ಇನ್ಫೋಸಿಸ್ ಸಿಇಒ ವೇತನ ಶೇ.88 ಹೆಚ್ಚಳ, ವಾರ್ಷಿಕ ಗಳಿಕೆಯೆಷ್ಟು?
ಪ್ರಮುಖ ಸಾಫ್ಟ್‌ವೇರ್ ಸಂಸ್ಥೆಯಾದ ಇನ್ಫೋಸಿಸ್ ತನ್ನ ಸಿಇಒ ಸಲೀಲ್ ಪರೇಖ್ ಸಂಬಳವನ್ನು ವಾರ್ಷಿಕವಾಗಿ ಶೇಕಡ 88ರಷ್ಟು ಏರಿಕೆ ಮಾಡಲಾಗಿದೆ. ಇದರಿಂದಾಗಿ ಸಲೀಲ್ ಪರೇಖ್ ವಾರ್ಷಿಕ ಆದಾಯ ರೂ 79.75 ಕೋಟಿಗೆ ಏರಿಕೆಯಾಗಿದೆ. ಈ ಹಿನ್ನೆಲೆಯಿಂದಾಗಿ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸಿಇಒಗಳಲ್ಲಿ ಸಲೀಲ್ ಪರೇಖ್ ಕೂಡಾ ಒಬ್ಬರಾಗಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಇನ್ಫೋಸಿಸ್‌ನ ಉದ್ಯಮ-ಪ್ರಮುಖ ಬೆಳವಣಿಗೆಯನ್ನು ಕಂಡಿರುವ ಹಿನ್ನೆಲೆಯಿಂದಾಗಿ ಸಿಇಒಗೆ ಬೃಹತ್ ವೇತನ ಹೆಚ್ಚಳವನ್ನು ಮಾಡಲಾಗಿದೆ ಎಂದು ಸಂಸ್ಥೆಯು ಸಮರ್ಥನೆ ಮಾಡಿಕೊಂಡಿದೆ. ಈ ರೀತಿಯಾಗಿ ಅಗಾಧ ಪ್ರಮಾಣದ ಸಂಬಳ ಹೆಚ್ಚಳ ತೀರಾ ಅಸಾಮಾನ್ಯವಾಗಿದೆ. ಕಂಪನಿಯು ಗುರುವಾರ ಬಿಡುಗಡೆಯಾದ ತನ್ನ ವಾರ್ಷಿಕ ವರದಿಯಲ್ಲಿ ಈ ಬಗ್ಗೆ ದೀರ್ಘ ವಿವರಣೆಯನ್ನು ಕೂಡಾ ನೀಡಿದೆ.
ಟಾಪ್ 10 ಕಂಪನಿಗಳ ಪೈಕಿ 5 ಕಂಪನಿ ಮೌಲ್ಯ 1.78 ಲಕ್ಷ ಕೋಟಿ ಏರಿಕೆ
ಇತ್ತೀಚೆಗೆ ಸಂಸ್ಥೆಯು ಜುಲೈ 1, 2022 ರಿಂದ ಮಾರ್ಚ್ 31, 2027 ರವರೆಗೆ ಇನ್ನೂ ಐದು ವರ್ಷಗಳ ಕಾಲ ಸಲೀಲ್ ಪರೇಖ್ ಅವರನ್ನು ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಮರುನೇಮಕಗೊಳಿಸಿದೆ. ಇದಾದ ದಿನಗಳ ನಂತರ ಸಂಬಳ ಘೋಷಣೆಯಾಗಿದೆ. ಕಂಪನಿಯು ಒಟ್ಟು ಷೇರುದಾರರ ಆದಾಯ, ಮಾರುಕಟ್ಟೆ ಕ್ಯಾಪ್ ಹೆಚ್ಚಳ ಮತ್ತು ಬೆಳವಣಿಗೆಯಂತಹ ಪ್ರಮುಖ ಅಂಶಗಳನ್ನು ಪರಿಗಣಿಸಿ ಮರುನೇಮಕ ಹಾಗೂ ಸಂಬಳ ಹೆಚ್ಚಳ ಮಾಡಿದೆ ಎಂದು ಕಾರಣ ನೀಡಿದೆ.

ಸಲೀಲ್ ಪರೇಖ್ ನಾಯಕತ್ವದಲ್ಲಿ ಎಷ್ಟು ಆದಾಯ ಏರಿಕೆ?
