For Quick Alerts
ALLOW NOTIFICATIONS  
For Daily Alerts

ಮಾರುತಿ ಕಾರು ಹುಟ್ಟಿಗೆ ಕಾರಣನಾದ ವ್ಯಕ್ತಿಯ ಆಸೆ ಬದುಕಿದ್ದಾಗ ಈಡೇರಲಿಲ್ಲ

By ಅನಿಲ್ ಆಚಾರ್
|

ಭಾರತ ಅಷ್ಟೇ ಅಲ್ಲ, ವಿಶ್ವದಲ್ಲೇ ಒಂದು ಸ್ಥಾನ ಪಡೆದಿರುವ ಈ ಕಾರು ಕಂಪೆನಿಯ ಹೆಸರು ಮಾರುತಿ ಸುಝುಕಿ ಇಂಡಿಯಾ ಲಿಮಿಟೆಡ್ (ಎಂಎಸ್ ಐಎಲ್). ಆದರೆ ಈ ಕಾರು ಕಂಪೆನಿಯ ಕನಸನ್ನು ಆರಂಭದಲ್ಲಿ ಕಂಡ ವ್ಯಕ್ತಿಯ ಬಗ್ಗೆ ನೀವು ತಿಳಿದರೆ, ಆತನ ಕನಸುಗಳು, ವ್ಯಕ್ತಿತ್ವದ ಬಗ್ಗೆ ತಿಳಿದರೆ ಅಚ್ಚರಿಯಾಗುತ್ತೀರಿ. ಎಲ್ಲಿಂದ- ಹೇಗೆ ಶುರುವಾದ ಕನಸು ಈಗ ಎಲ್ಲಿಗೆ ಬಂದು ನಿಂತಿದೆ ಗೊತ್ತಾ?

ಆ ವ್ಯಕ್ತಿಯ ಹೆಸರು ಸಂಜಯ್ ಗಾಂಧಿ. ಹುಟ್ಟಿದ್ದು 1946ರಲ್ಲಿ. ತಾಯಿ ಇಂದಿರಾ- ತಂದೆ ಫಿರೋಜ್ ಗಾಂಧಿ ಹಾಗೂ ತಾತ ಜವಾಹರ್ ಲಾಲ್. ಇಡೀ ಭಾರತಕ್ಕಷ್ಟೇ ಅಲ್ಲ್, ಜಗತ್ತಿನ ಹಲವು ದೇಶಗಳಿಗೆ ಪರಿಚಯವಿದ್ದ ರಾಜಕೀಯ ಕುಟುಂಬದ ಹಿನ್ನೆಲೆಯಿದ್ದ ವ್ಯಕ್ತಿ ಆತ. ಆದರೆ ಶಾಲೆಯ ದಿನಗಳಿಂದಲೂ ಸಂಜಯ್ ಒಬ್ಬಂಟಿ, ಸ್ನೇಹಿತರು ಇರಲಿಲ್ಲ, ಯಾರ ಜತೆಗೆ ಅಷ್ಟಾಗಿ ಮಾತನಾಡುತ್ತಿರಲಿಲ್ಲ.

