ಕೇಂದ್ರ ಸರ್ಕಾರಕ್ಕೆ 2,000 ರುಪಾಯಿ ನೋಟಿನ ಚಲಾವಣೆಯನ್ನು ನಿಲ್ಲಿಸುವ ಯೋಜನೆ ಇಲ್ಲ ಎಂದು ತಿಳಿಸಲಾಗಿದೆ. ಹಣಕಾಸು ಖಾತೆ ಹಾಗೂ ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಮಂಗಳವಾರ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರವನ್ನು ನೀಡಿದ್ದಾರೆ.
ಹಂತ ಹಂತವಾಗಿ 2,000 ರುಪಾಯಿ ನೋಟಿನ ಚಲಾವಣೆಯನ್ನು ನಿಲ್ಲಿಸುವ ಉದ್ದೇಶ ಸರ್ಕಾರಕ್ಕೆ ಇದೆಯಾ ಎಂಬ ಪ್ರಶ್ನೆಗೆ ಈ ಮೇಲ್ಕಂಡಂತೆ ಉತ್ತರವನ್ನು ನೀಡಿದ್ದಾರೆ. ಮೌಲ್ಯದ ಲೆಕ್ಕಾಚಾರದಲ್ಲಿ ಹೇಳಬೇಕಾದರೆ, 2,000 ನೋಟುಗಳ ಚಲಾವಣೆ ಪ್ರಮಾಣ ಒಟ್ಟು ಮೌಲ್ಯದ ಮೂರನೇ ಒಂದು ಭಾಗದಷ್ಟಿದೆ.
2016ರ ನವೆಂಬರ್ ನಲ್ಲಿ 500 ಹಾಗೂ 1000 ರುಪಾಯಿ ನೋಟುಗಳ ನಿಷೇಧ ಮಾಡಿದ ನಂತರ 2,000 ರುಪಾಯಿ ಮುಖಬೆಲೆಯ ನೋಟುಗಳು ಚಲಾವಣೆಗೆ ಬಂದವು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವರದಿ ಪ್ರಕಾರ, 31.3.2019ಕ್ಕೆ ಅನ್ವಯ ಆಗುವಂತೆ ವ್ಯವಸ್ಥೆಯಲ್ಲಿ ಚಲಾವಣೆಯಲ್ಲಿ ಇರುವ ಒಟ್ಟು ನೋಟಿನ ಪ್ರಮಾಣ 21,109 ಬಿಲಿಯನ್ ರುಪಾಯಿ.

ಅದರಲ್ಲಿ 2,000 ಮುಖಬೆಲೆಯ ನೋಟಿನ ಪ್ರಮಾಣ 6,582 ಬಿಲಿಯನ್ ರುಪಾಯಿ ಇದೆ. ಅಂದರೆ ಒಟ್ಟು ಚಲಾವಣೆಯಲ್ಲಿ ಇರುವ ನೋಟಿನ ಪ್ರಮಾಣದಲ್ಲಿ ಎರಡು ಸಾವಿರ ಮುಖಬೆಲೆಯ ನೋಟಿನ ಪ್ರಮಾಣ 31.18%.


Click it and Unblock the Notifications