"ಸಲೀಲ್ ಅವರ ನಾಯಕತ್ವ 1 ರ ಅಡಿಯಲ್ಲಿ, ಕಂಪನಿಯ ಒಟ್ಟು ಷೇರುದಾರರ ಆದಾಯವು (ಟಿಎಸ್ಆರ್) ಪ್ರಭಾವಶಾಲಿ ಆಗಿದೆ. ಷೇರುದಾರರ ಆದಾಯವು ಶೇಕಡ 314 ಆಗಿದೆ. ಸಲೀಲ್ ನೇತೃತ್ವದಲ್ಲಿ ಸಂಸ್ಥೆಯ ಆದಾಯ ತೀವ್ರ ಹೆಚ್ಚಳವಾಗಿದೆ. ವೇಗವಾಗಿ ಹೆಚ್ಚಿದೆ. 2018 ರ ಹಣಕಾಸು ವರ್ಷ 70,522 ಕೋಟಿ ರೂಪಾಯಿಯಿಂದ 2022 ರ ಹಣಕಾಸು ವರ್ಷಕ್ಕೆ 1,21,641 ರೂಪಾಯಿಗೆ ಏರಿಕೆಯಾಗಿದೆ. ಲಾಭವೂ ಕೂಡಾ ಹೆಚ್ಚಳವಾಗಿದೆ. ಲಾಭವು 16,029 ಕೋಟಿ ರೂಪಾಯಿಯಿಂದ 22,110 ಕೋಟಿಗೆ ಏರಿಕೆಯಾಗಿದೆ," ಎಂದು ವರದಿ ಹೇಳಿದೆ. ಇದಲ್ಲದೆ, ಕಂಪನಿಯು ಡಿಜಿಟಲ್ ಆದಾಯದ ಪಾಲು ಕೂಡಾ ಏರಿಕೆಯಾಗಿದೆ. ಶೇಕಡ 25.5ರಿಂದ ಶೇಕಡ 57.0 ದ್ವಿಗುಣಗೊಂಡಿದೆ. ಈಗ ಸಂಸ್ಥೆಯು ಪ್ರಮುಖ ಡಿಜಿಟಲ್ ಕಂಪನಿ ಎಂದು ಪರಿಗಣಿಸಲಾಗಿದೆ.

ಸಲೀಲ್ ವೇತನ ಏರಿಕೆಗೆ ಕಾರಣಗಳು ಏನು?
ಇನ್ನು ಸಲೀಲ್ ವೇತನ ಹೆಚ್ಚಳಕ್ಕೆ ಕಾರಣವನ್ನು ಕೂಡಾ ಸಂಸ್ಥೆಯು ಪ್ರಸ್ತಾಪ ಮಾಡಿದೆ. "ಸಲೀಲ್ ನೇಮಕಾತಿ ಹೊಂದಿ ಈವರೆಗೂ ಉತ್ತಮ ಕಾರ್ಯನಿರ್ವಹಣೆ ಮಾಡಿದ್ದಾರೆ. ಅವರು ನೇಮಕಗೊಂಡ ಬಳಿಕ ಸಂಸ್ಥೆಯು ಬೆಳವಣಿಗೆ ಹೊಂದಿದೆ. ಅಷ್ಟಕ್ಕೂ ಅವರು ಮೊದಲ ಬಾರಿಗೆ ಸಿಇಒ ಮತ್ತು ಎಂಡಿ ಆಗುತ್ತಿಲ್ಲ ಎಂದು ಪರಿಗಣಿಸಿ ವೇತನವನ್ನು ಪರಿಷ್ಕರಣೆ ಮಾಡಲಾಗಿದೆ. ಜಾಗತಿಕವಾಗಿ ಪಟ್ಟಿ ಮಾಡಲಾದ ಘಟಕವಾದ ಇನ್ಫೋಸಿಸ್‌ನ ಸಿಇಒ ಆಗಿ ಉತ್ತಮ ಕಾರ್ಯನಿರ್ವಹಣೆ ಮಾಡಿದ್ದಾರೆ. ಸಲೀಲ್ ಅಧಿಕಾರಾವಧಿಯಲ್ಲಿ ಒಟ್ಟು ಉದ್ಯೋಗಿಗಳ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ. 2,04,107 ರಿಂದ 3,14,015 ಕ್ಕೆ ಏರಿಕೆಯಾಗಿದೆ. ಜಾಗತಿಕವಾಗಿ ಸಂಸ್ಥೆಯು ಸ್ಪರ್ಧಿಸುತ್ತಿದೆ. ವಿಶೇಷವಾಗಿ ಉತ್ತರ ಅಮೇರಿಕಾ ಮತ್ತು ಯುರೋಪ್‌ನಿಂದ ಸುಮಾರು ಶೇಕಡ 87ರಷ್ಟು ಆದಾಯ ಬರುತ್ತಿದೆ. ಈ ಎಲ್ಲಾ ಮಾನದಂಡವನ್ನು ಗಮನದಲ್ಲಿಟ್ಟುಕೊಂಡು ಸಲೀಲ್ ವೇತನವನ್ನು ಹೆಚ್ಚಳ ಮಾಡಲಾಗಿದೆ," ಎಂದು ಸಂಸ್ಥೆಯು ಸಮರ್ಥನೆ ಮಾಡಿಕೊಂಡಿದೆ.

