Elon Musk : ಟ್ವಿಟ್ಟರ್ ಸಿಇಒ ಸ್ಥಾನಕ್ಕೆ ಶೀಘ್ರ ರಾಜೀನಾಮೆ, ಎಲಾನ್ ಮಸ್ಕ್ ಘೋಷಣೆ
ಈ ವರ್ಷದಲ್ಲಿ ವಿವಾದಗಳ ಮೂಲಕವೇ ಸುದ್ದಿಯಾಗುತ್ತಿರುವ ಈ ಹಿಂದೆ ವಿಶ್ವದ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದ ಎಲಾನ್ ಮಸ್ಕ್ ಈಗ ಟ್ವಿಟ್ಟರ್ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ನಾನು ಟ್ವಿಟ್ಟರ್ ಸಿಇಒ ಸ್ಥಾನದಿಂದ ಕೆಳಗಿಳಿಯುತ್ತೇನೆ, ಆ ಸ್ಥಾನಕ್ಕೆ ಬೇರೆಯವರನ್ನು ನೇಮಕಾತಿ ಮಾಡಲಾಗವುದು ಎಂದು ಎಲಾನ್ ಮಸ್ಕ್ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಎಲಾನ್ ಮಸ್ಕ್ ಪೋಸ್ಟ್ ಮಾಡಿದ್ದಾರೆ, "ಟ್ವಿಟ್ಟರ್ ಸಿಇಒ ಸ್ಥಾನಕ್ಕೆ ಯಾರಾದರೂ ಮೂರ್ಖ ಸಿಕ್ಕ ಬಳಿಕ ನಾನು ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಅದಾದ ಬಳಿಕ ನಾನು ಬರೀ ಸಾಫ್ಟ್‌ವೇರ್ ಹಾಗೂ ಸರ್ವರ್ ತಂಡದ ನಿರ್ವಹಣೆಯನ್ನು ಮಾಡುತ್ತೇನೆ," ಎಂದು ಬರೆದುಕೊಂಡಿದ್ದಾರೆ.
ಟ್ವಿಟ್ಟರ್ ಅನ್ನು ತಾನು ಖರೀದಿ ಮಾಡಿದ ಬಳಿಕ ಇದುವೇ ಮೊದಲ ಬಾರಿಗೆ ಎಲಾನ್ ಮಸ್ಕ್ ತಾನು ಮುಖ್ಯಸ್ಥ ಸ್ಥಾನದಿಂದ ಕೆಳಕ್ಕೆ ಇಳಿಯುವ ಬಗ್ಗೆ ಘೋಷಣೆ ಮಾಡಿದ್ದಾರೆ. ಹಲವಾರು ವಿವಾದಗಳ ನಡುವೆ ಟ್ವಿಟ್ಟರ್ ಪೋಲ್ ಒಂದನ್ನು ಹಾಕಿ ಅದರ ನಿರ್ಧಾರಕ್ಕೆ ಅನುಸಾರವಾಗಿ ಮುನ್ನಡೆಯಲು ತೀರ್ಮಾನ ಮಾಡಿದ್ದಾರೆ.

ಏನಿದು ಟ್ವಿಟ್ಟರ್ ಪೋಲ್?
ಎಲಾನ್ ಮಸ್ಕ್ ಇದಕ್ಕಾಗಿ ಟ್ವಿಟ್ಟರ್‌ನಲ್ಲಿ ಪೋಲ್ ಅನ್ನು ಕೂಡಾ ಹಾಕಿದ್ದಾರೆ. "ನಾನು ಟ್ವಿಟ್ಟರ್ ಮುಖ್ಯ ಸ್ಥಾನದಿಂದ ಕೆಳಕ್ಕೆ ಇಳಿಯಬೇಕೇ?, ಈ ನಿರ್ಧಾರಕ್ಕೆ ನಾನು ಶರಣಾಗುತ್ತೇನೆ," ಎಂದು ಪೋಲ್ ಹಾಕಿದ್ದಾರೆ. ಈ ಪೋಲ್‌ಗೆ ಸುಮಾರು 17,502,391 ನೆಟ್ಟಿಗರು ವೋಟ್ ಮಾಡಿದ್ದಾರೆ. ಶೇಕಡ 57.5ರಷ್ಟು ಮಂದಿ ಹೌದು, ನೀವು ಸಿಇಒ ಸ್ಥಾನದಿಂದ ಕೆಳಕ್ಕೆ ಇಳಿಯಬೇಕು ಎಂದು ಹೇಳಿದರೆ, ಶೇಕಡ 42.5ರಷ್ಟು ಮಂದಿ ಬೇಡ ಎಲಾನ್ ಮಸ್ಕ್ ಟ್ವಿಟ್ಟರ್ ಸಿಇಒ ಸ್ಥಾನದಿಂದ ಕೆಳಕ್ಕಿಳಿಯಬೇಕಾಗಿಲ್ಲ ಎಂದು ಹೇಳಿದ್ದಾರೆ.