ಕಾರುಗಳೆಂದರೆ ಕಡು ವ್ಯಾಮೋಹ
 

ಕಾರುಗಳೆಂದರೆ ಕಡು ವ್ಯಾಮೋಹ

ಕೆಲವು ವರದಿಗಳನ್ನೇ ನಂಬುವುದಾದರೆ, ಆತನಿಗೆ ಕಾರುಗಳೆಂದರೆ ಕಡು ವ್ಯಾಮೋಹ. ಲಾಕ್ ಮಾಡದೆ ನಿಲ್ಲಿಸಿದ್ದ ಕಾರನ್ನು ಓಡಿಸಿಬಂದು, ಮತ್ತೆ ಅಲ್ಲೇ ನಿಲ್ಲಿಸುತ್ತಿದ್ದ ವಿಚಿತ್ರ ಅಭ್ಯಾಸವೊಂದು ಸಂಜಯ್ ಗೆ ಇತ್ತು. ಅದು ಆತನ ಪಾಲಿನ ಸಂತೋಷ. ಆದರೆ ಸಂಜಯ್ ಗೆ ಕಾಲೇಜಿನಲ್ಲಿ ಡಿಗ್ರಿ ಕೂಡ ಪೂರ್ತಿ ಮಾಡಲಿಕ್ಕೆ ಆಗಲಿಲ್ಲ. ಆದರೆ ಪ್ರಧಾನಿಗಳ ಮನೆಯಲ್ಲಿ ಹುಟ್ಟಿದ ಹುಡುಗನಿಗೆ ಜಗದ್ವಿಖ್ಯಾತ ಕಾರು ಕಂಪೆನಿ ರೋಲ್ಸ್ ರಾಯ್ಸ್ ನಲ್ಲಿ ಅಪ್ರೆಂಟಿಸ್ ಷಿಪ್ ಸಿಗುವುದು ಕಷ್ಟ ಆಗಲಿಲ್ಲ. ಅಲ್ಲಿಂದ ವಾಪಸ್ ಬರುವ ಹೊತ್ತಿಗೆ ಸಂಜಯ್ ಗೆ ಭಾರತದಲ್ಲಿ ಕಾರು ತಯಾರು ಮಾಡುವ ಕನಸು ಹುಟ್ಟಿತ್ತು. ಮಗನ ಆಸೆಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಸಹಕರಿಸಿದ್ದು ತಾಯಿ, ಪ್ರಧಾನಿ ಇಂದಿರಾ ಗಾಂಧಿ. ಅದರ ಫಲಿತವಾಗಿ 1971ರಲ್ಲಿ ಇಂದಿರಾಗಾಂಧಿ ಸಂಪುಟದಲ್ಲಿ 'ಜನರ ಕಾರು' ಎಂಬ ಪ್ರಸ್ತಾವ ಇಡಲಾಯಿತು. ಆ ಕಾರು ಅಗ್ಗವಾಗಿರಬೇಕು, ಕೈಗೆಟುಕುವಂತಿರಬೇಕು, ಅದ್ಭುತ ಕ್ಷಮತೆ ಮತ್ತು ಮುಖ್ಯವಾಗಿ ಸ್ವದೇಶಿ ನಿರ್ಮಿತವಾಗಿರಬೇಕು. ನೆನಪಿಡಿ: ಆ ಕಾರು ಸ್ವದೇಶಿ ನಿರ್ಮಿತವಾಗಿರಬೇಕು ಎಂಬ ಉದ್ದೇಶವಿತ್ತು.

ಕಾರು ತಯಾರಿಸಿದ ಅನುಭವವೇ ಇರಲಿಲ್ಲ

ಕಾರು ತಯಾರಿಸಿದ ಅನುಭವವೇ ಇರಲಿಲ್ಲ

1971ನೇ ಇಸವಿ ಜೂನ್ 4ನೇ ತಾರೀಕು ಮಾರುತಿ ಮೋಟಾರ್ಸ್ ಲಿಮಿಟೆಡ್ ಹೆಸರಲ್ಲಿ ಕಂಪೆನಿ ನೋಂದಣಿ ಆಯಿತು. ಅದರ ಮೊದಲ ಕಾರ್ಯನಿರ್ವಾಹಕ ನಿರ್ದೇಶಕ ಸಂಜಯ್ ಗಾಂಧಿ ಆದರು. ವಿಪರ್ಯಾಸ ಏನೆಂದರೆ, ಆ ಕಂಪೆನಿಗಾಗಲೀ ಅಥವಾ ಕಂಪೆನಿ ನೋಂದಣಿ ಮಾಡಿಸಿದ ವ್ಯಕ್ತಿಗಾಗಲೀ ಒಂದು ಕಾರು ನಿರ್ಮಿಸಿದ ಅನುಭವ ಕೂಡ ಇರಲಿಲ್ಲ. ಯಾವುದೇ ಡಿಸೈನ್ ಕೂಡ ರೂಪಿಸಲಿಲ್ಲ. ಆದರೆ ಇಂದಿರಾ ಅವರ ಮಗನಿಗೆ ಜನರ ಕಾರು ತಯಾರಿಸುವುದಕ್ಕೆ ಕಾಂಗ್ರೆಸ್ ಸರ್ಕಾರ ಮಾರುತಿ ಕಾಂಟ್ರ್ಯಾಕ್ಟ್ ನೀಡಿತ್ತು. ಎಕ್ಸ್ ಕ್ಲೂಸಿವ್ ಆದ ಲೈಸೆನ್ಸ್ ನೀಡಿತ್ತು. ಅದು ಏಕೆ ಗೊತ್ತಾ? ಭಾರತದ ಮೊದಲ ದೇಶೀಯ ಕಾರು ನಿರ್ಮಾಣಕ್ಕೆ.

