ಜಿಯೋ ಭವಿಷ್ಯದ ಸವಾಲನ್ನು ಎದುರಿಸಲು ಪೇಟಿಎಂ ರಣತಂತ್ರ
ಇತ್ತೀಚೆಗಷ್ಟೇ ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಇಂಡಸ್ಟ್ರೀಸ್ ಸಮೂಹದ ಜಿಯೋ ಸಂಸ್ಥೆ ಫೇಸ್‌ಬುಕ್‌ನೊಂದಿಗೆ ಕೈ ಜೋಡಿಸಿದ್ದು ನಿಮಗೆಲ್ಲಾ ಗೊತ್ತೇ ಇದೆ. ರಿಲಯನ್ಸ್ ಜಿಯೋದಲ್ಲಿ ಹೂಡಿಕೆ ಮಾಡುವ ಮೂಲಕ ಫೇಸ್‌ಬುಕ್ ಇದೀಗ ಜಿಯೋದ ಅತೀ ದೊಡ್ಡ ಷೇರುದಾರನಾಗಿ ಮಾರ್ಪಟ್ಟಿದೆ.
ಜಿಯೋದೊಂದಿಗೆ ಫೇಸ್‌ಬುಕ್ ಒಪ್ಪಂದ ಮಾಡಿಕೊಳ್ಳಲು ಪ್ರಮುಖ ಕಾರಣ ಅಂದರೆ ಜಿಯೋದ ಸುಮಾರು 38.8 ಕೋಟಿ ಗ್ರಾಹಕರ ಬೃಹತ್ ಪಡೆಯ ಲಾಭ ಇದೀಗ ಫೇಸ್‌ಬುಕ್‌ಗೆ ದೊರೆಯಲಿದೆ. ಇಷ್ಟಲ್ಲದೆ ಭಾರತದಲ್ಲಿರುವ ಸುಮಾರು 6 ಕೋಟಿಗೂ ಅಧಿಕ ಸಣ್ಣ ಉದ್ಯಮಗಳಿಗೆ, ರಿಟೇಲ್ ವ್ಯಾಪಾರಿಗಳಿಗೆ ಡಿಜಿಟಲ್ ಅವಕಾಶಗಳನ್ನು ಸೃಷ್ಟಿಸಲು ಜಿಯೋ-ಫೇಸ್‌ಬುಕ್ ನಡುವಿನ ಒಪ್ಪಂದ ಸಹಾಯಕಾರಿಯಾಗಲಿದೆ.
ಇದಕ್ಕೆ ಪ್ರತಿಯಾಗಿ ಪೇಟಿಯಂ ಭವಿಷ್ಯದ ಜಿಯೋ ಸವಾಲುಗಳನ್ನು ಎದುರಿಸಲು ಹೊಸ ಕ್ರಮಗಳನ್ನು ಅನಾವರಣಗೊಳಿಸಿದೆ. ದೇಶದ ಲಕ್ಷಾಂತರ ವ್ಯಾಪಾರಿಗಳಿಗೆ ತನ್ನ ಕೊಡುಗೆಯನ್ನು ತಲುಪಿಸುವ ಮೂಲಕ ರಿಟೇಲ್ ಮಾರುಕಟ್ಟೆಗೆ ಗಾಳ ಹಾಕಲು ಹೊರಟಿದೆ.
ಚಿಲ್ಲರೆ ಅಂಗಡಿಗಳನ್ನು ಸಂಪರ್ಕ ಸಾಧಿಸುವ ಮೂಲಕ ಅವುಗಳಿಗೆ ಅನೇಕ ಪ್ರಯೋಜನಗಳನ್ನು ನೀಡಲಿದೆ. ಕೋವಿಡ್-19 ಸಾಂಕ್ರಾಮಿಕ ಸೋಂಕಿನ ಈ ಸಮಯದಲ್ಲಿ ಪೇಟಿಎಂ ಆಲ್ ಇನ್ ಒನ್ ಕ್ಯೂಆರ್ ಮೂಲಕ ಡಿಜಿಟಲ್ ಪಾವತಿಗಳನ್ನು ಅಳವಡಿಸಿಕೊಳ್ಳಲು ಕಿರಾನಾ ಅಂಗಡಿಗಳಿಗೆ ಸಹಾಯ ಮಾಡಲು 100 ಕೋಟಿ ರುಪಾಯಿಯ ಯೋಜನೆ ಹಮ್ಮಿಕೊಂಡಿದೆ.
ಫೇಸ್‌ಬುಕ್‌ನೊಂದಿಗೆ ಜಿಯೊ ಜೊತೆಯಾದ ಪರಿಣಾಮ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಜಿಯೋಮಾರ್ಟ್ ಆರಂಭವು ಪೇಟಿಎಂಗೆ ಅತಿದೊಡ್ಡ ಭಯವನ್ನುಂಟುಮಾಡಿದೆ. ಹೀಗಾಗಿ ಹೊಸ ಕಾರ್ಯಕ್ರಮದಡಿಯಲ್ಲಿ ಪೇಟಿಎಂ ಎಲ್ಲಾ ವ್ಯಾಪಾರಿ ಪಾಲುದಾರರು Paytm Wallet, Rupay Cards, ಮತ್ತು ಎಲ್ಲಾ UPI ಆಧಾರಿತ ಪಾವತಿ ಅಪ್ಲಿಕೇಶನ್‌ಗಳಿಂದ ಪಾವತಿಗಳನ್ನು ಸ್ವೀಕರಿಸಿದರೆ ಪ್ರತಿಫಲ ಅಂಕಗಳನ್ನು(ರಿವಾರ್ಡ್ ಪಾಯಿಂಟ್ಸ್) ಗಳಿಸಲು ಅರ್ಹರಾಗಿರುತ್ತಾರೆ.
ಜಿಯೋಮಾರ್ಟ್ ದೇಶದಲ್ಲಿ 400 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಪ್ಲಾಟ್‌ಫಾರ್ಮ್ ವಾಟ್ಸಾಪ್ ಮೂಲಕ ಆರ್ಡರ್ ತೆಗೆದುಕೊಳ್ಳುವ ಮೂಲಕ ಶೀಘ್ರವಾಗಿ ಕಾರ್ಯಾಚರಣೆಯನ್ನು ಹೆಚ್ಚಿಸಿದೆ. ಜಿಯೋಮಾರ್ಟ್ ಖಂಡಿತವಾಗಿಯೂ ದೇಶದಲ್ಲಿ ರಿಟೇಲ್ ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿದರೆ, ಪೇಟಿಎಂಗೆ ದೊಡ್ಡ ಸವಾಲು ಎದುರಾಗಲಿದೆ.