ಭಾರತದ ಆರ್ಥಿಕತೆಗೆ ಪುಟಿದೇಳುವ ಸಾಮರ್ಥ್ಯವಿದೆ : ಮೋದಿ
ದೇಶದಲ್ಲಿ ಸದ್ಯ ಮಂದಗತಿಯ ಆರ್ಥಿಕತೆಯಿದ್ದರೂ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಕುಂಠಿತ ಪ್ರಗತಿಯ ಸಂಕಷ್ಟಗಳಿಂದ ಪುಟಿದೇಳುವ ಸಾಮರ್ಥ್ಯವನ್ನು ದೇಶಿ ಆರ್ಥಿಕತೆ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೆಹಲಿಯಲ್ಲಿ ಶುಕ್ರವಾರ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ(ಅಸೋಚಾಂ) ಸಮಾರಂಭದಲ್ಲಿ ಮಾತನಾಡಿದ ಮೋದಿ ''ಮಂದಗತಿಯ ಆರ್ಥಿಕತೆಯಿಂದ ಸದ್ಯದಲ್ಲೇ ಹೊರಬರಲಿರುವ ಆರ್ಥಿಕತೆಯು ಗರಿಷ್ಠ ವೃದ್ಧಿ ದರದ ಹಾದಿಗೆ ಮರಳಲಿದೆ. ಜಿಡಿಪಿ ದರ ಏರಿಕೆ ದಾಖಲಿಸಲು ಕಾರ್ಪೋರೇಟ್‌ಗಳು ಬಂಡವಾಳ ಹೂಡಿಕೆ ಹೆಚ್ಚಿಸುವ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

'ದೇಶದಲ್ಲಿ ಎಲ್ಲೆಡೆ ಆರ್ಥಿಕ ಪ್ರಗತಿ ಕುರಿತು ಚರ್ಚೆ ನಡೆಯುತ್ತಿದೆ. ಆರ್ಥಿಕತೆ ಕುರಿತು ಟೀಕೆ-ಟಿಪ್ಪಣಿಗಳಿಗೆ ನಾನು ಸವಾಲು ಒಡ್ಡಲು ಇಲ್ಲಿ ಇಚ್ಚಿಸುವುದಿಲ್ಲ. ಇಂತಹ ಸಮಾರಂಭಗಳಲ್ಲಿ ಸಕಾರಾತ್ಮಕ ಚಿಂತನೆಗಳು ಹೊರಹೊಮ್ಮಲಿ ಎನ್ನುವುದು ನನ್ನ ಆಶಯವಾಗಿದೆ ಎಂದಿದ್ದಾರೆ.
ಹಿಂದಿನ ಯುಪಿಎ ಸರ್ಕಾರದಲ್ಲೂ ಅಭಿವೃದ್ಧಿ ದರವು 3.6 ಪರ್ಸೆಂಟ್‌ಗೆ ಕುಸಿದಿತ್ತು. ಆರ್ಥಿಕ ಪ್ರಗತಿಗೆ ಸಂಬಂಧಿಸಿದಂತೆ ಈ ಹಿಂದೆಯೂ ಸಾಕಷ್ಟು ಏರಿಳಿತಗಳು ಘಟಿಸಿವೆ. ಇಂತಹ ಸಂದರ್ಭಗಳಿಂದ ಹೊರ ಬರುವ ಸಾಮರ್ಥ್ಯ ದೇಶಕ್ಕಿದೆ ಎಂದು ಆರ್ಥಿಕತೆಯು ಗರಿಷ್ಠ ಹಾದಿಗೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.