ರಾಜಕೀಯದ ಕಡೆಗೆ ದೃಷ್ಟಿ ನೆಟ್ಟಿತ್ತು
 

ರಾಜಕೀಯದ ಕಡೆಗೆ ದೃಷ್ಟಿ ನೆಟ್ಟಿತ್ತು

ಆದರೆ, ಕಾರು ತಯಾರಿಕೆ ಬಗ್ಗೆ ನಾನಾ ವರದಿಗಳಿವೆ. ಸಂಜಯ್ ಗಾಂಧಿ ಸ್ವತಃ ತಾವೇ ಕಾರಿನ ಚಾಸೀಸ್ ಗಳನ್ನು ಮಾಡಿದರು. ಅದಕ್ಕೆ ಟ್ರಯಂಫ್ ಬೈಕ್ ಎಂಜಿನ್ ಬಳಸಲಾಯಿತು. ಎರಡ್ಮೂರು ಪರೀಕ್ಷಾರ್ಥ ಚಾಲನೆ ಕೂಡ ನಡೆಯಿತು. ಸ್ಥಳಾಭಾವದ ಕಾರಣಕ್ಕೆ ತಮ್ಮ ಫ್ಯಾಕ್ಟರಿಯನ್ನು ದೆಹಲಿಯ ಗುಲಾಬ್ ಭಾಗ್ ನಿಂದ ಲಕ್ಷ್ಮಣ್ ಸಿಲ್ವೇನಿಯಾಗೆ ಸ್ಥಳಾಂತರಿಸಲಾಯಿತು. ಅಲ್ಲಿ ಹದಿನೆಂಟು ತಿಂಗಳ ಸಮಯವನ್ನು ಕಾರು ನಿರ್ಮಾಣಕ್ಕೆ ಇಡಲಾಯಿತು. ಹೀಗೆ ಒಂದು ಆಯಾಮವಿದೆ. ಕಾರಿನ ಕೆಲವು ಮಾಡೆಲ್ ಬಳಸಿಕೊಂಡ ಕಾಂಗ್ರೆಸ್, ಇದು ಪ್ರಗತಿಯ ಸಂಕೇತ ಎಂದು ಬಿಂಬಿಸಲಾಯಿತು. ಆ ಬಗ್ಗೆ ಸಾರ್ವಜನಿಕರಿಂದ ಟೀಕೆಯೂ ವ್ಯಕ್ತವಾಯಿತು. ಸರ್ಕಾರದ ಮಟ್ಟದಲ್ಲಿ ಸಂಜಯ್ ಗಾಂಧಿಗೆ ಮಾಡಿಕೊಡುವ ಅನುಕೂಲವನ್ನು ಟೀಕಿಸುವುದು ವಿಪರೀತ ಹೆಚ್ಚಾಗುವ ವೇಳೆಗೆ ಬಾಂಗ್ಲಾ ವಿಮೋಚನಾ ಯುದ್ಧ, ಅಂದರೆ 1971ನೇ ಇಸವಿ ಬಂತು. ಆ ಕಾರಣಕ್ಕೆ ಸಂಜಯ್ ವಿಚಾರ ಬದಿಗೆ ಸರಿಯಿತು. ಆ ನಂತರ ಸಂಜಯ್ ಫೋಕ್ಸ್ ವ್ಯಾಗನ್ ನ ಎ.ಜಿ.ಯನ್ನು ಸಂಪರ್ಕಿಸಿ, ಜಂಟಿಯಾಗಿ ಬೀಟಲ್ ಅನ್ನು ಭಾರತದಲ್ಲಿ ತಯಾರಿಸುವ ಬಗ್ಗೆ ಮಾತುಕತೆ ನಡೆಸಿದರು. ದೇಶೀ ಕಾರು ನಿರ್ಮಾಣದ ಕನಸು ಆ ಹೊತ್ತಿಗೆ ಏನಾಗಿತ್ತೋ, ಗೊತ್ತಿಲ್ಲ. ಆ ನಂತರ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಆದಾಗ ಸಂಜಯ್ ಗಮನ ಮಾರುತಿ ಯೋಜನೆಯಿಂದ ಸಂಪೂರ್ಣ ಸರಿದು, ರಾಜಕೀಯದ ಕಡೆಗೆ ನೆಟ್ಟಿತ್ತು.

