ಏಷ್ಯಾದ ನಂಬರ್ 1 ಶ್ರೀಮಂತ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಏಷ್ಯಾದಲ್ಲಿ ಅಷ್ಟೇ ಅಲ್ಲ ಇದೀಗ ಜಗತ್ತಿನ ದೈತ್ಯ ಕಂಪನಿಗಳ ಸಾಲಿಗೆ ಸೇರಿಕೊಂಡಿದೆ. 10 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯವನ್ನು ಸಮೀಪಿಸಿರುವ ರಿಲಿಯನ್ಸ್ ಇಂಡಸ್ಟ್ರೀಸ್ ಇದೀಗ ಜಗತ್ತಿನ ಬೃಹತ್ ಇಂಧನ ಕಂಪನಿಗಳ ಸಾಲಿನಲ್ಲಿ 6ನೇ ಸ್ಥಾನಕ್ಕೇರಿದೆ.
ರಿಲಯನ್ಸ್ ಇಂಡಸ್ಟ್ರಿಯ ಷೇರುಗಳು ಕಳೆದ 3 ದಿನಗಳಲ್ಲಿ ಏರುತ್ತಲೇ ಸಾಗಿವೆ. 2019ನೇ ಇಸವಿಯಲ್ಲಿ ಕಂಪನಿಯ ಷೇರು ಮೌಲ್ಯದಲ್ಲಿ ಶೇಕಡಾ 36ರಷ್ಟು ಏರಿಕೆಯಾಗಿದೆ.

ಜಿಯೋ ಕೂಡ ಡೇಟಾ ಹಾಗೂ ದರ ಏರಿಕೆ ಮಾಡುವುದಾಗಿ ಘೋಷಿಸಿದ ಬಳಿಕ ರಿಲಯನ್ಸ್ ಕಂಪನಿಯ ಷೇರುಗಳು ಶೇಕಡಾ 6ರಷ್ಟು ಏರಿಕೆಗೊಂಡು ಉತ್ತಮ ವಹಿವಾಟು ನಡೆಸಿವೆ. ಆದರೆ ಗುರುವಾರ ಸ್ವಲ್ಪ ಮಟ್ಟಿಗೆ ಶೇಕಡಾ 0.46ರಷ್ಟು ಕುಸಿತ ಕಂಡಿದ್ದು ಬಿಟ್ಟರೆ ರಿಲಯನ್ಸ್ ಒಟ್ಟಾರೆ ಮಾರುಕಟ್ಟೆ ಮೌಲ್ಯ 10 ಲಕ್ಷ ಸಮೀಪದಲ್ಲಿದೆ.
ಬುಧವಾರ 10 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯವನ್ನ ಸಂಪಾದಿಸಿದ ರಿಲಯನ್ಸ್ ವಿಶ್ವದ ದೈತ್ಯ ಇಂಧನ ಕಂಪನಿಗಳಲ್ಲಿ ಒಂದಾದ ಬ್ರಿಟಿಷ್ ಪೆಟ್ರೋಲಿಯಂ (ಬಿಪಿ ಪಿಎಎಲ್‌ಸಿ)ಯನ್ನು ಹಿಂದಿಕ್ಕಿದೆ. ಆ ಮೂಲಕ ವಿಶ್ವದ 6ನೇ ಅತಿದೊಡ್ಡ ಇಂಧನ ಕಂಪನಿಯಾಗಿ ಹೊರಹೊಮ್ಮಿದೆ.
ಒಟ್ಟಾರೆ 58 ಬಿಲಿಯನ್ ಅಮೆರಿಕನ್ ಡಾಲರ್ (ಪ್ರಸ್ತುತ ಭಾರತದ ರುಪಾಯಿಗಳಲ್ಲಿ 1 ಬಿಲಿಯನ್ ಅಮೆರಿಕನ್ ಡಾಲರ್ ಗೆ 7,176 ಕೋಟಿ 40 ಲಕ್ಷ) ಒಡೆಯನಾಗಿರುವ ಮುಖೇಶ್ ಅಂಬಾನಿ ಏಷ್ಯಾದ ನಂಬರ್ 1 ಶ್ರೀಮಂತ. 2ನೇ ಸ್ಥಾನದಲ್ಲಿ ಅಲಿಬಾಬಾ ಗ್ರೂಪ್ ಸಂಸ್ಥಾಪಕ ಜಾಕ್ ಮಾ ಇದ್ದು ಅವರ ಆಸ್ತಿ 42.8 ಬಿಲಿಯನ್ ಅಮೆರಿಕನ್ ಡಾಲರ್.
ವಿಶ್ವದ ಟಾಪ್ ಶ್ರೀಮಂತರಲ್ಲಿ ಅಂಬಾನಿ 12ನೇ ಸ್ಥಾನ ಪಡೆದಿದ್ದು, ಮೊದಲ ಸ್ಥಾನದಲ್ಲಿ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್‌ಗೇಟ್ಸ್ ಇದ್ದಾರೆ.


Click it and Unblock the Notifications