ಈ ರಾಜೀನಾಮೆ ವದಂತಿಗಳು ಹಲವಾರು ದಿನಗಳಿಂದ ಕೇಳಿಬರುತ್ತಿದೆ. ಈ ಹಿಂದೆ ಎಲಾನ್ ಮಸ್ಕ್ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ಮೇಲೆಯೇ ಅಧಿಕ ಗಮನಹರಿಸುತ್ತಿದ್ದಾರೆ. ಟೆಸ್ಲಾ ಬಗ್ಗೆ ಅಧಿಕ ಗಮನಹರಿಸುತ್ತಿಲ್ಲ ಎಂದು ಟೆಸ್ಲಾ ಇಂಕ್ ಪ್ರಶ್ನೆ ಮಾಡಿತ್ತು. ಈ ಸಂದರ್ಭದಲ್ಲಿ ಎಲಾನ್ ಮಸ್ಕ್ ತನ್ನ ಪ್ಲೇಟ್‌ನಲ್ಲಿ ಹಲವಾರು ಆಹಾರವಿದೆ. ಅಂದರೆ ತನ್ನ ಮೇಲೆ ಹಲವಾರು ಜವಾಬ್ದಾರಿಗಳು ಇದೆ ಎಂದು ತಿಳಿಸಿದ್ದರು.
ವಿಶ್ವದ ಶ್ರೀಮಂತ ಸ್ಥಾನದಿಂದ ಎಲಾನ್ ಮಸ್ಕ್ ಕೆಳಕ್ಕೆ
ಎಲಾನ್ ಮಸ್ಕ್ ಹಲವಾರು ವಿವಾದಗಳ ಬಳಿಕ ಟ್ವಿಟ್ಟರ್ ಅನ್ನು ಖರೀದಿ ಮಾಡಿದ್ದಾರೆ. ಆದರೆ ಬಳಿಕ ಟ್ವಿಟ್ಟರ್‌ನಲ್ಲಿ ಹಾಗೂ ಜಾಗತಿಕವಾಗಿಯೇ ಸರಣಿ ಉದ್ಯೋಗ ಕಡಿತ ನಡೆದಿದೆ. ಹಾಗೆಯೇ ಟ್ವಿಟ್ಟರ್‌ಗೆ ಭಾರೀ ನಷ್ಟ ಉಂಟಾಗಿದೆ. ಇತ್ತೀಚೆಗೆ ವಿಶ್ವದ ಅತೀ ಶ್ರೀಮಂತ ವ್ಯಕ್ತಿ ಎಂಬ ಪಟ್ಟವನ್ನು ಎಲಾನ್ ಮಸ್ಕ್ ಕಳೆದುಕೊಂಡಿದ್ದಾರೆ. ವಿಶ್ವದ ಮೊಲದ ಶ್ರೀಮಂತ ವ್ಯಕ್ತಿ ಸ್ಥಾನಕ್ಕೆ ಎಲ್‌ವಿಎಂಎಚ್ ಸಿಇಒ ಬರ್ನಾರ್ಡ್ ಅರ್ನಾಲ್ಟ್ ಏರಿದ್ದಾರೆ. ಒಂದು ವಾರಗಳ ಹಿಂದೆ ಎರಡನೇ ಸ್ಥಾನಕ್ಕೆ ಇಳಿದಿರುವ ಎಲಾನ್ ಮಸ್ಕ್ ಪ್ರಸ್ತುತವೂ ಕೂಡಾ ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಭಾರತದ ಉದ್ಯಮಿ ಗೌತಮ್ ಅದಾನಿ ಇದ್ದಾರೆ. ಎಂಟನೇ ಸ್ಥಾನದಲ್ಲಿ ಭಾರತದ ಮುಕೇಶ್ ಅಂಬಾನಿ ಇದ್ದಾರೆ.