ಬದುಕಿದ್ದಾಗ ಆ ಕನಸು ಈಡೇರಲೇ ಇಲ್ಲ

ಬದುಕಿದ್ದಾಗ ಆ ಕನಸು ಈಡೇರಲೇ ಇಲ್ಲ

1977ನೇ ಸಾರ್ವಜನಿಕ ಚುನಾವಣೆಯಲ್ಲಿ ಕಾಂಗ್ರೆಸ್ ನೆಲ ಕಚ್ಚಿತು. ಅದರ ಜತೆಗೆ ಸಂಜಯ್ ಕನಸಿನ ಮಾರುತಿ ಕೂಡ ಕಣ್ಣು ಮುಚ್ಚಿತು. 1980ನೇ ಇಸವಿಯಲ್ಲಿ ವಿಮಾನ ಹಾರಾಟ ನಡೆಸುವ ವೇಳೆ ಅಪಘಾತವಾಗಿ ಸಂಜಯ್ ಗಾಂಧಿ ಸಾವನ್ನಪ್ಪಿದರು. ಆಗ ಇಂದಿರಾ ಗಾಂಧಿ ಅವರು ಮಾರುತಿ ಕನಸನ್ನು ಅರುಣ್ ನೆಹರೂ ಹೆಗಲಿಗೆ ಹಾಕಿದರು. ಆ ಯೋಜನೆಯಲ್ಲಿ ಇನ್ನೂ ಜೀವ ಇದೆ. ಆದರೆ ಅದಕ್ಕೆ ತಜ್ಞರ ನೆರವು ಬೇಕು ಎಂದು ಗುರ್ತಿಸಿದ ಅರುಣ್ ನೆಹರೂ, ಆ ನಂತರ ಜಾಗತಿಕ ಮಟ್ಟದಲ್ಲಿ ಹುಡುಕಾಟ ನಡೆಸಿದರು. ಸುಝುಕಿ ಕಂಪೆನಿ ಜತೆಗೆ ಸಹಭಾಗಿತ್ವ ವಹಿಸಿದರು. ಭಾರತದ ಸ್ಥಿತಿಗೆ ತಕ್ಕಂತೆ ಕಾರು ನಿರ್ಮಿಸಲು ಕೊನೆಗೂ ಸಫಲರಾದರು. ಆ ನಂತರದ್ದು ಎಲ್ಲರಿಗೂ ಗೊತ್ತಿದೆ. ಭಾರತದ ಕಾರು ಅಂದರೆ ಅದು ಮಾರುತಿ ಸುಝುಕಿ ಎಂಬ ನಂಬಿಕೆ ಉಳಿಸಿಕೊಂಡಿದೆ. ವೈಭವದ ದಿನಗಳನ್ನು ಕಂಡಿದೆ. ಆದರೆ ಮಾರುತಿ ಕಾರಿನ ಕನಸು ಕಂಡಿದ್ದ, ಅವು ರಸ್ತೆಯಲ್ಲಿ ಓಡಾಡುವುದನ್ನು ನೋಡಲು ಆಸೆ ಪಟ್ಟಿದ್ದ ವ್ಯಕ್ತಿ ಸಂಜಯ್ ಗಾಂಧಿ ತಮ್ಮ ಜೀವಿತಾವಧಿಯಲ್ಲಿ ಆ ಕನಸು ಪುರೈಸಿಕೊಳ್ಳಲು ಆಗಲೇ ಇಲ್ಲ.

English summary

Sanjay Gandhi's Dream Maruti Car Not Fulfilled During His Life Time

Maruti udyog was the dream of Sanjay Gandhi, son of Indiira Gandhi. Here is the story about car company.
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more