ಸಲೀಲ್ ಪರೇಖ್ ನಾಯಕತ್ವದಲ್ಲಿ ಇನ್ಫೋಸಿಸ್
ಪ್ರಸ್ತುತ 58 ವರ್ಷ ವಯಸ್ಸಿನ ಪರೇಖ್ ಅವರು ಜನವರಿ 2018 ರಿಂದ ಇನ್ಫೋಸಿಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಸಂಸ್ಥೆಗೆ ಪ್ರಕ್ಷುಬ್ಧ ಸಮಯದಲ್ಲಿ ಅಧಿಕಾರ ವಹಿಸಿಕೊಂಡರು. ಸಹ-ಸಂಸ್ಥಾಪಕ ಮತ್ತು ಅಧ್ಯಕ್ಷ ನಂದನ್ ನಿಲೇಕಣಿ ಅವರು ಇನ್ಫೋಸಿಸ್ ಅನ್ನು ಮುನ್ನಡೆಸಲು ಸಲೀಲ್ ಪರೇಖ್ ಸೂಕ್ತ ವ್ಯಕ್ತಿ ಎಂದು ಆ ಸಂದರ್ಭದಲ್ಲಿ ಬಣ್ಣಿಸಿದ್ದರು. ನಾಲ್ಕು ವರ್ಷಗಳ ನಂತರ, ಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ ಮತ್ತು ಆಗಿನ ಸಿಇಒ ವಿಶಾಲ್ ಸಿಕ್ಕಾ ನಡುವಿನ ಘರ್ಷಣೆಗಳಿಂದಾಗಿ ಸಂಸ್ಥೆಯಲ್ಲಿ ಅಸ್ಥಿರತೆ ಕಂಡು ಬಂದಿದೆ. ಆದರೆ ಬಳಿಕ ಸಲೀಲ್ ಪರೇಖ್ ನಾಯಕತ್ವದಲ್ಲಿ ಮತ್ತೆ ಬೆಳವಣಿಗೆ ಕಂಡಿದೆ.

ನಿಲೇಕಣಿ-ಪರೇಖ್ ಜೊತೆ
ನಿಲೇಕಣಿಯವರ ಸಂಪೂರ್ಣ ಬೆಂಬಲವು ಪಾರೇಖ್‌ಗೆ ಸಹಾಯ ಮಾಡಿದೆ. ನಿಲೇಕಣಿ ಈ ಹಿಂದೆ ಪರೇಖ್‌ರನ್ನು ಸಾರ್ವಜನಿಕವಾಗಿ ಶ್ಲಾಘಿಸಿದ್ದಾರೆ. ಇನ್ಫೋಸಿಸ್ ಚೇತರಿಕೆಗೆ "ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ" ಎಂದು ಪ್ರಶಂಸಿಸಿದ್ದಾರೆ. ಅಧಿಕಾರ ವಹಿಸಿಕೊಂಡ ನಂತರ ವಿಶ್ಲೇಷಕರೊಂದಿಗಿನ ತನ್ನ ಮೊದಲ ಸಭೆಯಲ್ಲಿ, ಇನ್ಫೋಸಿಸ್ ಅನ್ನು ಪರಿವರ್ತಿಸಲು ತನಗೆ 3 ವರ್ಷಗಳ ಅಗತ್ಯವಿದೆ ಎಂದು ಪಾರೇಖ್ ಹೇಳಿದರು. 2019 ರ ಆರ್ಥಿಕ ವರ್ಷದಲ್ಲಿ ಮೊದಲ ವರ್ಷವು ಸ್ಥಿರಗೊಳ್ಳುವುದು, ಎರಡನೇ ವರ್ಷ ಆವೇಗವನ್ನು ನಿರ್ಮಿಸುವುದು ಮತ್ತು ಮೂರನೆಯ ವರ್ಷ ವೇಗ ಹೆಚ್ಚಳಕ್ಕೆ ಎಂದು ಹೇಳಿದ್ದರು. ಇನ್ನು ಕೊರೊನಾ ಸಂದರ್ಭ ಸಂಸ್ಥೆಯ ಕೈಹಿಡಿಯಿತು. ಬಹುಪಾಲು ಉದ್ಯೋಗಿಗಳು ಮನೆಯಿಂದ ಕೆಲಸ ಮಾಡಲು ಪ್ರಾರಂಭಿಸಿದರು. ಡಿಜಿಟಲ್ ವ್ಯವಸ್ಥೆಯ ಮೂಲಕ ಸಭೆಗಳು ನಡೆದವು. ಇದು 2021-22 ರ ಆರ್ಥಿಕ ವರ್ಷದಲ್ಲಿ ಶೇಕಡ 19.7 ಬೆಳವಣಿಗೆ ಕಂಡಿದೆ.