ಜಾಗತಿಕ ಮಟ್ಟದಲ್ಲಿ ತೈಲ ದರ ಇಳಿಕೆಯಾಗುತ್ತಿದ್ದಂತೆ ಕೇಂದ್ರ ಸರ್ಕಾರ ತನ್ನ ಸಂಪನ್ಮೂಲವನ್ನು ಹೆಚ್ಚಿಸಿಕೊಳ್ಳಲು ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಿಸಿದೆ. ಇದರ ಪರಿಣಾಮ ಪೆಟ್ರೋಲ್, ಡೀಸೆಲ್ ತಲಾ ಲೀಟರ್‌ಗೆ 3 ರುಪಾಯಿ ಹೆಚ್ಚಾಗಲಿದೆ.
ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ತಲಾ 1 ರುಪಾಯಿ ಮತ್ತು ಎರಡು ಇಂಧನಗಳ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು ತಲಾ 2 ರುಪಾಯಿಯಷ್ಟು ಹೆಚ್ಚಿಸಿದ್ದು, ಶನಿವಾರದಿಂದಲೇ ಹೊಸ ದರ ಅನ್ವಯವಾಗಲಿದೆ.
ಸರ್ಕಾರಕ್ಕೆ 39,000 ಕೋಟಿ ರುಪಾಯಿ ಲಾಭ
ಶನಿವಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಮತ್ತು ಸೆಸ್ ಅನ್ನು ಲೀಟರ್‌ಗೆ 3 ರುಪಾಯಿ ಏರಿಕೆ ಮಾಡುವುದರಿಂದ ಗ್ರಾಹಕರಿಗೆ ಯಾವುದೇ ಹೊರಯಾಗುವುದಿಲ್ಲ. ಆದರೆ ಸರ್ಕಾರಕ್ಕೆ ಮಾತ್ರ 39,000 ಕೋಟಿ ಲಾಭ ಆಗಲಿದೆ. 1 ರುಪಾಯಿ ರಸ್ತೆ ಸುಂಕ ಸೇರಿದಂತೆ ಪ್ರತಿ ಲೀಟರ್‌ಗೆ 3 ರುಪಾಯಿ ಹೆಚ್ಚಳವಾಗಿದೆ.
ಸಂಪೂರ್ಣ ಲಾಭವನ್ನು ತಾನೇ ಇಟ್ಟುಕೊಳ್ಳುವ ಕೇಂದ್ರ
ಬೇಲೆ ಏರಿಕೆ ಲಾಭವನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳದೆ ಸಂಪೂರ್ಣ ಲಾಭವನ್ನು ತಾನೇ ಇಟ್ಟುಕೊಳ್ಳಲು ಅನುವು ಮಾಡಿಕೊಳ್ಳುವ ವಿಶೇಷ ಹೆಚ್ಚುವರಿ ಅಬಕಾರಿ ಸುಂಕದ (ಎಸ್‌ಎಇಡಿ) ಅಡಿಯಲ್ಲಿ ಈ ಹೆಚ್ಚಳ ಮಾಡಲಾಗಿದೆ. ಈ ಮೂಲಕ ರಾಜ್ಯಗಳಿಗೆ ಇದರ ಲಾಭ ಸಿಗುವುದಿಲ್ಲ.
ಕಚ್ಚಾ ತೈಲ ದರ ಇಳಿಕೆಯಿಂದಾಗಿ ಈ ಕ್ರಮ ಕೈಗೊಂಡ ಸರ್ಕಾರ
ಕಳೆದ ವಾರ ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ದರವು ಇಳಿಕೆಗೊಂಡಿತು. ಬ್ಯಾರೆಲ್‌ಗೆ 4,800 ರುಪಾಯಿಯಿಂದ 2,500 ರುಪಾಯಿಗೆ ಕಡಿಮೆಯಾಯಿತು. ಸೌದ ಅರೇಬಿಯಾ ಮತ್ತು ರಷ್ಯಾ ನಡುವಿನ ತೈಲ ಸಮರವೇ ಈ ದರ ಇಳಿತಕ್ಕೆ ನೇರ ಕಾರಣ. ಹೀಗಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ.
80 ಪರ್ಸೆಂಟ್ ತೈಲವನ್ನು ಆಮದು ಮಾಡಿಕೊಳ್ಳುವ ಭಾರತ
ಭಾರತವು ವಿಶ್ವದಲ್ಲಿ ಅತಿ ಹೆಚ್ಚು ತೈಲವನ್ನು ಬಳಸುವ ರಾಷ್ಟ್ರಗಳಲ್ಲಿ ಒಂದಾಗಿದ್ದು, ತನ್ನ ತೈಲ ಅಗತ್ಯತೆಯ 80 ಪರ್ಸೆಂಟ್ ರಷ್ಟು ಆಮದು ಮಾಡಿಕೊಳ್ಳುತ್ತದೆ. ಈ ವೇಳೆ ತೈಲ ಕುಸಿತದಿಂದಾಗಿ ಸರ್ಕಾರವು ತೆರಿಗೆ ಮತ್ತು ತೆರಿಗೆ ರಹಿತದ ಕೊರತೆಯನ್ನು ನೀಗಿಸಲು ಅಬಕಾರಿ ಸುಂಕವನ್ನು ಹೆಚ್ಚಿಸಲು ಈ ಕ್ರಮವನ್ನು ಸರ್ಕಾರ ಕೈಗೊಂಡಿದೆ.


Click it and Unblock the Notifications