪ್ಪಿಸಿದ್ದಾನೆ. ಈ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದ್ದು, ಅಪ್ರಾಪ್ತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


Click it and Unblock the Notifications